ಕುಂದಾಪುರ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ

ಕುಂದಾಪುರ : ವಿದ್ಯಾರ್ಥಿಗಳು ಕ್ರೀಡಾ ಸ್ಪೂರ್ತಿಯಿಂದ ಉತ್ಸಾಹದಲ್ಲಿ ಕ್ರೀಡೆಯಲ್ಲಿ ಭಾಗವಹಿಸಬೇಕು. ಜೀವನದಲ್ಲಿ ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆ ತುಂಬಾ ಸಹಕಾರಿ. ಸ್ಪರ್ಧೆಯಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಕುಂದಾಪುರ ಹೋಲಿ ರೋಜರಿ ಚರ್ಚ್ ಉಪಾಧ್ಯಕ್ಷ, ನಿವೃತ್ತ ಮುಖ್ಯ ಶಿಕ್ಷಕ ಲೂಯಿಸ್ ಜೆ.ಫೆರ್ನಾಂಡೀಸ್ ಹೇಳಿದರು.
ಅವರು ಕುಂದಾಪುರ ಗಾಂಧಿ ಮೈದಾನದಲ್ಲಿ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಪಥಸಂಚಲನೆಯ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ಶಾಲಾ ಸಂಚಾಲಕರೂ,ಕುಂದಾಪುರ ವಲಯದ ಪ್ರಧಾನ ಧರ್ಮಗುರು ವಂ.ಫಾ.ಸ್ಟ್ಯಾನಿ ತಾವ್ರೊ ಸಮಾರಂಭದ ಅಧ್ಯಕ್ಷತೆ ವಹಿಸಿ ಕ್ರೀಡಾಧ್ವಜ ಅರಳಿಸಿ ಮಾತನಾಡಿದರು. ಸ್ವೀಕರಿಸಿದರು. ಕುಂದಾಪುರ ಸಿಟಿ ಜೆಸಿಐ ಅಧ್ಯಕ್ಷೆ ಡಾ.ಸೋನಿ ಕ್ರೀಡಾಕೂಟ ಉದ್ಘಾಟಿಸಿದರು. ಕುಂದಾಪುರ ಹೋಲಿ ರೋಜರಿ ಚರ್ಚ್‍ನ ಸಹಾಯಕ ಧರ್ಮಗುರು ಫಾ.ಅಶ್ವಿನ್, ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಸಾಗರ್ ಕ್ರೀಡಾ ಜ್ಯೋತಿಯನ್ನು ಬೆಳೆಗಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಮೂಹ ಸಂಪನ್ಮೂಲ ಅಧಿಕಾರಿ ಶಂಕರ್ ಶೆಟ್ಟಿ,ಸೈಂಟ್ ಮೇರಿಸ್ ಪ್ರೌಢಶಾಲಾ ಆಡಳಿತ ಮಂಡಳಿಯ ಸದಸ್ಯೆ ಶಾಲೆಟ್ ರೆಬೆಲ್ಲೋ, ಸೈಂಟ್ ಮೇರಿಸ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಡೊರೊತಿ ಸುವಾರಿಸ್, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ತೆರೇಜಾ ಶಾಂತಿ, ಹೋಲಿ ರೋಜರಿ ಕಿಂಡರ್ ಗಾಟೀನ್ ಮುಖ್ಯ ಶಿಕ್ಷಕಿ ಶೈಲಾ ಲೂಯಿಸ್, ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಜೋನಿಟಾ ಮೆಂಡೊನ್ಸಾಪ್ರತಿಜ್ಞಾವಿಧಿ ಭೋದಿಸಿದನು.
ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ರೇಷ್ಮಾ ಫೆರ್ನಾಂಡೀಸ್ ಸ್ವಾಗತಿಸಿದರು. ಸೈಂಟ್ ಮೇರಿಸ್ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ ವಂದಿಸಿದರು. ಶಿಕ್ಷಕರಾದ ಚಂದ್ರಶೇಖರ ಬೀಜಾಡಿ,ನಾಗರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ವಿಶ್ವ ಕಂಪ್ಯೂಟರ್ ಸಾಕ್ಷರತೆ ದಿನಾಚರಣೆ

