

ಶ್ರೀನಿವಾಸಪುರ: ಉಚ್ಚ ನ್ಯಾಯಾಲಯವು 2023ರ ಸೆಪ್ಟೆಂಬರ್ 11ರಂದು ನೀಡಿರುವ ಆದೇಶದ ಪ್ರಕಾರ ಅರಣ್ಯ ಇಲಾಖೆ ಸಿಬ್ಬಂದಿಗೆ ಈ ಜಾಗಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ಆದರೂ ಅರಣ್ಯ ಇಲಾಖೆ ಸಿಬ್ಬಂದಿಯೇ ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ರೈತ ಮುಖಂಡ ಆರ್. ತಿಮ್ಮಸಂದ್ರ ಆರ್. ಶಿವರಾಮಶರ್ಮ ಆರೋಪಿಸಿದರು.
ಶುಕ್ರವಾರ ತಾಲ್ಲೂಕಿನ ಕೇತಗಾನಹಳ್ಳಿ ಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
1999ರಲ್ಲಿ ಕೇತಗಾನಹಳ್ಳಿ ಗ್ರಾಮದ ಪ್ರತಿಯೊಬ್ಬ ರೈತರಿಗೆ 30 ಗುಂಟೆ ಪ್ರಮಾಣದಲ್ಲಿ ಸಾಗುವಳಿ ಚೀಟಿ ಮೂಲಕ ಜಮೀನು ಹಂಚಿಕೆ ಮಾಡಲಾಗಿದೆ. ಆ ಬಳಿಕ ರೈತರು ಅಲ್ಲಿ ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಅನೇಕ ರೈತರು ತಮ್ಮ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಮಾವಿನ ಗಿಡ ಸೇರಿದಂತೆ ಹಲವು ತೋಟಗಾರಿಕಾ ಬೆಳೆಗಳನ್ನು ಬೆಳೆಸಿದ್ದಾರೆ. ಅಲ್ಲದೆ ಸುಮಾರು ಹಲವಾರು ಕೊಳವೆಬಾವಿಗಳನ್ನು ಸಹ ತೋಡಲಾಗಿದೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಇವುಗಳನ್ನು ನಾಶಪಡಿಸಿರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆ ಈ ಜಮೀನು ತಮ್ಮದೇ ಎಂದು ಹೇಳುತ್ತಿದೆ. ಆದರೆ ಅವರು ಯಾವ ರೀತಿಯಲ್ಲಿ ಈ ಜಮೀನನ್ನು ಬಳಸಿಕೊಂಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದರು. ಗ್ರಾಮದ ನಾಗರಾಜ್ ಅವರಿಗೆ 1997ರಲ್ಲಿ ಹೈಕೋರ್ಟ್ ಶಾಶ್ವತ ಪ್ರತಿಬಂಧಕ ಆದೇಶ (ಇಂಜಂಕ್ಷನ್ ಆರ್ಡರ್) ನೀಡಿತ್ತು. ನಂತರ ಇನ್ನೂ 11 ರೈತರು ಸಹ ನ್ಯಾಯಾಲಯದಿಂದ ಇಂಜಂಕ್ಷನ್ ಆದೇಶಗಳನ್ನು ಪಡೆದುಕೊಂಡಿದ್ದಾರೆ. ಆ ಸಂದರ್ಭದಲ್ಲಿ ಅರಣ್ಯ ಇಲಾಖೆ ಎಲ್ಲಿತ್ತು ಎಂದು ಪ್ರಶ್ನಿಸಿದರು.
