

ರೋಟರಿ ಕ್ಲಬ್ ಬಾರ್ಕೂರು ಹಾಗೂ ಇಂಟರ್ಯಾಕ್ಟ್ ಕ್ಲಬ್, ನೇಶನಲ್ ಹೈಸ್ಕೂಲ್ ಬಾರ್ಕೂರು ಇವರ ಸಂಯುಕ್ತ ಆಶ್ರಯದಲ್ಲಿ ಇಂಟರ್ಯಾಕ್ಟ್ ಪದ ಪ್ರದಾನ ಸಮಾರಂಭವು ದಿನಾಂಕ 15-07-2026ರಂದು ನೇಶನಲ್ ಹೈಸ್ಕೂಲ್ ಬಾರ್ಕೂರಿನ ಸಭಾಂಗಣದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ನೆರವೇರಿತು.
ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಸೇವಾ ಮನೋಭಾವ, ಸಾಮಾಜಿಕ ಬದ್ಧತೆ ಹಾಗೂ ಜವಾಬ್ದಾರಿಯುತ ವ್ಯಕ್ತಿತ್ವವನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಬಾರ್ಕೂರಿನ ಅಧ್ಯಕ್ಷರಾದ ರೊ. ಎನ್. ಅಜಿತ್ ಕುಮಾರ್ ಶೆಟ್ಟಿ ಅವರು ವಹಿಸಿದ್ದರು. ಅಧ್ಯಕ್ಷೀಯ ಭಾಷಣದಲ್ಲಿ ಅವರು, ವಿದ್ಯಾರ್ಥಿ ಜೀವನವೇ ಮೌಲ್ಯಗಳನ್ನು ರೂಢಿಸಿಕೊಳ್ಳುವ ಸುವರ್ಣಕಾಲವಾಗಿದ್ದು, ಇಂಟರ್ಯಾಕ್ಟ್ ಕ್ಲಬ್ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅತ್ಯುತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು. “ಇಂದಿನ ವಿದ್ಯಾರ್ಥಿಗಳೇ ನಾಳಿನ ಸಮಾಜದ ನಾಯಕರು. ಆದ್ದರಿಂದ ಸೇವಾ ಮನೋಭಾವ, ಶಿಸ್ತು, ಪ್ರಾಮಾಣಿಕತೆ ಹಾಗೂ ನಾಯಕತ್ವದ ಗುಣಗಳನ್ನು ಈಗಿನಿಂದಲೇ ಬೆಳೆಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
ಪದ ಪ್ರದಾನ ಅಧಿಕಾರಿಗಳಾದ ರೊ. ಪಿ.ಎಚ್.ಪಿ. ರತ್ನಾಕರ ಶೆಟ್ಟಿ ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಿ ಪದಪ್ರಮಾಣ ವಚನ ಬೋಧಿಸಿದರು. ಅಧಿಕಾರವು ಗೌರವಕ್ಕಿಂತ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿದ್ದು, ವಿದ್ಯಾರ್ಥಿಗಳು ತಮ್ಮ ಹುದ್ದೆಯನ್ನು ನಿಷ್ಠೆ, ಪ್ರಾಮಾಣಿಕತೆ ಹಾಗೂ ಸೇವಾ ಸಂಕಲ್ಪದಿಂದ ನಿರ್ವಹಿಸಬೇಕೆಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಲಯ ಪ್ರತಿನಿಧಿ ರೊ. ಸೀತಾರಾಮ್ ಎಸ್. ಅವರು ರೋಟರಿಯ ಧ್ಯೇಯ, ಇಂಟರ್ಯಾಕ್ಟ್ ಕ್ಲಬ್ನ ಉದ್ದೇಶಗಳು ಹಾಗೂ ಸಮಾಜಮುಖಿ ಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಸಂದೇಶ ನೀಡಿದರು. ವಿದ್ಯಾರ್ಥಿಗಳು ಸೇವೆಯ ಮೂಲಕ ಸಮಾಜದ ವಿಶ್ವಾಸವನ್ನು ಗಳಿಸಿ, ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕೆಂದು ಕರೆ ನೀಡಿದರು.
