ದೈಹಿಕ ಶಿಕ್ಷಕರ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಒತ್ತಡ ತನ್ನಿ:ಸಂಸದ ಮುನಿಸ್ವಾಮಿ ಅವರಿಗೆ ದೈಹಿಕ ಶಿಕ್ಷಕರ ಸಂಘ ಮನವಿ

ಕೋಲಾರ:- ದೈಹಿಕ ಶಿಕ್ಷಣ ಶಿಕ್ಷಕರ ವೃಂದ & ನೇಮಕಾತಿ ನಿಯಮಗಳ ತಿದ್ದುಪಡಿ ಆದೇಶ ಜಾರಿ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ತರುವಂತೆ ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ, ಜಿಲ್ಲಾಧ್ಯಕ್ಷ ವಿ.ಮುರಳಿಮೋಹನ್ ಸಂಸದ ಎಸ್.ಮುಜನಿಸ್ವಾಮಿ ಅವರಿಗೆ ಮನವಿ ಮಾಡಿದರು.
ಜಿಲ್ಲಾ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಪ್ರೌಢಶಾಲಾ ಕ್ರೀಡಾಕೂಟದ ಉದ್ಘಾಟನೆಗೆ ಆಗಮಿಸಿದ್ದ ಸಂಸದರಿಗೆ ಮನವಿ ನೀಡಿದ ಅವರು,
ಈ ಕುರಿತು ಹೇಳಿಕೆ ರಾಜ್ಯದ ದೈಹಿಕ ಶಿಕ್ಷಣದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರವು 2006ರಲ್ಲಿ ಪ್ರೊ. ಎಲ್.ಆರ್.ವೈದ್ಯನಾಥನ್ ಅಧ್ಯಕ್ಷತೆಯಲ್ಲಿ 7 ಜನ ದೈಹಿಕ ಶಿಕ್ಷಣ ತಜ್ಞರನ್ನು ನೇಮಿಸಿ, ಆ ಸಮಿತಿ ನೀಡಿದ ವರದಿಯನ್ನು ಅನುಮೋದಿಸಿ 14 ಶಿಫಾರಸ್ಸು ಮಾಡಿತ್ತು.
ಆದರೆ ಸದರಿ ವರದಿಯಲ್ಲಿನ 14 ಅಂಶಗಳ ಪೈಕಿ 13 ಅಂಶಗಳನ್ನು ಜಾರಿಗೊಳಿಸಲಾಗಿದ್ದು, 14ನೇ ಅಂಶವಾದ ದೈಹಿಕ ಶಿಕ್ಷಣ ಶಿಕ್ಷಕರುಗಳ ಪದನಾಮವನ್ನು ಸಹ ಶಿಕ್ಷಕರು ಎಂದು ಪರಿಗಣಿಸಿ ಸಹ ಶಿಕ್ಷಕರಿಗೆ ದೊರೆಯುವ ಎಲ್ಲಾ ಸೌಲಭ್ಯವನ್ನು ದೈಹಿಕ ಶಿಕ್ಷಣ ಶಿಕ್ಷಕರಿಗೂ ನೀಡಲು ವಿಳಂಬವಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ತಿನ ಶಾಸಕರು ಸದನದ ಒಳಗೆ ಮತ್ತು ಹೊರಗೆ ವೃಂದ ಮತ್ತು ನೇಮಕಾತಿ ತಿದ್ದುಪಡಿ ಪ್ರಶ್ನೆ ಕೇಳಿದಾಗ ಇಲ್ಲಿಯ ತನಕ ಪ್ರತಿ ಬಾರಿಯೂ ಇಲಾಖೆಯಿಂದ ನೀಡುವ ಉತ್ತರ ಅಂತಿಮ ಹಂತದಲ್ಲಿದೆ ಎಂದು ಆದರೆ ಇಲ್ಲಿಯ ತನಕ ಸಚಿವ ಸಂಪುಟದ ಅನುಮೋದನೆ ಪಡೆದು, ಕರಡು ನಿಯಮಗಳನ್ನು ಪ್ರಕಟಿಸಿ ಆದೇಶ ಮಾಡಲಿಲ್ಲ ಈ ಕುರಿತು ಸಚಿವರ ಗಮನಕ್ಕೆ ತರಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಅನಿಲ್‍ಕುಮಾರ್, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಅಪ್ಪೇಗೌಡ,ಎಂ.ನಾಗರಾಜ್, ಮುನಿಯಪ್ಪ, ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತರ ಜಿಲ್ಲಾ ಮಟ್ಟದ ಸಮಾವೇಶ ಸೆ18ರಂದು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ

ಕೋಲಾರ,ಸೆ.7: ಕಾರಣಾಂತರಗಳಿಂದ ಎರಡು ಬಾರಿ ಮುಂದೂಡಲಾಗಿದ್ದ ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತರ ಜಿಲ್ಲಾ ಮಟ್ಟದ ಸಮಾವೇಶವನ್ನು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಸೆಪ್ಟೆಂಬರ್ 18ರಂದು ಆಯೋಜಿಸಲಾಗಿದ್ದು, ಸಮಾವೇಶದ ಯಶಸ್ವಿಗೆ ಪ್ರತಿಯೊಬ್ಬ ಜೆಡಿಎಸ್ ಕಾರ್ಯಕರ್ತರು ಮುಂದಾಗಬೇಕು ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮನವಿ ಮಾಡಿದರು.
ನಗರದ ಜೆಡಿಎಸ್ ಕಛೇರಿಯಲ್ಲಿ ಬುಧವಾರ ಸಮಾವೇಶದ ಯಶಸ್ಸಿಗೆ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿದ ಅವರು, ಈ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಪಕ್ಷದ ರಾಜ್ಯ ಅಧ್ಯಕ್ಷ ಸಿ.ಎಂ ಇಬ್ರಾಹಿಂ, ಸೇರಿದಂತೆ ರಾಜ್ಯ ನಾಯಕರು ಭಾಗವಹಿಸಲಿದ್ದು, ರಾಜ್ಯದಲ್ಲಿ ಮಾದರಿಯಾಗುವ ರೀತಿಯಲ್ಲಿ ನಡೆಸಬೇಕಾಗಿದೆ ಪ್ರತಿ ತಾಲೂಕಿನಲ್ಲಿ ಪಕ್ಷದ ಕಾರ್ಯಕರ್ತರು ತಮ್ಮ ಗ್ರಾಮಗಳಲ್ಲಿ ವಾರ್ಡ್‍ಗಳಲ್ಲಿ ಜೆಡಿಎಸ್ ಪಕ್ಷದ ಅಧಿಕಾರ ಅವಧಿಯಲ್ಲಿನ ಯೋಜನೆಗಳನ್ನು ಜನತೆಗೆ ತಿಳಿಸಿ ಕೊಟ್ಟು ಕಾರ್ಯಕರ್ತರನ್ನು ಸಮಾವೇಶಕ್ಕೆ ಕರೆತರಬೇಕಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿ ಮೇಲೆ ಬಿಜೆಪಿ ಕಾಂಗ್ರೆಸ್ ಪಕ್ಷದ ಮೇಲೆ ಆರೋಪಗಳನ್ನು ಮಾಡುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದ್ದು.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ ಅದಕ್ಕೆ ಈ ಸಮಾವೇಶವೇ ದಿಕ್ಸೂಚಿಯಾಗಲಿದೆ ಅ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕಾಗಿದೆ ಎಂದರು.
ರಾಜ್ಯದಲ್ಲಿ ಕೋಮುವಾದಿ ಪಕ್ಷದಿಂದ ಜನತೆ ಸಾಕಷ್ಟು ನೋವು ಅನುಭವಿಸಿದ್ದಾರೆ.ಸಾಮಾನ್ಯರ ಜನ ಜೀವನ ದುಸ್ಸಾರವಾಗಿದೆ ಹಾಗಾಗಿ ಕಾರ್ಯಕರ್ತರು ಇಂದಿನಿಂದಲೇ ಚುನಾವಣೆಯ ಪೂರ್ವಭಾವಿಯಾಗಿ ಮತದಾರರನ್ನು ಬೂತ್ ಮಟ್ಟದಿಂದ ಸಂಘಟಿಸುವಂತಾಗಬೇಕು ಕುಮಾರಸ್ವಾಮಿ ಅಧಿಕಾರವದಿಯಲ್ಲಿನ ಸಾಧನೆಗಳನ್ನು ಜನತೆಗೆ ನೆನಪಿಸುವ ಮೂಲಕಾರಿವುಮೂಡಿಸಬೇಕು ಪ್ರತಿ ಗಾಮ ಮತ್ತು ವಾಡು9ವಾರು ಕಾರ್ಯಕರ್ತರು ಮತ್ತು ಮತದಾರರನ್ನು ಸಂಘಟಿಸಿಕೊಂಡು ಕನಿಷ್ಠ 15-20 ಸಾವಿರ ಮಂದಿಯನ್ನು ಸಮಾವೇಶಕ್ಕೆ ಸಂಘಟಿಸಬೇಕೆಂದು ಸೂಚಿಸಲಾಗಿದೆ ಎಂದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಇತಿಹಾಸವಿದೆ. ಅಲ್ಪಸಂಖ್ಯಾತ ಸಮುದಾಯಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕೇವಲ ಓಟು ಬ್ಯಾಂಕ್ ಸೀಮಿತಗೊಳಿಸಿದ್ದು, ಅಲ್ಪಸಂಖ್ಯಾತ ಅಭಿವೃದ್ಧಿ ಜೆಡಿಎಸ್ ಪಕ್ಷದಿಂದ ಸಾಧ್ಯ ಎಂದು ಇಬ್ರಾಹಿಂ ಹಾದಿಯಾಗಿ ಎಲ್ಲರೂ ಪಕ್ಷಕ್ಕೆ ಬರತ್ತಾ ಇದ್ದು ನಮ್ಮದೇ ಪಕ್ಷದಲ್ಲಿ ಹಿಂದೆ ಕೇಂದ್ರ ಸಚಿವರಾಗಿ, ರಾಜ್ಯದಲ್ಲೂ ಅನೇಕ ಜವಾಬ್ದಾರಿಯುತ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಅವರು ಮರಳಿ ಜೆಡಿಎಸ್ ಸೇರ್ಪಡೆಯಾಗಿರುವುದರಿಂದ ಹೆಚ್ಚಿನ ಶಕ್ತಿ ಬಂದಂತಾಗಿದೆ ಈಗಿರುವ ಅವಕಾಶವನ್ನು ಬಳಸಿಕೊಂಡು ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ನಿವೃತ್ತ ನೌಕರ ನಾಗರಾಜ್ ಜೆಡಿಎಸ್ ಸೇರ್ಪಡೆಯಾದರು. ಮುಖಂಡರಾದ ಸಮೃದ್ಧಿ ಮಂಜುನಾಥ್, ಸಿಎಂಆರ್ ಶ್ರೀನಾಥ್, ಮಲ್ಲೇಶ್ ಬಾಬು, ಬಣಕನಹಳ್ಳಿ ನಟರಾಜ್, ಚಂದ್ರಶೇಖರಗೌಡ, ಅಲ್ಪಸಂಖ್ಯಾತ ಮುಖಂಡರಾದ ಸುಹೇಲ್ ದಿಲ್ ನವಾಜ್, ಯಾರಭ್, ಜಮೀರ್ ಆಹಮದ್, ಮುಸ್ತಫಾ, ಅಂಜುಮಾನ್ ಸಂಸ್ಥೆ ಜಮೀರ್ ಪಾಷ, ನಾರಾಯಣಸ್ವಾಮಿ, ಕೆಜಿಎಫ್ ದಯಾನಂದ್, ಜನಪನಹಳ್ಳಿ ಆನಂದ್, ವಡಗೂರು ರಾಕೇಶ್, ರಾಮು ಮುಂತಾದವರು ಇದ್ದರು.

ಆಹಾರ ಖಾತೆ ಸಚಿವ ಉಮೇಶ್ ಕತ್ತಿ ನಿಧನ/ಬೆಳಗಾವಿ ಜಿಲ್ಲೆಯ ಶಾಲಾ ಕಾಲೇಜುಗಳು,ಸರ್ಕಾರಿ ಕಚೇರಿಗಳಿಗೆ ರಜೆ

ಬೆಂಗಳೂರು: ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಅವರು ಮಂಗಳವಾರ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿದ್ದ 61 ವರ್ಷದ ಉಮೇಶ್ ಕತ್ತಿ ಅವರು ಮಂಗಳವಾರ ರಾತ್ರಿ 10.30ರ ಸುಮಾರಿಗೆ ಬಾತ್ ರೂಮ್ ಗೆ ತೆರಳಿದ್ದಾಗ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಅವರ ಕುಟುಂಬದವರು ತಕ್ಷಣ ಅವರನ್ನು ಸರ್ಕಾರಿ ಕಾರಿನಲ್ಲಿಯೇ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ನಿಗಾ ಘಟಕದಲ್ಲಿ ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಉಮೇಶ್ ಕತ್ತಿ ಅವರ ಪಾರ್ಥಿವ ಶರೀರವನ್ನು ಬುಧವಾರ ಬೆಳಗ್ಗೆ ಬೆಳಗಾವಿಗೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ತಿಳಿದು ಬಂದಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ 1961ರ ಮಾರ್ಚ್‌ 14ರಂದು ಜನಿಸಿದ್ದ ಉಮೇಶ್‌ ಕತ್ತಿ ಅವರು ಪತ್ನಿ ಶೀಲಾ, ಮಗ ನಿಖಿಲ್‌, ಮಗಳು ಸ್ನೇಹಾ ಅವರನ್ನು ಅಗಲಿದ್ದಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಒಲವು ಹೊಂದಿದ್ದ ಉಮೇಶ್ ಕತ್ತಿ ಆಗಾಗ ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಲ್ಲಿರುತ್ತಿದ್ದರು. ಅಲ್ಲದೆ ತಾವು ಒಂದಲ್ಲ ಒಂದು ದಿನ ನಾನು ಮುಖ್ಯಮಂತ್ರಿಯಾಗುವುದಾಗಿ ಹಲವು ಬಾರಿ ಹೇಳಿದ್ದರು.

