ತೀವ್ರ ದೂರದ್ರಷ್ಟಿ ದೋಷದಿಂದ ಬಳಲುತಿದ್ದು ಶಿಕ್ಷಕಿಯಾದ ರೋಚಕ ಕತೆ

ನಮಸ್ಕಾರ ಬಂಧುಗಳೇ,
ನಾನು ಶಿಕ್ಷಕಿಯಾಗಬೇಕೆಂದು ನಮ್ಮ ಅಮ್ಮ ಆಸೆಪಟ್ಟಿದ್ರು. ಹಾಗಾಗಿ ಓದು-ಬರಹ ಕಲಿಯಲು ಕಷ್ಟ ಎನಿಸಿದರೂ ಸಹ ಅಮ್ಮನ ಒಂದೇ ಒಂದು ಆಸೆ ಈಡೇರಿಸುವ ಜವಾಬ್ದಾರಿ ನನ್ನ ಮೇಲಿತ್ತು. ಮುಕ್ಕಾಲು ಭಾಗ ಅಂಧತ್ವವನ್ನು ಹೊತ್ತು ಹುಟ್ಟಿದ ನನಗೆ ಸಾಮಾನ್ಯ ವಿದ್ಯಾರ್ಥಿಗಳು ಅಧ್ಯಯನ ಮಾಡುವ ಶಾಲೆಗೆ ನನ್ನನ್ನು ದಾಖಲಿಸಿದರು. ನನ್ನ ಕಲಿಕೆಯೇ ಅಲ್ಲಿ ಆಗುತ್ತಿರಲಿಲ್ಲ. ಕಾರಣ ಕಪ್ಪುಹಲಗೆಯ ಅಕ್ಷರಗಳು ನನಗೆ ಕಾಣುತ್ತಿರಲಿಲ್ಲ. ಅಕ್ಕ ಪಕ್ಕದ ವಿದ್ಯಾರ್ಥಿಗಳು ಸಹಾಯ ಮಾಡುತ್ತಿರಲಿಲ್ಲ. ಬದಲಾಗಿ ಆಡಿಕೊಳ್ಳುತ್ತಿದ್ದರು, ಛೇಡಿಸುತ್ತಿದ್ದರು. ಶಿಕ್ಷಕರು ನಮ್ಮ ತಂದೆ ತಾಯಿಗಳಿಗೆ ಸಲಹೆ ಕೊಟ್ಟರು:-“ದಯವಿಟ್ಟು ನಿಮ್ಮ ಮಗುವನ್ನು ಅಂಧ ಮಕ್ಕಳ ಶಾಲೆಗೆ ಸೇರಿಸಿ. ನಿಮ್ಮ ಮಗಳ ಭವಿಷ್ಯ ಉತ್ತಮವಾಗುತ್ತದೆ” .
ನಮ್ಮ ತಂದೆ ತಾಯಿ ಅಂದು ತೆಗೆದುಕೊಂಡ ನಿರ್ಧಾರ ನನ್ನ ಜೀವನದ ದಿಕ್ಕೇ ಬದಲಾಯಿಸಿತು. ಅವರು ಹೀಗೆ ಉತ್ತರಿಸಿದರು:-“ನೋಡಿ ಸರ್, ನಮ್ಮ ಮಗಳು ಹೇಗಾದರೂ ಇರಲಿ, ನಮ್ಮ ಕಣ್ಣ ಮುಂದೆ ಬೆಳೆಯ ಬೇಕು. ಅವಳನ್ನು ನೋಡಿ ನಾವು ಖುಷಿಪಡಬೇಕು. ಅವಳಿಂದ ನಮಗೆ ಯಾವ ನಿರೀಕ್ಷೆಯೂ ಮಾಡಲ್ಲ. ಅವಳು ನಮಗೆ ಸಾಕಬೇಕೆಂದು ನಾವು ಬಯಸುವುದಿಲ್ಲ. ನಾವು ಬದುಕಿರುವವರೆಗೂ ಕೊನೆಯವರೆಗೂ ನಾವು ಅವಳನ್ನು ನೋಡಿಕೊಳ್ಳುತ್ತೇವೆ. ಕಷ್ಟನೋ ಸುಖನೋ ನಮ್ಮ ಮಗು ನಮ್ಮ ಜೊತೆಯೇ ಇರಲಿ” ಎಂದು ಉತ್ತರಿಸಿ ಮನೆಯ ಕಡೆ ಹೆಜ್ಜೆ ಹಾಕಿದರು. ಅಕ್ಕ ಪಕ್ಕದ ಮನೆಯವರ ಚುಚ್ಚು ಮಾತುಗಳಿಗೂ ಆಹಾರವಾದರು. “ಅಯ್ಯೋ ಪಾಪ, ಈ ಮಗು ನಾ ಅವರ ತಂದೆ ತಾಯಿ ಸಾಯೋವರೆಗೂ ಸಾಕಬೇಕಲ್ಲ!” ಎಂದು ಜನರೆಲ್ಲ ಆಡಿಕೊಂಡು ನಗುತ್ತಿದ್ದರು.
ಇದನ್ನೆಲ್ಲ ಮೌನವಾಗಿ ಗಮನಿಸುತ್ತಿದ್ದ ನನಗೂ ನಾನೇಕೆ ನನ್ನ ಅಪ್ಪ ಅಮ್ಮನಿಗೆ ಹೊರೆಯಾಗಿರಬೇಕು ನಾನೂ ಸಹ ಓದಬೇಕು ಏನಾದರೂ ಮಾಡಬೇಕು ಎಂಬ ಆಲೋಚನೆ ಉಂಟಾಯಿತು. ತರಗತಿಯಲ್ಲಿ ಶಿಕ್ಷಕರು ಸರತಿಯ ಸಾಲಿನಲ್ಲಿ ಎಲ್ಲರನ್ನೂ ಓದಿಸುತ್ತಿದ್ದರು.ನನ್ನ ಸರದಿ ಬಂದಾಗ ನಿನ್ನ ಕೈಲಾಗಲ್ಲಮ್ಮ ಕಷ್ಟ ಆಗುತ್ತೆ ಕುಳಿತುಕೋ ಎಂದು ಕೂರಿಸಿಬಿಡುತ್ತಿದ್ದರು. ಅದಕ್ಕೆ ಕಾರಣ ಶಿಕ್ಷಕರಿಗೆ ನನ್ನ ಮೇಲಿರುವ ಕಾಳಜಿಯೋ ಅನುಕಂಪವೋ ತಿಳಿಯದು. ನಂತರದ ದಿನಗಳಲ್ಲಿ ಸ್ವತಃ ನಾನೇ ಹಿರಿಯ ವಿದ್ಯಾರ್ಥಿಗಳ ಬಳಿ ಹೇಳಿಸಿಕೊಂಡು ಕಲಿಯತೊಡಗಿದೆ. ಕಾರಣ ಅಪ್ಪ ಅಮ್ಮ ಅಷ್ಟೇನೂ ಓದಿಲ್ಲ. ಅಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಿ ದರ್ಜೆಯ ನೌಕರರು(ಈಗ ನಿವೃತ್ತರು)
ಅಮ್ಮ ಗೃಹಿಣಿ, ನಾನೇ ಮೊದಲ ಮಗು ಆಗಿದ್ರಿಂದ ಹೇಳಿಕೊಡುವವರಾರೂ ಇರಲಿಲ್ಲ. ಹಿರಿಯ ವಿದ್ಯಾರ್ಥಿಗಳ ಸಹಾಯದಿಂದ ಕಲಿತ ನಾನು ಸರದಿಯ ಸಾಲಿನಲ್ಲಿ ನನ್ನ ಸರದಿ ಬಂದಾಗ ನಾನೇ ಎದ್ದು ನಿಂತೆ ಎಂದಿನಂತೆ ನನ್ನ ಶಿಕ್ಷಕರು ಕೂರಲು ಹೇಳಿದರು . ಆಗ ನಾನು ಹೇಳಿದೆ”ಸರ್. ನಾನೂ ಓದುತ್ತೇನೆ, ತಪ್ಪಿದ್ದರೆ ತಿಳಿಸಿ ಸರಿ ಇದ್ದರೆ ಓದಲು ಅವಕಾಶ ಕೊಡಿ” ಎಂದೆ. ಅಂದೇ ನನಗೆನಿಸಿದ್ದು,”ಅನುಕಂಪ ಬೇಡ,ಅವಕಾಶ ಕೊಡಿ” ಎಂದು. ಗುರುಗಳು ಓದಲು ತಿಳಿಸಿದರು. ಕನ್ನಡ ಪಾಠ ಓದಿದೆ. ನಂತರ ಇತರೆ ವಿಷಯಗಳನ್ನು ಓದಲು ಹೇಳಿದರು ಅವುಗಳನ್ನೂ ಓದಿದೆ. ಆಗ ಶಿಕ್ಷಕರೆಲ್ಲ ಒಟ್ಟಿಗೆ ಒಂದೆಡೆ ಸೇರಿ ಇವಳೂ ಸಹ ಓದಬಲ್ಲಳು. ಪ್ರೋತ್ಸಾಹದ ಅಗತ್ಯವಿದೆ ಎಂದರಿತ ನನ್ನ ಪ್ರಾಥಮಿಕ ಶಾಲೆಯ ಶಿಕ್ಷಕರು ೬ ನೇ ತರಗತಿಯಿಂದ ಪ್ರೋತ್ಸಾಹಿಸಲು ಪ್ರಾರಂಭಿಸಿದರು. ಆಟಕ್ಕೆಂದು ಹೋದರೆ ಸಹಪಾಠಿಗಳಿಂದ ಹೀಯಾಳಿಕೆಗೊಳಗಾಗಬೇಕಿತ್ತು. ಕುರುಡಿ ಎಂದು ಆಡಿಕೊಳ್ಳುತ್ತಿದ್ದರು. ಭಯದಿಂದಲೇ ಶಾಲೆಯ ಆಟದ ಮೈದಾನದಲ್ಲಿರಬೇಕಿತ್ತು. ಶಾಲೆ ಬಿಟ್ಟ ನಂತರ ಮನೆ ಕಡೆ ಹೋಗ್ತಾ ಇದ್ರೆ ಕಲ್ಲಲ್ಲೆಲ್ಲ ಹೊಡೆಯೋರು. ೭ನೇ ತರಗತಿಯಲ್ಲಿ ಅನುತ್ತೀರ್ಣವಾಗಲು ಕಾರಣ ಗಣಿತದ ಲೆಕ್ಕಗಳು ಕಪ್ಪು ಹಲಗೆಯ ಮೇಲೆ ಕಾಣದಿರುವುದು. ನಂತರ ಕಷ್ಟಪಟ್ಟು ಅಭ್ಯಾಸ ಮಾಡಿ ಪರೀಕ್ಷೆ ೭ನೇ ತರಗತಿ ಪಾಸಾದೆ. ಪ್ರೌಢ ಶಾಲೆಯಲ್ಲಿ ಆಟದ ಅವಧಿ ಬಂದಾಗ ಶಿಕ್ಷಕರ ಬಳಿ ಹೋಗಿ ಗಣಿತದ ಲೆಕ್ಕಗಳು,ವಿಜ್ಙಾನದ ಚಿತ್ರಗಳು, ಸಮಾಜ ವಿಜ್ಙಾನದ ಭೂಪಟಗಳನ್ನು ಅಭ್ಯಾಸ ಮಾಡುತ್ತಿದ್ದೆ. ಪ್ರೌಢಶಾಲೆಯಲ್ಲಿ ನಾನು ಮೊದಲ ಬೆಂಚಿನ ಮೊದಲ ವಿದ್ಯಾರ್ಥಿನಿ. ಹಾಗಿದ್ದರೂ ಸಹ ಕಪ್ಪು ಹಲಗೆಯ ಅಕ್ಷರಗಳು ಕಾಣುತ್ತಿರಲಿಲ್ಲ. ನಮ್ಮ ಶಿಕ್ಷಕರು ಈ ವಿಚಾರದಲ್ಲಿ ಬಹಳ ಸಹಕಾರ ಕೊಟ್ಟರು. ಅವರು ಹೇಳಿಕೊಂಡೇ ಪಾಠಗಳ ನೋಟ್ಸ್ ಅನ್ನು ಕಪ್ಪು ಹಲಗೆಯ ಮೇಲೆ ಬರೆಯುತ್ತಿದ್ದರು. ನಾನೂ ಸಹ ಅದನ್ನು ಆಲಿಸುವುದರ ಮೂಲಕ ವೇಗವಾಗಿ ಬರೆದುಕೊಳ್ಳುತ್ತಿದ್ದೆ. ಶಾಲೆಯಲ್ಲಿ ನಡೆಯುವ ಯಾವುದೇ ಸಂಗತಿಗಳನ್ನು ಮನೆಯಲ್ಲಿ ಅಪ್ಪ ಅಮ್ಮನಿಗೆ ಹೇಳುತ್ತಿರಲಿಲ್ಲ. ಎಲ್ಲಿ ನನಗೆ ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿಬಿಡುವರೋ ಎಂಬ ಭಯ ಕಾಡುತ್ತಿತ್ತು. ಆಟಕ್ಕೆ ಹೋಗದೆ ಕೇವಲ ಪಾಠಗಳ ಅಭ್ಯಾಸವನ್ನೇ ಮಾಡುತ್ತಿದ್ದೆ. ಜನಪದ ಗೀತೆ, ಭಾವಗೀತೆ, ಪ್ರಬಂಧ ರಚನೆ, ಏಕಪಾತ್ರಾಭಿನಯ ಹೀಗೆ ಎಲ್ಲ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಿದ್ದೆ. ನನ್ನ ಶಿಕ್ಷಕರೂ ಸಹ ಪ್ರೋತ್ಸಾಹಿಸುತ್ತಿದ್ದರು. ನನ್ನ ಪೋಷಕರು ಶಾಲೆ ದೂರ ಇದ್ದರೆ ಓಡಾಟ ಕಷ್ಟ ಎಂದು ಮನೆಯ ಹತ್ತಿರವೇ ಇದ್ದ ಅನುದಾನಿತ ಶಾಲೆಗಳಲ್ಲಿ ಓದಿಸಿದರು. ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣಳಾದೆ. ಕಾಲೇಜು ಶಿಕ್ಷಣಕ್ಕಾಗಿ ಸರ್ಕಾರಿ ಬಾಲಕಿಯರ ಪ ಪೂ ಕಾಲೇಜಿಗೆ ಸೇರಿಸಿದರು. ವಿಜ್ಙಾನ ವಿಭಾಗದಲ್ಲಿ ಅಧ್ಯಯನ ಮಾಡಬೇಕೆಂದು ನನಗೆ ಆಸೆ ಇತ್ತು. ಆದರೆ ಅಲ್ಲಿನ ಆಡಳಿತಾಧಿಕಾರಿಗಳು ಕೊಡಲು ನಿರಾಕರಿಸಿದರು. ಅವರು ಕೊಡುವ ಕಾರಣ ಹೀಗಿದೆ:”ನೋಡಮ್ಮ, ವಿಜ್ಙಾನ ವಿಭಾಗಕ್ಕೆ ಸೇರಿಸಿಕೊಳ್ಳೋದಕ್ಕೆ ನಮಗೇನೂ ತಕರಾರಿಲ್ಲ ನಿನಗೆ ಅರ್ಹತೆಯೂ ಇದೆ. ಆದರೆ ಮಾನವೀಯತೆ ದೃಷ್ಟಿಯಿಂದ ನಾವು ನಿನಗೆ ಕೊಡುವುದಿಲ್ಲ. ದೈಹಿಕವಾಗಿ ಸದೃಢರಾಗಿರುವವರೇ ಕಣ್ಣಿನಲ್ಲಿ ಆಸಿಡ್ ಎಲ್ಲ ಚೆಲ್ಲಿಕೊಂಡ ಉದಾಹರಣೆಗಳಿವೆ. ದಯವಿಟ್ಟು ಕ್ಷಮಿಸು. ನೀನು ಕಲಾವಿಭಾಗ ಆರಿಸಿಕೊಂಡು ಅಧ್ಯಯನ ಮಾಡುವುದೇ ಸರಿ” ಎಂದು ಹೇಳಿದರು. ಬೇರೆ ಬೇರೆ ಖಾಸಗಿ ಶಾಲೆಗಳಿಗೂ ಹೋಗಿ ಕೇಳಿದೆ. ಅಲ್ಲಿಯೂ ನನಗೆ ವಿಜ್ಙಾನ ವಿಭಾಗಕ್ಕೆ ಸೇರಲು ಅವಕಾಶ ಕೊಡಲಿಲ್ಲ. ಕಡೆಗೆ ಪಾಲಿಗೆ ಬಂದದ್ದು ಪಂಚಾಮೃತ ಎಂದು ಭಾವಿಸಿ ಕಲಾ ವಿಭಾಗದಲ್ಲಿಯೇ ಅಭ್ಯಾಸ ಮಾಡಿದೆ. ಕಾಲೇಜು ಸ್ವಲ್ಪ ದೂರ ಹಾಗಾಗಿ ಮನೆಯ ಹತ್ತಿರವೇ ಇದ್ದ ನನ್ನ ಸಹಪಾಠಿಗಳ ಜೊತೆಯಲ್ಲಿಯೇ ಕಾಲೇಜಿಗೆ ಹೋಗುತ್ತಿದ್ದೆ. ಎಲ್ಲವೂ ಥಿಯರಿಯೇ ಇದ್ದಿದ್ದರಿಂದ ನನಗಲ್ಲಿ ಸಮಸ್ಯೆಯಾಗಲಿಲ್ಲ. ಆದರೆ ಇಂಗ್ಲಿಷ್ ವ್ಯಾಕರಣ ಹೇಳಿಸಿಕೊಳ್ಳಲು ನಮ್ಮ ಸಹಪಾಠಿಗಳ ಜೊತೆ ಇಂಗ್ಲಿಷ್ ಉಪನ್ಯಾಸಕರ ಮನೆಗೆ ಹೋಗಿ ಹೇಳಿಸಿಕೊಳ್ಳುತ್ತಿದ್ದೆವು. ಪ್ರೌಢಶಾಲಾ ಹಂತದಲ್ಲೂ ಶಿಕ್ಷಕರ ಮನೆಗೆ ಹೋಗಿ ಹೇಳಿಸಿಕೊಂಡ ಉದಾಹರಣೆಗಳಿವೆ. ಪಿಯುಸಿಯಲ್ಲಿ ನಿರಾತಂಕವಾಗಿ ಓದಿ ದ್ವಿತೀಯ ಪಿ.ಯು.ಸಿ.ಯನ್ನು ಉತ್ತಮ ಅಂಕಗಳೊಂದಿಗೆ ಉತ್ತೀರ್ಣವಾದ ನಂತರ ಮುಂದೇನು ಎಂಬ ಚಿಂತೆ ಉಂಟಾಯಿತು. ಆಗ ಅಲ್ಲಿದ್ದ ಒಬ್ಬರು ಉಪನ್ಯಾಸಕರು ಐಚ್ಚಕ ಕನ್ನಡ, ಇತಿಹಾಸ ಹಾಗೂ ಸಮಾಜಶಾಸ್ತ್ರ ವಿಷಯಗಳನ್ನಾರಿಸಿಕೊಂಡು ಬಿ ಎ ಅಭ್ಯಾಸ ಮಾಡಲು ಸಲಹೆ ಕೊಟ್ಟರು ಅದರಂತೆ ಪದವಿ ಕಾಲೇಜಿಗೆ ಸೇರಿದೆ ಅಲ್ಲಿ ನನಗೆ ಮೊದಲು ಪರಿಚಯವಾದವರು ಕನ್ನಡದ ಪ್ರೊಫೆಸರ್. ಎಂಟನೆಯ ತರಗತಿಯಿಂದಲೇ ಕವನ ಬರೆಯುವ ಹವ್ಯಾಸ ಇದ್ದ ನನಗೆ ನನ್ನ ಬರವಣಿಗೆಗೆ ಮತ್ತಷ್ಟು ಪ್ರೋತ್ಸಾಹ ಅಲ್ಲಿ ನನಗೆ ದೊರೆಯಿತು. ಪದವಿ ತರಗತಿಯನ್ನೂ ಸಹ ಪೂರ್ಣಗೊಳಿಸಿದ ನಂತರ ಬಿ ಎಡ್ ಗೆ ದಾಖಲಾತಿ ಪಡೆಯಲು ಪ್ರವೇಶ ಪರೀಕ್ಷೆ ಬರೆದೆ. ಮೊದಲ ಪ್ರಯತ್ನದಲ್ಲಿಯೇ ಆಯ್ಕೆಯೂ ಆಯಿತು ವಿವೇಕಾನಂದ ಬಿ ಎಡ್ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಸೀಟು ದೊರೆಯಿತು. ಇಷ್ಟೇ ಕೋನ ಮಿತಿಯಲ್ಲಿ ಪುಸ್ತಕ ಹಿಡಿಯಬೇಕು ಓದುಗಾರಿಕೆ ಕೌಶಲದಲ್ಲಿ ಎಂಬುದು ನಿಯಮ. ನನಗೆ ಅದು ಸಾಧ್ಯವಾಗುವುದಿಲ್ಲ ಕಣ್ಣಿಗೆ ತುಂಬಾ ಸಮೀಪ ಹಿಡಿದುಕೊಂಡರಷ್ಟೇ ಕಾಣುವುದು. ಸ್ವಲ್ಪ ಅಂತರವಿದ್ದರೂ ಕಾಣುವುದಿಲ್ಲ. ಕನ್ನಡ ಮೆಥೇಡ್ ಬೋಧಿಸುವ ಶಿಕ್ಷಕರ ಬಳಿ ನನ್ನ ಅಳಲನ್ನು ತೋಡಿಕೊಂಡೆ. ನಿನಗೆ ಆಸಕ್ತಿ ಇದ್ಯಲ್ಲ ಅದು ಮೆಚ್ಚುವಂಥದ್ದ ನಿನ್ನಂತಹ ಕೆಲವು ಪ್ರಕರಣಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ ಧೈರ್ಯವಾಗಿ ನಿನ್ನ ಅಧ್ಯಯನ ಮುಂದುವರೆಸು ಎಂದು ಹೇಳಿದರು. ನಾನು ಓದಿದ ಪ್ರೌಢಶಾಲೆಗೆ ನನಗೆ ಬೋಧನಾಭ್ಯಾಸಕ್ಕೆ ನಿಯೋಜಿಸಿದರು. ವಿಶಿಷ್ಟವಾದ ಕಲಿಕೋಪಕರಣಗಳನ್ನು ಬಳಸಿ ಪಾಠ ಮಾಡುವ ನನ್ನ ಕಾಯಕ ಹವ್ಯಾಸ ಅಲ್ಲಿಂದಲೇ ಪ್ರಾರಂಭವಾಯಿತು ಪರಿಸರ ಪಾಠಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ದಿನಪತ್ರಿಕೆಯಲ್ಲಿನ ಪರಿಸರಸಂಬಂಧಿ ಭಾವಚಿತ್ರಗಳನ್ನು ಕತ್ತರಿಸಿ ಡ್ರಾಯಿಂಗ್ ಚಾರ್ಟ್ ಗೆ ಅಂಟಿಸಿ ಮಾಹಿತಿಗಳನ್ನು ಕೆಳಗೆ ಬರೆದುಕೊಂಡು ಹೋಗಿದ್ದೆ. ಉಪನ್ಯಾಸಕರು ಅದನ್ನು ಮೆಚ್ಚಿಕೊಂಡೇ ಅವರೇ ಸನ್ನಿವೇಶಗಳನ್ನು ವಿವರಿಸಿದರು. ಬಿ ಎಡ್ ವ್ಯಾಸಂಗ ಮುಗಿದ ನಂತರ ಯಾವ ಖಾಸಗಿ ಶಾಲೆಯವರೂ ನನಗೆ ಬೋಧನೆಗೆ ಅವಕಾಶ ಕೊಟ್ಟಿಲ್ಲ. ಟ್ಯುಟೋರಿಯಲ್ ನಲ್ಲಿ ಕೆಲಸ ಮಾಡುತ್ತಿದ್ದೆ ಅಷ್ಟೆ. ನನ್ನ ಪರಿಸ್ಥಿತಿ ನೋಡಿ ಇವಳಿಂದೇನಾಗುತ್ತೆ ಎಂದು ಯಾವ ಖಾಸಗಿ ಶಾಲೆಯವರೂ ಸಹ ನನಗೆ ಬೋಧನೆಗೆ ಅವಕಾಶ ಕೊಡಲು ಸಿದ್ದವಿರಲಿಲ್ಲ .ಹೀಗಿರುವಾಗ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕರೆ ಕೊಟ್ಟಿತು. ನಾನು ಸತತವಾಗಿ ಅಭ್ಯಾಸ ಮಾಡುತ್ತಿದ್ದೆ. ಮೊದಲ ಪ್ರಯತ್ನದಲ್ಲಿಯೇ ಆಯ್ಕೆಯೂ ಆದೆ. ನಾನು ಬರೆದ ಎಲ್ಲ ಪರೀಕ್ಷೆಗಳು ಸಾಮಾನ್ಯ ವಿದ್ಯಾರ್ಥಿಯಾಗಿಯೇ ಬರೆದದ್ದು. ನನ್ನ ಶಿಕ್ಷಕರ ಒತ್ತಾಯಕ್ಕೆ ಮಣಿದು ಅಂಗವಿಕಲರ ಪ್ರಮಾಣಪತ್ರವನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಲಗತ್ತಿಸಿದ್ದೆ‌. ಆಯ್ಕೆಯಾದ ನಂತರ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿರುವ ಆದರ್ಶ ವಿದ್ಯಾಲಯ ಆರ್ ಎಂ ಎಸ್ ಎ ಶಾಲೆಗೆ ಕನ್ನಡ ಭಾಷಾ ಶಿಕ್ಷಕಿಯಾಗಿ ವರಧಿ ಮಾಡಿಕೊಂಡೆ. ಪ್ರಾರಂಭದಲ್ಲಿ ನನಗೆ ಇಲ್ಲಿಯೂ ಕಷ್ಟವಾಯಿತು. ಇಲ್ಲೂ ಸಹ ಎಲ್ಲರ ಹೀಯಾಳಿಕೆ ಹೀಗಳಿಕೆಗೆ ಗುರಿಯಾಗಬೇಕಾಯಿತು. ವಿದ್ಯಾರ್ಥಿಗಳಾದಿಯಾಗಿ ಎಲ್ಲರ ಅಪಹಾಸ್ಯ ಬೈಗುಳಗಳಿಗೆ ಗುರಿಯಾಗಬೇಕಾಯಿತು. ನಾನು ಪಾಠ ಓದಲು ಪ್ರಾರಂಭಿಸಿದರೆ ಎಲ್ರೂ ನಗಾಡುವುದು ಕಿರುಚುವುದು ನಿತ್ಯದ ಚಟುವಟಿಕೆಯಾಗಿತ್ತು. ನನ್ನ ಕೆಲಸ ನನಗೆ ಎಷ್ಟೇ ಕಷ್ಟವಾದರೂ ನಾನೇ ಅದನ್ನು ಪೂರ್ಣಗೊಳಿಸಬೇಕಿತ್ತು. ಪಾಠ ಬೋಧನೆಯ ಜೊತೆಗೆ ತರಗತಿ ಶಿಕ್ಷಕಿ ಎನ್ನುವ ಜವಾಬ್ದಾರಿಯೂ ಹೆಗಲೇರಿತ್ತು. ಪಾಠ ಮಾಡುವುದೇ ದುಸ್ತರವಾಗಿದ್ದಾಗ ಹೆಚ್ಚುವರಿ ಕೆಲಸಗಳ ಭಾರ ಸಾಕಷ್ಟು ಒತ್ತಡ ಉಂಟು ಮಾಡುತ್ತಿತ್ತು. ಇಲ್ಲಿ ಕನ್ನಡ ಕಲಿಸುವುದು ಸವಾಲಿನ ಕೆಲಸ. ಕಾರಣ ಇಲ್ಲಿನ ಬಹುತೇಕ ವಿದ್ಯಾರ್ಥಿಗಳು ತೆಲುಗು, ತಮಿಳು ಮಾತೃಭಾಷಿಕರು. ಆಂಗ್ಲ ಮಾಧ್ಯಮ ಶಾಲೆ. ಪಾಠ ಓದುವಾಗ ವಿದ್ಯಾರ್ಥಿಗಳ ನಗು. ಇದರಿಂದ ತಪ್ಪಿಸಿಕೊಳ್ಳಲು ಪಾಠಗಳೆಲ್ಲ ಕಂಠಪಾಠ ಮಾಡಿಕೊಂಡೆ. ಎಲ್ಲಿ ನಿಲಿಸಿದರೆ ಪುಟ ಮುಕ್ತಾಯವಾಗುತ್ತದೆ ಎಂಬುದನ್ನೂ ಸಹ ನೆನಪಿಟ್ಟುಕೊಳ್ಳಬೇಕಿತ್ತು. ಈ ಮಾರ್ಗ ಕಂಡುಕೊಂಡ ಮೇಲೆ ವಿದ್ಯಾರ್ಥಿಗಳ ಅಪಹಾಸ್ಯ ನಿಂತು ಹೋಯಿತು. ನಂತರದಲ್ಲಿ ವ್ಯಾಕರಣ ಬೋಧನೆಗೆ ಕಪ್ಪುಹಲಗೆಯ ಮೇಲೆ ಬರೆಯಲೇಬೇಕಿತ್ತು ಹಾಗಾಗಿ ನಾನು ಪ್ರತಿಯೊಂದು ವ್ಯಾಕರಣಾಂಶಗಳಿಗೂ ಮಾದರಿಗಳನ್ನು ತಯಾರಿಸಿಕೊಂಡೆ ಅದರ ಮೂಲಕ ಬೋಧನೆ ಮಾಡಲು ಪ್ರಾರಂಭಿಸಿದೆ. ಬೋಧನಾ ವಿಧಾನ ಉತ್ತಮ ಫಲಿತಾಂಶ ಉಂಟು ಮಾಡಿದರೆ ಅದನ್ನು ಮುಂದುವರೆಸುತ್ತಿದ್ದೆ ಇಲ್ಲವಾದಲ್ಲಿಬೇರೆ ವಿಧಾನ ಪ್ರಾಯೋಗಿಕವಾಗಿ ಪ್ರಾರಂಭಿಸುತ್ತಿದ್ದೆ. ಹೇಗೆ ನಾನು ಸಂದರ್ಶನ ಮಾದರಿ ವಿಧಾನ. ನಾಟಕ ಅಭಿನಯ ವಿಧಾನ ,ಮಾದರಿಯೊಂದಿಗೆ ಬೋಧನೆ, ಉಪನ್ಯಾಸ ವಿಧಾನ ,ಚರ್ಚಾ ವಿಧಾನ ಹೀಗೆಬೇರೆ ಬೇರೆ ವಿಧಾನಗಳ ಮೂಲಕ ಮಕ್ಕಳ ಕಲಿಕೆಯಲ್ಲಿ ಆಸಕ್ತಿ ಹೆಚ್ಚುವಂತೆ ಮಾಡುತ್ತೇನೆ. ಕಳೆದ ನಾಲ್ಕೂ ಎಸ್ ಎಸ್ ಎಲ್ ಸಿ ಬ್ಯಾಚ್ ಗಳಲ್ಲಿ ಎರಡು ಬ್ಯಾಚ್ ಕನ್ನಡದಲ್ಲಿ ಶೇಕಡ ೧೦೦ ಫಲಿತಾಂಶ ಬಂದಿರುತ್ತದೆ. ಉಳಿದೆರಡು ಬ್ಯಾಚ್ ೯೮.೫. ಶೇ ಫಲಿತಾಂಶ ಬಂದಿರುತ್ತದೆ. ಕಳೆದ ಬಾರಿ ೧೦೦ಕ್ಕೆ೧೦೦ ಮೂರು ವಿದ್ಯಾರ್ಥಿನಿಯರು ಪಡೆದಿರುತ್ತಾರೆ. ಅವರಿಗೆ ನನ್ನ ಸ್ವಂತ ಖಾತೆಯಿಂದ ೧೦೦೦ ರೂ ನಗದು ಹಾಗು ಪದಕವನ್ನಿತ್ತು ಮುಖ್ಯಶಿಕ್ಷಕರ ಮೂಲಕ ಗೌರವಿಸಲಾಯಿತು. ಮಕ್ಕಳಿಗೆ ಬೇರೆ ಬೇರೆ ಪುಸ್ತಕಗಳನ್ನು ಓದಿಸಿ ಬರೆಸುವ ಆಲೋಚನೆ ಇದೆ .. ಇದರಿಂದ ಓದುವ ಹವ್ಯಾಸ ಬೆಳೆಸಬಹುದು.
