

ಕುಂದಾಪುರ;ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದ ಎಪ್ರಿಲ್ ಏಳರಂದು ಜನೌಷಧಿ ಕೇಂದ್ರದ ಮುಂಭಾಗ ಉಚಿತ ಆರೋಗ್ಯ ತಪಾಸಣೆಯ ಶಿಬಿರದೊಂದಿಗೆ ವಿಶ್ವ ಆರೋಗ್ಯ ದಿನವನ್ನು ವಿಶಿಷ್ಟವಾಗಿ ಆಚರಿಸಿತು. ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆಯ ಸಲುವಾಗಿ ಕುಂದಾಪುರ ಹಂಗಳೂರಿನ ಸರ್ಜನ್ ಆಸ್ಪತ್ರೆಯ ಡಾ.ವಿಶ್ವೇಶ್ವರ್ ದೀಪ ಬೆಳಗಿಸಿ, ಜನ ಉಪಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರೆಡ್ ಕ್ರಾಸನ್ನು ಶ್ಲಾಘಿಸಿದರು. ವಿಶ್ವ ಆರೋಗ್ಯ ದಿನದ ಮಹತ್ವದ ಕುರಿತು ತಿಳಿಸಿ, ಆರೋಗ್ಯವನ್ನು ಕಾಪಾಡಿ ಇಟ್ಟು ಕೊಳ್ಳಲು ಕರೆ ನೀಡಿದರು. ಕಡಿಮೆ ದರದಲ್ಲಿ ಗುಣಮಟ್ಟದ ಎಲ್ಲಾ ತರಹದ ಔಷಧಗಳನ್ನು ಜನರಿಗೆ ವಿತರಿಸುವ ಕಾರ್ಯ ಮಾಡುತ್ತಾ ಬಂದಿರುವ ಜನೌಷಧಿ ಸಂಸ್ಥೆಗೆ ಶುಭ ಕೋರಿದರು. ಕುಂದಾಪುರ ರೆಡ್ ಕ್ರಾಸನ ಸಭಾಪತಿ ಎಸ್ ಜಯಕರ ಶೆಟ್ಟಿಯವರು ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ರೆಡ್ ಕ್ರಾಸನ ಆಡಳಿತ ಮಂಡಳಿಯ ಸದಸ್ಯರಾದ ವೈ ಸೀತಾರಾಮ ಶೆಟ್ಟಿ, ಗಣೇಶ್ ಆಚಾರ್ಯ, ಡಾ. ಸೋನಿ ಡಿ ಕೋಸ್ಟ, ಮುತ್ತಯ್ಯ ಶೆಟ್ಟಿ, ಖಜಾಂಜಿ ಶಿವರಾಮ ಶೆಟ್ಟಿ, , ಜನೌಷಧಿ ಕೇಂದ್ರದ ಚಂದ್ರಶೇಖರ, ರಕ್ತನಿಧಿ ಕೇಂದ್ರ ಹಾಗೂ ಜನೌಷಧಿ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಬ್ಲಡ್ ಶುಗರ್, ಬ್ಲಡ್ ಪ್ರೇಶರ್ ಪರೀಕ್ಷೆಗಳನ್ನು 153 ಮಂದಿಗೆ ಉಚಿತವಾಗಿ ಮಾಡಲಾಯಿತು. ಅವಶ್ಯಕತೆ ಇರುವ ಇಬ್ಬರಿಗೆ ಉಚಿತ ಇ.ಸಿ.ಜಿ ಮಾಡಲಾಯಿತು.

