

ಶ್ರೀನಿವಾಸಪುರ : ಶ್ರೀನಿವಾಸಪುರ ತಾಲೂಕಿನ ಎಲ್ಲಾ ಸರ್ಕಾರಿ ಕಿರಿಯ/ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿನ ಶಾಲಾ ಅಭಿವೃದ್ಧಿ ಮತ್ತು ಮಾನಿಟರಿಂಗ್ ಸಮಿತಿ (SDMC)ಗಳನ್ನು ತುರ್ತಾಗಿ ರಚಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತಿ ಶಾಲೆಯ ಮುಖ್ಯೋಪಾಧ್ಯಾಯರಿಗೆ ನೀಡಿರುವ ನಿರ್ದೇಶನದ ಪ್ರಕಾರ, ನಿಗದಿತ ಅವಧಿಯೊಳಗೆ ಸಮಿತಿ ರಚನೆ ಪೂರ್ಣಗೊಳ್ಳಲೇಬೇಕು. ಇಲ್ಲವಾದಲ್ಲಿ ಶಾಲೆಗಳ ಅಭಿವೃದ್ಧಿ ಕಾರ್ಯಗಳಲ್ಲಿ ಗಂಭೀರ ಅಡಚಣೆ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ವಿವಿಧ ಸರ್ಕಾರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಲು ಎಸ್ಡಿಎಂಸಿ ಸಮಿತಿಗಳು ಪ್ರಮುಖ ಪಾತ್ರವಹಿಸುತ್ತವೆ. ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿಯೂ ಈ ಸಮಿತಿಗಳ ಅಸ್ತಿತ್ವ ಕಡ್ಡಾಯವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರ್ದೇಶನವನ್ನು ಪಾಲಿಸಲು ವಿಫಲರಾದ ಮುಖ್ಯೋಪಾಧ್ಯಾಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಸಹ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿದ್ದಾರೆ.