ನಮ್ಮ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಹಾಕಲು ವೇದಿಕೆ ಕಲ್ಪಿಸುವ ಉದ್ದೇಶ ದಿಂದ ಮುಂದಿನ ತಿಂಗಳಿಂದ ಗೋಡೆ ಪತ್ರಿಕೆ ಹೊರ ತರುವುದ್ದೇಶವಿತ್ತು. ಅವುಗಳನ್ನು ಸಾಕಾರಗೊಳಿಸಬೇಕೆನ್ನುವಷ್ಟರಲ್ಲಿ ನನ್ನ ತವರು ಜಿಲ್ಲೆಯಾದ ಹಾಸನ ಜಿಲ್ಲೆಗೆ ವರ್ಗವಾಯಿತು. ೧೯ ಅಕ್ಟೋಬರ್ ೨೦೧೯ರಲ್ಲಿ ನಾನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣ ಬೆಳಗೊಳ ಹೋಬಳಿಗೆ ಸೇರಿದ ಜುಟ್ಟನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ವರಧಿ‌ಮಾಡಿಕೊಂಡೆ. ಇನ್ನೇನು ಮಕ್ಕಳೊಂದಿಗೆ ಬೆರೆಯಬೇಕು ಹೊಂದಿಕೊಳ್ಳಬೇಕು ಹೊಸ ಹೊಸ ಪ್ರಯೋಗಗಳನ್ನು ಮಾಡಬೇಕೆನ್ನುವ ಯೋಜನೆಗಳನ್ನು ರೂಪಿಸುವಾಗಲೇ ಕೊರೋನ ಎಂಬ ಪೆಡಂಭೂತ ಅಡ್ಡಿಯಾಯಿತು. ದೇಶದಾದ್ಯಂತ ಲಾಕ್ ಡೌನ್. ಆ ಎರಡು ವರ್ಷಗಳು ಏನೂ ಮಾಡಲಾಗದ ಅಸಹಾಯಕತೆ. ಆನ್ ಲೈನ್ ತರಗತಿಗಳನ್ನು ಮಾಡೋಣ ಎಂದರೆ ಬೆರಳೆಣಿಕೆಯಷ್ಟು‌ ಮಂದಿ ಮಾತ್ರ ಸ್ಮಾರ್ಟ್ ಫೋನ್ ಹೊಂದಿದ್ದರು. ಮೊದಲೇ ಅಲ್ಲಿನ ಶಾಲೆಗೆ ಪ್ರಯಾಣಿಸುವುದೇ ನನಗೆ ಸವಾಲಿನ ಕೆಲಸ. ಅರಸೀಕೆರೆಯಿಂದ ಚನ್ನರಾಯಪಟ್ಟಣ, ಚನ್ನರಾಯಪಟ್ಟಣದಿಂದ ಹಿರೀಸಾವೆ, ಹಿರೀಸಾವೆಯಿಂದ ಜುಟ್ಟನಹಳ್ಳಿ ಹೀಗೆ ಮೂರು ವಾಹನಗಳನ್ನು ಬಳಸಿ ಅರಸೀಕೆರೆಯಿಂದ ನೂರು‌ ಕಿ ಮೀ ದೂರದಲಿರುವ ಶಾಲೆಗೆ ಹೋಗಿ ಅಧ್ಯಯನ ಅಧ್ಯಾಪನದಲಿ ತೊಡಗಿಸಿಕೊಳ್ಳಬೇಕಿತ್ತು. ನಾವು ಶಾಲೆ ತಲುಪಿ ಅಲ್ಲಿಂದ ಮಕ್ಕಳಿರುವ ಹಳ್ಳಿಗಳಿಗೇ ಹೋಗಿ ಬೋಧನೆ ಮಾಡತೊಡಗಿದೆವು. ಅಲ್ಲಿಗೆ ಲಾಕ್ ಡೌನಿದ್ದದ್ರಿಂದ ವಾಹನ ವ್ಯವಸ್ಥೆ ಇರಲಿಲ್ಲ. ದಿನಕೆ ಐನೂರರಿಂದ ಆರು ನೂರು ರೂಪಾಯಿಗಳು ಆಟೊ ಬಾಡಿಗೆ ಕೊಡಬೇಕಿತ್ತು. ಈಗಲೂ ಹಾಗೆಯೇ. ಬೆಳಗಿನ ಜಾವ ಆರು ಗಂಟೆ ಬಸ್ಸಿಗೆ ಹೊರಟರೆ ಮನೆ ತಲುಪುವುದು ಸಂಜೆ ಏಳೂವರೆ ಎಂಟು ಗಂಟೆಯೂ ಆಗಿ ಬಿಡುತ್ತದೆ. ಶಾಲೆಯಲ್ಲಿ ಬಿಡುವಿಲ್ಲದ ತರಗತಿಗಳು. ಹಾಗಾಗಿ ಶಾಲೆಯ ಇತರೆ ಕೆಲಸಗಳನ್ನೆಲ್ಲ ಮನೆಗೇ ಹೊತ್ತು ತಂದು ಮಾಡಿ ಕೊಳ್ಳುವೆ. ಶಾಲೆಯಲ್ಲಿ ನನಗೆ ಸಂಪೂರ್ಣ ಸಹಕಾರವಿದೆ ಆದರೂ‌ ಪ್ರಯಾಣವೇ ನನ್ನ ಪಾಲಿಗೆ ಸವಾಲಿನ ಸಂಗತಿ. ಪ್ರತಿ ದಿನ ಇನ್ನೂರು ಕಿ ಮೀ ಪ್ರಯಾಣದ ಕಾರಣ ಆರು ಗಂಟೆಗಳು ಪ್ರಯಾಣದಲ್ಲಿಯೇ ಕಳೆದು ಹೋಗುತ್ತದೆ. ಶಾಲೆಯಿಂದ ಅರಸೀಕೆರೆಗೆ ಬಂದ ನಂತರ ಸಂಗೀತ ಹಾಗೂ ವೀಣೆ ತರಗತಿಗೆ ಹೋಗಿ ಮನೆಗೆ ಬರುವುದು ರಾತ್ರಿ ಎಂಟು ಗಂಟೆ. ಮನೆಗೆ ಬಂದ ನಂತರ ಶುಭ್ರವಾಗಿ ಊಟ ಮುಗಿಸಿ ಸಂಗೀತ ಅಭ್ಯಾಸ, ವೀಣೆ ಅಭ್ಯಾಸ, ಮಾರನೆಯ ದಿನ ತೆಗೆದುಕೊಳ್ಳುವ ತರಗತಿಗಳ ಸಿದ್ದತೆ , ಕವನ, ಲೇಖನ ಬರೆವಣಿಗೆ ನಂತರ ಸರಿಯಾಗಿ ಹನ್ನೆರಡು ಗಂಟೆಗೆ ಡೈರಿ ಬರೆದು ಮಲಗಿದರೆ ಪುನಃ ಏಳುವುದು ಬೆಳಗಿನ ಜಾವ ಮೂರು ಗಂಟೆಗೆ. ಹೀಗೆ ಬೆಳಗಿನ ಜಾವ ಮೂರು ಗಂಟೆಗೆ ಎದ್ದರೆ ಮಲಗುವುದು ರಾತ್ರಿ ಹನ್ನೆರಡು ಗಂಟೆಗೆ. ನನಗೆ ದಿನದ ಇಪ್ಪತ್ನಾಲ್ಕು ಗಂಟೆಗಳೂ ಸಹ ಸಾಲದಾಗಿದೆ. ಒತ್ತಡದ ನಡುವೆ ಒಂದಿಷ್ಟು ಉಲ್ಲಾಸ ಉತ್ಸಾಹ ತಂದು ಕೊಡುವುದು ನನಗೆ ಸಂಗೀತ ಹಾಗೂ ಸಾಹಿತ್ಯ. ಹಾಗಾಗಿ ಸಪ್ತಸ್ವರ ನಾದ ಮಂದಿರದ ನನ್ನ‌ಪೂಜ್ಯ ಗುರುಗಳಾದ ವಿದೂಷಿ ಶ್ರೀ ಮತಿ ವೀಣಾ ಮೇಡಮ್ ಬಳಿ ಕಳೆದ ಮೂರು ವರ್ಷಗಳಿಂದ ಕರ್ನಾಟಕ ಶಾಸ್ತೀಯ ಸಂಗೀತ, ಸುಗಮ ಸಂಗೀತ ಹಾಗೂ ವೀಣೆಯನ್ನು ಅಭ್ಯಸಿಸುತಿರುವೆ. ಸಾಹಿತ್ಯ ಸೃಷ್ಟಿಯೂ ಜೊತೆ ಜೊತೆಗೆ ಸಾಗುತ್ತಲಿದೆ. ಹೀಗೆ ವೃತ್ತಿಪ್ರವೃತ್ತಿ ಎಂದು ಹಲ್ವ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡರೂ ನನಗೆ ಅತಿ ಹೆಚ್ಚು ಖುಷಿ ಕೊಡುವ ಕ್ಷಣಗಳೆಂದರೆ ಅದು ನನ್ನ ವಿದ್ಯಾರ್ಥಿಗಳೊಂದಿಗೆ ಕಳೆಯುವ ಕ್ಷಣಗಳು. ಕಲಿತು ಕಲಿಸುವ ತತ್ವವನ್ನು ನನ್ನೊಳಗೆ ಅಳವಡಿಸಿಕೊಂಡಿರುವುದರಿಂದ ನಿರಂತರ ಕಲಿಕಾರ್ಥಿಯಾಗಿದ್ದೇನೆ.
ವೈದ್ಯೆಯಾಗಬೇಕೆಂಬ ಕನಸು ನನಸಾಗಲಿಲ್ಲವಾದರೂ ಇಂದು ನನ್ನ ವಿದ್ಯಾರ್ಥಿಗಳು ಸಾಕಷ್ಟು ಜನ ವೈದ್ಯಕೀಯ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡು‌ ನನ್ನ ಸಂಪರ್ಕದಲ್ಲಿರುವುದು ಹೆಮ್ಮೆಯ ಸಂಗತಿ.
ಹರ ಕೊಲ್ಲಲ್ ಗುರು ಕಾಯ್ವರೆಂಬ ನಾಣ್ಣುಡಿಯಂತೆ ನನ್ನ ಪಾಲಿಗೆ ನನ್ನನ್ನು ಅನವರತ ಪ್ರೋತ್ಸಾಹಿಸುವ ಪ್ರೇರೇಪಿಸುವ ಪ್ರತಿಯೊಬ್ಬರೂ ಕೂಡ ಗುರು ಸಮಾನರೇ

