


ಕೋಟ; 2 ದಿನಗಳ ನಿಯೋಜಿತ ಭೇಟಿಯಾಗಿ ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನಿಯ ಡಾ. ಲೆಸ್ಲಿ ಡಿಸೋಜಾ ಅವರು ಜೂನ್ 6 ರಂದು ಸಂಜೆ ಕೋಟ ಸಂತ ಜೋಸೆಫರ ಇಗರ್ಜಿಗೆ ಆಗಮಿಸಿದರು. ಇಗರ್ಜಿಯ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ಬಿಷಪ್ ಅವರಿಗೆ ಹೂವಿನ ಮಾಲೆಯನ್ನು ತೊಡಿಸಿ ಬರಮಾಡಿಕೊಂಡರು. ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಶರಾದ ಹೆರಾಲ್ಡ್ ಫೆರ್ನಾಂಡಿಸ್, ಕಾರ್ಯದರ್ಶಿ ನೊರಾ ಡಿಸೋಜಾ ಹಾಗು ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಹೂಗಳನ್ನು ಅರ್ಪಿಸಿ ಬಿಷಪ್ ಅವರಿಗೆ ಭವ್ಯ ಸ್ವಾಗತ ಕೋರಿದರು. ನಂತರ ಸಾಂಪ್ರದಾಯದಂತೆ ವಿವಿಧ ಪೂಜಾವಿಧಿಗಳನ್ನು ಬಿಷಪರು ನೆರವೇರಿಸಿದರು. ನಂತರ ಇಗರ್ಜಿಯ ಆಡಳಿತ ಮಂಡಳಿ, ವಿವಿಧ ಸಂಘ ಸಂಸ್ಥೆ, ಆಯೋಗಗಳೊಂದಿಗೆ ಸಭೆ ನಡೆಸಿ ವಿಚಾರ ವಿನಿಮಯ ಮಾಡಿಕೊಂಡರು. ಸಂಘಟನೆಗಳ ಮುಖಂಡರು ತಮ್ಮ ಸಂಘಟನೆಗಳ ಚಟುವಟಿಕೆಗಳ ವರದಿಯನ್ನು ನೀಡಿದರು.
ಭಾನುವಾರ ಜೂನ್ ರಂದು ಬಿಷಪರು ಸಂಭ್ರಮಿಕ ಪವಿತ್ರ ಬಲಿಪೂಜೆ ಯನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಚರ್ಚಿನ 7 ಮಕ್ಕಳಿಗೆ ಧ್ರಡೀಕರಣದ ಸಂಸ್ಕಾರವನ್ನು ಅನುಗ್ರಹಿಸಿ ಆಶೀರ್ವಾದಿಸಿದರು. (ಕಥೊಲಿಕ ಸಂಪ್ರದಾಯದಲ್ಲಿ ನೀಡಲಾಗುವ 7 ಸಂಸ್ಕಾರಗಳಲ್ಲಿ ಧ್ರಡೀಕರಣದ ಸಂಸ್ಕಾರ ಒಂದು ಪ್ರಮುಖ ಸಂಸ್ಕಾರ ವಾಗಿರುತ್ತದೆ. ಮಕ್ಕಳು ಪ್ರಭುದ್ಧಾವಸ್ತೆಗೆ ತಲುಪಿದ ನಂತರ ಇದನ್ನು ಅನುಗ್ರಹಿಸಲಾಗುತ್ತದೆ. ಇದಕ್ಕೆ ಮೊದಲು ಮಕ್ಕಳಿಗೆ ಸೂಕ್ತವಾದ ಧಾರ್ಮಿಕ ಶಿಕ್ಷಣ ನೀಡಿ ಅವನ್ನು ಈ ಸಂಸ್ಕಾರವನ್ನು ಪಡೆಯಲು ಅನುಗೊಳಿಸುತ್ತಾರೆ)
ಬಲಿಪೂಜೆಯ ನಂತರ ಬಿಷಪರು ಭಕ್ತಾದಿಗಳೊಂದಿಗೆ ಖುಶಲೋಪಚಾರ ನಡೆಸಿದರು. ಧರ್ಮಪ್ರಾಂತ್ಯದ ಅತೀ ಚಿಕ್ಕ ಇಗರ್ಜಿಯಾಗಿರುವ ಇಲ್ಲಿಯ ಜನರ ಉತ್ಸಾಹ ಹಾಗು ಸಹಕಾರವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಸಮಸ್ತರಿಗೆ ಲಘು ಉಪಹಾರದ ವ್ಯವಸ್ತೆಯನ್ನು ಮಾಡಲಾಗಿತ್ತು.
ನಂತರ ತುಂಬಾ ಅನಾರೋಗ್ಯದಿಂದ ಬಳಲುತಿದ್ದು ಇಗರ್ಜಿಗೆ ಆಗಮಿಸಲಾಗದವರ ಮನೆಗಳಿಗೆ ಭೇಟಿ ನೀಡಿ ಅವರನ್ನು ಆಶೀರ್ವಾದಿಸಿದರು. ನಂತರ ಒಲಂಪಿಯಾ ಲಾಜರಸ್ ಅವರ ಮನೆಯಲ್ಲಿ ನಡೆದ ಲೂರ್ಡ್ಸ್ ವಾರ್ಡ್ನ ವಾರ್ಡ್ ಕಿರು ಸಮುದಾಯ ಸಭೆಯಲ್ಲಿ ಭಾಗವಹಿಸಿದರು.
ಇಗರ್ಜಿಯ ಧರ್ಮಗುರುಗಳಾದ ವಂ। ಸ್ಟ್ಯಾನಿ ತಾವ್ರೊ ಅವರು ಬಿಷಪ್ ಹಾಗು ಭಕ್ತಾದಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.














































































