

ಕುಂದಾಪುರ; ದಿನಾಂಕ : 02-09-2025ರ ಮಂಗಳವಾರದಂದು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇಲ್ಲಿ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇದರ ವತಿಯಿಂದ ಉದ್ಘಾಟನೆ ಹಾಗೂ ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಅರಿವು ಕಾರ್ಯಕ್ರಮವು ಜರುಗಿತು.
ಸಮಾರಂಭದಲ್ಲಿ ಹೋಲಿ ರೋಜರಿ ಚರ್ಚ್ ನ ಪ್ರದಾನ ಧರ್ಮಗುರುಗಳು ಹಾಗೂ ಸಂತ ಮೇರೀಸ್ ಮತ್ತು ಹೋಲಿ ರೋಜರಿ ಸಂಸ್ಥೆಗಳ ಸಂಚಾಲಕರಾಗಿರುವ ಅತೀ ವಂದನೀಯ ಗುರುಗಳಾದ ಪೌಲ್ ರೆಗೋರವರು ಅಧ್ಯಕ್ಷತೆ ವಹಿಸಿ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯ ಸಾಧನೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಜಯಕರ ಶೆಟ್ಟಿಯವರು ರೆಡ್ ಕ್ರಾಸ್ ಸಂಸ್ಥೆ ಬೆಳೆದು ಬಂದ ಬಗೆ, ಉದ್ದೇಶ ಹಾಗೂ ಅದರ ಕಾರ್ಯ ಕಲಾಪಗಳ ವಿವರ ತಿಳಿಸಿ ತಾರತಮ್ಯವಿಲ್ಲದೇ ಒಗ್ಗಟ್ಟು, ಮಾನವೀಯ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುವುದು ರೆಡ್ ಕ್ರಾಸ್ ಸಂಸ್ಥೆಯ ಉದ್ಧೇಶ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಡಾ. ಸೋನಿ ಡಿ’ಕೋಸ್ತಾ ವಿದ್ಯಾರ್ಥಿಗಳಿಗೆ ಆರೋಗ್ಯ ಎಂದರೆ ಮಾನಸಿಕ, ಶಾರೀರಿಕ ಹಾಗೂ ಸಾಮಾಜಿಕವಾಗಿರುವುದು, ವಿದ್ಯಾರ್ಥಿಗಳು ದಿನಕ್ಕೆ 6 ಲೋಟ ನೀರನ್ನು ಕುಡಿಯಬೇಕು ಹಾಗೂ ಉತ್ತಮ ಆಹಾರವನ್ನು ಸೇವಿಸಿ, ಮೊಬೈಲ್ ಬಳಕೆಯಿಂದ ದೂರವಿದ್ದು, ದೇವರ ಸ್ತುತಿಯನ್ನು ಮಾಡುತ್ತಾ ಉತ್ತಮ ಸಮಾಜದ ನಿರ್ಮಾಣ ಮಾಡುವಲ್ಲಿ ಕೈ ಜೋಡಿಸಬೇಕೆಂದು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ತಿಳಿಸಿದರು.
ರೆಡ್ ಕ್ರಾಸ್ ನ ಖಜಾಂಜಿಯಾಗಿರುವ ಶಿವರಾಮ ಶೆಟ್ಟಿಯವರು ಉಪಸ್ಥಿತರಿದ್ದು ರೆಡ್ ಕ್ರಾಸ್ ನ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಎ.ಸಿ., ಶಾಲಾ ರೆಡ್ ಕ್ರಾಸ್ ಅಧ್ಯಕ್ಷ ಇಸಾನ್ ಅಲಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ರೆಡ್ ಕ್ರಾಸ್ ಸಂಯೋಜಕಿ ನಿಖಿತಾ ಶೆಟ್ಟಿ ಸ್ವಾಗತಿಸಿ, ವಿದ್ಯಾರ್ಥಿನಿ ಸಿಯೋನ್ನಾ ಚಾರ್ಲೊತ್ ಕಾರ್ಯಕ್ರಮ ನಿರೂಪಿಸಿ ವಿದ್ಯಾರ್ಥಿನಿ ವಿಯಾನ್ಸಾ ಮೊಂತೆರೊ ವಂದಿಸಿದರು.
























