

ಶ್ರೀನಿವಾಸಪುರ : ಶಾಲಾ ಶಿಕ್ಷಣ ಇಲಾಖೆಯಿಂದ 2025-26ನೇ ಸಾಲಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಖರೀದಿಗೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ತಿಳಿಸಿರುವಂತೆ, 1 ರಿಂದ 10ನೇ ತರಗತಿಗಳ ವಿದ್ಯಾರ್ಥಿಗಳಿಗೆ (1-5ನೇ ತರಗತಿ ಪ್ರತಿ ಮಕ್ಕಳಿಗೆ ರೂ.265, 6-8ನೇ ತರಗತಿಗೆ ರೂ.295 ಹಾಗೂ 9-10ನೇ ತರಗತಿಗೆ ರೂ.325) ಶೂ ಮತ್ತು ಸಾಕ್ಸ್ ವಿತರಣೆಗಾಗಿ ಅನುದಾನವನ್ನು ಸ್ಯಾಟ್ಸ್ ತಂತ್ರಾಂಶದ ಅಂಕಿ-ಅಂಶ ಆಧಾರವಾಗಿ ನೇರವಾಗಿ ಎಸ್ಡಿಎಂಸಿ ಖಾತೆಗಳಿಗೆ ಜಮಾ ಮಾಡಲಾಗಿದೆ.
ಶಾಲಾ ಮುಖ್ಯಶಿಕ್ಷಕರು ರಾಷ್ಟ್ರ ಮಟ್ಟದ ಹೆಸರಾಂತ ಕಂಪನಿಗಳ ಅಧಿಕೃತ ಮಾರಾಟಗಾರರಿಂದ ಉತ್ತಮ ಗುಣಮಟ್ಟದ ಒಂದು ಜೋಡಿ ಶೂ ಹಾಗೂ ಎರಡು ಜೋಡಿ ಸಾಕ್ಸ್ ಖರೀದಿಸಿ ವಿದ್ಯಾರ್ಥಿಗಳಿಗೆ ವಿತರಿಸಲು ಸೂಚಿಸಲಾಗಿದೆ. ಅನುದಾನದ ಮೊತ್ತದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಮುಖ್ಯಶಿಕ್ಷಕರು ತಮ್ಮ ವ್ಯಾಪ್ತಿಯ ಸಿಆರ್ಪಿಗಳ ಮೂಲಕ ಕಚೇರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.
ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶ್ರೀನಿವಾಸಪುರ ಅವರು ತಾಲ್ಲೂಕಿನ ಎಲ್ಲಾ ಸರ್ಕಾರಿ ಕಿರಿಯ/ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯಶಿಕ್ಷಕರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

