

ಶ್ರೀನಿವಾಸಪುರ : ತಾಲೂಕು ಪ್ರಪಂಚದಲ್ಲೇ ಪ್ರಸಿದ್ಧಿಯಾದ ಮಾವಿನ ತೋಟಗಳಿಗಾಗಿ ಹೆಸರುವಾಸಿಯಾಗಿದ್ದು, ಇಲ್ಲಿನ ಮಾವಿನ ರುಚಿ ಹಾಗೂ ಗುಣಮಟ್ಟಕ್ಕೆ ದೇಶದ ವಿವಿಧ ಭಾಗಗಳಿಂದ ವ್ಯಾಪಾರಸ್ಥರು ಆಗಮಿಸುತ್ತಾರೆ. ಮಾವಿನ ಜೊತೆಗೆ ರುಚಿ ಮತ್ತು ಗುಣಮಟ್ಟಕ್ಕಾಗಿ ಹೆಸರು ಗಳಿಸಿರುವ ಅವರೆಕಾಯಿಯೂ ಶ್ರೀನಿವಾಸಪುರದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ.
ಪ್ರತಿದಿನ ಪಕ್ಕದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ, ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ವ್ಯಾಪಾರಸ್ಥರು ಇಲ್ಲಿಗೆ ಬಂದು ಅವರೆಕಾಯಿ ಖರೀದಿ ಮಾಡಿ ತಮ್ಮ ತಮ್ಮ ಮಾರುಕಟ್ಟೆಗಳಿಗೆ ಸಾಗಣೆ ಮಾಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರೆಕಾಯಿ ಬೆಲೆಯಲ್ಲಿ ತೀವ್ರ ಕುಸಿತ ಕಂಡುಬಂದಿರುವುದು ರೈತರು ಹಾಗೂ ವ್ಯಾಪಾರಸ್ಥರಲ್ಲಿ ನಿರಾಶೆ ಮೂಡಿಸಿದೆ.
ಬೆಳೆ ಬೆಳೆದ ರೈತರಿಗೆ ನಿರೀಕ್ಷಿತ ಆದಾಯ ದೊರಕದೆ ನಷ್ಟ ಉಂಟಾಗುತ್ತಿದ್ದರೆ, ಮತ್ತೊಂದೆಡೆ ವ್ಯಾಪಾರಸ್ಥರೂ ವ್ಯಾಪಾರದಲ್ಲಿ ಲಾಭವಿಲ್ಲದೆ ಸಂಕಷ್ಟ ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ.
ಈ ಬಾರಿ ಹವಾಮಾನ ಅನುಕೂಲವಾಗಿದ್ದರಿಂದ ಅವರೆಕಾಯಿ ಬೆಳೆ ಉತ್ತಮವಾಗಿ ಬಂದಿದ್ದು, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಕಾಯಿ ಹರಿದುಬಂದಿದೆ. ಪೂರೈಕೆ ಹೆಚ್ಚಾದ ಹಿನ್ನೆಲೆಯಲ್ಲಿ ದರದಲ್ಲಿ ಕುಸಿತ ಉಂಟಾಗಿದೆ ಎನ್ನಲಾಗುತ್ತಿದೆ.
ಹರಾಜು ಮಾರುಕಟ್ಟೆಯಲ್ಲಿ ಪ್ರಸ್ತುತ ಅವರೆಕಾಯಿ ಪ್ರತಿ ಕೆಜಿಗೆ ಕೇವಲ 25 ರಿಂದ 26 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ. ಈ ದರದಲ್ಲಿ ಉತ್ಪಾದನಾ ವೆಚ್ಚವೂ ಸರಿಯಾಗಿ ವಾಪಸ್ಸಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ, ಕಾರ್ಮಿಕ ವೆಚ್ಚ ಸೇರಿದಂತೆ ಎಲ್ಲ ಖರ್ಚುಗಳು ಹೆಚ್ಚಾಗಿವೆ. ಆದರೆ ಮಾರುಕಟ್ಟೆ ದರ ಮಾತ್ರ ಕುಸಿದಿರುವುದರಿಂದ ಈ ದರದಲ್ಲಿ ಮಾರಾಟ ಮಾಡಿದರೆ ಕೈಗೆ ಏನೂ ಉಳಿಯುವುದಿಲ್ಲ ಎಂದು ಸ್ಥಳೀಯ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಅವರೆಕಾಯಿ ಮಂಡಿ ಮಾಲೀಕ ಸೈಯದ್ ಫೈಜ್ ಮಾತನಾಡಿ, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಅವರೆಕಾಯಿ ಬರುತ್ತಿರುವುದರಿಂದ ಬೇಡಿಕೆಗೆ ಅನುಗುಣವಾಗಿ ದರ ಸಿಗುತ್ತಿಲ್ಲ. ಸಾಗಣೆ, ಕೂಲಿ ಮತ್ತು ಇತರೆ ವೆಚ್ಚಗಳನ್ನು ಪರಿಗಣಿಸಿದರೆ ವ್ಯಾಪಾರಸ್ಥರಿಗೂ ಲಾಭವಾಗುತ್ತಿಲ್ಲ. ಹರಾಜಿನಲ್ಲಿ ಪ್ರತಿ ಕೆಜಿಗೆ 25–26 ರೂಪಾಯಿ ಮಾತ್ರ ದರ ಸಿಗುತ್ತಿದೆ ಎಂದು ತಿಳಿಸಿದ್ದಾರೆ.


