

ಕೋಲಾರ; ಲಘು ಪೋಷಕಾಂಶಗಳ ಮಿಶ್ರಣವಾದ ಮಾವು ಸ್ಪೇಷಲ್ನ್ನು ಬಳಸುವುದರಿಂದ ಉತ್ತಮ ಗುಣಮಟ್ಟದ ಇಳುವರಿ ಪಡೆಯಬಹುದು ಎಂದು ತೋಟಗಾರಿಕಾ ಮಹಾವಿದ್ಯಾಲಯ ಕೋಲಾರದ ಹಣ್ಣು ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗರಾಜ್ ಕೆ. ಎಸ್. ರವರು ತಿಳಿಸಿದರು.
ಕೋಲಾರದ ತೋಟಗಾರಿಕಾ ಮಹಾವಿದ್ಯಾಲಯದ ವತಿಯಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ತಾಲ್ಲೂಕಿನ ಉಪ್ಪುಕುಂಟೆ ಗ್ರಾಮದಲ್ಲಿ ಆಯೋಜಿಸಲಾಗಿರುವ ಗ್ರಾಮೀಣ ತೋಟಗಾರಿಕಾ ಕಾರ್ಯಾನುಭವ ಶಿಬಿರದಲ್ಲಿ ಹಮ್ಮಿಕೊಳ್ಳಲಾದ ‘ಮಾವಿನ ಬೆಳೆಯಲ್ಲಿ ಮಾವು ಸ್ಪೇಷಲ್ ಬಳಕೆ ಪದ್ದತಿ ಪ್ರಾತ್ಯಕ್ಷಿಕೆ’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಾವು ಸ್ಪೇಷಲ್ ಎಂಬುದು ಲಘು ಪೋಷಕಾಂಶಗಳ ಮಿಶ್ರಣವಾಗಿದ್ದು, ಇದನ್ನು ಬಳಸುವುದರಿಂದ ಮಾವಿನ ಬೆಳೆಯ ಇಳುವರಿ ಹಾಗೂ ಗುಣಮಟ್ಟ ಹೆಚ್ಚುವುದಲ್ಲದೆ ಮಾವು ಬೇಗನೆ ಕಟಾವಿಗೆ ಬರುವುದು ಎಂದರು. 1 ಕೆಜಿ ಮಾವು ಸ್ಪೇಷಲ್ನ್ನು 200 ಲೀ ನೀರಿನ ಟ್ಯಾಂಕಿಗೆ ಬಳಸಿ ಅದಕ್ಕೆ 13 ಶ್ಯಾಂಪೂ ಪೋಚ್ ನಲ್ಲಿರುವ ಶ್ಯಾಂಪೂ ಮತ್ತು 26 ನಿಂಬೆ ಹಣ್ಣಿನ ರಸ ಸೇರಿಸಿ ಸಿಂಪರಣೆ ಮಾಡಿದ್ದಲ್ಲಿ ಗುಣಮಟ್ಟದ ಹೆಚ್ಚಿನ ಇಳುವರಿ ಬರುವುದು ಎಂದರು. ಮಾವು ಸ್ಪೇಷಲ್ನ್ನು ಕಾಯಿಗಳು ಬಟಾಣಿ ಗಾತ್ರದಲ್ಲಿದ್ದಾಗ, ನಿಂಬೆ ಹಾಗೂ ಬಾದಾಮಿ ಗಾತ್ರದಲ್ಲಿದ್ದಾಗ ಸಿಂಪಡಿಸಬೇಕು ಹಾಗೂ ರೈತರು ಮಾವು ಸ್ಪೇಷಲ್ನ್ನು ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆಯಬಹುದು ಎಂದರು.
ತೋಟಗಾರಿಕಾ ಮಹಾವಿದ್ಯಾಲಯ, ಕೋಲಾರದ ಸಸ್ಯರೋಗ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಸದಾನಂದ ಮುಶ್ರೀಫ್ ರವರು ಮಾತನಾಡಿ, ಮಾವನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ ಹಾಗೂ ಕೋಲಾರ ಜಿಲ್ಲೆಯು ಮಾವಿಗೆ ಪ್ರಸಿದ್ದಿ ಪಡೆದಿದೆ, ಹೀಗಿದ್ದರೂ ವಾತಾವರಣ ವೈಪರೀತ್ಯದಿಂದಾಗಿ ಹೂವು ಉದುರುವುದು, ಪೀಚು ಉದುರುವುದರಿಂದ ಮಾವು ಬೆಳೆಗಾರರು ಸಂಕಷ್ಠಕ್ಕೊಳಗಾಗಿದ್ದಾರೆ ಈ ನಿಟ್ಟಿನಲ್ಲಿ ಮಾವಿನ ಬೆಳೆಯ ಸುಧಾರಣೆಯಲ್ಲಿ ಹಲವು ತಾಂತ್ರಿಕತೆಗಳು ಬಂದಿದ್ದು ಅದರಲ್ಲಿ ಮಾವು ಸ್ಪೇಷಲ್ ಎಂಬುದು ಮಾವು ಬೆಳೆಗಾರರಿಗೆ ವರದಾನವಾಗಿದ್ದು, ಮಾವು ಬೆಳೆಗಾರರು ಈ ತಾಂತ್ರಿಕತೆ ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕೋಲಾರದ ತೋಟಗಾರಿಕಾ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಉಪ್ಪುಕುಂಟೆ ಗ್ರಾಮದ ಮಾವು ಬೆಳೆಗಾರರು ಭಾಗವಹಿಸಿ ಪ್ರಾತ್ಯಕ್ಷಿಕೆಯ ಸದುಪಯೋಗ ಪಡೆದುಕೊಂಡರು.


