

ಶ್ರೀನಿವಾಸಪುರ : ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಶ್ರೀ ಪಾರ್ವತಿ ಸಮೇತ ಸಹಮನೇಶ್ವರಸ್ವಾಮಿ ಬ್ರಹ್ಮರಥೋತ್ಸವವು ಗುರುವಾರ ಭಕ್ತಿಭಾವದಿಂದ, ಸಂಪ್ರದಾಯಬದ್ಧವಾಗಿ ಹಾಗೂ ಅದ್ದೂರಿಯಾಗಿ ನಡೆಯಿತು.
ಉತ್ಸವದ ಅಂಗವಾಗಿ ಬೆಳಗ್ಗಿನಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆಗಳು, ಅಭಿಷೇಕ, ಅಲಂಕಾರ ಕಾರ್ಯಗಳು ನೆರವೇರಿದವು. ನಂತರ ಗ್ರಾಮ ದೇವರ ಉತ್ಸವ ಮೂರ್ತಿಯನ್ನು ಅಲಂಕರಿಸಿದ ರಥದಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.
ಈ ವೇಳೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರು ಹೂವು, ಹಣ್ಣು, ಪೂಜೆ ಸಾಮಗ್ರಿಗಳನ್ನು ಸಮರ್ಪಿಸಿ ಭಕ್ತಿಭಾವದಿಂದ ದೇವರಿಗೆ ತಮ್ಮ ಹರಿಕೆಗಳನ್ನು ತೀರಿಸಿಕೊಂಡರು. ಮಹಿಳೆಯರು ಕುಂಕುಮಾರ್ಚನೆ ಸಲ್ಲಿಸಿ ವಿಶೇಷ ಪ್ರಾರ್ಥನೆ ಮಾಡಿದರು.
ರಥೋತ್ಸವದ ಸಂದರ್ಭದಲ್ಲಿ ದೇವಸ್ಥಾನದ ಆವರಣ ಹಾಗೂ ಗ್ರಾಮದೆಲ್ಲೆಡೆ ಹಬ್ಬದ ಸಂಭ್ರಮ ಕಂಗೊಳಿಸಿತು. ನಾದಸ್ವರ, ತಾಳಮದ್ದಲೆ ಹಾಗೂ ಭಜನಾ ತಂಡಗಳ ನಾದಕ್ಕೆ ಭಕ್ತರು ತೇಲಿದರು. ಯುವಕರು, ಮಹಿಳೆಯರು ಮತ್ತು ಮಕ್ಕಳು ಉತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಧಾರ್ಮಿಕ ವಾತಾವರಣವನ್ನು ಮತ್ತಷ್ಟು ಉಜ್ವಲಗೊಳಿಸಿದರು.
ಉತ್ಸವಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರರೆಡ್ಡಿ ಅವರ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಭಕ್ತರು ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸಿ ಸಂತೃಪ್ತಿಗೊಂಡರು.
ಪೂಜಾ ಕಾರ್ಯಕ್ರಮಗಳನ್ನು ಅಗಮಿಕ ಅರ್ಚಕ ಶಿಡ್ಲಗಟ್ಟ ರಾಮಮೋಹನ ಶಾಸ್ತ್ರಿ, ಗುಡಿಪಲ್ಲಿ ಕಾರ್ತಿಕ್ ಹಾಗೂ ಅರ್ಚಕ ಪಂಕಜ್ ಪಾಂಡೆ ಅವರು ಶಾಸ್ತ್ರೋಕ್ತವಾಗಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಆರ್. ರಮೇಶ್ ಕುಮಾರ್, ಅಡ್ಡಗಲ್ ಕ್ಷೇತ್ರದ ಕೋಮುಲ್ ನಿರ್ದೇಶಕ ಕೆ.ಕೆ. ಮಂಜುನಾಥ್, ಕೆಪಿಸಿಸಿ ಸದಸ್ಯ ಸಂಜಯ್ ರೆಡ್ಡಿ, ಗ್ಯಾರಂಟಿ ಯೋಜನೆ ಅಧ್ಯಕ್ಷ ಮನೋಹರ್, ಮುಖಂಡರಾದ ವೆಂಕಟರಾಮರೆಡ್ಡಿ, ಹರೀಶ್ ಯಾದವ್, ವೇಣು ಸೇರಿದಂತೆ ಅನೇಕ ಗಣ್ಯರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಉತ್ಸವವು ಶಾಂತಿಯುತವಾಗಿ ಹಾಗೂ ಯಶಸ್ವಿಯಾಗಿ ನೆರವೇರಿದ್ದು, ಭಕ್ತರಲ್ಲಿ ಅಪಾರ ಭಕ್ತಿಭಾವ ಮತ್ತು ಸಂತೋಷವನ್ನು ಮೂಡಿಸಿತು.