ಅರಣ್ಯ ಇಲಾಖೆ ಸಿಬ್ಬಂದಿ ಹೈಕೋರ್ಟ್ ಆದೇಶವನ್ನೇ ನಿರ್ಲಕ್ಷ್ಯ ಮಾಡುತ್ತಿರುವುದು ಆಕ್ಷೇಪಾರ್ಹವಾಗಿದೆ ಎಂದು ಅವರು ಹೇಳಿದರು. ಇತ್ತೀಚೆಗೆ ಕೋಲಾರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಡಿಎಫ್ಒ ಅವರು ಈ ಜಮೀನು ಅರಣ್ಯ ಇಲಾಖೆಯ ಅಧೀನದಲ್ಲಿದೆ ಎಂದು ಹೇಳಿರುವುದು ಸರಿಯಲ್ಲ ಎಂದು ಅವರು ಟೀಕಿಸಿದರು.
ರೈತರು ನ್ಯಾಯಾಲಯದ ಆದೇಶವನ್ನು ಗೌರವದಿಂದ ಪಾಲಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಅರಣ್ಯ ಇಲಾಖೆಯೂ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು ಎಂದು ಅವರು ಸಲಹೆ ನೀಡಿದರು.
ಈ ವೇಳೆ ಮಾತನಾಡಿದ ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೇತಗಾನಹಳ್ಳಿ ನಾಗರಾಜ್, ಒಟ್ಟು 105 ಎಕರೆ 30 ಗುಂಟೆ ಜಮೀನು ಇರುವ ಈ ಪ್ರದೇಶವನ್ನು ಗ್ರಾಮದ ರೈತರಿಗೆ ಪಕ್ಷಾತೀತವಾಗಿ 30 ಗುಂಟೆ ಪ್ರಮಾಣದಲ್ಲಿ ಹಂಚಿಕೆ ಮಾಡಲಾಗಿತ್ತು. ಸುಮಾರು 40 ವರ್ಷಗಳಿಂದ ರೈತರು ಈ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ಜಮೀನಿನಲ್ಲಿ ಸುಮಾರು 35 ಕೊಳವೆಬಾವಿಗಳು ಹಾಗೂ ವಿದ್ಯುತ್ ಟ್ರಾನ್ಸ್ಫಾರ್ಮರ್ಗಳೂ ಇದ್ದು, ಕೃಷಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ಹೇಳಿದರು.
ಬೆಂಗಳೂರಿನ ಹೈಕೋರ್ಟ್ ನಮಗೆ ಬೆಳೆ ಬೆಳೆಸಿಕೊಳ್ಳಲು ಅವಕಾಶ ನೀಡಿದೆ. ನನ್ನ ಹೆಸರಿನಲ್ಲಿ 3 ಎಕರೆ ಜಮೀನಿಗೆ ಪಹಣಿ ದಾಖಲೆಗಳಿವೆ. ಆದರೆ ಡಿಎಫ್ಒ ಅವರು 90 ಎಕರೆ ಜಮೀನು ಒತ್ತುವರಿ ಮಾಡಲಾಗಿದೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ನ್ಯಾಯಾಲಯದ ಆದೇಶವನ್ನು ನಿರ್ಲಕ್ಷ್ಯ ಮಾಡಿದರೆ ಅದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ಒಂದು ವಾರದೊಳಗೆ ಸಮಸ್ಯೆಗೆ ಪರಿಹಾರ ದೊರೆಯಬೇಕು. ಇಲ್ಲದಿದ್ದರೆ ರೈತರು ತೀವ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ರಾಧಾಕೃಷ್ಣರೆಡ್ಡಿ, ಗೋಪಾಲ್ ರೆಡ್ಡಿ, ಬೈರೆಡ್ಡಿ, ಶ್ರೀನಿವಾಸ್, ವೆಂಕಟಸ್ವಾಮಿ, ಶ್ರೀರಾಮರೆಡ್ಡಿ, ಡೈರಿ ವೆಂಕಟರೆಡ್ಡಿ, ಕೆ.ಎನ್. ಶಿವಕುಮಾರ್, ಶಿವಣ್ಣ, ಗಿರೀಶ್ ಹಾಗೂ ಸೋಮಶೇಖರ್ ಉಪಸ್ಥಿತರಿದ್ದರು.