ಶಿರ್ವ: ಪ್ರಸ್ತುತ ತಾಂತ್ರಿಕ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಕಾರ್ಯಗಳು ಎಲ್ಲಾ ಕ್ಷೇತ್ರಗಳಲ್ಲಿ ಸುಲಭವಾಗಿ ನಡೆಯಲು ಮತ್ತು ಅತ್ಯಂತ ವೇಗವಾಗಿ ಪರಿಣಾಮಕಾರಿಯಾಗಿ ಮಾನವನ ಕೆಲಸವನ್ನು ಕಂಪ್ಯೂಟರ್ ಬಳಕೆಯಿಂದ ಸಾಗುತ್ತಿದೆ. ಇಂದಿನ ಯುವಕರಲ್ಲಿ ಕಲಿಕೆಯ ಜೊತೆಗೆ ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳುವ ಮೂಲಕ ಮುಂದೆ ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ರೀತಿಯ ಬೆಳವಣಿಗೆ ಕಾಣಿಸಬಹು ದು. ಕಲಿಕೆಗೆ ವಯಸ್ಸು ಮುಖ್ಯ ಅಲ್ಲ ಮನಸು ಮುಖ್ಯ ಎಂದು ಇಲ್ಲಿನ ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗ ಹಾಗೂ ಕಂಪ್ಯೂಟರ್ ಸಾಕ್ಷರತ ಕೋಶ ಜಂಟಿಯಾಗಿ ಏರ್ಪಡಿಸಿದ ವಿಶ್ವ ಕಂಪ್ಯೂಟರ್ ಸಾಕ್ಷರತೆ ದಿನಾಚರಣೆ ದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜಿನ ಕಚೇರಿ ದ್ವಿತೀಯ ದರ್ಜೆಯ ಸಹಾಯಕಿ ಶ್ರೀಮತಿ ಜಾಕ್ಲೈನ್ ​​ಮೆಂಡೋನ್ಸಾ ರವರು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ತಮ್ಮ ಅನುಭವವನ್ನು ವ್ಯಕ್ತಪಡಿಸಿದರು.
ಈ ದಿನದ ಪ್ರಯುಕ್ತ ಹಲವು ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ, ಮುಂದಿನ ಉದ್ಯೋಗ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ನಿರಂತರ ಕಂಪ್ಯೂಟರ್ ಕಲಿಕೆಯನ್ನು ವಿದ್ಯಾರ್ಥಿಗಳು ಕಾಲೇಜು ಹಂತಗಳಲ್ಲಿ ಅಭ್ಯಾಸನವನ್ನು ಮಾಡಬೇಕೆಂದು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡಿದರು.

ಶೈಕ್ಷಣಿಕ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಕಲಿಕೆ ಇಂದಿನ ದಿನ ಅತ್ಯಂತ ಪ್ರಮುಖವಾಗಿದೆ.ಇದರ ಪ್ರಯುಕ್ತ ಕಾಲೇಜಿನಲ್ಲಿ ವಿಭಾಗದ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಬೇಸಿಕ್ ಮತ್ತು ಟ್ಯಾಲಿ ಕೋರ್ಸುಗಳ ತರಬೇತಿ ನೀಡಿ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಇದರ ಪ್ರಯೋಜನವನ್ನು ಪಡೆದುಕೊಂಡ ಮುಂದಿನ ಉದ್ಯೋಗ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಇಂಥ ಸರ್ಟಿಫಿಕೇಟ್ ಗಳು ವಿದ್ಯಾರ್ಥಿಗಳಿಗೆ ಸಹಾಯಕಾರಿ ಎಂದು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಕೆ.ಪ್ರವೀಣ್ ಕುಮಾರ್ ಅವರು ಮಾತನಾಡಿದರು

ದ್ವಿತೀಯ ಬಿಎ ವಿದ್ಯಾರ್ಥಿ ಪವನ್ ಕುಮಾರ್ ತಮ್ಮ ಕಂಪ್ಯೂಟರ್ ಕಲಿಕೆಯ ಜ್ಞಾನದ ಬಗ್ಗೆ ಅನಿಸಿಕೆಯನ್ನು ವ್ಯಕ್ತಪಡಿಸಿದರು .
ಪ್ರಥಮ ಬಿಸಿಎ ವಿದ್ಯಾರ್ಥಿ ಆದಿತ್ಯ ಶೆಟ್ಟಿಗಾರ ಕಾರ್ಯಕ್ರಮದ ಮುಖ್ಯ ಉದ್ದೇಶವನ್ನು ತಿಳಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕಿ ಸಂಗೀತ ಪೂಜಾರಿ, ಪ್ರಿಯಾಂಕ, ಅಧ್ಯಾಪಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನುಕ್ ನಾಯಕ್ ಮತ್ತು ಅಲ್ಲಿಸ್ಟರ್ ಸುಜಾ ಡಿಸೋಜ ಕಾರ್ಯಕ್ರಮಕ್ಕೆ ಸಹಕರಿಸಿದರು. ಕಂಪ್ಯೂಟರ್ ಸಾಕ್ಷರತೆ ಕೋಶನ ಸಂಯೋಜಕಿ ಶ್ರೀಮತಿ ದಿವ್ಯಶ್ರೀ ರವರು ಸ್ವಾಗತಿಸಿ, ಕು. ಸೆಲ್ಮಾ ಪಿಂಟು ವಂದಿಸಿದರು. ಕು. ರಕ್ಷಾ ಮತ್ತು ಬಳಗ ಪ್ರಾರ್ಥಿಸಿ ಕು. ಶ್ರೇಯ ಸಫಲಿಗ ಕಾರ್ಯಕ್ರಮ ನಿರೂಪಿಸಿದರು