5 ಪಕ್ಷ, ಎಂಟು ಬಾರಿ ಶಾಸಕ : ಬೆಳಗಾವಿಯ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ 8 ಬಾರಿ ಶಾಸಕರಾಗಿದ್ದ ಉಮೇಶ್ ಕತ್ತಿ, ವಿಭಿನ್ನವಾದ ರಾಜಕೀಯ ಪಥದಲ್ಲಿ ಸಾಗಿ ಸುದ್ದಿ ಮಾಡಿದ್ದರು.

2008ರಲ್ಲಿ ಮತ್ತೆ ಜೆಡಿಎಸ್​ಗೆ ಬಂದು ಹುಕ್ಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. ಆದರೆ ಚುನಾವಣೆ ಬಳಿಕ ನಡೆದ ಆಪರೇಷನ್ ಕಮಲದ ಭಾಗವಾಗಿ ಕತ್ತಿ ಬಿಜೆಪಿ ಸೇರಿದರು.

. ಈಗ ಹಾಲಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಹಾಗೂ ಅರಣ್ಯ ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದರು.

ರಾಜ್ಯದ ಉತ್ತರ ಭಾಗದ ಪ್ರಮುಖ ರಾಜಕೀಯ ಕೊಂಡಿ, ಆಹಾರ ಮತ್ತು ಅರಣ್ಯ ಸಚಿವ ಉಮೇಶ್ ಕತ್ತಿ ನಿಧನದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗೆ ಸರ್ಕಾರ ರಜೆ ಘೋಷಿಸಿದೆ.ಸಚಿವರ ನಿಧಾನಕ್ಕೆ ಸಂತಾಪ ಸೂಚಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆಯಲ್ಲಿ ಬುಧವಾರ ಬೆಳಗಾವಿ ಜಿಲ್ಲೆಯಾದ್ಯಂತ ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಿದರು.

೭೫ ವರ್ಷ ಸ್ವಾಧೀನದಲ್ಲಿದ್ದರೂ ದಾಖಲೆ ಸಿಗದೇ ರೈತನ ಪರದಾಟ ಮನೆಗೆ ಹೋಗಿ ಸಾಗುವಳಿ ಚೀಟಿ ಕೊಟ್ಟ ತಹಸೀಲ್ದಾರ್ ನಾಗರಾಜ್

ಕೋಲಾರ : – ಸುಮಾರು ೭೫ ವರ್ಷಗಳಿಂದ ಸ್ವಾಧೀನದಲ್ಲಿದ್ದರೂ ಸಾಗುವಳಿ ಚೀಟಿ ಸಿಗದೇ ಪರಿತಪಿಸುತ್ತಿದ್ದ ರೈತನ ಮನೆಗೆ ಖುದ್ದು ತಹಸೀಲ್ದಾರ್‌ ನಾಗರಾಜ್‌ ಭೇಟಿ ನೀಡಿ ಸ್ಥಳದಲ್ಲೇ ಅವರಿಗೆ ಭೂ ಮಂಜೂರಾತಿ ಪತ್ರ ವಿತರಿಸುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ . ತಾಲ್ಲೂಕಿನ ಸುಗಟೂರು ಹೋಬಳಿ ತಲಗುಂದ ಪುರಹಳ್ಳಿ ಗ್ರಾಮದ ನಿವಾಸಿ ಕಡು ಬಡ ಕುಟುಂಬದ ವೆಂಕಟರಾಮಪ್ಪ ಅವರು ಗ್ರಾಮದ ಸರ್ವೇ ನಂ .೩೪ ರ ಜಮೀನಿನಲ್ಲಿ ಸುಮಾರು ೭೫ ವರ್ಷಗಳಿಂದ ಸ್ವಾಧೀನದಲ್ಲಿದ್ದು , ಕಳೆದ ೨೦೦೩ ರಲ್ಲೇ ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದರೆನ್ನಲಾಗಿದೆ . ಸಾಗುವಳಿ ಚೀಟಿಗಾಗಿ ಎಷ್ಟೇ ಅಲೆದಾಡಿದರೂ ಪ್ರಯೋಜನವಾಗದಿದ್ದಾಗ ಮನನೊಂದ ವೆಂಕಟರಾಮಪ್ಪ ಸಾಗುವಳಿ ಚೀಟಿ ಸಿಗುತ್ತದೆ ಎಂಬ ವಿಶ್ವಾಸವನ್ನೇ ಕಳೆದುಕೊಂಡು ಸದರಿ ಜಮೀನಿನಲ್ಲಿ ಕೃಷಿಮಾಡಿಕೊಂಡಿದ್ದರು . ಈ ಸಂಬಂಧ ಸಾಗುವಳಿ ನೀಡುವಲ್ಲಿ ತಾಲ್ಲೂಕು ಕಚೇರಿಯಿಂದ ವಿಳಂಬವಾಗಿರುವ ಕುರಿತು ಮಾಹಿತಿ ಸಿಕ್ಕ ಕೂಡಲೇ ಕಾರ್ಯೋನ್ಮುಖರಾದ ತಹಸೀಲ್ದಾರ್‌ ನಾಗರಾಜ್ ತಾವೇ ಸ್ವತಃ ಕಡತ ತೆಗೆಸಿ ಸಾಗುವಳಿ ಚೀಟಿ ಸಿದ್ಧಪಡಿಸಿಕೊಂಡು ಖುದ್ದು ಪುರಹಳ್ಳಿ ಗ್ರಾಮಕ್ಕೆ ತೆರಳಿ ರೈತ ವೆಂಕಟರಾಮಪ್ಪ ಅವರ ಮನೆಯಲ್ಲೇ ಸಾಗುವಳಿ ಚೀಟಿ ನೀಡುವ ಮೂಲಕ ಮಾನವೀಯತೆ ಮೆರೆದರು .
ಎಷ್ಟೇ ಅಲೆದಾಡಿದರೂ ಜಮೀನಿನ ಸಾಗುವಳಿ ಚೀಟಿ ಸಿಗದೇ ನೋಂದಿದ್ದ ಕುಟುಂಬ ಸಂತೋಷದಲ್ಲಿ ತೇಲುವಂತಾಗಿದ್ದು , ಅವರ ಕುಟುಂಬದವರು ಹಾಗೂ ಗ್ರಾಮಸ್ಥರು ತಹಸೀಲ್ದಾರ್‌ ಅವರ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು .

ದೊಡ್ಡಹಸಾಳ ಶಾಲೆ ಗೋಡೆ ಕುಸಿತ ಬೀಳುವ ಹಂತದಲ್ಲಿ ೪ ಕೊಠಡಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಕ್ಕಳೊಂದಿಗೆ ಬಿಸಿಯೂಟ ಸವಿದ ತಹಸೀಲ್ದಾರ್‌ ನಾಗರಾಜ್

ಕೋಲಾರ : – ತಾಲೂಕಿನ ದೊಡ್ಡಹಸಾಳ ಗ್ರಾಮದ ಸರ್ಕಾರಿ ಶಾಲೆ ಗೋಡೆ ಕುಸಿತದ ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಹಸೀಲ್ದಾರ್‌ ನಾಗರಾಜ್ ಮಕ್ಕಳೊಂದಿಗೆ ಹೊರ ಆವರಣದಲ್ಲಿ ಕುಳಿತು ಬಿಸಿಯೂಟ ಸವಿದರು . ಇತ್ತೀಚೆಗೆ ಸುರಿದ ಮಳೆಗೆ ಕೋಲಾರ ತಾಲೂಕಿನ ದೊಡ್ಡಹಸಾಳ ಗ್ರಾಮದ ಸರ್ಕಾರಿ ಶಾಲೆ ಗೋಡೆ ಕುಸಿದಿದ್ದು , ಆ ಸಂದರ್ಭದಲ್ಲಿ ಶಾಲೆಯಲ್ಲಿ ಮಕ್ಕಳಿಲ್ಲದ ಕಾರಣ ಯಾವುದೇ ಎದುರಾಗಿರಲಿಲ್ಲ . ಆದರ ಗೋಡೆ ಸಂಪೂರ್ಣ ಕುಸಿದಿರುವ ಕುರಿತು ಗ್ರಾಮಸ್ಥರು ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ತಹಶಿಲ್ದಾರ್ ವಿ.ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿ ಶಾಲಾ ಮಕ್ಕಳೊಂದಿಗೆ ಬಿಸಿ ಊಟ ಸವಿದರು . ದೊಡ್ಡಹಸಾಳ ಗ್ರಾಮದ ನಮ್ಮೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಗೋಡೆ ಕುಸಿದು ಬಿದ್ದ ಬಗ್ಗೆ ಹಾಗೂ ಶಾಲೆಯ ನಾಲ್ಕು ಕೊಠಡಿಗಳು ಬೀಳುವ ಹಂತದಲ್ಲಿ ಇವೆ ಎಂದು ಗ್ರಾಮದ ಲೋಕೇಶ್‌ಗೌಡ ಎಂಬುವವರು ಕರೆ ಮಾಡಿ ಮಾಹಿತಿ ನೀಡಿದ ಹಿನ್ನೆಲೆ ತಹಶಿಲ್ದಾರ್ ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿದ್ದರು . ಇದೇ ವೇಳೆ ಮಕ್ಕಳ ಆರೋಗ್ಯ ಹಾಜರಾತಿ , ಕಲಿಕೆ , ಮಧ್ಯಾಹ್ನದ ಊಟದ ಬಗ್ಗೆ ಪರಿಶೀಲನೆ ನಡೆಸಿದರು . ನಂತರ ತಹಶಿಲ್ದಾರ್ ನಾಗರಾಜ್ ಅವರು ಆಹಾರದ ಗುಣಮಟ್ಟ ನೋಡಲು ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದು ಒಳ್ಳೆಯ ತಾಜಾ ತರಕಾರಿ , ಸ್ವಚ್ಛವಾಗಿ ಅಡಿಗೆ ಮಾಡುವಂತೆ ಬಿಸಿ ಊಟ ತಯಾರಿಕರಿಗೆ ತಿಳಿಸಿದರು .
ಈ ವೇಳೆ ಮಾತನಾಡಿದ ತಹಶಿಲ್ದಾರ್ ವಿ ನಾಗರಾಜ್ , ತಾನು ಕೂಡ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಇಂದು ವಿದ್ಯಾರ್ಥಿಗಳ ಮುಂದೆ ಅಧಿಕಾರಿಯಾಗಿ ಬಂದಿದ್ದೇನೆ . ವಿದ್ಯಾರ್ಥಿಗಳು ಕೂಡಾ ಒಳ್ಳೆಯ ವಿದ್ಯಾಭ್ಯಾಸ ಮಾಡಿ ಉನ್ನತ ಮಟ್ಟದ ಅಧಿಕಾರಿಗಳಾಗಬೇಕು . ಸರ್ಕಾರ ನಿಮ್ಮಗೆ ಎಲ್ಲಾ ವ್ಯವಸ್ಥೆ ಕಲ್ಪಿಸುತ್ತದೆ ಎಂದರು . ದೊಡ್ಡಹಸಾಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೬೨ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಕಳೆದ ಇಪ್ಪತ್ತು ದಿನಗಳ ಹಿಂದೆ ಗೋಡೆ ಕುಸಿದು ಬಿದ್ದಿದೆ ಹಾಗೂ ಇದರ ಜೊತೆಗೆ ನಾಲ್ಕು ಕೊಠಡಿಗಳನ್ನು ಕೂಡಲೇ ದುರಸ್ತಿ ಮಾಡಿಕೊಡುವಂತೆ ಶಾಲಾ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಮಾನವಿ ಮಾಡಿದ್ದಾರೆ ಎಂದು ತಿಳಿಸಿದರು . ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಪಂ ಸಿಇಓ ಅವರ ಗಮನಕ್ಕೆ ತಂದು ಅತಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇನೆ . ಗೋಡೆ ಕುಸಿತ ಹಾಗೂ ಕೊಠಡಿಗಳ ದುರಸ್ತಿ ಬಗ್ಗೆ ಶಾಲಾ ಆಡಳಿತ ಮಂಡಳಿ ಅವರು ಘಟನೆ ಬಗ್ಗೆ ಮಾಹಿತಿಯೊಂದಿಗೆ ಅರ್ಜಿ ನೀಡುವಂತೆ ಹೇಳಲಾಗಿದೆ ಎಂದರು .
ಶಿಥಿಲಗೊಂಡ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸದಂತೆ ಸೂಚಿಸಿ ಸುರಕ್ಷತೆ ಕುರಿತು ಎಚ್ಚರವಹಿಸಿ ಎಂದು ತಿಳಿಸಿದರು . ಈ ಸಂಧರ್ಭದಲ್ಲಿ ಗ್ರಾಮದ ಮುಖಂಡ ಲೋಕೇಶ್ ಗೌಡ , ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಶಾಲಾ ಶಿಕ್ಷಕರು ಹಾಜರಿದ್ದರು .

