ಅರಣ್ಯ ಒತ್ತುವರಿ ಸಮಸ್ಯೆ ಹುಟ್ಟಾಕಿರುವುದು ಅರಣ್ಯ ಇಲಾಖೆ ಅಲ್ಲ – ರೆವಿನ್ಯೂ ಅಧಿಕಾರಿಗಳು – ಮುಖಂಡ ಶೇಷಾಪುರ ಗೋಪಾಲ್

ಕೋಲಾರ.ಜು.16: ಜಿಲ್ಲೆಯಲ್ಲಿನ ಸಣ್ಣ, ಅತಿ ಸಣ್ಣ ಮತ್ತು ದಲಿತ ರೈತರು ಅನಧಿಕೃತವಾಗಿ ರೆವಿನ್ಯೂ ಇಲಾಖೆಯಿಂದ ಮಂಜೂರಾಗಿರುವ ಜಮೀನುಗಳ ಮೇಲೆ ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ಉಳಿಸಿರುವ ಹಣವನ್ನು ಬಂಡವಾಳ ಹಾಕಿ ಅಭಿವೃದ್ಧಿ ಪಡಿಸುತ್ತಾರೆ. ಒಂದಲ್ಲ ಒಂದು ದಿನ ಆ ಜಮೀನು ಅವರದಲ್ಲ ಎಂದು ಗೊತ್ತಾದಾಗ ಅವರನ್ನು ಯಾರೂ ಉಳಿಸಲಿಕ್ಕಾಗುವುದಿಲ್ಲ. ಇದು ನಾವು ಅವರಿಗೆ ಮಾಡುವ ದೊಡ್ಡ ದ್ರೋಹವಾಗುತ್ತದೆ. ಇದನ್ನು ಮನಗಂಡು ಈ ಒಂದು ಹೆಮ್ಮರವಾಗಿ ಬೆಳೆದಿರುವ ಸಮಸ್ಯೆಗೆ ಸಮಗ್ರ ಪರಿಹಾರ ದೊರಕಿಸುವ ಜವಾಬ್ದಾರಿ ಶಾಸಕರುಗಳು, ಅಧಿಕಾರಿಗಳು ಸೇರಿದಂತೆ ನಮ್ಮೆಲ್ಲರಿಗೂ ಇದೆ ಎಂದು ಮುಖಂಡ ಶೇಷಾಪುರ ಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿನ್ನೆಯ ದಿನ ಅಂದರೆ ಜುಲೈ 15 ಮಂಗಳವಾರದಂದು ಕೋಲಾರದಲ್ಲಿ ನಡೆದ ಧಿಶಾ ಸಭೆಯಲ್ಲಿ ಅರಣ್ಯ ಜಮೀನು ಒತ್ತುವರಿ ತೆರವು ವಿಚಾರದಲ್ಲಿ ಶಾಸಕರ ಮಧ್ಯೆ ಮತ್ತು ಶಾಸಕರು ಮತ್ತು ಅರಣ್ಯ ಅಧಿಕಾರಿಗಳ ಮಧ್ಯೆ ನಡೆದ ಜಟಾಪಟಿಯನ್ನು ನಾವೆಲ್ಲರೂ ನೋಡಿದೆವು ಮತ್ತು ಮಾಧ್ಯಮಗಳಲ್ಲಿ ಈ ದಿನ ನೋಡುತ್ತಿದ್ದೇವೆ. ಜಿಲ್ಲೆಯಲ್ಲಿನ ರೈತರು ಜಮೀನು ಕಳೆದುಕೊಳ್ಳುತ್ತಿರುವ ಬಗ್ಗೆ ಶಾಸಕರು ತೋರಿಸಿದ ಕಾಳಜಿಯ ಬಗ್ಗೆ ನಾವೆಲ್ಲರೂ ಪ್ರಶಂಶಿಸಬೇಕು ಮತ್ತು ಅವರೊಟ್ಟಿಗೆ ಇರುತ್ತೇವೆ ಅಂತ ನಾವು ಹೇಳಬೇಕು ಸಹ. ಇದರೊಟ್ಟಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿರುವ ಬಗ್ಗೆಯೂ ಸಹ ನಾವು ಅವರಿಗೆ ಮೆಚ್ಚುಗೆ ಮತ್ತು ಸಹಕಾರವನ್ನು ಕೊಡಬೇಕಾಗುತ್ತದೆ. ಏಕೆಂದರೆ ಇದೇ ಸಭೆಯಲ್ಲಿ ಕೂತಿರ್ತಕ್ಕಂತ ಶಾಸಕರು, ಸಂಸದರು ಮತ್ತು ಮಂತ್ರಿಗಳು ರಚಿಸಿರುವ ಕಾನೂನು ನಡೆಯಲಿ ಹಾಗೂ ಕಾನೂನನ್ನ ಪಾಲಿಸುವ ದಿಕ್ಕಿನಲ್ಲಿ ಅವರು ತಮ್ಮ ಇತಿಮಿತಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅವರ ಕರ್ತವ ರಕ್ಷಣೆಯನ್ನು ಮಾಡಬೇಕಾದಂತಹ ಜವಾಬ್ದಾರಿ ಸಹ ನಮ್ಮ ಶಾಸಕರುಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಾಗೂ ಜಿಲ್ಲೆಯಲ್ಲಿರ್ತಕ್ಕಂತ ಜವಾಬ್ದಾರಿಯುತ ಜನಸಾಮಾನ್ಯರಿಗೂ ಇರುವ ಕರ್ತವ್ಯವಾಗುತ್ತದೆ.
ಈ ದಿನ ಜಿಲ್ಲೆಯಲ್ಲಿ ರೈತರ ಪಾಲಿಗೆ ದೊಡ್ಡ ಹೆಮ್ಮರವಾಗಿ ನಿಂತಿರುವ ಅರಣ್ಯ ಒತ್ತುವರಿ ಸಮಸ್ಯೆ ಹುಟ್ಟಾಕಿರುವುದು ಅರಣ್ಯ ಇಲಾಖೆ ಅಲ್ಲ. ಈ ಸಮಸ್ಯೆ ಇಷ್ಟು ದೊಡ್ಡದಾಗಿ ಬೆಳೆಯಲಿಕ್ಕೆ ಕಾರಣ ಕೆಲವೇ ಕೆಲವು ಬೇಜವಾಬ್ದಾರಿ ಭ್ರಷ್ಟ ರೆವಿನ್ಯೂ ಅಧಿಕಾರಿಗಳು ಮತ್ತು ಅವರೊಂದಿಗೆ ಕೈಜೋಡಿಸಿದ ಜನನಾಯಕರಿಂದ ಬೆಳೆದ ಭೂ ಮಾಫಿಯಾಗಳು ಮತ್ತು ಇದನ್ನು ಕಂಡರೂ ಕುರುಡರಂತೆ ಬದುಕಿ ಬಂದ ಜಿಲ್ಲೆಯ ಶಾಸಕರುಗಳು. (ಇದಕ್ಕೆ ಪೂರಕವೆಂಬಂತೆ ಜಿಲ್ಲೆಯಲ್ಲಿನ ಕೆಲವೊಂದು ಮಹಾನ್ ನಾಯಕರುಗಳು ಅರಣ್ಯ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದು ನಾವು ಕಾಣುತ್ತಿದ್ದೇವೆ). ಏಕೆಂದರೆ ಜಿಲ್ಲೆಯಲ್ಲಿ ಕಾಲದಿಂದ ಕಾಲಕ್ಕೆ ಅಧಿಸೂಚಿತ, ಪರಿಭಾವಿತ ಮತ್ತು ರೆಕಾರ್ಡೆಡ್ ಅರಣ್ಯಗಳನ್ನು ಸರ್ಕಾರ ಘೋಷಣೆ ಮಾಡಿದೆ. ಅದಕ್ಕೆ ತಕ್ಕಂತೆ ರೆವಿನ್ಯೂ ಇಲಾಖೆ ಸಂಬಂಧ ಪಟ್ಟ ದಾಖಲಾತಿಗಳನ್ನ ಸೃಷ್ಟಿ ಮಾಡಿ ಅರಣ್ಯ ಇಲಾಖೆಗೆ ಈ ಜಮೀನುಗಳನ್ನು ವರ್ಗಾವಣೆ ಮಾಡದೆ ತಮ್ಮ ವಶದಲ್ಲಿಯೇ ಇಟ್ಟುಕೊಂಡಿದ್ದು ತಮಗೆ ಅವಕಾಶ ಸಿಕ್ಕಾಗಲೆಲ್ಲಾ ಅಕ್ರಮವಾಗಿ ಇತರೆ ರೈತರಿಗೆ ಮಂಜೂರು ಮಾಡುತ್ತಲೇ ಬಂದಿದೆ. ಭೂ ಮಂಜೂರು ಕಾಯ್ದೆ ಅಡಿಯಲ್ಲಿ ಒಂದು ಕುಟುಂಬಕ್ಕೆ 5 ಎಕರೆ ಮೇಲ್ಪಟ್ಟು ಜಮೀನು ಇದ್ದರೆ ಅವರಿಗೆ ಭೂ ಮಂಜುರಾಗುವ ಅರ್ಹತೆ ಇರುವುದಿಲ್ಲ. ಆದರೂ ಸಹ ಜಿಲ್ಲೆಯಲ್ಲಿ ಒಂದೊಂದು ಕುಟುಂಬಕ್ಕೆ ಹತ್ತರಿಂದ 80 ಎಕರೆಯವರಿಗೂ ಕುಟುಂಬದ ಬೇರೆ ಬೇರೆಯವರ ಹೆಸರುಗಳಲ್ಲಿ ಮಂಜೂರಾಗಿದೆ. ಇಲ್ಲಿ ಸಣ್ಣ ಮತ್ತು ಅತಿ ಸಣ್ಣ ಹಾಗೂ ದಲಿತ ರೈತರ ಹಕ್ಕನ್ನ ಕಸಿದುಕೊಂಡು ಅವರ ಹೆಸರಿನಲ್ಲಿ ದುರುಪಯೋಗ ಆಗಿರುವುದೇ ಹೆಚ್ಚಾಗಿದೆ.
ಈಗ ಜಾಗತಿಕ ವಾತಾವರಣ ದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಎದುರಿಸಲು ಕೇಂದ್ರ ಸರ್ಕಾರ ಮತ್ತು ಸರ್ವೋಚ್ಚ ನ್ಯಾಯಾಲಯಗಳಲ್ಲಿ ಕೊಟ್ಟಿರುವ ಖಡಕ್ಕಾದ ನಿರ್ದೇಶನಗಳನ್ನ ಪಾಲಿಸಲು ಸಂಬಂಧಪಟ್ಟ ಅರಣ್ಯ ಇಲಾಖೆ, ಸ್ಥಳೀಯ ಸರ್ಕಾರಕ್ಕಿಂತಲೂ ಕೋರ್ಟುಗಳ ನಿರ್ದೇಶನದಂತೆ ಕೆಲಸ ಮಾಡುವ ಪರಿಸ್ಥಿತಿ ಬಂದು ನಿಂತಿದೆ. ಇಲ್ಲಿ ಸರ್ವೋಚ್ಚ ನ್ಯಾಯಾಲಯದ ಐಎಸ್ ನಿರ್ವಾಣಿ ಗೌಡ ಮತ್ತು ಗೋದ ಬರ್ಮನ್ ಪ್ರಕರಣಗಳಲ್ಲಿ ಒಂದು ಸಲ ಅರಣ್ಯ ಎಂದ ಮೇಲೆ ಅದರಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಯಾವುದೇ ರೆವಿನ್ಯೂ ಇಲಾಖೆ ಅಧಿಕಾರಿಗಳಾಗಲಿ ಅಥವಾ ಸ್ಥಳೀಯ ಸರ್ಕಾರಕ್ಕಾಗಲಿ ಇರುವುದಿಲ್ಲ ಎಂದು ಖಡಕ್ಕಾಗಿ ನಿರ್ದೇಶನ ಕೊಟ್ಟಿರುವುದನ್ನು ಸ್ಮರಿಸೋಣ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಜನನಾಯಕರು ಮತ್ತು ಶಾಸಕರುಗಳು ರೈತರನ್ನು ಉಳಿಸಬೇಕು ಎನ್ನುವ ಉದ್ದೇಶವಿದ್ದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹಾಕುವುದನ್ನು ಬಿಟ್ಟು ಸರ್ಕಾರದ ಮೇಲೆ ಒತ್ತಡ ತಂದು ಈ ಕೆಳಕಂಡ ಅಂಶಗಳನ್ನು ಪರಿಗಣಿಸದರೆ ಒಳ್ಳೆಯದು.

  • ಅರಣ್ಯ ಎಂದು ಅಧಿಸೂಚನೆ ಹೊರಡಿಸಿರುವ ಜಮೀನುಗಳ ಪೈಕಿ ರಿವಿನ್ಯೂ ಇಲಾಖೆಯವರು ಅಕ್ರಮವಾಗಿ ರೈತರಿಗೆ ಮಂಜೂರು ಮಾಡಿರುವ ಜಮೀನುಗಳು ಯಾವುದು.
  • ಭೂ ಮಂಜೂರಾತಿ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ರೆವಿನ್ಯೂ ಇಲಾಖೆಯವರು ಮಂಜೂರು ಮಾಡಿರುವ ಪ್ರಕರಣಗಳು ಯಾವುದು. ಅಂದರೆ ಒಂದು ಕುಟುಂಬಕ್ಕೆ 5 ಎಕರೆ ಮೇಲೆ ಜಮೀನಿದ್ದರೂ ಅಂತವರಿಗೆ ಮಂಜೂರು ಮಾಡಿರುವ ಜಮೀನುಗಳು. ಅಂತಹ ಮಂಜೂರಾತಿಗಳನ್ನು ರದ್ದುಪಡಿಸಬೇಕು.
  • ಜಿಲ್ಲೆಯಲ್ಲಿ ಜಂಟಿ ಸರ್ವೆ ಮಾಡಿ ಅರಣ್ಯ ಒತ್ತುವರಿಯನ್ನು ಗುರುತಿಸಬೇಕೆಂದು ಸರ್ಕಾರದ ಆದೇಶ ಆದರೂ ಸಹ ಜಿಲ್ಲಾಡಳಿತ ಕಾರ್ಯ ಪ್ರವೃತ್ತರಾಗದೇ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿರುವುದು ರೈತರಿಗೆ ಮಾಡುತ್ತಿರುವ ದ್ರೋಹ. ನಿರ್ದಿಷ್ಟ ಕಾಲಮಿತಿಯನ್ನು ನಿಗದಿಪಡಿಸಿ ಜಂಟಿ ಸರ್ವೆ ಕಾರ್ಯ ಪೂರ್ಣಗೊಳಿಸಬೇಕು.
  • ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಎಕರೆಗೂ ಮೇಲ್ಪಟ್ಟು ಸರ್ಕಾರಿ ಜಮೀನು ಭೂ ಮಂಜೂರಾತಿಗೆ ಲಭ್ಯವಿದೆ ಎಂದು ಸರ್ಕಾರಿ ದಾಖಲೆಗಳಲ್ಲಿ ನಮೂದಾಗಿದೆ. ಆದರೆ ಬಹುತೇಕ ಈ ಎಲ್ಲಾ ಜಮೀನುಗಳು ಬಲಾಡ್ಯರ ಅನಧಿಕೃತ ವಶದಲ್ಲಿವೆ. ಅವನು ತೆರವುಗೊಳಿಸಿ ಅರಣ್ಯ ಜಮೀನುಗಳ ಒತ್ತುವರಿ ತೆರವಿನಿಂದ ನೊಂದ ಸಣ್ಣ ಮತ್ತು ಅತಿ ಸಣ್ಣ ಮತ್ತು ದಲಿತ ರೈತರಿಗೆ ಮಂಜೂರು ಮಾಡುವ ಧೈರ್ಯವನ್ನು ಶಾಸಕರು ತೋರಿಸಬೇಕು.
    ಜಿಲ್ಲೆಯ ಎಲ್ಲಾ ಶಾಸಕರಲ್ಲಿ ಒಂದು ಮನವಿ ಏನೆಂದರೆ ಈಗಾಗಲೇ ರೆವಿನ್ಯೂ ಇಲಾಖೆಯ ಭ್ರಷ್ಟ ವ್ಯವಸ್ಥೆಯಲ್ಲಿ ಸಿಲುಕಿ ಜಿಲ್ಲೆಯ ರೈತರು ಬಹಳಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಕೇವಲ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಡ ಏರಿ ನಾವು ಚೀರಾಟ ಹಾರಾಟ ಮಾಡುವುದರಿಂದ ರೈತರನ್ನ ಖುಷಿ ಪಡಿಸಬಹುದೇ ಹೊರತು ಅವರನ್ನು ಉಳಿಸಲಿಕ್ಕೆ ಆಗುವುದಿಲ್ಲ. ಕಾನೂನು ರಚಿಸುವಂತಹ ನೀವು ಕಾನೂನಡಿಯಲ್ಲಿಯೇ ಕೆಲಸ ಮಾಡಬೇಕಾಗುತ್ತದೆ. ನಿಮ್ಮನ್ನು ನಂಬಿ ಜಿಲ್ಲೆಯಲ್ಲಿನ ಸಣ್ಣ, ಅತಿ ಸಣ್ಣ ಮತ್ತು ದಲಿತ ರೈತರು ಅನಧಿಕೃತವಾಗಿ ರೆವಿನ್ಯೂ ಇಲಾಖೆಯಿಂದ ಮಂಜೂರಾಗಿರುವ ಜಮೀನುಗಳ ಮೇಲೆ ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ಉಳಿಸಿರುವ ಹಣವನ್ನು ಬಂಡವಾಳ ಹಾಕಿ ಅಭಿವೃದ್ಧಿ ಪಡಿಸುತ್ತಾರೆ. ಒಂದಲ್ಲ ಒಂದು ದಿನ ಆ ಜಮೀನು ಅವರದಲ್ಲ ಎಂದು ಗೊತ್ತಾದಾಗ ಅವರನ್ನು ಯಾರೂ ಉಳಿಸಲಿಕ್ಕಾಗುವುದಿಲ್ಲ. ಇದು ನಾವು ಅವರಿಗೆ ಮಾಡುವ ದೊಡ್ಡ ದ್ರೋಹವಾಗುತ್ತದೆ. ಇದನ್ನು ಮನಗಂಡು ಈ ಒಂದು ಹೆಮ್ಮರವಾಗಿ ಬೆಳೆದಿರುವ ಸಮಸ್ಯೆಗೆ ಸಮಗ್ರ ಪರಿಹಾರ ದೊರಕಿಸುವ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ ಎಂದು ಭಾವಿಸಿ ಕಾರ್ಯೊನ್ಮುಖರಾಗಬೇಕಾಗುತ್ತದೆ.