

ಕೋಲಾರ:- ಕೋಲಾರ ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿದ್ದೋದ್ಧೇಶ ಸಹಕಾರ ಸಂಘದ ನಿಯಮಿತದ ಶೇರು ಸಂಗ್ರಹಣಾ ಅಭಿಯಾನಕ್ಕೆ ಮಾಲೂರು ನಗರದಿಂದ ಬುಧವಾರ ಚಾಲನೆ ನೀಡಿ, ಯಶಸ್ವಿನಿ ಆರೋಗ್ಯ ವಿಮಾ ಸೌಲಭ್ಯ ಹಾಗೂ ಸಾಲ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಪಡೆದುಕೊಳ್ಳಲು ಸೂಚಿಸಲಾಯಿತು.
ಮಾಲೂರು ನಗರದ ಕೃಷಿಕ ಸಮಾಜ ಸಂಘದ ಸಭಾಂಗಣದಲ್ಲಿ ಬುಧವಾರ ಜರುಗಿದ ಅಭಿಯಾನದ ಪ್ರಥಮ ಸಭೆಯಲ್ಲಿ ಹಿರಿಯ ಪತ್ರಕರ್ತ ರಾಜ್ಗೋಪಾಲ್ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಉಪಾಧ್ಯಕ್ಷ ಅಬ್ಬಣಿ ಶಂಕರ್ ಇತರೇ ನಿರ್ದೇಶಕರಿಗೆ ತಮ್ಮ ಸದಸ್ಯತ್ವ ಅರ್ಜಿಯನ್ನು ನೀಡುವ ಮೂಲಕ ಚಾಲನೆ ನೀಡಿ, ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ನಿವೇಶನ,ಸೂರು ಒದಗಿಸುವ ಪ್ರಯತ್ನವೂ ನಡೆದಿದೆ ಎಂದರು.
ಇದೇ ಸಂದರ್ಭದಲ್ಲಿ ಮಾಲೂರು ತಾಲೂಕಿನ 15 ಕ್ಕೂ ಹೆಚ್ಚು ಮಂದಿ ಪತ್ರಕರ್ತರು ಸಂಘದಲ್ಲಿ ಸದಸ್ಯತ್ವ ಕೋರಿ ಶೇರು ಅರ್ಜಿಯನ್ನು ಸಂಘದ ಪದಾಧಿಕಾರಿಗಳಿಗೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಇಪ್ಪತ್ತು ವರ್ಷಗಳಿಂದ ಆರಂಭವಾದ ಸಂಘದಿಂದ ಸೀಮಿತ ಚಟುವಟಿಕೆಗಳನ್ನು ಮಾತ್ರವೇ ನಡೆಸಲಾಗುತ್ತಿತ್ತು. ಇದೀಗ ಸಂಘದ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಲು ತೀರ್ಮಾನಿಸಲಾಗಿದ್ದು, ಸಂಘದ ಸದಸ್ಯರಿಗೆ ನಿವೇಶನ, ಆರೋಗ್ಯ ತಪಾಸಣಾ ಶಿಬಿರ, ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಮತ್ತಿತರ ಸಮಾಜ ಸೇವಾ ಚಟುವಟಿಕೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಹೆಚ್ಚು ಮಂದಿ ಪತ್ರಕರ್ತರಿಗೆ ಸದಸ್ಯತ್ವ ನೀಡಲು ಶೇರು ಸಂಗ್ರಹಣಾ ಅಭಿಯಾನವನ್ನು ಕೈಗೊಳ್ಳಲಾಗಿದ್ದು, ಮಾಲೂರು ತಾಲೂಕಿನಿಂದ ಚಾಲನೆ ನೀಡಲಾಗುತ್ತಿದೆ ಎಂದರು.
ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್ ಮಾತನಾಡಿ, ವಿವಿಧೋದ್ಧೇಶ ಸಹಕಾರ ಸಂಘದ ಬೈಲಾದಲ್ಲಿ ಗೃಹ ನಿರ್ಮಾಣ ಸೇರಿದಂತೆ ವೈವಿಧ್ಯಮಯ ಚಟುವಟಿಕೆಗಳನ್ನು ನಡೆಸಲು ಅವಕಾಶ ಇದ್ದು, ಮತ್ತೊಂದು ಸಹಕಾರ ಸಂಘದಲ್ಲಿ ಸದಸ್ಯತ್ವ ಪಡೆಯುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈ ಕುರಿತು ಕೆಲವರು ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದು ಸದಸ್ಯರು ವಿಚಲಿತರಾಗಬೇಕಿಲ್ಲ ಎಂದರು.
ಸಹಕಾರ ತತ್ವದಡಿ ಪರಸ್ಪರ ಸಹಕಾರ ಮನೋಭಾವನೆಯಿಂದ ಎಲ್ಲರೂ ಒಗ್ಗೂಡಿ ಅಧ್ಯಕ್ಷರ ನೇತೃತ್ವದಲ್ಲಿ ಒಮ್ಮತದಿಂದ ಚಟುವಟಿಕೆಗಳನ್ನು ನಡೆಸಲು ಮುಂದಾಗಿದ್ದೇವೆ ಪ್ರತಿಯೊಬ್ಬ ಸದಸ್ಯರ ಸಹಕಾರ ಅಗತ್ಯ ಎಂದರು.
ಸಂಘದ ನಿರ್ದೇಶಕರಾದ ದಾಸಣ್ಣ, ಎ.ಜಿ.ಸುರೇಶ್ಕುಮಾರ್, ರಾಜೇಂದ್ರ, ರವಿಕುಮಾರ್, ಸಿ.ವಿ.ನಾಗರಾಜ್, ಶಮ್ಗರ್ ಇತರರು ಮಾತನಾಡಿ, ಸಂಘದ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರು ಸಕ್ರಿಯವಾಗಿ ಭಾಗವಹಿಸಿ ಕೇವಲ ಜಿಲ್ಲಾ ಕೇಂದ್ರದಲ್ಲಿ ಮಾತ್ರವಲ್ಲದೆ, ತಾಲೂಕು ಹಂತದಲ್ಲಿಯೂ ಚಟುವಟಿಕೆಗಳನ್ನು ನಡೆಸುವಂತಾಗಬೇಕೆಂದು ಹೇಳಿದರು.
ಶೇರು ಸಂಗ್ರಹಣಾ ಅಭಿಯಾನ ಯಶಸ್ಸಿಗೆ ಪತ್ರಕರ್ತರಾದ ಸಂಘರ್ಷ, ಮಾರುತೇಶ್, ರಾಜ್ಗೋಪಾಲ್, ನಾರಾಯಣಪ್ಪ, ನಾರಾಯಣಮ್ಮ, ರವಿಕುಮಾರ್, ಯಾದವ್, ನಾರಾಯಣಸ್ವಾಮಿ, ಚಾಂದ್ ಪಾಷಾ, ಬಾಲನ್, ನಿರಂಜನ್, ನ್ಯೂಸ್ ಚಂದ್ರು ಇತರರು ಸಹಕರಿಸಿದ್ದರು.

