

ಮಧುಗಿರಿ: ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಕಸಾಪುರ ಗ್ರಾಮದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕುಣಿದಿದ್ದಕ್ಕೆ ಆಕ್ಷೇಪಿಸಿ ದಲಿತ ಸಮುದಾಯದ 17 ವರ್ಷದ ಬಾಲಕನೋರ್ವನನ್ನು ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆಗೈದ ಘಟನೆ ಭಾನುವಾರ ವರದಿಯಾಗಿದೆ.
ಕೊಲೆಯಾದ ಬಾಲಕ ಪರಿಶಿಷ್ಟ ಜಾತಿಗೆ ಸೇರಿದ ಸಿಂಹಾದ್ರಿ(17) ಎಂದು ತಿಳಿದು ಬಂದಿದೆ. ಈ ಕುರಿತು ಕಸಾಪುರ ಗ್ರಾಮದ ಮಾರುತೇಶ (ಬಂಡೆ ಗುಂಡ) ಎಂಬಾತನ ವಿರುದ್ಧ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೆ ಸಂಬಂಧಿಸಿ ಸಿಂಹಾದ್ರಿಯ ತಾಯಿ ಅನ್ನಪೂರ್ಣಾ ಪೊಲೀಸ್ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಗ್ರಾಮದ ಊರ ಮಾರಮ್ಮ ದೇವಾಲಯದ ಮುಂಭಾಗದ ರಸ್ತೆಯಲ್ಲಿ ನಾಯಕ ಮತ್ತು ಒಕ್ಕಲಿಗ ಸಮುದಾಯದ ವತಿಯಿಂದ ಭಾನುವಾರ ಮಧ್ಯಾಹ್ನ ಗಣೇಶ ವಿಸರ್ಜನೆ ಮೆರವಣಿಗೆ ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಕುಣಿಯಲು ಹೋಗಿದ್ದ ಸಿಂಹಾದ್ರಿಗೆ ಆರೋಪಿ ಮಾರುತೇಶ, ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಈ ಸಂದರ್ಭ “ಗಣೇಶನನ್ನು ನೋಡಲು ಬಂದಿದ್ದೇನೆ’ ಎಂದು ಸಿಂಹಾದ್ರಿ ಹೇಳಿದಾಗ ಆರೋಪಿ ಮಾರುತೇಶ ಏರುಧ್ವನಿಯಲ್ಲಿ ಬೈದು ಕಪಾಳಕ್ಕೆ ಹೊಡೆದಿದ್ದಾನೆ. ಬಳಿಕ ರಸ್ತೆ ಬದಿಯಲ್ಲಿದ್ದ ಕಲ್ಲಿನಿಂದ ಸಿಂಹಾದ್ರಿಯ ಎದೆಯ ಭಾಗಕ್ಕೆ ತೀವ್ರವಾಗಿ ಗುದ್ದಿದ್ದಾನೆ. ತೀವ್ರ ಗಾಯಗೊಂಡ ಸಿಂಹಾದ್ರಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಸ್ಥಳೀಯರು ಹಾಗೂ ಸ್ನೇಹಿತರು ತಕ್ಷಣವೇ ಸಿಂಹಾದ್ರಿಯನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಆತ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಕೀಳು ಜಾತಿಯವನು ಎಂಬ ಕಾರಣಕ್ಕೆ ನನ್ನ ಮಗನನ್ನು ಕೊಲೆ ಮಾಡಲಾಗಿದೆ. ಆದ್ದರಿಂದ ಮಾರುತೇಶ ಹಾಗೂ ಆತನಿಗೆ
ಕುಮ್ಮಕ್ಕು ನೀಡಿದವರ ವಿರುದ್ಧ ಕಾನೂನು ಕ್ರಮ ಗಿಸುವಂತೆ ಪೊಲೀಸ್ ದೂರಿನಲ್ಲಿ ಅನ್ನಪೂರ್ಣಾ ಒತ್ತಾಯಿಸಿದ್ದಾರೆ. ಈ ಕುರಿತು ಮಿಡಿಗೇಶಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

