

ಮಂಗಳೂರು: ಬೋಳಾರದ ಸೈಂಟ್ ಆನ್ಸ್ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ತನ್ಮಯ್ ಸುವರ್ಣ ಅವರು ರಾಷ್ಟ್ರೀಯ ಮಟ್ಟದ ಕುಸ್ತಿ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಶಾಲೆಗೆ ಹೆಮ್ಮೆಯ ಗರಿ ಮುಡಿಸಿದ್ದಾರೆ.
ಕ್ರೀಡಾಸಕ್ತಿಯೊಂದಿಗೆ ಅವಿರತ ಪರಿಶ್ರಮ, ದೃಢಸಂಕಲ್ಪ ಹಾಗೂ ನಿರಂತರ ಅಭ್ಯಾಸದ ಫಲವಾಗಿ ತನ್ಮಯ್ ಈ ಮಹತ್ವದ ಸಾಧನೆಗೆ ಪಾತ್ರರಾಗಿದ್ದಾರೆ. ವೀರಭಾರತಿ ವ್ಯಾಯಾಮ ಶಾಲೆಯ ಕುಸ್ತಿ ತರಬೇತುದಾರ ಆನಂದ್ ಅಮೀನ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿರುವ ತನ್ಮಯ್, ಇದೀಗ ರಾಷ್ಟ್ರಮಟ್ಟದಲ್ಲಿ ತಮ್ಮ ಕ್ರೀಡಾಪ್ರತಿಭೆಯನ್ನು ಅನಾವರಣಗೊಳಿಸಲು ಸಜ್ಜಾಗಿದ್ದಾರೆ.
ವಿದ್ಯಾರ್ಥಿಯ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆಗೈದು ವಿಜಯಶಾಲಿಯಾಗಲಿ ಎಂದು ಶುಭ ಹಾರೈಸಿದ್ದಾರೆ.


