

ಶ್ರೀನಿವಾಸಪುರ: ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಅಡಿಯಲ್ಲಿ ಕಟ್ಲರಿ ಬ್ಯಾಂಕ್ ಸ್ಥಾಪನೆಗೆ ಇಂದು ಚಾಲನೆ ದೊರೆತಿದೆ. ಈ ವಿಶೇಷ ಕಾರ್ಯಕ್ರಮವನ್ನು ಕೋಲಾರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ. ಬಾಗೇವಾಡಿ ಉದ್ಘಾಟಿಸಿ ಮಾತನಾಡಿದರು.
ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಬೆಳೆಯಲು ಸರ್ಕಾರದಿಂದ ಅನೇಕ ಕಲ್ಯಾಣಕರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM) ಅಡಿಯಲ್ಲಿ ಗ್ರಾಮ ಮಟ್ಟದ ಮಹಿಳಾ ಒಕ್ಕೂಟಗಳು ಶ್ರಮಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ಸೋಮಯಾಜಲಹಳ್ಳಿಯ GPLF ಮಹಿಳಾ ಒಕ್ಕೂಟವು ಮಾದರಿಯಾಗಿರುವುದಾಗಿ ಪ್ರಶಂಸಿಸಿದರು. ಮದುವೆ, ಜಾತ್ರೆ, ಹಬ್ಬ-ಹರಿದಿನ ಹಾಗೂ ಬೇರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಪಾತ್ರೆಗಳ ಬದಲು ಮರುಬಳಕೆ ಮಾಡಬಹುದಾದ ಪಾತ್ರೆ ಸಾಮಾನುಗಳನ್ನು ಬಳಸುವ ಮೂಲಕ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಅವರು ಒತ್ತಿ ಹೇಳಿದರು.
ಕಟ್ಲರಿ ಬ್ಯಾಂಕ್ನ ಉಪಯೋಗವನ್ನು ಗ್ರಾಮಸ್ಥರು ಸಮರ್ಪಕವಾಗಿ ಪಡೆದುಕೊಂಡರೆ ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಬಲ ದೊರೆಯುವುದು, ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ತ್ಯಾಜ್ಯ ನಿರ್ವಹಣೆ ಸುಗಮವಾಗುವುದು ಎಂದು ಅವರು ಅಭಿಪ್ರಾಯಪಟ್ಟರು. ಗ್ರಾಮ ಪಂಚಾಯತಿ ಉಕಿಐಈ ಸಂಸ್ಥೆಯೊಂದಿಗೆ ಕೈಜೋಡಿಸಿ ಸ್ವಚ್ಛತೆ, ತ್ಯಾಜ್ಯ ಸಂಗ್ರಹಣೆ ಮತ್ತು ಬಳಕೆದಾರರಿಂದ ಶುಲ್ಕ ವಸೂಲಿ ಮಾಡುವ ಕಾರ್ಯವನ್ನು ಯಶಸ್ವಿಯಾಗಿ ಕೈಗೊಂಡಿರುವುದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಮಾದರಿಯನ್ನು ಮುಂದಿನ ದಿನಗಳಲ್ಲಿ ಇತರ ಗ್ರಾಮ ಪಂಚಾಯಿತಿಗಳೂ ಅಳವಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಗ್ರಾಮ ಪಂಚಾಯತಿ ಅಧ್ಯಕ್ಷರು, ಸಾಹಸ್ ಸಂಸ್ಥೆಯ ವ್ಯವಸ್ಥಾಪಕರು, ಜುನಿಫರ್ ನೆಟ್ವರ್ಕ್ ಮುಖ್ಯಸ್ಥರು, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಪಂಚಾಯತಿ ಸಿಬ್ಬಂದಿ, ಸ್ವಚ್ಛ ಭಾರತ್ ಮಿಷನ್ ಮತ್ತು ಎನ್.ಆರ್.ಎಲ್.ಎಂ. ಸಮಾಲೋಚಕರು ಉಪಸ್ಥಿತರಿದ್ದರು.



