

ಕುಂದಾಪುರ: ಸಿದ್ದಾಪುರ ಹೊಸಂಗಡಿ ಸಮೀಪದ ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಹಾಗೂ ನಿರ್ಗತಿಕರಿಗಾಗಿ ನಿರ್ಮಿಸಲಾಗಿರುವ ಆಶ್ರಮದ ಉದ್ಘಾಟನೆ ಮತ್ತು ಆಶೀರ್ವಚನ ಕಾರ್ಯಕ್ರಮ ಜೂನ್ 13 ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಜರುಗಲಿದೆ. ‘ಬಡವರ ಸೇವೆ ಕ್ರಿಸ್ತರ ಸೇವೆ’ ಹಬ್ಬದ ಸಂದೇಶ ವಾಕ್ಯವಾಗಿದೆ
ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು ನೂತನ ಆಶ್ರಮವನ್ನು ಉದ್ಘಾಟಿಸಿ ಆಶೀರ್ವಚಿಸಲಿದ್ದು ಬಳಿಕ ಮಹೋತ್ಸವದ ಬಲಿಪೂಜೆಯ ನೇತೃತ್ವ ವಹಿಸಲಿದ್ದಾರೆ. ಸಂಜೆ 4 ಗಂಟೆಗೆ ಕನ್ನಡ ಭಾಷೆಯಲ್ಲಿ ಪರಮ ಪ್ರಸಾದ ಆರಾಧನೆ ಮತ್ತು ಪವಿತ್ರ ಬಲಿಪೂಜೆಯನ್ನು ಶಿವಮೊಗ್ಗ ಧರ್ಮಕ್ಷೇತ್ರದ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ವಂ|ರೋಮನ್ ಪಿಂಟೊ ನೆರವೇರಿಸಲಿದ್ದಾರೆ.
ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರವು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಪ್ರಸಿದ್ಧ ಕ್ರೈಸ್ತ ಯಾತ್ರಾಸ್ಥಳವಾಗಿದ್ದು, ಪಶ್ಚಿಮ ಘಟ್ಟಗಳ ಹಚ್ಚಹಸುರಿನ ತಪ್ಪಲಿನಲ್ಲಿ, ಬಾಳೆಬರೆ ಘಾಟ್ ಕೆಳಭಾಗದಲ್ಲಿರುವ ರಮಣೀಯ ತಾಣದಲ್ಲಿದೆ. ಈ ಪುಣ್ಯಕ್ಷೇತ್ರವು ತನ್ನದೇ ಆದ ಅದ್ಭುತ ಇತಿಹಾಸ ಮತ್ತು ಪವಾಡಗಳಿಗೆ ಹೆಸರುವಾಸಿಯಾಗಿದೆ.
ಸುಮಾರು 400 ವರ್ಷಗಳ ಹಿಂದೆ, ಕೆರೆಕಟ್ಟೆಯ ಹೃದಯಭಾಗದಲ್ಲಿ ಒಬ್ಬ ಹಿಂದೂ ರೈತನು ತನ್ನ ಜಮೀನನ್ನು ಉಳುಮೆ ಮಾಡುತ್ತಿದ್ದಾಗ ಸಂತ ಅಂತೋನಿಯವರ ಮರದ ಪ್ರತಿಮೆ ಮಣ್ಣಿನಲ್ಲಿ ಸಿಕ್ಕಿತು. ಮೊದಲು ಕುಂದಾಪುರ ಹಿರಿಯ ಚಾರಿತ್ರಿಕ ಖ್ಯಾತಿಯ ರೋಜರಿ ಮಾತಾ ಚರ್ಚಿನ ಅಧೀದಲ್ಲಿದ್ದು, ಈಗ ಬಸ್ರೂರಿನ ಸಂತ ಫಿಲಿಪ್ ನೆರಿ ಚರ್ಚ್ನ ವ್ಯಾಪ್ತಿಗೆ ಒಳಪಟ್ಟಿದ್ದ ಈ ಪವಿತ್ರ ಕ್ಷೇತ್ರವು, ಕೇವಲ 8 ಕುಟುಂಬಗಳು ಹಾಗೂ 22 ಸದಸ್ಯರನ್ನು ಒಳಗೊಂಡಿದೆ. 2013ರ ಜೂನ್ 13ರಂದು ಅಧಿಕೃತವಾಗಿ ಧರ್ಮಪ್ರಾಂತ್ಯದ ಪುಣ್ಯಕ್ಷೇತ್ರವಾಗಿ ಘೋಷಿಸಲ್ಪಟ್ಟಿತು.