ಭಿಕ್ಷುಕ/ಸ್ವೀಪರ್ ನ ಖಾತೆಯಲ್ಲಿ ಇದ್ದದು ಎಷ್ಟು ಹಣ ಗೊತ್ತೆ ಬರೋಬ್ಬರಿ 70 ಲಕ್ಷ ಸತ್ತ ನಂತರ ಬಯಲಾಯ್ತು

ಉತ್ತರಪ್ರದೇಶದಲ್ಲಿ ಆಸ್ಪತ್ರೆಯ ಸ್ವೀಪರ್/ ಭಿಕ್ಷುಕನ ಖಾತೆಯಲ್ಲಿ  ಬರೋಬ್ಬರಿ 70 ಲಕ್ಷ  ದೊರೆತ ಘಟನೆ   ನಡೆದಿದೆ. ಆ  ವ್ಯಕ್ತಿಯನ್ನು ಧೀರಜ್ ಎಂದು ಗುರುತಿಸಲಾಗಿದೆ. ಪ್ರಯಾಗರಾಜ್‍ನಲ್ಲಿರುವ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಆಸ್ಪತ್ರೆಯ ಕುಷ್ಠರೋಗ ವಿಭಾಗದಲ್ಲಿ ಕಸ ಗುಡಿಸುವ ಕೆಲಸ ಮಡುತ್ತಿದ್ದ ಧೀರಜ್ ಕ್ಷಯರೋಗದಿಂದ ಬಳಲುತ್ತಿದ್ದ ಈತ ಭಾನುವಾರ ನಸುಕಿನ ವೇಳೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು  ತಿಳಿದು  ಬಂದಿದೆ.

    ಧೀರಜ್ ಮರಣದ ಬಳಿಕ ಆತನ ಬ್ಯಾಂಕ್ ಖಾತೆಯಲ್ಲಿ ಸುಮಾರು 70 ಲಕ್ಷಕ್ಕೂ ಅಧಿಕ ಹಣ ಇರುವುದು ಬೆಳಕಿಗೆ ಬಂದಿದೆ. ಧೀರಜ್‍ನ ತಂದೆಯೂ ಇದೇ ಆಸ್ಪತ್ರೆಯಲ್ಲಿ ಸ್ವೀಪರ್ ಆಗಿದ್ದು, ಅವರ ಮರಣದ ನಂತರ ಧೀರಜ್‍ಗೆ ಈ ಕೆಲಸ ಸಿಕ್ಕಿತ್ತು ಎನ್ನಲಾಗಿದೆ.

         ತಂದೆ ಹಾಗೂ ಮಗ ಇಬ್ಬರೂ ತಮ್ಮ ಸಂಬಳ ಬರುವ ಬ್ಯಾಂಕ್ ಖಾತೆಯಿಂದ ಯಾವುದೇ ಹಣವನ್ನು ಡ್ರಾ ಮಾಡುತ್ತಿರಲಿಲ್ಲ. ಇದಕ್ಕೆ  ಬಲವಾದ ಕಾರಣವೂ  ಇತ್ತು ಎನ್ನಲಾಗಿದೆ.  ತಂದೆಯಂತೆ ಧೀರಜ್ ಕೂಡ ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಂದ ಹಣ ಕೇಳುತ್ತಾ, ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದನು.

ಧೀರಜ್ ತನ್ನ ಬ್ಯಾಂಕ್ ಖಾತೆಯಿಂದ ಒಂದು ಬಾರಿಯೂ ಹಣ ಡ್ರಾ ಮಾಡಿರಲಿಲ್ಲವಂತೆ, ತನ್ನ 80 ವರ್ಷದ ತಾಯಿಗೆ ಬರುವ ಪಿಂಚಣಿಯಿಂದ ಜೀವನ ನಡೆಸುತ್ತಿದ್ದರಂತೆ ಅಲ್ಲದೆ ಹೆಚ್ಚಿನ ಹಣದ ಅಗತ್ಯವಿದ್ದರೆ ಸ್ನೇಹಿತರು ಹಾಗೂ ಹೊರಗಡೆ ಭಿಕ್ಷೆ ಬೇಡುತ್ತಿದ್ದನು. ಹೀಗಾಗಿ ಧೀರಜ್ ಖಾತೆಯಲ್ಲಿ ಸುಮಾರು 70 ಲಕ್ಷಕ್ಕೂ ಅಧಿಕ ಹಣ ಉಳಿದುಕೊಂಡಿದೆ .

      ಧೀರಜ್ ಇನ್ನೂ ಮದುವೆಯಾಗಿರಲಿಲ್ಲ  ಯಾಕೆಂದರೆ ಒಂದು ವೇಳೆ ಮದುವೆಯಾದರೆ ಆ ಹೆಣ್ಣು ಹಣಕ್ಕೆ ಮರುಳಾಗುತ್ತಾಳೆ ಇಲ್ಲವೇ  ತನ್ನ ಹಣದೊಂದಿಗೆ ಎಸ್ಕೇಪ್ ಆಗಬಹುದು ಎಂದು ಧೀರಜ್ ಅಂದುಕೊಂಡಿದ್ದಾನೆ. ಹೀಗಾಗಿ ಅವನು ಇನ್ನೂ ಮದುವೆ ಯೋಚನೆ ಮಾಡಿರಲಿಲ್ಲ. ಅಲ್ಲದೆ ಆತ ಪ್ರತೀ ವರ್ಷನೂ ತೆರಿಗೆ ಕಟ್ಟುತ್ತಿದ್ದಾನೆ ಎಂದು ಸ್ನೇಹಿತನ ಮೂಲಕ ತಿಳಿದು ಬಂದಿದೆ.

