

ಕುಂದಾಪುರ, 7; 06.11.2025ರಂದು ಶಾಲಾ ಶೈಕ್ಷಣಿಕ ವರ್ಷದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಸಲುವಾಗಿ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅದ್ದೂರಿಯಾಗಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನವನ್ನು ವಹಿಸಿದ್ದ ಹೋಲಿ ರೋಜರಿ ಚರ್ಚಿನ ಗುರು ಹಾಗೂ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಸೈಂಟ್ ಮೇರಿಸ್ ಸಮೂಹ ಸಂಸ್ಥೆಗಳ ಜಂಟಿ ಕಾರ್ಯದರ್ಶಿಗಳಾಗಿರುವ ಅ। ವಂ। ಪೌಲ್ ರೆಗೋರವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ, ಸ್ಪರ್ಧಿಸಿದ ಮಕ್ಕಳಿಗೆ ಅಭಿನಂದಿಸಿ, ಸ್ಪರ್ಧಿಸುವುದು ಮುಖ್ಯ, ಸೋಲೆ ಗೆಲುವಿನ ಸೋಪಾನ ಇಂದು ಸೋತರು ಮುಂದೇ ಗೆಲ್ಲುತ್ತಾರೆ, ಪ್ರಯತ್ನವನ್ನೇ ಮಾಡದಿದ್ದರೆ ಪ್ರತಿಫಲ ಸಿಗುವುದಿಲ್ಲ ಎನ್ನುತ್ತಾ, ದೇವರು ಸರ್ವರಿಗೂ ಶಾಂತಿ ಸಮಾಧಾನ ಆರೋಗ್ಯವನ್ನು ದಯಪಾಲಿಸಲಿ ಎಂದು ತಮ್ಮ ಅಧ್ಯಕ್ಷಿಯ ನುಡಿಯನ್ನು ನೀಡಿದರು. ಯಶಸ್ಸು ಸಿಗುವ ತನಕ ಪ್ರಯತ್ನ ನಿರಂತರವಾಗಿರಲಿ, ಅದಕ್ಕಾಗಿ ಕಠಿಣ ಪರಿಶ್ರಮ ಅಗತ್ಯವೆಂದು ವಿದ್ಯಾರ್ಥಿಗಳಿಗೆ ಯಶಸ್ಸಿನ ಕುರಿತು ಕಿವಿ ಮಾತನ್ನು ನೀಡಿದರು. ಕಾರ್ಯಕ್ರಮ ನಿರೂಪಿಸಿದ, ಸ್ವಾಗತಿಸಿದ ವಿದ್ಯಾರ್ಥಿಗಳಿಗೆ, ಕಾರ್ಯಕ್ರಮದ ಉಸ್ತುವಾರಿ ವಹಿಸಿರುವ ಶಿಕ್ಷಕರುಗಳಿಗೆ, ಕಾರ್ಯಕ್ರಮದ ರುವಾರಿಗಳಾಗಿರುವ ಮುಖ್ಯ ಶಿಕ್ಷಕರಿಗೆ, ಶಿಕ್ಷಕ-ಶಿಕ್ಷಕೇತರ ವೃಂದದವರಿಗೂ ಅಭಿನಂದಿಸಿದರು.
ಮುಖ್ಯ ಅತಿಥಿಗಳಾದ ಹಾಗೂ ಶಾಲಾ ಹಳೆ ವಿದ್ಯಾರ್ಥಿಗಳಾಗಿರುವ ಕುಮಾರಿ ಇನಿ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ತಮ್ಮ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು ಎನ್ನುತ್ತಾ ತಮಗೆ ವಿದ್ಯೆ ನೀಡಿದ ಗುರುಗಳನ್ನು ಅಭಿನಂದಿಸಿದರು. ಹಾಗೂ ಇನ್ನೊರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಯುಸೂಫ್ ಫಾಹಿಮ್ ಶಾಲೆಯಲ್ಲಿ ನಡೆಸುವ ಸಹಪಠ್ಯ ಚಟುವಟಿಕೆಯಿಂದ ವಿದ್ಯಾರ್ಥಿಗಳು ಪಠ್ಯ ಮಾತ್ರವಲ್ಲದೇ, ಪಠ್ಯೇತರ ವಿಷಯಗಳಿಗೂ ಸಮಾನವಾದ ಸಹಕಾರ ಶಾಲೆಯವರು ನೀಡುತ್ತಿದ್ದಾರೆ ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ ಈ ಸಂಸ್ಥೆಯಲ್ಲಿ ದೊರಕುತ್ತದೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಎ.ಸಿ. ಹಾಗೂ ಶಾಲಾ ಶೈಕ್ಷಣಿಕ ಮಾರ್ಗದರ್ಶಕರಾಗಿರುವ ಮಾರ್ಗರೆಟ್ ಪಿಕಾರ್ಡೊ ಉಪಸ್ಥಿತರಿದ್ದರು. ಅಕ್ಷಯ ಮತ್ತು ಡೆನ್ಸಿಯಾ ನಿರೂಪಿಸಿ, ಪ್ರತೀಕ್ಷಾ ಸ್ವಾಗತಿಸಿ, ಯೂಸುಫ್ ಫವಾಜ್ ಧನ್ಯವಾದ ಸಮರ್ಪಿಸಿದರು.




