ಪ್ರತಿ ಮಂಗಳವಾರ ಇಲ್ಲಿ ವಿಶೇಷ ಪ್ರಾರ್ಥನೆಗಳು ಮತ್ತು ಪವಿತ್ರ ಬಲಿಪೂಜೆ (Mass) ಜರುಗುತ್ತದೆ. ದೂರದ ಊರುಗಳಿಂದ ಬರುವ ಭಕ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗುತ್ತದೆ. ಪ್ರತಿ ವರ್ಷ ಸಂತ ಅಂತೋನಿಯವರ ವಾರ್ಷಿಕ ಮಹೋತ್ಸವವು ಫೆಬ್ರವರಿ ಮತ್ತು ಜೂನ್ ತಿಂಗಳುಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಜರಗುತ್ತದೆ. ಪ್ರತಿ ವರ್ಷದಂತೆ ಇಲ್ಲಿ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತಲಿದ್ದು, ಸಂತ ಅಂತೋಣಿಯವರ ಪುಣ್ಯ ಕ್ಷೇತ್ರ ಜನಪ್ರಿಯವಾಗುತ್ತ ಬಂದಿದೆ.
ನಿರ್ಗತಿಕರ ಆಶ್ರಮದ ಬಗ್ಗೆ ಒಂದಿಷ್ಟು ಮಾಹಿತಿ

ಉಡುಪಿ ಧರ್ಮಪ್ರಾಂತ್ಯದ ಮೊದಲ ಧರ್ಮಾಧ್ಯಕ್ಷರಾದ ಪ್ರಸ್ತುತ ನಿವೃತ್ತರಾಗಿರುವ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರಿಗೆ ಸಮಾಜದಲ್ಲಿನ ನಿರ್ಗತಿಕರಿಗಾಗಿ ಏನಾದರೂ ಮಾಡಬೇಕು ಎನ್ನುವ ಹಂಬಲವಿತ್ತು. ಸಂತ ಅಂತೋನಿಯವರು ನಿರ್ಗತಿಕರು ಅನಾಥರನ್ನು ಹೆಚ್ಚು ಪ್ರೀತಿಸುತಿದ್ದರು. ಅದಕ್ಕಾಗಿ ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಇಲ್ಲಿ ನಿರ್ಗತಿಕರಿಗಾಗಿ ಆಶ್ರಮವನ್ನು ನಿರ್ಮಿಸುವ ನಿರ್ಧಾರಕ್ಕೆ ಬಂದರು. ಪುಣ್ಯಕ್ಷೇತ್ರದ ರೆಕ್ಟರ್ ವಂ|ಸುನೀಲ್ ವೇಗಸ್ ಅವರ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ 2023 ರ ಜೂನ್ 13 ರಂದು ಅಂದಿನ ಧರ್ಮಾಧ್ಯಕ್ಷರಿಂದ ಶಿಲನ್ಯಾಸ ಮಾಡಿದ್ದು, ಪ್ರಸ್ತುತ ನಿರ್ಗತಿಕರ ವಾಸಕ್ಕಾಗಿ ಸಜ್ಜಾಗಿದೆ.
ಆಶ್ರಮದಲ್ಲಿ 60 ಮಂದಿ ನಿರ್ಗತಿಕರಿಗೆ ವಾಸಕ್ಕೆ ಅವಕಾಶವಿದ್ದು ನೈಜ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಜೀವಿಸಲು ಅವಕಾಶ ನೀಡಲಾಗುತ್ತದೆ. ಇಲ್ಲಿ ವಾಸಿಸುವ ಫಲಾನುಭವಿಗಳಿಗೆ ಊಟ, ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಆಶ್ರಮದಲ್ಲಿ ವಾಸಿಸುವವರ ಮೇಲ್ವಿಚಾರಣೆಯನ್ನು ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ದಿ ಇಮ್ಯಾಕುಲೆಟ್ ಸಂಸ್ಥೆಯ ಧರ್ಮ ಭಗಿನಿಯರ ನೇತೃತ್ವದಲ್ಲಿ ನಡೆಯಲಿದೆ. ವಾಸಿಗಳ ಊಟ ಹಾಗೂ ವಸತಿಯ ಖರ್ಚು ವೆಚ್ಚ ಸಂಪೂರ್ಣವಾಗಿ ದಾನಿಗಳು ಹಾಗೂ ಹಿತಚಿಂತಕರ ಸಹಕಾರದೊಂದಿಗೆ ನಡೆಯಲಿದ್ದು ಸಹೃದಯ ದಾನಿಗಳ ನೆರವಿಗೆ ಅವಕಾಶವಿದೆ.
