

ಕುಂದಾಪುರ: ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ (NSS) ಹಾಗೂ ರೋಟರಿ ಕ್ಲಬ್ ಕಲ್ಯಾಣಪುರದ ಸಹಯೋಗದೊಂದಿಗೆ ಅಕ್ಟೋಬರ್ 27ರಂದು “Safe Streets, Smart Youth” ಶೀರ್ಷಿಕೆಯಡಿ ಸಂಚಾರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಪ್ರೊ. ಲಕ್ಷ್ಮಿ ಜಿ. ಸ್ವಾಗತ ಭಾಷಣ ಮಾಡಿದರು. NSS ಸಂಯೋಜಕಿ ಪ್ರೊ. ನಿರುಪಮಾ ಜಿ. ಎನ್. ಅವರು ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ ಹಾಗೂ ಮಹತ್ವದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಶ್ರೀ ಅನೂಪ್ ನಾಯಕ್ ಅವರು ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳು, ರಸ್ತೆ ಸುರಕ್ಷತೆ ಹಾಗೂ ಜವಾಬ್ದಾರಿಯುತ ವಾಹನ ಚಾಲನೆಯ ಮಹತ್ವದ ಕುರಿತು ಮಾಹಿತಿ ನೀಡಿದರು. ರೋಟರಿ ಕ್ಲಬ್ ಕಲ್ಯಾಣಪುರದ ಅಧ್ಯಕ್ಷ ರೊಟೇರಿಯನ್ ಗಿರೀಶ್ಚಂದ್ರ ಆರ್. ಅವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದರು. ರೋಟರಿ ಕ್ಲಬ್ ಕಲ್ಯಾಣಪುರದ ಸದಸ್ಯ ಹಾಗೂ ಜಿಲ್ಲಾ ಗವರ್ನರ್ ನಾಮನಿರ್ದೇಶಿತ ರೊಟೇರಿಯನ್ ಅಲೆನ್ ವಿನಯ್ ಲೂಯಿಸ್ ಅವರು ಸಂಚಾರ ಜಾಗೃತಿ ಪ್ರತಿಜ್ಞೆಯನ್ನು ಬೋಧಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗ್ಡೆ ಅವರು ವಿದ್ಯಾರ್ಥಿಗಳು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ ಸಮಾಜದಲ್ಲಿ ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಬೇಕೆಂದು ತಿಳಿಸಿದರು. ಐಎಂಜೆ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ. ಎಸ್. ಎನ್. ಭಟ್ ಅವರು ಅಧ್ಯಕ್ಷೀಯ ಭಾಷಣ ಮಾಡಿ ಸರ್ವರೂ ಜಾಗ್ರತಿಯಿಂದ ರಸ್ತೆ ಸಂಚಾರ ನಿಯಮ ಪಾಲಿಸಿದರೆ ಅಪಘಾತದಿಂದಾಗುವ ಅನಾಹುತಗಳನ್ನು ತಪ್ಪಿಸಬಹುದೆಂದು ಒತ್ತಿ ಹೇಳಿದರು.
ಕಾರ್ಯಕ್ರಮದ ಅಂಗವಾಗಿ ದ್ವಿತೀಯ ವರ್ಷದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿನಿ ಚೇತನಾ ಅವರು ಏಕಪಾತ್ರಾಭಿನಯ ಪ್ರದರ್ಶಿಸಿದರು. ಕಾರ್ಯಕ್ರಮದ ಸಂಯೋಜಕಿ ಪ್ರೊ. ದೃಶ್ಯಾ ಶೆಟ್ಟಿ ಅವರು ವಂದನಾರ್ಪಣೆ ಸಲ್ಲಿಸಿದರು. ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸಂಚಾರ ನಿಯಮಗಳ ಪಾಲನೆ, ರಸ್ತೆ ಸುರಕ್ಷತೆ ಮತ್ತು ಜವಾಬ್ದಾರಿಯುತ ನಾಗರಿಕತ್ವದ ಕುರಿತು ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಯಿತು.

