

ಶಿವಮೊಗ್ಗ, ಮಾ.1: ಕುಂದಾಪುರದಿಂದ ಶಿವಮೊಗ್ಗಕ್ಕೆ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಸಂಪೂರ್ಣ ಸುಟ್ಟು ಕರಕಲಾದ ಭೀಕರ ಘಟನೆ ನಿನ್ನೆ ಹುಲಿಕಲ್ ಬಾಳೆಬರೇ ಘಾಟಿಯ ಫಾಲ್ಸ್ ಸಮೀಪ ಸಂಭವಿಸಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ವಿವರ:
ಕುಂದಾಪುರ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳುತ್ತಿದ್ದ ‘ದುರ್ಗಾಂಬಾ’ ಸಂಸ್ಥೆಗೆ ಸೇರಿದ ಬಸ್, ಘಾಟ್ ರಸ್ತೆಯ ಅಪಾಯಕಾರಿ ತಿರುವುಗಳಿರುವ ಫಾಲ್ಸ್ ಸಮೀಪ ತಲುಪಿದಾಗ ಈ ದುರ್ಘಟನೆ ನಡೆದಿದೆ. ಚಲಿಸುತ್ತಿದ್ದಂತೆಯೇ ಬಸ್ಸಿನ ಇಂಜಿನ್ ಭಾಗದಲ್ಲಿ ದಿಢೀರ್ ಹೊಗೆ ಕಾಣಿಸಿಕೊಂಡಿದೆ. ಇದನ್ನು ತಕ್ಷಣವೇ ಗಮನಿಸಿದ ಚಾಲಕ, ಸಮಯ ವ್ಯರ್ಥ ಮಾಡದೆ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿ ಪ್ರಯಾಣಿಕರಿಗೆ ಕೂಡಲೇ ಕೆಳಗಿಳಿಯುವಂತೆ ಸೂಚನೆ ನೀಡಿದ್ದಾರೆ.
ಪ್ರಯಾಣಿಕರು ಕೆಳಗಿಳಿದ ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಬಸ್ಸಿಗೆ ವ್ಯಾಪಿಸಿದ್ದು, ನೋಡನೋಡುತ್ತಿದ್ದಂತೆಯೇ ಬಸ್ ಬೆಂಕಿಯ ಜ್ವಾಲೆ ಇಡೀ ಬಸ್ಸನ್ನು ಸುಟ್ಟು ಬಿಟ್ಟಿದೆ. ಇಂಜಿನ್ನಲ್ಲಿ ಉಂಟಾದ ತಾಂತ್ರಿಕ ದೋಷವೆ ಅಥವಾ ಶಾರ್ಟ್ ಸರ್ಕ್ಯೂಟ್ ಬೆಂಕಿ ಅನಾಹುತಕ್ಕೆ ಪ್ರಾಥಮಿಕ ಕಾರಣ ಎಂದು ಶಂಕಿಸಲಾಗಿದೆ.