ಇವು ಕೇವಲ ವಿದ್ಯಾರ್ಥಿ ಜೀವನ ಹಾಗೂ ಶಿಕ್ಷಕಿಯಾಗಿ ನನ್ನ ಅನುಭವ

ಬೋಧನೆಗೆ ಯಾವ ಖಾಸಗೀ ಶಾಲೆಯೂ ಅವಕಾಶ ಕೊಡದಿದ್ದ ಸಂದರ್ಭದಲ್ಲಿ ಸರ್ಕಾರ ನನಗೆ ಇಂಥ ಸುವರ್ಣಾವಕಾಶ ಕೊಟ್ಟಿದೆ. ಶಿಕ್ಷಕಿ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಇದೆ. ಅಮ್ಮನ ಕನಸು ಸಾಕಾರಗೊಳಿಸಿದ ಖುಷಿ ಇದೆ ನನಗೆ.
ಧನ್ಯವಾದಗಳು ಮಾನ್ಯರೇ,ಗೌರವಾನ್ವಿತರೇ, ಬಂಧುಗಳೇ.

ಕು.ಹರ್ಷಿಯಾ ಭಾನು, ಕನ್ನಡ ಭಾಷಾ ಶಿಕ್ಷಕಿ, ಸರ್ಕಾರಿ ಪ್ರೌಢಶಾಲೆ
ಜುಟ್ಟನಹಳ್ಳಿ, ಶ್ರವಣಬೆಳಗೊಳ ಹೋಬಳಿ, ಚನ್ನರಾಯಪಟ್ಟಣ ತಾಲೂಕು, ಹಾಸನ ಜಿಲ್ಲೆ
ಪಿನ್: ೫೭೩೧೨೪

For more details please contact madam Mob no. 70196 37706

ಒಗ್ಗಟ್ಟಿನ ಕೊರತೆಯಿಂದ ರಾಜಕಾರಣ ದಲಿತರ ಕೈ ಜಾರುತ್ತಿದೆ – ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್

ಕೋಲಾರ : ರಾಜ್ಯದ 150 ವಿಧಾನ ಸಭಾ ಕ್ಷೇತ್ರಗಳಲ್ಲಿ ದಲಿತರೇ ನಿರ್ಣಾಯಕರಾಗಿದ್ದರೂ , ಒಗ್ಗಟ್ಟಿನ ಕೊರತೆಯಿಂದಾಗಿ ರಾಜಕಾರಣ ದಲಿತ ಕೈ ಜಾರುತ್ತಿದೆಯೆಂದು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ವಿಷಾದಿಸಿದರು .
ನಗರದ ಗಲ್‌ಪೇಟೆಯಲ್ಲಿ ದಲಿತ ಸಮುದಾಯದ ಖಾಸಗಿ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು , ರಾಜ್ಯದ 150 ವಿಧಾನಸಭಾ ಕ್ಷೇತ್ರಗಳಲ್ಲಿ ದಲಿತರು ಒಗ್ಗಟ್ಟಾಗಿ ಮತ ಚಲಾಯಿಸಿದರೆ ರಾಜಕೀಯಕೀಲಿ ಕೈ ಹಿಡಿಯಲು
ಸಾಧ್ಯವಾಗುತ್ತದೆ , ದಲಿತರು ಒಂದಾಗಬೇಕಿದೆ ಎಂದರು.
ಹಳ್ಳಿ ಮತ್ತು ಕೇರಿಗಳು ಒಂದಾಗುವವರೆವಿಗೂ ಸಮಾನತೆಯ ಹೋರಾಟ ಮುಂದುವರೆಸಬೇಕೆಂದು ಪ್ರತಿಪಾದಿಸಿದ ಅವರು , ಹಲವು ಹೋರಾಟಗಳಿಗೆ ನಾಂದಿ ಹಾಡಿರುವ ಕೋಲಾರ ಜಿಲ್ಲೆಯಿಂದಲೇ ಈ ಹೋರಾಟವನ್ನು ತಾವೇ ಮು೦ದೆನಿ೦ತು ಮುನ್ನಡೆಸುವುದಾಗಿ ಘೋಷಿಸಿದರು.
ಕೋಲಾರದಲ್ಲಿ ತಮ್ಮ ತಂದೆ ಆರಂಭಿ ಸಿದ ಸಿದ್ದಾರ್ಥ ಪ್ರೌಢಶಾಲೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ತಾವು ಕೋಲಾರಕ್ಕೆ ಆಗಮಿಸಿದ್ದು , ಸಿದ್ದಾರ್ಥಪ್ರೌಢಶಾಲೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದರು .
ಮಾಜಿ ಸ್ಪೀಕರ್ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಮಾತನಾಡಿ , ಸ್ವಾತ೦ತ್ರ್ಯ ಅಮೃತ ಮಹೋತ್ಸವ ಭಾಷಣದಲ್ಲಿ ತಮಗೆ ಮಹಿಳೆಯರ ಮೇಲೆ ಗೌರವ ವಿದೆಯೆಂದು ಹೇಳಿದ ಮೋದಿಯವರು , ತಮ್ಮದೇ ಗುಜರಾತ್ ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳನ್ನು ಸ್ವಾತಂತ್ರ್ಯ ಅಮೃತ ಮಹೋತ್ಸವ ನೆಪದಲ್ಲಿ ಬಿಡುಗಡೆ ಮಾಡಿ ಅವರನ್ನು ಅಭೂತ ಪೂರ್ವವಾಗಿ ಸ್ವಾಗತಿಸಿದ್ದಾರೆ. ಇಂತವರಿಗೆ ಮಹಿಳೆ ಮತ್ತು ಸಮಾನತೆಯ ಹಕ್ಕುಗಳನ್ನು ನೀಡಿರುವ ಸಂವಿಧಾನದ ಮೇಲೆ ಹೇಗೆ ಗೌರವ ಇರಲು ಸಾಧ್ಯ ಎಂದು ಪ್ರಶ್ನಿಸಿದರು.
ಪ್ರಾಸ್ತಾವಿಕವಾಗಿ ಹಿರಿಯ ದಲಿತ ಮುಖಂಡ ಸಿ.ಎಂ. ಮುನಿಯಪ್ಪ ಮಾತನಾಡಿ , ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದಲಿತರು ಹಂಗಿನ ರಾಜಕಾರಣ ಮಾಡಬೇಕಾಗಿದೆ , ಸ್ವತಂತ್ರವಾಗಿ
ಪ೦ಗಡಗಳ ಮಾತನಾಡುವ ಹಕ್ಕು ಇಲ್ಲವಾಗಿದೆ. ಒಳಕಿತ್ತಾಡ ಬಿಟ್ಟು ಒಂದಾಗದಿದ್ದರೆ ಸ್ವಾಭಿಮಾನದ ರಾಜಕಾರಣ ಸಾಧ್ಯವಾಗುವುದಿಲ್ಲ , ಅಪಾಯದಲ್ಲಿರುವ ಸಂವಿಧಾನ ವನ್ನು ಸಂರಕ್ಷಿಸಲು ಸಾಧ್ಯವಿಲ್ಲವೆಂದು ಟೀಕಿಸಿದರು .
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ದಲಿತ ಮುಖಂಡರು ಸಂಘಟನೆಗಳ ಪರವಾಗಿ ಜಿ. ಪರಮೇಶ್ವರ್‌ರನ್ನು ಸನ್ಮಾನಿಸಲಾಯಿತು .
ವೇದಿಕೆಯಲ್ಲಿ ಶಾಸಕರಾದ ಕೆ.ವೈ. ನಂಜೇಗೌಡ , ಎಸ್.ಎನ್ . ನಾರಾಯಣಸ್ವಾಮಿ , ನಜೀರ್‌ ಅಹಮದ್‌ , ಮುಖಂಡರಾದ ಚಂದನಗೌಡ , ಮುನಿಆಂಜಿನಪ್ಪ , ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಶ್ರೀನಿವಾಸ್ , ಶ್ರೀಕೃಷ್ಣ , ಎನ್.ಮುನಿಸ್ವಾಮಿ , ಗೊಲ್ಲ ಹಳ್ಳಿ ಶಿವಪ್ರಸಾದ್‌ , ಟಿ.ವಿಜಯಕುಮಾರ್ , ತಿಮೃಯ್ಯ , ಬೆಳಗಾನಹಳ್ಳಿ ಮುನಿವೆಂಕಟಪ್ಪ ಹಾಗು ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಜರಿದ್ದರು.