ಕುಂದಾಪುರ:ಆರ್. ಎನ್. ಶೆಟ್ಟಿ‌ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ ದಿನಾಚರಣೆ

ಮೊಬೈಲ್, ಟಿ.ವಿ ಯಂಥ ಯಾವುದೇ ತಾಂತ್ರಿಕ ಉಪಕರಣಗಳಿಲ್ಲದ ಪ್ರಾಚೀನ ಕಾಲದಿಂದಲೂ ಗುರುವೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಶಕ್ತಿಯಾಗಿದ್ದರು. ಇಂದಿಗೂ ವಿದ್ಯಾರ್ಥಿ- ಶಿಕ್ಷಕ ಸಂಬಂಧ ನಾಜೂಕತೆಯಿಂದ ಕೂಡಿದ್ದಾಗಿದೆ. ಪ್ರತಿಯೊಂದು ವಿಷಯವನ್ನು ಕೂಲಂಕಷವಾಗಿ ಗಮನಿಸುವ ವಿದ್ಯಾರ್ಥಿಗಳಿಗೆ ಶಿಕ್ಷಕರೂ ಎಲ್ಲ ಆಯಾಮಗಳಿಂದಲೂ ಆದರ್ಶರಾಗಿರಬೇಕು’ಎಂದು ಆರ್‌. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ ದಿನಾಚರಣೆಯ ಪ್ರಯಕ್ತ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಸಂಖ್ಯಾಶಾಸ್ತ್ರ ಪಾಧ್ಯಾಪಕರಾದ ಪ್ರೊ.ಬಾಲಕೃಷ್ಣ ಭಟ್ ರವರು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಶಿಕ್ಷಕರು ತರಗತಿಯ ಒಳಗೂ- ಹೊರಗೂ ವಿದ್ಯಾರ್ಥಿಗಳ ಜೀವನವನ್ನು ಉತ್ತಮವಾಗಿ ರೂಪಿಸುವ ವಿಧಾನಗಳನ್ನು ತಿಳಿದುಕೊಳ್ಳುತ್ತಿರಬೇಕು ಎಂದು ಅಭಿಪ್ರಾಯ ಪಟ್ಟರು.ಮುಖ್ಯ ಅತಿಥಿಯವರಾದ ಶ್ರೀ ಬಾಲಕೃಷ್ಣ ಭಟ್ ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರಿಮತಿ ಅರುಣಾ ಐತಾಳ್ ಧನ್ಯವಾದ ಸಲ್ಲಿಸಿದರು‌. ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ‌‌‌ ನಾಗರತ್ನಾ ರವರು ಕಾರ್ಯಕ್ರಮ ನಿರೂಪಿಸಿದರು.



ಯಲ್ದೂರು ನ್ಯಾಷನಲ್ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಪೀಪಲ್ ಫಾರ್ ಇಂಡಿಯಾ ಸಂಸ್ಥೆಯಿಂದ ಉಚಿತ ನೋಟ್‍ಬುಕ್ ವಿತರಣೆ.

