

ಶ್ರೀನಿವಾಸಪುರ : ಅನೇಕ ವರ್ಷಗಳಿಂದಲೂ ನಾವು ಈ ವ್ಯಾಪಾರವನ್ನೇ ನಂಬಿಕೊಂಡು ನಮ್ಮ ಕುಟುಂಬವನ್ನ ಪೋಷಣೆ ಮಾಡುತ್ತಿದ್ದೇವೆ. ಬಹುತೇಕರು ಆನ್ಲೈನ್ಮೂಲಕ ಔಷಧಿಗಳನ್ನು ತರಿಸಿಕೊಳ್ಳುತ್ತಿದ್ದು , ಇದರಿಂದ ನಾವು ನಷ್ಟವನ್ನು, ಕಷ್ಟವನ್ನು ಅನುಭವಿಸುತ್ತಿದ್ದೇವೆ ಎಂದು ಔಷಧಿ ವ್ಯಾಪಾರಿಗಳ ತಾಲೂಕು ಸಂಘದ ಅಧ್ಯಕ್ಷ ಬಾಲಚಂದ್ರನಾಥ್ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯ ಮುಂಭಾಗ ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ಬುಧವಾರ ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ತಲುಪಿಸಲು ತಹಶೀಲ್ದಾರ್ ಕಚೇರಿ ಸಿಬ್ಬಂದಿ ಆರ್ಐ ಮಂಜುನಾಥ್ರವರಿಗೆ ಮನವಿ ಸಲ್ಲಿಸಿದರು.
ತಕ್ಷಣ ಸರ್ಕಾರ ಇದರ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿ, ಅನ್ಲೈನ್ ಮೂಲಕ ಔಷಧಿಗಳನ್ನು ನಿಲ್ಲಿಸಬೇಕು, ವೈದ್ಯರು ನೀಡುವ ಚೀಟಿ ಇಲ್ಲದೆ ಔಷಧಿಗಳನ್ನು ಮಾರಾಟ ಮಾಡುವುದರಿಂದ ಗ್ರಾಹಕರ ಆರೋಗ್ಯಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇದೆ. ಇದೆನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಅನ್ಲೈನ್ ಮೂಲಕ ಔಷಧಗಳನ್ನು ಸರಬರಾಜು ಆಗುತ್ತಿರುವುದನ್ನ ನಿಯಂತ್ರಿಸಬೇಕಿದೆ ಎಂದು ಆಗ್ರಹಿಸಿದರು.
ಸಂಘದ ಪದಾಧಿಕಾರಿ ಲಕ್ಷ್ಮೀಪುರ ರಾಮಮೋಹನ್ ಮಾತನಾಡುತ್ತಾ ಕಾರ್ಪೊರೇಟ್ ಕಂಪನಿಗಳಿಂದ ನಡೆಯುತ್ತಿರುವ ಡಿಸ್ಕೌಂಟ್ ವ್ಯಾಪಾರ ನಿಲ್ಲಿಸಿ ದೇಶದಲ್ಲಿ ಆರೋಗ್ಯಕರ ವ್ಯಾಪಾರ ಸೃಷ್ಟಿಸಬೇಕು ನಕಲಿ ಔಷಧಗಳ ಹಾವಳಿ ನಿಲ್ಲಿಸಿ ಸರಳ ಕಾನೂನುಗಳಿಂದ ಔಷಧ ವ್ಯಾಪಾರಿಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.
ಪಟ್ಟಣದ ಎಂಜಿ ರಸ್ತೆಯಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುಂವತೆ ಮೆರವಣಿಗೆ ನಡೆಸಿದರು. ಕಾರ್ಯದರ್ಶಿ ವೇಣುಗೋಪಾಲ್, ಪದಾಧಿಕಾರಿಗಳಾದ ಮಂಜುನಾಥ್, ಕೊಪ್ಪರಂ ಮಂಜು, ಯಲ್ದೂರು ದುರ್ಗಾಪ್ರಸಾದ್, ಹೊಳೂರು ಮುರಳಿಕೃಷ್ಣ, ಸೋಮಯಾಜಲಹಳ್ಳಿ ರವೀಂದ್ರನಾಥ್, ಸುಧಾ, ದ್ವಾರಕನಾಥ್, ಸಂತೋಷ್ಕುಮಾರ್, ಅಶೋಕ್ ಇದ್ದರು.