ಜನರು ಕಲ್ಯಾಣ ಮಂಟಪ,ಸಮುದಾಯ ಭವನಗಳ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು:ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ : ಜನರು ಕಲ್ಯಾಣ ಮಂಟಪ ಹಾಗೂ ಸಮುದಾಯ ಭವನಗಳ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು . ತಾಲ್ಲೂಕಿನ ಕೋಟಬಲ್ಲಪ್ಪಲ್ಲಿ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ರೂ .೭೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೀತಾರಾಮ ಕಲ್ಯಾಣ ಮಂಟಪ , ರೂ .೧೮ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅಂಗನವಾಡಿ ಕಟ್ಟಡ , ರೂ .೮ ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು . ಸಮುದಾಯ ಭವನಗಳು ಜ್ಞಾನಾರ್ಜನೆಗೆ ಪೂರಕ ಕೇಂದ್ರಗಳಾಗಬೇಕು . ಗ್ರಾಮದ ಜನರು ಸೇರಿ ವ್ಯವಸಾಯ ಮತ್ತಿತರ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸಬೇಕು . ಸಮುದಾಯ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬೇಕು ಎಂದು ಹೇಳಿದರು . ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೋವಿಂದಸ್ವಾಮಿ , ಮುಖಂಡರಾದ ಕೆ.ಕೆ.ಮಂಜುನಾಥರೆಡ್ಡಿ , ಕೊಂಡಸಂದ್ರ ಶಿವಾರೆಡ್ಡಿ , ಸುರೇಶ್ ಗೌಡ , ಸತ್ಯನಾರಾಯಣಶೆಟ್ಟಿ , ಸತ್ಯಣ್ಣ , ರಾಮಕೃಷ್ಣಗೌಡ , ವೆಂಕಟರವಣ , ಜಯಪದ , ಶಾಂತಮ್ಮ , ಹಿಮಕರ್‌ , ವಿ.ವಾಸುದೇವ ಇದ್ದರು

ದೇಶದ ಅಭಿವೃದ್ಧಿಗೆ ಶಿಕ್ಷಕರ ಕೊಡುಗೆ ಅಪಾರ ಸಂಸದ ಎಸ್.ಮುನಿಸ್ವಾಮಿ

ಕೋಲಾರ : ನಮ್ಮ ದೇಶದಲ್ಲಿ ಶಿಕ್ಷಣದ ವ್ಯವಸ್ಥೆಯು ಇತರ ದೇಶಗಳಿಗಿಂತ ಅತ್ಯುತ್ತಮವಾಗಿದೆ , ಉತ್ತಮ ಶಿಕ್ಷಣದಿಂದ ವಿದ್ಯಾರ್ಥಿಗಳು ಸಾಧನೆ ಮಾಡಿ ದೇಶದ ಉನ್ನತ ಸ್ಥಾನಗಳನ್ನು ಅಲಂಕರಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಈ ಕಾರಣದಿಂದ ದೇಶದ ಅಭಿವೃದ್ಧಿಗೆ ಶಿಕ್ಷಕರ ಕೊಡುಗೆ ಅಪಾರವಾಗಿದೆ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ತಿಳಿಸಿದರು . ಇಂದು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ , ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ , ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ ಭಾರತರತ್ನ ಡಾ || ಎಸ್ ರಾಧಾಕೃಷ್ಣನ್ ರವರ ಜನ್ಮದಿನೋತ್ಸವ ಪ್ರಯುಕ್ತ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಹಾಗೂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಬೋಧಿಸಬೇಕು . ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿಸಿ ಸನ್ಮಾರ್ಗದಲ್ಲಿ ನಡೆಸುವಂತಹ ಗುಣ ಶಿಕ್ಷಕರಲ್ಲಿ ಇರುತ್ತದೆ . ಶಿಕ್ಷಕರಾದವರು ಬಹಳ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಅದಕ್ಕಾಗಿ ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ . ಇದರಿಂದ ಶಾಲಾ ಮಕ್ಕಳಲ್ಲಿರುವ ಕೌಶಲ್ಯ ಪ್ರತಿಭೆ , ಹೆಚ್ಚಲಿದೆ . ಅನಾದಿ ಕಾಲದಿಂದಲು ಶಿಕ್ಷಕರಿಗೆ ಗುರುವಿನ ಸ್ಥಾನ ನೀಡಿ ಗೌರವಿಸಿದ ಪರಂಪರೆ ನಮ್ಮ ದೇಶದ್ದಾಗಿದೆ . ಶಿಕ್ಷಕರೆಲ್ಲರೂ ಮಕ್ಕಳನ್ನು ದೇಶದ ಶಕ್ತಿಯನ್ನಾಗಿ ರೂಪಿಸುವ ಜವಾಬ್ದಾರಿಯನ್ನು ಹೊಂದಬೇಕು ಎಂದು ಹೇಳಿದರು . ಶಿಕ್ಷಕರು ಒಳ್ಳೆಯ ಸೇವೆಯನ್ನು ನೀಡಿದರೆ ನಿಮ್ಮನ್ನು ಮುಂದಿನ ದಿನಗಳಲ್ಲಿ ನೆನಪಿಸಿಕೊಳ್ಳುವರು , ದೇಶದ ಸ್ವಾತಂತ್ರ ಪೂರ್ವದಲ್ಲಿ ಶಿಕ್ಷಣದಿಂದ ವಂಚಿತರಾದ ಸಮುದಾಯದಲ್ಲಿ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿಯಾಗಿದ್ದ ಸಾವಿತ್ರಿಬಾಯಿ ಪುಲೆ ಅವರನ್ನು ಈ ದಿನ ಸ್ಮರಿಸುವುದು ಅವರಿಗೆ ನೀಡುವ ಗೌರವವಾಗಿದೆ . ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಗುರುಭವನವನ್ನು ಸಿ.ಎಸ್.ಆರ್ ಅನುದಾನ ಮತ್ತು ಜಿಲ್ಲಾ ಪಂಚಾಯಿತಿ ಮತ್ತು ಟಿ.ಎಸ್.ಪಿ ಅನುದಾನದಲ್ಲಿ ನಿರ್ಮಿಸಲಾಗುತ್ತದೆ ಹಾಗೂ ಸಂಸದರ ಅನುದಾನದಿಂದ 50 ಲಕ್ಷ ರೂ.ಗಳನ್ನು ಗುರು ಭವನ ನಿರ್ಮಾಣಕ್ಕೆ ನೀಡಿದ್ದೇನೆ , ಸರ್ಕಾರ ವಿದ್ಯಾರ್ಥಿಗಳ ಸುಲಭ ಕಲಿಕೆಗೆ ಉಚಿತ ಸಮವಸ್ತ್ರ , ಉಚಿತ ಶಿಕ್ಷಣ , ಬಿಸಿ ಊಟದಂತಹ ಆನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು . ವಿಧಾನ ಪರಿಷತ್‌ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್ ಅವರು ಮಾತನಾಡಿ ಈ ದಿನ ನಾವೆಲ್ಲರೂ ನೆನಪಿಸಿಕೊಳ್ಳ ಬೇಕಿರುವುದು ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಇವರು ಶಿಕ್ಷಕರಾಗಿ ಸೇವೆ ಸಲ್ಲಿಸಿ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿ ನಂತರ ದೇಶದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿಯಾಗಿ ಉತ್ತಮ ಸೇವೆ ಸಲ್ಲಿಸಿದ ಮಹಾನ್ ತತ್ವಜ್ಞಾನಿ . ಇವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದಂತಹ ಸೇವೆಯನ್ನು ಗುರುತಿಸಿ ಅಂದಿನಿಂದ ಸರ್ಕಾರ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತಾ ಬಂದಿದೆ . ಪ್ರತಿಯೊಂದು ಮಗುವಿಗೂ ತಾಯಿ ಮೊದಲ ಗುರುವಾಗಿದ್ದು , ಶಿಕ್ಷಕ ಆ ಮಗುವಿನ ವ್ಯಕ್ತಿತ್ವ ನಿರ್ಮಿಸಿ ಜೀವನದ ಉದ್ದಕ್ಕೂ ವ್ಯಕ್ತಿಯ ಜೊತೆಗಿರುತ್ತಾನೆ . ಸಮಾಜದಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆ ಏನಾಗಿದೆ ಎಂದರೆ ಸರ್ಕಾರಿ ಶಾಲೆಗಳಿಗೆ ಯಾರು ಸಹ ಅವರ ಮಕ್ಕಳನ್ನು ಸೇರಿಸುತ್ತಿಲ್ಲ ಎಲ್ಲರೂ ಇಂಗ್ಲೀಷ್ ವ್ಯಾಮೋಹಕ್ಕೆ ಒಳಪಟ್ಟು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ . ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಕರು ಯಾವುದೇ ಬೇಧ ಭಾವ ತೋರದೆ ಎಲ್ಲರನ್ನು ಸಮಾನವಾಗಿ ಕಾಣಬೇಕು ಎಂದು ತಿಳಿಸಿದರು ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರು ಮಾತನಾಡಿ ಪ್ರತಿಯೊಬ್ಬರ ಜೀವನದಲ್ಲಿ ಗುರುವಿನ ಪಾತ್ರ ಮುಖ್ಯ ಶಿಕ್ಷಕರ ಪ್ರಾಮಾಣಿಕ ಸೇವೆಯಿಂದ ಸದೃಢ ದೇಶ ಕಟ್ಟಲು ಸಾಧ್ಯ ಗೌರವಯುತ ಹಾಗೂ ಶ್ರೇಷ್ಠ ಸ್ಥಾನಮಾನ ಹೋದಿರುವ ಶಿಕ್ಷಕರು ತಮ್ಮ ಆರ್ಪಣಾ ಮನೋಭಾವದ ಸೇವೆಯ ಮೂಲಕ ವೃತ್ತಿಯ ಘನತೆಯನ್ನು ಹೆಚ್ಚಿಸಬೇಕು . ಹಾಗೂ ವಿದ್ಯಾರ್ಥಿಗಳನ್ನು ದೇಶದ ಅತ್ಯುತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರ ಆದ್ಯ ಕರ್ತವ್ಯ ಎಂದು ತಿಳಿಸಿದರು . ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ . ದೇವರಾಜ್ ಅವರು ಮಾತನಾಡಿ ಒಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಗೆ ಶಿಸ್ತು , ಒಳ್ಳೆಯ ವಿಚಾರ , ಹೊಸ ಹೊಸ ವಿಷಯಗಳನ್ನು ಬೋಧಿಸಿದರೆ ಸಮಾಜದಲ್ಲಿ ಒಂದು ಒಳ್ಳೆಯ ವ್ಯಕ್ತಿಯಾಗಲು ಸಾಧ್ಯ , ಗುರುಗಳು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಉತ್ತಮ ಮಾರ್ಗದರ್ಶಕರಾಗಬೇಕು ಎಂದು ತಿಳಿಸಿದರು . ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ 18 ಸರ್ಕಾರಿ ಶಾಲಾ ಶಿಕ್ಷಕರನ್ನು ಹಾಗೂ 29 ಖಾಸಗಿ ಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು .
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಘೋರ್ಪಡೆ , ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೃಷ್ಣಮೂರ್ತಿ , ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ , ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು
.