ಹಿಂದಿನ ಧರ್ಮಾಧ್ಯಕ್ಷರ ಕನಸಿನ ಯೋಜನೆಗೆ ದಾನಿಗಳ ನೆರವಿನೊಂದಿಗೆ ಸುಸಜ್ಜಿತವಾದ ನಿರ್ಗತಿಕರ ಆಶ್ರಮವನ್ನು ನಿರ್ಮಿಸಲಾಗಿದ್ದು ನೆಲೆ ಇಲ್ಲದ ವ್ಯಕ್ತಿಗಳ ಮುಂದಿನ ಜೀವನ ಶಾಂತಿಯುತವಾಗಿ ಸಾಗಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ದಾನಿಗಳ ಬೆಂಬಲ ಸಹಕಾರದೊಂದಿಗೆ ಆಶ್ರಮ ವಾಸಿಗಳಿಗೆ ನೆಮ್ಮದಿಯ ಜೀವನ ಕಾಣಲು ಪುಣ್ಯಕ್ಷೇತ್ರ ಮುಂದೆಯೂ ಶ್ರಮಿಸಲಿದೆ ಎನ್ನುತ್ತಾರೆ ಪುಣ್ಯಕ್ಷೇತ್ರದ ರೆಕ್ಟರ್ ವಂ|ಸುನೀಲ್ ವೇಗಸ್.
ತಾನೊಂದು ಮರಣಕ್ಕೆ ಹೋಗಿದ್ದು ಮೃತ ವ್ಯಕ್ತಿ ದನದ ಕೊಟ್ಟಿಗೆಯಲ್ಲಿ ವಾಸ ಮಾಡುತ್ತಿದ್ದದ್ದನ್ನು ಕಂಡು ಅಂತಹ ನಿರ್ಗತಿಕರಿಗೆ ಏನಾದರೂ ತನ್ನಿಂದ ಆದ ಸಹಾಯ ಮಾಡಬೇಕು ಎಂಬ ಹಂಬಲಕ್ಕೆ ಉಡುಪಿ ಧರ್ಮಪ್ರಾಂತ್ಯದ ಅಂದಿನ ಧರ್ಮಾಧ್ಯಕ್ಷರ ಕನಸಿಗೆ ದಾನಿಯಾಗಿ ಈ ಆಶ್ರಮ ನಿರ್ಮಾಣದಲ್ಲಿ ಪುಣ್ಯಕ್ಷೇತ್ರದ ನಿರ್ದೇಶಕರೊಂದಿಗೆ ಸೇರಿ ತನ್ನಿಂದ ಆದ ಸಹಾಯ ಸಹಕಾರವನ್ನು ನೀಡಿರುತ್ತೇನೆ. ಮುಂದೆಯೂ ನನ್ನ ಸಹಕಾರ ನೀಡಲಿದ್ದೇನೆ ಎನ್ನುತ್ತಾರೆ ಆಶ್ರಮದ ಮಹಾದಾನಿಗಳಲ್ಲಿ ಓರ್ವರಾದ ಫಿಲಿಪ್ ಡಿಕೋಸ್ತಾ ಬಸ್ರೂರು.
ಆಶ್ರಮದ ಅಭಿವೃದ್ದಿಯ ನಿಟ್ಟಿನಲ್ಲಿ ದಾನಿಗಳಿಗೆ ಪ್ರೋತ್ಸಾಹ ಸಹಕಾರ ನೀಡಲು ಅವಕಾಶವಿದ್ದು ಪುಣ್ಯಕ್ಷೇತ್ರ ರೆಕ್ಟರ್ ಅವರನ್ನು ಸಂಪರ್ಕಿಸಬಹುದು ಎಂದು ವಂ|ಸುನೀಲ್ ವೇಗಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



