

ಮಂಗಳೂರು; ಕೊಂಕಣಿ ಲೇಖಕ, ಕವಿ ಹಾಗೂ ಪತ್ರಕರ್ತ ಶ್ರೀ ಆವಿಲ್ ರಸ್ಕೀನ್ಹಾ ಅವರ ಪ್ರಪ್ರಥಮ ಕನ್ನಡ ಕವನ ಸಂಕಲನ ‘ಬಣ್ಣಗಳ ಚಿತ್ತಾರ ‘ ಪುಸ್ತಕದ ಲೊಕಾರ್ಪಣೆ ಸಮಾರಂಭ ಮೇ 31 ರಂದು ಸಂಜೆ 4.30ಕ್ಕೆ ಮಂಗಳೂರಿನ ಎಂ.ಸಿ.ಸಿ. ಬ್ಯಾಂಕ್ ಸಭಾಂಗಣದಲ್ಲಿ ಜರಗಿತು. ಪುಸ್ತಕ ಲೊಕಾರ್ಪಣೆಗೊಳಿಸಿದ ಕರ್ನಾಟಕ ರಾಜ್ಯೋತ್ಸವ ಕನ್ನಡ ಸಾಹಿತ್ಯ ಪ್ರಶಸ್ತಿ ವಿಜೇತ ವಂ| ಪ್ರಶಾಂತ್ ಮಾಡ್ತ ಅವರು “ಕವಿತೆಗಳನ್ನು ರಚಿಸುವ ವಿಧಾನ ಇಂದು ಬದಲಾಗಿದೆ. ದಶಕಗಳ ಹಿಂದೆ ಪ್ರಾಸ ಮತ್ತು ಅಲಂಕಾರಕ್ಕೆ ಹೆಚ್ಚು ಮಹತ್ವ ಕೊಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಭಾವನೆ ಮತ್ತು ವಿಚಾರ ಓದುಗರಿಗೆ ಮನದಟ್ಟಾಗುವ ರೀತಿಯಲ್ಲಿ, ಹೃದಯ ಸ್ಪರ್ಶಿಸುವ ರೀತಿಯಲ್ಲಿ ಪ್ರತಿಪಾದಿಸುವುದಕ್ಕೆ ಹೆಚ್ಚು ಮಹತ್ವ ಕೊಡಲಾಗುತ್ತದೆ. ಇದು ಸ್ವಾಗತಾರ್ಹ ಬದಲಾವಣೆ. ಕವಿ ಆವಿಲ್ ರಸ್ಕೀನ್ಹಾ ಮಾನವ ಜೀವನದ ಮತ್ತು ಪ್ರಕೃತಿಯ ಬಗ್ಗೆ ಸೊಗಸಾಗಿ ಕವಿತೆಗಳನ್ನು ಪೋಣಿಸಿದ್ದಾರೆ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿದ್ದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ| ಎಂ ಪಿ.ಶ್ರೀನಾಥ್ ಅವರು “‘ಬಣ್ಣಗಳ ಚಿತ್ತಾರ ಕವನ ಸಂಕಲನದಲ್ಲಿ ಓದುಗರ ಮನ ಸೆಳೆಯುವ ಅನೇಕ ಕವಿತೆಗಳು ಇವೆ. ಇಂದಿನ ಯುವಜನತೆ ಸಾಹಿತ್ಯದ ಒಲವು ಹೆಚ್ಚಿಸಿಕೊಳ್ಳಬೇಕಾದ ಅವಶ್ಯಕತೆ ಇದೆ” ಎಂದು ಹೇಳಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಶ್ರೀ ಸ್ಟೇನಿ ಅಲ್ವಾರಿಸ್ ಮತ್ತು ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಶ್ರೀ ಆನಿಲ್ ಲೋಬೊ ಅವರು ಕವಿ ಆವಿಲ್ ರಸ್ಕೀನ್ಹಾರವರನ್ನು ಅಭಿನಂದಿಸಿ ಶುಭ ಹಾರೈಸಿದರು. ಆರಂಭದಲ್ಲಿ ಕು. ಮೆಲಿಶಾ ಫೆರ್ನಾಂಡಿಸ್ ಪ್ರಾರ್ಥನಾ ಗೀತೆ ಹಾಡಿದರು. ಶ್ರೀ ಆವಿಲ್ ರಸ್ಕೀನ್ಹಾ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಮತಿ ಫೆಲ್ಸಿ ಲೋಬೋ ಪುಸ್ತಕ ಪರಿಚಯಿಸಿದರು. ಶ್ರೀ ಜಿಯೊ ಆಗ್ರಾರ್ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಶ್ರೀಮತಿ ಮಾರಿಯೆಟ್ ರಸ್ಕೀನ್ಹಾ ವಂದಿಸಿದರು.

