

ಶ್ರೀನಿವಾಸಪುರ: ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನೂ ಜೋಡಿ ಎತ್ತುಗಳಂತೆ ಸಮಾನವಾಗಿ ಗೌರವಿಸಿ ಪಾಲನೆ ಮಾಡಬೇಕು. ಹಕ್ಕು ಕರ್ತವ್ಯಗಳ ಸಮತೋಲನವೇ ಶಕ್ತಿಶಾಲಿ ಮತ್ತು ಶಿಸ್ತಿನ ಸಮಾಜ ನಿರ್ಮಾಣಕ್ಕೆ ಮೂಲವಾಗುತ್ತದೆ ಎಂದು ವಿಐಪಿ ಶಾಲಾ ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಡಾ. ಕೆ.ಎನ್. ವೇಣುಗೋಪಾಲ್ ಹೇಳಿದರು.
ತಾಲೂಕಿನ ರೋಣೂರು ಕ್ರಾಸ್ನ ವಿಐಪಿ ಶಾಲೆಯಲ್ಲಿ ಸೋಮವಾರ ನಡೆದ ೭೭ನೇ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶವು ಇಂದಿನ ದಿನಗಳಲ್ಲಿ ಎಲ್ಲಾ ರಂಗಗಳಲ್ಲಿ ಅಭಿವೃದ್ಧಿಯ ದಾರಿಯಲ್ಲಿ ಸಾಗುತ್ತಿದೆ. ಆದರೆ ದೇಶದ ಪ್ರಗತಿಗೆ ದೊಡ್ಡ ಸವಾಲಾಗಿರುವುದು ಭ್ರಷ್ಟಾಚಾರ. ಇದು ಜನರ ಮನಸ್ಥಿತಿಗೆ ಧಕ್ಕೆ ತರುತ್ತಿದೆ.
ಈ ಹಿನ್ನೆಲೆಯಲ್ಲಿ ಇಂದಿನ ವಿದ್ಯಾರ್ಥಿಗಳು ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ, ಶುದ್ಧ ಆಡಳಿತ ಹಾಗೂ ಸತ್ಪ್ರಜೆಗಳಾಗಿ ರೂಪುಗೊಳ್ಳುವ ಸಂಕಲ್ಪ ತಾಳಬೇಕು ಎಂದು ಕರೆ ನೀಡಿದರು.
ವಿಐಪಿ ಶಾಲಾ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷೆ ಡಾ. ಕವಿತಾ ಮಾತನಾಡಿ, ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗುತ್ತಿದೆ. ಈ ಬೆಳವಣಿಗೆಯನ್ನು ಮುಂದುವರಿಸಲು ಪ್ರತಿಯೊಬ್ಬರೂ ತಮ್ಮ ಪಾಲಿನ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿ, ದೇಶದ ಇನ್ನಷ್ಟು ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ವೇಷಭೂಷಣ ಧರಿಸಿ ಗಮನ ಸೆಳೆದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ದೇಶಭಕ್ತಿ ಹಾಗೂ ರಾಷ್ಟ್ರೀಯ ಏಕತೆಯ ಸಂದೇಶ ಸಾರಿದರು.
ಈ ಸಂದರ್ಭದಲ್ಲಿ ವಿಐಪಿ ಶಾಲಾ ಕಾಲೇಜು ಆಡಳಿತಾಧಿಕಾರಿ ರಾಜಕುಮಾರ್, ಪ್ರಾಂಶುಪಾಲೆ ಅಸ್ಮಾ
ತಬ್ಸಮ್ , ಸಿಇಒ ಗಗನ್, ಶಿಕ್ಷಕರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಸುಲ್ತಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