ಶ್ರೀನಿವಾಸಪುರ: ಶಿಕ್ಷಣ ತಜ್ಞ ಡಾ|| ಸರ್ವೇಪಲ್ಲಿ ರಾಧಕೃಷ್ಣನ್ ರವರು ಅನ್ನಕ್ಕೆ ಕಷ್ಟವಿದ್ದ ಕಾಲಘಟ್ಟದಲ್ಲಿ ವ್ಯಾಸಂಗ ಪಡೆದು ಅಧ್ಯಾಪಕರಾಗಿ ಸೇವೆ ಸಲ್ಲಿಸಿ ರಾಷ್ಟ್ರಪತಿ ಹುದ್ದೆ ಅಲಂಕರಿಸಿದರು. ಅವರ ಬೆಳವಣಿಗೆಯ ಹಿಂದೆ ಗುರುಗಳ ಶ್ರಮ ಇರುತ್ತದೆ ಎಂದು ಅರಿತು ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಮಾಡಿರುವುದು ಸಂತಸ ತಂದಿದೆ ಎಂದು ಡಾ|| ರಾಧಕೃಷ್ಣನ್ ರವರ ಮೊಮ್ಮಗ ಡಾ|| ಸುಬ್ರಮಣ್ಯಂಶರ್ಮ ಹೇಳಿದರು.
ತಾಲೂಕಿನ ಯಲ್ದೂರು ನ್ಯಾಷನಲ್ ಹೈಸ್ಕೂಲ್‍ನಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಪೀಪಲ್ ಫಾರ್ ಇಂಡಿಯಾ ಸಂಸ್ಥೆಯವರು ಶಾಲಾ ಮಕ್ಕಳಿಗೆ ಉಚಿತ ನೋಟ್‍ಬುಕ್ ವಿತರಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ತಾತ ರಾಧಕೃಷ್ಣನ್‍ರವರು ಹುಟ್ಟಿದ ಹಬ್ಬ ಪ್ರಪಂಚ ವ್ಯಾಪ್ತಿಯಲ್ಲಿ ಶಿಕ್ಷಕರ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತಿದೆ. ಯಾವುದೇ ವ್ಯಕ್ತಿಯಾದರೂ ಜೀವಿತಾವಧಿಯಲ್ಲಿ ಮಾಡಿದ ಉತ್ತಮ ಸೇವೆ ಸಾಧನೆಯಿಂದ ಇಂತಹ ಸ್ಮರಣಿಯ ಕಾರ್ಯಕ್ರಮಗಳು ಮಾಡಲು ಸಾಧ್ಯವಾಗುತ್ತದೆ. ಅವರ ವ್ಯಾಸಂಗದ ದಿನಗಳಲ್ಲಿ ಪಡೆದ ಕಷ್ಟಗಳ ಬಗ್ಗೆ ನಮ್ಮ ಹಿರಿಯರು ತಿಳಿ ಹೇಳಿದ್ದಾರೆ. ಆದರೂ ಯಾವುದಕ್ಕೂ ಎದೆಗುಂದದೆ ಶ್ರದ್ದೆಯಿಂದ ದೇಶದ ಸೇವೆ ಮಾಡಲು ಪಣ ತೊಟ್ಟಿದ್ದ ರಾಧಕೃಷ್ಣನ್ ಕುಟುಂಬದಲ್ಲಿ ಹುಟ್ಟಿರುವುದು ನಮ್ಮ ಸೌಭಾಗ್ಯ ನಾವು ಮಾಡುವ ಉತ್ತಮ ಕೆಲಸಗಳ ಮೇಲೆ ಸಮಾಜದ ಅನುಭೂತಿ ಸಿಗುತ್ತದೆ. ಗುರುಗಳು ಯಾವುದೇ ಪ್ರತಿಫಲ ಆಪೇಕ್ಷೆ ಇಲ್ಲದೆ ಸೇವೆ ಮಾಡುತ್ತಾರೆ ಆದ್ದರಿಂದ ವಿದ್ಯಾರ್ಥಿಗಳು ಮೊದಲು ತಂದೆ-ತಾಯಿಯನ್ನು ಸಂಸ್ಕಾರದಿಂದ ಗೌರವಿಸಬೇಕು ನಂತರ ಶಿಕ್ಷಕರನ್ನು ಗೌರವದಿಂದ ಕಾಣಬೇಕು ಎಲ್ಲಿ ಶಾಲೆ ಮತ್ತು ಅಧ್ಯಾಪಕರು ಇರುತ್ತಾರೋ ಅಲ್ಲಿ ರಾಧಕೃಷ್ಣನ್ ಇರುತ್ತಾರೆ. ಅವರು ಇರುವ ಕಡೆ ಅವರ ಮನೆತನದವರು ನಾವು ಇರುತ್ತೇವೆ ಶಿಕ್ಷಣಕ್ಕಾಗಿ ಯಾವ ನೆರವು ಬೇಕಾದರೂ ನೀಡುತ್ತೇವೆ ಎಂದು ತಿಳಿಸಿ ಭವಿಷ್ಯದ ಭಾರತಕ್ಕೆ ನೀವು ಕನಸಿನ ವಿದ್ಯಾರ್ಥಿಗಳು ಆದ್ದರಿಂದ ಎಲ್ಲರೂ ಸತ್ಪಜೆಗಳಾಗಿ ಬೆಳೆಯಬೇಕು ಎಂದು ಅಶಿಸಿದರು.
ಡಾ|| ವೈ.ವಿ. ವೆಂಕಟಾಚಲ ಮಾತನಾಡಿ ನಮ್ಮ ಗುಣಲಕ್ಷಣಗಳು ವಂಶಪರಂಪರ್ಯವಾಗಿ ಬರುತ್ತದೆ ಅದೇ ರೀತಿ ಡಾ|| ಸರ್ವೇಪಲ್ಲಿ ರಾಧಕೃಷ್ಣನ್ ವಂಶದ ಕುಡಿ ಡಾ|| ಸುವ್ರಮಣ್ಯಂಶರ್ಮ ರವರಲ್ಲಿ ಕಾಣಬಹುದು ಅವರ ತಾತನ ತತ್ವ ಸಿದ್ದಾಂತಗಳಂತೆ ಶಿಕ್ಷಣ ಮತ್ತು ಶಿಕ್ಷಕರಿಗೆ ಗೌರವ ನೀಡುವ ನಿಟ್ಟಿನಲ್ಲಿ ಗಡಿಯಲ್ಲಿರುವ ನಮ್ಮ ತಾಲೂಕಿಗೆ ಬಂದಿರುವುದು ಅವರಿಗೆ ಶಿಕ್ಷಣದ ಬಗ್ಗೆ ಇರುವ ಕಾಳಜಿ ತೋರುತ್ತದೆ, ಜಿಲ್ಲೆಯಲ್ಲಿ ಜಲ್ವಂತ ಸಮಸ್ಯೆಗಳ ಬಗ್ಗೆಯೂ ಯಾವುದೇ ಕೀಳರಿಮೆ ಇಲ್ಲದೆ ಉತ್ತಮ ವ್ಯಾಸಂಗ ಮಾಡುತ್ತಿದ್ದಾರೆ. ಶ್ರದ್ದೆಯಿಂದ ಶಿಕ್ಷಣ ಪಡೆದರೆ ಜೀವನದಲ್ಲಿ ಎಲ್ಲರಿಗೂ ಎಲ್ಲ ಅವಕಾಶಗಳು ಲಭಿಸುತ್ತದೆ. ಕೇವಲ ಕುಟುಂಬದ ಹಿನ್ನಲೆಯೇ ಮುಖ್ಯವಲ್ಲ ಶ್ರದ್ದೆಯಿಂದ ವ್ಯಾಸಂಗ ಮಾಡಿದರೆ ನಾವು ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಬದುಕಬಹುದು ಎಂದು ಹೇಳಿದರು.
ಮಾಜಿ ಸಂಸದ ಡಾ|| ವೆಂಕಟೇಶ್ ಮಾತನಾಡಿ ಮನುಷ್ಯ ಜನ್ಮ ತಾಳಿದರೆ ಪ್ರತಿಯೊಬ್ಬರಿಗೂ ಯಾವುದೋ ಒಂದು ಗುರಿ ಮುಟ್ಟಬೇಕಾದರೆ ಉತ್ತಮ ಕೆಲಸದಿಂದ, ಜ್ಞಾನದಿಂದ, ನಂಬಿಕೆಯಿಂದ ಹಾಗೂ ಶ್ರದ್ದೆಯಿಂದ ಗುರಿ ಸಾಧಿಸಲು ಸಾದ್ಯವಿದೆ. ಈ ಎಲ್ಲದ್ದಕ್ಕೂ ಮೂಲ ತಂದೆ-ತಾಯಿ ಮತ್ತು ಶಿಕ್ಷಕರ ಪ್ರೇರಣೆ ಮುಖ್ಯವಾಗಿರುತ್ತದೆ ಆದ್ದರಿಂದ ತಂದೆ-ತಾಯಿ ಮತ್ತು ಗುರುಗಳನ್ನು ನಿರಂತರವಾಗಿ ಶ್ರದ್ದಾಭಕ್ತಿಯಿಂದ ಗೌರವಿಸಬೇಕು.
ಈ ಸಂಧರ್ಭದಲ್ಲಿ ಪೀಪಲ್ ಪಾರ್ ಇಂಡಿಯಾ ಸಂಸ್ಥೆಯ ಪ್ರಶಾಂತ್‍ಸುಬ್ರಮಣಿ, ಆಮ್ ಆದ್ಮಿ ಪಕ್ಷದ ಬಾಬುರೆಡ್ಡಿ, ನಿವೃತ್ತ ಮುಖ್ಯ ಶಿಕ್ಷಕ ಕೆ.ಪಿ. ಕೃಷ್ಣಪ್ಪ, ನ್ಯಾಷನಲ್ ಹೈಸ್ಕೂಲಿನ ಮುಖ್ಯ ಶಿಕ್ಷಕ ಮೋಕ್ಷಲಿಂಗರಾಧ್ಯ, ಶಿಕ್ಷಕರಾದ ರಮೇಶ್‍ಬಾಬು, ಆನಂದ್, ಇ.ಸಿ.ಓ ಹನುಮೇಗೌಡ ಇತರರು ಇದ್ದರು.

