

ಕುಂದಾಪುರ ; ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ನಡೆಸುತ್ತಿರುವ ರಕ್ತ ನಿಧಿ ಕೇಂದ್ರ ಪ್ರಾರಂಭವಾಗಿ ಹನ್ನೊಂದು ವರ್ಷ ಪೂರೈಸಿದೆ. ರೆಡ್ ಕ್ರಾಸನ ಸಭಾಪತಿ ಎಸ್ ಜಯಕರ ಶೆಟ್ಟಿಯವರು ರಕ್ತ ನಿಧಿ ಕೇಂದ್ರದ ಸ್ಥಾಪನೆಯ ಸಂದರ್ಭವನ್ನು ನೆನಪಿಸಿಕೊಂಡರು. ಈ ಮಹತ್ಕಾರ್ಯಕ್ಕೆ ಸಹಕರಿಸಿದ, ಪ್ರೋತ್ಸಹಿಸಿದ ವ್ಯಕ್ತಿಗಳನ್ನು , ಸಂಘ ಸಂಸ್ಥೆಗಳನ್ನು, ದಾನಿಗಳನ್ನು ಸ್ಮರಿಸಿಕೊಂಡರು. ಉಡುಪಿ ಜಿಲ್ಲೆಯ ಮೂರನೆ ರಕ್ತ ನಿಧಿ ಕೇಂದ್ರವಾದ ಇದು ಕುಂದಾಪುರ ತಾಲೂಕು ಮಾತ್ರವಲ್ಲದೇ ಭಟ್ಕಳ,ಮುರ್ಡೇಶ್ವರದಿಂದ ಶಿರ್ವ,ಕಾರ್ಕಳದ ತನಕದ ಜನರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಪ್ರತಿ ವರ್ಷ 90 ರಿಂದ 100 ಸ್ವಯಂಪ್ರೇರಿತ ರಕ್ತ ದಾನ ಶಿಬಿರ ಏರ್ಪಡಿಸಿ 8000 ದಿಂದ 9000 ಯುನಿಟ್ ರಕ್ತವನ್ನು ಸಂಗ್ರಹಿಸಿ, ಅವಶ್ಯಕತೆ ಇರುವ ರೋಗಿಗಳಿಗೆ ನೀಡಿ ಹಲವು ಜೀವವನ್ನು ಉಳಿಸಿದ ಕಾರ್ಯ ಸಂತೃಪ್ತಿ ತಂದಿದೆ ಎಂದು ಅಭಿಪ್ರಾಯ ಪಟ್ಟರು. ಈ ಹನ್ನೊಂದು ವರ್ಷದ ಪಯಣದಲ್ಲಿ ಕೈ ಜೋಡಿಸಿದ ರಕ್ತದಾನಿಗಳಿಗೆ, ಸಂಘ ಸಂಸ್ಥೆಗಳಿಗೆ, ವೈದ್ಯರಿಗೆ ಹಾಗೂ ರಕ್ತ ನಿಧಿ ಕೇಂದ್ರದ ಸಿಬ್ಬಂದಿಯವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಯಶಸ್ವಿ ಹನ್ನೊಂದು ವರ್ಷ ಪೂರೈಸಲು ಸಂಸ್ಥೆಯ ಸದಸ್ಯರ ಸಮರ್ಪಣಾ ಭಾವದ ಕಾರ್ಯ ವೈಖರಿ ಮತ್ತು ರಕ್ತ ನಿಧಿ ಕೇಂದ್ರದ ಸಿಬ್ಬಂದಿಗಳ ಕಾರ್ಯತತ್ಪರತೆ ಕಾರಣ ಎಂದು ವಿಶ್ಲೇಷಿಸಿದರು. ರೆಡ್ ಕ್ರಾಸನ ಆಡಳಿತ ಮಂಡಳಿಯ ಸದಸ್ಯರು ರಕ್ತನಿಧಿ ಕೇಂದ್ರದ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