ಕ್ಲಬ್ ಇಂಟರ್ಯಾಕ್ಟ್ ಚೇರ್ಮನ್ ರೊ. ಕುಶಲ್ ಪೂಜಾರಿ ಅವರು ಮಾತನಾಡಿ, ರೋಟರಿ ಸಂಸ್ಥೆ ಹಿನ್ನೆಲೆ,ಇಂಟರ್ಯಾಕ್ಟ್ ಕ್ಲಬ್ ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಂಘಟನಾ ಕೌಶಲ್ಯ, ಆತ್ಮವಿಶ್ವಾಸ ಹಾಗೂ ತಂಡದ ಮನೋಭಾವವನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದೆ ಎಂದರು. ಶಾಲೆಯಲ್ಲಿ ಹಮ್ಮಿಕೊಳ್ಳುವ ಪ್ರತಿಯೊಂದು ಸೇವಾ ಕಾರ್ಯಕ್ರಮದಲ್ಲೂ ಸಕ್ರಿಯವಾಗಿ ಭಾಗವಹಿಸುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಮೆಂಬರ್ಶಿಪ್ ಚೇರ್ಮನ್ ರೊ. ಹರೀಶ್ ಕುಂದರ್ ಅವರು ರೋಟರಿ ಕುಟುಂಬದ ಸೇವಾ ಪರಂಪರೆಯನ್ನು ಪರಿಚಯಿಸಿ, “ಸ್ವಯಂ ಸೇವೆಯೇ ಶ್ರೇಷ್ಠ ಸೇವೆ” ಎಂಬ ಧ್ಯೇಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಜೀವನದ ನಿಜವಾದ ಯಶಸ್ಸು ಎಂದು ತಿಳಿಸಿದರು.
ಕಾರ್ಯಕ್ರಮದ ಗೌರವ ಉಪಸ್ಥಿತಿಯನ್ನು ನೇಶನಲ್ ಹೈಸ್ಕೂಲ್ ಬಾರ್ಕೂರಿನ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಾವತಿ ಪಿ.ಎಸ್. ಅವರು ವಹಿಸಿ ನಮ್ಮ ಸಂಸ್ಥೆ ಪರವಾಗಿ ಎಲ್ಲರನ್ನು ಸ್ವಾಗತಿಸಿದರು .
ಈ ಸಂದರ್ಭದಲ್ಲಿ ಶಾಲಾ ಇಂಟರ್ಯಾಕ್ಟ್ ಕ್ಲಬ್ ನ ನೂತನ ಅಧ್ಯಕ್ಷರಾಗಿ 10ನೇ ತರಗತಿಯ ಸಾಕ್ಷಿತಾ, ಕಾರ್ಯದರ್ಶಿಯಾಗಿ 10ನೇ ತರಗತಿಯ ತನುಷ್ಕ, ಖಜಾಂಚಿ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಿ ಪದಪ್ರಮಾಣ ವಚನ ಬೋಧಿಸಲಾಯಿತು. ಇಂಟರ್ಯಾಕ್ಟ್ ಕ್ಲಬ್ ನ ಅಧ್ಯಕ್ಷರಾದ ಸಾಕ್ಷಿತಾ ಳ ನೇತೃತ್ವದ ನೂತನ ತಂಡವು ಪ್ರಾಮಾಣಿಕತೆ, ಶಿಸ್ತು ಹಾಗೂ ಸೇವಾ ಮನೋಭಾವದಿಂದ ಕ್ಲಬ್ನ ಚಟುವಟಿಕೆಗಳನ್ನು ಯಶಸ್ವಿಯಾಗಿ ಮುನ್ನಡೆಸುವುದಾಗಿ ಭರವಸೆ ನೀಡಿದರು. ಇಂಟರ್ಯಾಕ್ಟ್ ಟೀಚರ್ಸ್ ಕೋ ಆರ್ಡಿನೇಟರ್ ಆದ ಪ್ರಭಾಕರ್ ಜಿ ಪಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ನೂತನ ತಂಡಕ್ಕೆ ಶುಭ ಹಾರೈಸಿದರು. 10ನೇ ತರಗತಿ ವಿದ್ಯಾರ್ಥಿನಿಯರಾದ ಪೂರ್ಣಿಮಾ ಮತ್ತು ಐಸಿರಿಯವರು ಪದಗ್ರಹಣ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದರು. ಒಟ್ಟಾರೆಯಾಗಿ ಚುಟುಕಾಗಿ ನಡೆದ ಇಂಟರ್ಯಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭದಲ್ಲಿ ರೋಟರಿ ಕ್ಲಬ್ನ ಪದಾಧಿಕಾರಿಗಳು, ಸದಸ್ಯರು, ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಆಹ್ವಾನಿತ ಗಣ್ಯರು ಉಪಸ್ಥಿತರಿದ್ದರು. ಸಮಾರಂಭವು ಶಿಸ್ತು, ಸಂಭ್ರಮ ಹಾಗೂ ಸೇವಾ ಸ್ಪೂರ್ತಿಯ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಕೊನೆಯಲ್ಲಿ ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ವಿದ್ಯಾರ್ಥಿಗಳ ಹೃದಯದಲ್ಲಿ ಸೇವೆಯ ಬೀಜ ಬಿತ್ತಿದ ಈ ಪದ ಪ್ರದಾನ ಸಮಾರಂಭವು ನಾಯಕತ್ವ, ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ಬದ್ಧತೆಯ ದೀಪವನ್ನು ಬೆಳಗಿಸಿದ ಸ್ಮರಣೀಯ ಕಾರ್ಯಕ್ರಮವಾಗಿ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿಯಿತು.




