ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ನಡೆದ ಉಪನ್ಯಾಸದಲ್ಲಿ ಡಾ.ಪ್ರಕಾಶ್ ತೋಳಾರ್


ಕುಂದಾಪುರ: ಮಾನಸಿಕ ಒತ್ತಡಕ್ಕೆ ಒಳಗಾಗಿ ಜೀವನದಲ್ಲಿ ಏಕಾಂಗಿಯಾಗಿ ಕಾಲ ಹರಣ ಮಾಡುವವರು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಯುವಕರು ಕೆಟ್ಟ ಸ್ನೇಹಿತರ ಸಹವಾಸವನ್ನು ಮಾಡಬಾರದು. ಮೊದಮೊದಲು ಗುಟ್ಟು ಗುಟ್ಟಾಗಿ ಸೇವಿಸುತ್ತ ಬಳಿಕ ಅದರ ಗುಲಾಮರಾಗಿ, ವ್ಯಸನಿಗಳಾಗಿ ಜೀವನವನ್ನೇ ಕಳೆದುಕೊಳ್ಳುವ ಹಂತಕ್ಕೆ ಹೋಗುತ್ತಾರೆ ಎಂದು ಖ್ಯಾತ ಮನೋರೋಗ ತಜ್ಞ ಡಾ.ಪ್ರಕಾಶ್ ತೋಳಾರ್ ಹೇಳಿದರು.
ಅವರು ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಸಂಭ್ರಮ ಇತ್ತೀಚೆಗೆ ನಡೆದ ವಿವಿಧ ಸಂಘಗಳ ಚಟುವಟಿಕೆ ಉದ್ಘಾಟನೆ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ನಡೆದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು. ಸಿಗರೇಟ್, ಗುಟ್ಕ ,ಡ್ರಗ್ಸ್, ಕುಡಿತ ಮುಂತಾದ ದುಶ್ಚಟಗಳನ್ನು ಹೊಂದಿರುವವರಿಂದ ದೂರ ಇರಬೇಕು. ಖುಷಿಗಾಗಿ ಮಾದಕ ವಸ್ತುಗಳ ದಾಸರಾಗ ಬಾರದು ಎಂದರು.
ಸಮಾರಂಭದ ಅಧ್ಯಕ್ಷತೆ ಶಾಲಾ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ ವಹಿಸಿದ್ದರು. ವೇದಿಕೆಯಲ್ಲಿ ಸಾಹಿತ್ಯ ಸಂಘದ ಅಧ್ಯಕ್ಷೆ ಶ್ರೀಜನಿ, ಆರೋಗ್ಯ ಸಂಘದ ಅಧ್ಯಕ್ಷೆ ಲಕ್ಷ್ಮೀ, ಇಕೋ ಕ್ಲಬ್ ಮತ್ತು ವೈಸಿಎಂ ಅಧ್ಯಕ್ಷೆ ಶೈನಾ, ವಿಜ್ಞಾನ ಸಂಘದ ಅಧ್ಯಕ್ಷ ಸಾತ್ವಿಕ್ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಾ.ಪ್ರಕಾಶ್ ತೋಳಾರ್ ಅವರನ್ನು ಗೌರವಿಸಲಾಯಿತು.
ವಿದ್ಯಾರ್ಥಿನಿ ಸೌಮ್ಯ ಸ್ವಾಗತಿಸಿದರು. ವಿವಿಧ ಕ್ಲಬ್ಗಳ ಸಂಚಾಲಕ ಶಿಕ್ಷಕಿ ಡೀನಾ ಪಾಯಸ್ ಪ್ರಾಸ್ತಾವನೆಗೈದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿಯರಾದ ವೈಷ್ಣವಿ ಕಾರ್ಯಕ್ರಮ ನಿರೂಪಿಸಿ, ಅನ್ವಿತಾ ವಂದಿಸಿದರು.