ಗೋಕುಲ ಮಿತ್ರಬಳಗದಿಂದ ಕೆ.ಎಸ್.ಗಣೇಶ್ ಹುಟ್ಟುಹಬ್ಬ ಆಚರಣೆ: ಕಮಲಾ ಮಹಡಿ ಶಾಲಾ ಮಕ್ಕಳಿಗೆ ಸೇವಾದಳ ಸಮವಸ್ತ್ರ ವಿತರಣೆ

ಕೋಲಾರ:- ಒಳ್ಳೆ ವ್ಯಕ್ತಿತ್ವ, ಗುಣ, ಸ್ವಂತ ಸಾಮಥ್ರ್ಯ ಹಾಗೂ ದುಡಿಮೆಯಿಂದ ಬೆಳವಣಿಗೆ ಕಂಡಿರುವ ಗಣೇಶ್ ಅವರಿಗೆ ದೇವರು ಉತ್ತಮ ಆರೋಗ್ಯ,ಐಶ್ವರ್ಯ,ಉನ್ನತಿ ನೀಡಲಿ ಎಂದು ಗೋಕುಲ ಮಿತ್ರಬಳಗದ ಸದಸ್ಯರು ಹಾರೈಸಿದರು.
ನಗರದ ಕಮಲಾಮಹಡಿ ಶಾಲೆಯಲ್ಲಿ ಗೋಕುಲ ಮಿತ್ರ ಬಳಗ ಹಮ್ಮಿಕೊಂಡಿದ್ದ ಕೋಲಾರ ಕಾರ್ಯನಿರತ ಪತ್ರಕರ್ತರ ವಿವಿದ್ಧೋದ್ದೇಶ ಸಹಕಾರ ಸಂಘದ ಜಿಲ್ಲಾಧ್ಯಕ್ಷ ಹಾಗೂ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಅವರ ಹುಟ್ಟುಹಬ್ಬದ ಆಚರಣೆ ಹಿನ್ನಲೆಯಲ್ಲಿ ಕಮಲಾಮಹಡಿ ಶಾಲಾ ಮಕ್ಕಳಿಗೆ ಸೇವಾದಳ ಸಮವಸ್ತ್ರ ವಿತರಿಸಿ ಬಳಗದ ಹಲವಾರು ಮುಖಂಡರು ಶುಭ ಕೋರಿದರು.
ಮುಖಂಡರಾದ ಕೆ.ಜಯದೇವ್,ಮುನಿವೆಂಕಟಯಾದವ್,ಶಾಲೆಯ ಮುಖ್ಯಶಿಕ್ಷಕ ರಾಮಪ್ಪ, ಶಿಕ್ಷಕ ಮುನಿರಾಜು, ಚಲಪತಿ,ಸೇವಾದಳ ಕಾರ್ಯದರ್ಶಿ ಸುಧಾಕರ್,ಪಿಡಿಒ ನಾಗರಾಜ್ ಮತ್ತಿತರರು ಮಾತನಾಡಿ, ಯಾವುದೇ ವ್ಯಕ್ತಿ ಆತ್ಮವಿಮರ್ಶೆ ಮೂಲಕ ಗಟ್ಟಿತನವನ್ನು ಕಾಪಾಡಿಕೊಂಡು ಇತರರಿಗೆ ಆದರ್ಶ ವ್ಯಕ್ತಿಗಳಾಗುತ್ತಾರೆ, ಅಂತಹವರ ಸಾಲಿನಲ್ಲಿ ಅತಿ ಹೆಚ್ಚು ಸ್ನೇಹಿತರನ್ನು ಹೊಂದಿರುವ ಗಣೇಶ್ ಒಬ್ಬರು ಎಂದು ತಿಳಿಸಿದರು.
ಪತ್ರಿಕಾರಂಗದಲ್ಲಿ ಇವರ ಛಾಪು ಅಜರಾಮರ, ಅವರು ವೃತ್ತಿಯಲ್ಲಿ ಇಟ್ಟಿರುವ ವಿಶ್ವಾಸವನ್ನು ಕಾಪಾಡಿಕೊಂಡು ಹೋಗಬೇಕು. ತಂದೆ ತಾಯಿಯ ಆಶೀರ್ವಾದ ಒಂದಿದ್ದರೆ ಏನು ಬೇಕಾದರೂ ಸಾಧಿಸಬಹುದು. ಇದಕ್ಕೆ ತಾಜಾ ಉದಾಹರಣೆ ಇವರೇ ಎಂದು ಹೇಳಿದರು.
ಕೇಕ್ ಕತ್ತರಿಸುವ ಮೂಲಕ ಜನ್ಮದಿನವನ್ನು ಆಚರಿಸಿ ಭಾರತ ಸೇವಾದಳ ಜಿಲ್ಲಾ ಘಟಕ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ತಮ್ಮ ಮೇಲಿನ ಅಭಿಮಾನದ ಕುರಿತು ಧನ್ಯವಾದ ಸಲ್ಲಿಸಿ, ಈ ಸ್ನೇಹ ಹಾಗೆಯೇ ಮುಂದುವರೆಯಲಿ ಎಂದು ಆಶಿಸಿದರು.

ಕೋರ್ಟ್ ಆನಂದ್‍ಗೆ ಆತ್ಮೀಯ ಸನ್ಮಾನ


ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ನಿವೃತ್ತರಾದ ಕೋಟೆಯ ಸ್ನೇಹ ಜೀವಿ ಆನಂದ್ ಅವರನ್ನು ಗೋಕುಲ ಮಿತ್ರ ಬಳಗದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿದ್ಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಕೋ.ನಾಮಂಜುನಾಥ್, ಗೋಕುಲ ಮಿತ್ರ ಬಳಗ ಸದಸ್ಯರಾದ ಮಣಿ,ಜ್ಯೂಸ್ ನಾರಾಯನಸ್ವಾಮಿ, ಯಲ್ಲಪ್ಪ, ಮಲ್ಲಿಕಾ ಪ್ರಕಾಶ್,ಚಾನ್ ಪಾಷಾ, ಬಜರಂಗದಳ ಬಾಲಾಜಿ,ವೆಂಕಟೇಶ್‍ಬಾಬಾ, ಹಾರೋಹಳ್ಳಿ ದೇವುಡು ರವಿ, ಆಸೀಫ್, ಶಂಕರ್, ರಾಜು, ಸರ್ವೋದಯ, ಬುಜ್ಜಿ, ಗೋಪಾಲ್‍ಕೃಷ್ಣ, ಗಂಗಮ್ಮನಪಾಳ್ಯ ರಾಮಯ್ಯ, ವರದೇನಹಳ್ಳಿ ವೆಂಕಟೇಶ್, ಮಂಚನಬಲೆ ಶ್ರೀನಿವಾಸ್,ಕಿಲಾರಿಪೇಟೆ ಕೃಷ್ಣಮೂರ್ತಿ, ಕ್ಯಾಪ್ಟನ್ ಮಂಜು, ನಾನಿ,ಶಿಕ್ಷಕ ಶ್ರೀರಾಮ್,ಫಲ್ಗುಣ,ಸ್ವಾಮಿ,ಗಿರಿ,ವಿನಯ್,ದಿಲೀಪ್‍ಕುಮಾರ್,ಲೋಕೇಶ್,ಡೆಕೋರೇಷನ್ ಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.