ಭಾ.ರೆ.ಕ್ರಾಸ್- ಲಯನ್ಸ್ ಅಮ್ರತ್ ಧಾರ ಸಹಯೋಗದೊಂದಿಗೆ ಜನೌಷಧಿ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಲಯನ್ಸ್ ಅಮ್ರತ್ ಧಾರ ಇವರ ಸಹಯೋಗದೊಂದಿಗೆ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಭಿರ ಆಉಯೋಜಿತು.

ಕಾರ್ಯಕ್ರಮದ ಉದ್ಘಾಟನೆ ಯನ್ನು ಸಭಾಪತಿ ಎಸ್‌ ಜಯಕರ ಶೆಟ್ಟಿ ಮಾಡಿದರು. ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಸೀತಾರಾಮ ನಕ್ಕತ್ತಾಯ, ಗಣೇಶ್ ಆಚಾರ್ಯ, ಡಾ. ಸೋನಿ, ಸರಸ್ವತಿ ಪುತ್ರನ್, ಆಶಾ ಎಸ್ ಶೆಟ್ಟಿ ಮತ್ತು ಕಲ್ಪನ ಭಾಸ್ಕರ ಉಪಸ್ಥಿತರಿದ್ದು, ಈ ಶಿಬಿರದಲ್ಲಿ 170 ಜನಾರು ಇದರ ಪ್ರಯೋಜನ ಪಡೆದರು.

ಭಂಡಾರ್ ಕಾರ್ಸ್ ಕಲಾ ವಿಜ್ಞಾನ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ಕುಂದಾಪುರ: ಮೇಧಾವಿಗಳು ತಿಳಿದವರು ಶಿಕ್ಷಣದ ಕುರಿತು ಸಾಕಷ್ಟು ವ್ಯಾಖ್ಯಾನ ಪ್ರಕಾರ ಶಿಕ್ಷಣ ಕೇವಲ ಪರೀಕ್ಷೆಗೆ ಮಾತ್ರ ಸೀಮಿತವಾಗಬಾರದು. ಅದರಾಚೆಗೂ ನಮ್ಮ ಬದುಕಿಗೆ ಪೂರಕವಾದ ಶಿಕ್ಷಣವು ದೊರೆತಾಗ ಆ ಶಿಕ್ಷಣಕ್ಕೆ ಅರ್ಥ ಬರುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಶಿಕ್ಷಣವು ಬೇರೆ ಬೇರೆ ಆಯಾಮವನ್ನು ಪಡೆದುಕೊಂಡಿದೆ. ಹೊಸ ಶಿಕ್ಷಣ ನೀತಿಯೂ ಮಕ್ಕಳನ್ನು ತರಗತಿ ಮಾತ್ರವಲ್ಲದೇ ಅದರಾಚೆಗೆ ತೆರಡಿದಲು ಸಾಧ್ಯವಾಗಿದೆ. ವಿದ್ಯಾರ್ಥಿಗಳೆಲ್ಲರೂ ಶೈಕ್ಷಣಿಕ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು. ಸರ್ವಪಳ್ಳಿ ರಾಧಾಕೃಷ್ಣನ್ ಅವರನ್ನು ಇಂದು ಮಾತ್ರ ನೆನೆಯುವುದು ಅಲ್ಲ, ಅವರನ್ನು ಸದಾ ನೆನಪಿಸಿಕೊಳ್ಳಬೇಕು ಎಂದು ವಿವೇಕ ಪ್ರೌಢಶಾಲಾ ಶಿಕ್ಷಕ ನರೇಂದ್ರ ಕುಮಾರ್ ಕೋಟ ಹೇಳಿದರು.

ಅವರು ಸೆಪ್ಟೆಂಬರ್ 5ರಂದು ಇಲ್ಲಿನ ಭಂಡಾರ್ ಕಾರ್ಸ್ ಕಲಾ ವಿಜ್ಞಾನ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿ, ಮಾತನಾಡಿದರು. ಸಾಮಾನ್ಯವಾಗಿ ಎಲ್ಲರ ಆತಂಕ, ಭಯ ಹಾಗೂ ಧಾವಂತಗಳಲ್ಲಿಯೇ ಬದುಕುತ್ತಿದ್ದೇವೆ. ಇದನ್ನ ಮನೋ ಮಾಲಿನ್ಯ ಎನ್ನಬಹುದು. ಮನ ಹಾಗೂ ಮನಸ್ಸು ಕತ್ತಲೆ ಮಾಡಿಕೊಂಡು ಬೇರೆ ಕಡೆಯಲ್ಲಿ ಬೆಳಕು ಹುಡುಕುವ ಪ್ರಯತ್ನ ಮಾಡುತ್ತೇವೆ. ಆದರೆ ಯಾವತ್ತೂ ಮನಸ್ಸಿನಲ್ಲಿರುವ ಕೊಳಕನ್ನು ದೂರ ಮಾಡಬೇಕು. ಹಾಗೇ ಮಾಡಿದರೆ ಮಾತ್ರ ನಮ್ಮ ಬೆಳವಣಿಗೆ ಸಾಧ್ಯ. ತಡೆ ಬಂದಾಗ ವೇಗ ಅಗತ್ಯವಾಗಿ ಬೇಕು. ಹೀಗಾಗಿ ಬದುಕಿನಲ್ಲಿ ಏನೇ ಎದುರಾದರೂ ಕೂಡ ಮುನ್ನಗ್ಗ ಬೇಕು. ಅವಕಾಶಗಳು ನಮಗಾಗಿ ಕಾಯುವುದಿಲ್ಲ. ಅವಕಾಶ ಸಿಕ್ಕಾಗ ಬಳಸಿ, ಬದುಕಿನ ಉದ್ದೇಶ ಹಾಗೂ ಗುರಿಯನ್ನು ಪ್ರೀತಿಸಿದರೆ ಬೆಳವಣಿಗೆ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶುಭಕರಾಚಾರಿ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಸತ್ಯನಾರಾಯಣ ಉಪಸ್ಥಿತರಿದ್ದರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಮತ್ತು ಅಧ್ಯಾಪಕರ ಸಂಘದ ಅಧ್ಯಕ್ಷರಾದ ಡಾ.ಲಲಿತಾದೇವಿ ಸ್ವಾಗತಿಸಿದರು. ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಸರೋಜ ಎಂ ವಂದಿಸಿದರು. ಅರ್ಥಶಾಸ್ತ್ರ ವಿಭಾಗ ಉಪನ್ಯಾಸಕ ದುರ್ಗಾಪ್ರಸಾದ್ ಮತ್ತು ಪರಿಚಯಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಸುಮಾ ಕಾರ್ಯಕ್ರಮ ನಿರೂಪಿಸಿದರು.

