

ಶ್ರೀನಿವಾಸಪುರ: ತಾಲ್ಲೂಕಿನ ಆರ್.ತಿಮ್ಮಸಂದ್ರ ಗ್ರಾಮದ ನಂದಗೋಕುಲ ಆಶ್ರಮದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಮಕ್ಕಳ ವಸಂತ ಶಿಬಿರದಲ್ಲಿ, ಶಿಬಿರಾರ್ಥಿಗಳಿಗೆ ಕಥೆ ಹೇಳುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಹಾಗೂ ಸಾಹಿತಿ ಎನ್.ಶಂಕರೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕತೆಗಳ ಮೂಲಕ ಮಕ್ಕಳನ್ನು ತಿದ್ದುವ, ಮನರಂಜನೆ ಒದಗಿಸುವ ಹಾಗೂ ಅವರ ಕಾಲ್ಪನಿಕ ಜಗತ್ತನ್ನು ವಿಸ್ತರಿಸುವ ಭಾರತೀಯ ಪರಂಪರೆ ಮುಂದುವರಿಯಬೇಕು ಎಂದು ಹೇಳಿದರು.
ಅಜ್ಜಿಯಿಂದ ಕತೆ ಕೇಳಿ, ಜೀವನ ಪರ್ಯಂತ ನೆನಪಿನಲ್ಲಿಟ್ಟುಕೊಂಡು, ಮುಂದಿನ ತಲೆಮಾರಿಗೆ ವರ್ಗಾಯಿಸುವ ಕಾಲವೊಂದಿತ್ತು. ಬದಲಾದ ಪರಿಸ್ಥಿತಿಯಲ್ಲಿ ಕತೆ ಹೇಳುವ ಅಜ್ಜಿ, ಕೇಳಿಸಿಕೊಳ್ಳುವ ಮಕ್ಕಳ ಕೊರತೆ ಕಂಡುಬರುತ್ತಿದೆ. ಮೊಬೈಲ್ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತಿರುವುದು ವಿಪರ್ಯಾಸವಾಗಿದೆ ಎಂದು ಹೇಳಿದರು.
ಸಾಹಿತಿ ಆರ್.ಚೌಡರೆಡ್ಡಿ ಮಾತನಾಡಿ, ಬದಲಾದ ಪರಿಸ್ಥಿತಿಯಲ್ಲಿ ಕತೆ ಹೇಳುವ ಕಲೆ ನೇಪತ್ಯಕ್ಕೆ ಸರಿಯುತ್ತಿದೆ. ಮಕ್ಕಳು ಮೊಬೈಲ್ ಮೋಕಕ್ಕೆ ಸಿಲುಕಿ ಒಂಟಿಯಾಗುತ್ತಿದ್ದಾರೆ. ಸಾಮಾಜಿಕ ಹಾಗೂ ಕೌಂಟುAಬಿಕ ಒಡನಾಟದಿಂದ ದೂರವಾಗುತ್ತಿರುವದು ಮಾನಸಿಕ ಸಮಸ್ಯೆಗಳ ಹುಟ್ಟಿಗೆ ಕಾರಣವಾಗುತ್ತಿದೆ ಎಂದು ಹೇಳಿದರು.
ಮಕ್ಕಳು ಕತೆ ಕೇಳುವ ಹಾಗೂ ಕತೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬೆಳೆಯಬೇಕು. ನಮ್ಮಲ್ಲಿ ಕತೆಗಳಿಗೆ ಕೊರತೆಯಿಲ್ಲ. ನೋಡುವ ಕಣ್ಣು ಹಾಗೂ ಮನಸ್ಸಿನ ಕೊರತೆ ಕಂಡುಬರುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್.ಚೌಡರೆಡ್ಡಿ ಹಾಗೂ ಎನ್.ಶಂಕರೇಗೌಡ ಶಿಬಿರಾರ್ಥಿಗಳಿಗೆ ಮಕ್ಕಳ ಕತೆಗಳನ್ನು ಹೇಳಿದರು. ಮಕ್ಕಳು ಕತೆಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊAಡರು. ವ್ಯವಸ್ಥಾಪಕ ವಾಸುದೇವ್ ಮತ್ತಿತರರು ಇದ್ದರು.