ಕಲ್ಯಾಣಪುರ ಮೌಂಟ್ ರೋಜರಿ ಚರ್ಚ್: ಕಥೊಲಿಕ್ ಸಭಾ ಹಾಗೂ ಶಿಕ್ಷಣ ಆಯೋಗದ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ


PHOTOS: RICHARD DSOUZA

ಮೌಂಟ್ ರೋಜರಿ ಕಥೊಲಿಕ್ ಸಭಾ ಕಲ್ಯಾಣಪುರ ಹಾಗೂ ಶಿಕ್ಷಣ ಆಯೋಗದ ಸಹಯೋಗದಲ್ಲಿ ಭಾನುವಾರ ಮೌಂಟ್ ರೋಜರಿ ಚರ್ಚಿನಲ್ಲಿ ಶಿಕ್ಷಕರ ಜೊತೆ ಬಲಿ ಪೂಜೆಯ ಬಳಿಕ ಚರ್ಚಿನ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು 40ಕ್ಕೂ ಅಧಿಕ ಚರ್ಚಿನ ಶಿಕ್ಷಕ ಶಿಕ್ಷಕಿಯರು ಇದರಲ್ಲಿ ಪಾಲ್ಗೊಂಡಿದ್ದು ಎಲ್ಲರನ್ನೂ ಧರ್ಮಗುರುಗಳು ಗುಲಾಬಿಯನ್ನು ನೀಡಿ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಹಾರೈಸಿದರು. ಧರ್ಮಗುರು ಫಾ. ಡಾ. ರೋಕ್ ಡಿಸೋಜ ಉಪಸ್ಥಿತರಿದ್ದು ಸಂದೇಶ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಧರ್ಮಗುರುಗಳಾದ ಫಾ| ರೋಲ್ವಿನ್ ಫೆರ್ನಾಂಡಿಸ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧರ್ಮಗುರುಗಳಾದ ರೋಲ್ವಿನ್ ಫೆರ್ನಾಂಡಿಸ್ ಅವರೆಲ್ಲರಿಗೂ ಗೌರವಾರ್ಥವಾಗಿ ಗುಲಾಬಿ ಹೂವುಗಳನ್ನು ನೀಡಿ ಅಭಿನಂದಿಸಿ ತಮ್ಮ ಸಂದೇಶದಲ್ಲಿ ಒಟ್ಟಾರೆ ಶಿಕ್ಷಕರ ಸೇವೆಯನ್ನು ಶ್ಲಾಘಿಸಿದರು. ನಿವ್ರತ್ತಿ ಶಿಕ್ಷಕಿ ಶ್ರೀಮತಿ ಜೆಸಿಂತ ರೋಡ್ರಿಗಸ್ ಇವರನ್ನು ಸನ್ಮಾನಿಸಲಾಯಿತು ಶ್ರೀಮತಿ ಜ್ಯೋತಿ ಲೂವಿಸ್ ಕಾರ್ಯ ನಿರ್ವಹಣೆ ಮಾಡಿ ಶ್ರೀಮತಿ ಹಿಲ್ಡಾ ಕರ್ನೆಲಿಯೋ ಎಲ್ಲರನ್ನು ಸ್ವಾಗತಿಸಿ ಶ್ರೀಮತಿ ರೋಜಿ ಕ್ವಾಡ್ರಾಸ್ ಧನ್ಯವಾದ ಸಮರ್ಪಣೆ ಮಾಡಿದರು.

IMA ಕುಂದಾಪುರ ದ ಆಶ್ರಯದಲ್ಲಿ KMC ಸಹಯೋಗದಲ್ಲಿ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ

ಭಾರತೀಯ ವೈದ್ಯಕೀಯ ಸಂಘ ( IMA) ಕುಂದಾಪುರ ದ ಆಶ್ರಯದಲ್ಲಿ KMC ಮಣಿಪಾಲ್ ಅವರ ಸಹಯೋಗದಲ್ಲಿ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವು ದಿನಾಂಕ 3.9.22 ರಂದು ಕುಂದಾಪುರದ ಗಿಳಿಯಾರು ಕುಶಲ ಹೆಗ್ಡೆ ರೋಟರಿ ಭವನದಲ್ಲಿ ನೆರವೇರಿತು.

 ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ KMC ಯ neurosurgery ವಿಭಾಗ ದ ಮುಖ್ಯಸ್ಥ Dr ಗಿರೀಶ್ ಮೆನನ್ ರು ” ಪಕ್ಷವಾತ ದಲ್ಲಿ ಶಸ್ತ್ರ ಚಿಕಿತ್ಸೆಯ ಪಾತ್ರ ” ದ ಬಗ್ಗೆ ಹಾಗೂ ಎಲುಬು ಕೀಲು ವಿಭಾಗ ದ Dr ಕೃಷ್ಣಪ್ರಸಾದ ರು ” ಹಿಮ್ಮಡಿ ನೋವಿನ ಉಪಶಮನ” ದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು . ಭಾರತೀಯ ವೈದ್ಯಕೀಯ ಸಂಘ ಕುಂದಾಪುರ ದ ಅಧ್ಯಕ್ಷ ಎಲುಬು ಕೀಲು ಶಸ್ತ್ರ ಚಿಕಿತ್ಸಾ ತಜ್ನ Dr ಸಂದೀಪ ನಾವಡ ಪಡುಕೋಣೆ ಅಧ್ಯಕ್ಷತೆ ವಹಿಸಿದ್ದರು .ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು ಕಾರ್ಯದರ್ಶಿ ಮಾನಸಿಕ ತಜ್ಞ Dr ರವೀಂದ್ರ ಮುನೊಳಿ ವಂದಿಸಿದರು

ಶ್ರೀನಿವಾಸಪುರ: ಹೈನುಗಾರಿಕೆ ಅಭಿವೃದ್ಧಿಯಲ್ಲಿ ಗ್ರಾಮೀಣ ಮಹಿಳೆಯರ ಪಾತ್ರ ಹಿರಿದು:ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಹೈನುಗಾರಿಕೆ ಅಭಿವೃದ್ಧಿಯಲ್ಲಿ ಗ್ರಾಮೀಣ ಮಹಿಳೆಯರ ಪಾತ್ರ ಹಿರಿದು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಹೆಬ್ಬಟ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತ ಸಮುದಾಯಕ್ಕೆ ಕ್ಷೀರೋತ್ಪಾದನೆ ಜೀವನಾಡಿಯಾಗಿದೆ. ಗ್ರಾಮೀಣ ಪ್ರದೇಶದ ಎಲ್ಲ ಸಮುದಾಯದ ಜನರ ಆರ್ಥಿಕಾಭಿವೃದ್ಧಿ ಹಾಲಿನ ಉತ್ಪಾದನೆ ಮೇಲೆ ನಿಂತಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ವತಿಯಿಂದ ಸ್ತ್ರೀ ಶಕ್ತಿ ಸಂಘಗಳಿಗೆ ಈಗ ನೀಡಲಾಗುತ್ತಿರುವ ರೂ.50 ಸಾವಿರ ಬಡ್ಡಿರಹಿತ ಸಾಲದ ಜತೆಗೆ, ಹೆಚ್ಚುವರಿಯಾಗಿ ಬಡ್ಡಿಸಹಿತ ಸಾಲವಾಗಿ ರೂ.50 ಸಾವಿರ ನೀಡಲಾಗುತ್ತಿದೆ. ಕಾಂಗ್ರೆಸ್ ಅಧಿಕಾರಿಕ್ಕೆ ಬಂದರೆ ರೂ.1 ಲಕ್ಷ ಬಡ್ಡಿರಹಿತ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದಾಗ ಬಡವರಿಗೆ ಅಕ್ಕಿ ನೀಡಿದರು. ಅದನ್ನು ಜನರು ಮರೆಯುವಂತಿಲ್ಲ ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಮಾತನಾಡಿ, ತಾಲ್ಲೂಕಿನಲ್ಲಿ 168 ಹಾಲು ಉತ್ಪಾದಕರ ಸಂಘಗಳಿವೆ. ಆ ಪೈಕಿ 11 ಮಹಿಳಾ ಸಹಕಾರ ಸಂಘಗಳಿವೆ. ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳು ವ್ಯವಸ್ಥಿತವಾಗಿ ನಡೆಯುತ್ತಿವೆ ಎಂದು ಅಭಿಪ್ರಾಯಪಟ್ಟರು.
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಉಪ ಕಚೇರಿ ಉಪ ವ್ಯವಸ್ಥಾಪಕ ಮುನಿರಾಜು, ಸ್ಥಳೀಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ರತ್ನಮ್ಮ, ಗ್ರಾಮ ಪಂಚಾಯಿತಿ ಸದಸ್ಯ ಅನಂತಕುಮಾರ್, ಮುಖಂಡರಾದ ಸಂಜಯ್‍ರೆಡ್ಡಿ, ಗೋಪಾಲರೆಡ್ಡಿ, ಕೆ.ಕೆ.ಮಂಜುನಾಥರೆಡ್ಡಿ, ಎಚ್.ಕೆ.ಸುಬ್ರಮಣಿರಾವ್, ಎಚ್.ಜಿ.ವಿಜಯಕುಮಾರ್, ವೆಂಕಟರೆಡ್ಡಿ, ನಾರಾಯಣರೆಡ್ಡಿ, ವಿನಾಯಕ ಕುಮಾರ್ ಇದ್ದರು.