ಕುಂದಾಪುರ: ಜೆಇ ಲಸಿಕಾ ಅಭಿಯಾನಕ್ಕೆ ಚಾಲನೆ

ಕೋಟ:ಕರ್ನಾಟಕದ ಆಯ್ದ 10 ಜಿಲ್ಲೆಗಳಲ್ಲಿ ಜೆಇ ಲಸಿಕಾಕರಣ ಅಭಿಯಾನ ನಡೆಯುತ್ತಿದ್ದು, ಇದರಲ್ಲಿ 1ರಿಂದ 15 ವರ್ಷಗಳವರೆಗಿನ ಎಲ್ಲಾ ಮಕ್ಕಳಿಗೂ ಜೆಸಿ ಲಸಿಕೆಯನ್ನು ಉಚಿತವಾಗಿ ಸರಕಾರ ನೀಡುತ್ತಿದೆ ಎಂದು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಸಿ.ಎಸ್ ಹೇಳಿದರು.
ಅವರು ಸೋಮವಾರ ಉಡುಪಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ರಾಷ್ಟ್ರೀಯ ಆರೋಗ್ಯ ಅಭಿಯಾನ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ,ಸೈಂಟ್ ಮೇರಿಸ್ ಪ್ರೌಢಶಾಲೆ ಕುಂದಾಪುರದ ಆಶ್ರಯದಲ್ಲಿ ಜೆಇ ಲಸಿಕಾ ಅಭಿಯಾನಕ್ಕೆ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಚಾಲನೆ‌ ನೀಡಿ ಮಾತನಾಡಿದರು. ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ‌ವೈದ್ಯೆ ಡಾ.ದೀಪಾ‌ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸೈಂಟ್ ಮೇರಿಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ‌ ವಹಿಸಿದ್ದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಬಿ.ಐ.ಇ.ಆರ್.ಟಿಯ ಶಂಕರ್ ಕುಲಾಲ್,ಸಿಆರ್ ಪಿ ಶಂಕರ ಶೆಟ್ಟಿ,ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಡೋರಾ ಸುವಾರಿಸ್,ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ತೆರೇಜಾ ಶಾಂತಿ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ಚಂದ್ರ ಶೇಖರ ಬೀಜಾಡಿ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.

ಉರ್ದು ದಿಲ್ ಹೈ ಕನ್ನಡ ಧಡ್ಕನ್ ಹೈ ; ಸ.ರಘುನಾಥ

ಕೋಲಾರ ಡಿಸೆಂಬರ್ 4 : ಕೆ.ಎಸ್.ನಿಸಾರ್ ಅಹಮ್ಮದ್ ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಅವರು ಕನ್ನಡವನ್ನು ಬಳಸಿದಷ್ಟು ಚೆನ್ನಾಗಿ ಬೇರಾರೂ ಬಳಸಲಿಲ್ಲ ಎಂದು ಹಿರಿಯ ಕವಿ ಸ.ರಘುನಾಥ ಅಭಿಪ್ರಾಯ ಪಟ್ಟರು
ಕೋಲಾರದ ಅಲ್-ಅಮೀನ್ ಅಂಜುಮನ್ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೋಲಾರ ಜಿಲ್ಲಾ ಘಟಕವು ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಕಾವ್ಯ ಕಲರವ ಕಾರ್ಯಕ್ರಮದಲ್ಲಿ ಕೆ.ಎಸ್.ನಿಸಾರ್ ಅಹಮ್ಮದ್ ಅವರ ನಿತ್ಯೋತ್ಸವ ಕನ್ನಡ ಕವಿತೆ ಮತ್ತು ಉರ್ದು ಅನುವಾದದ ಕವಿತೆಗಳ ಪುಸ್ತಿಕೆಯನ್ನು ಮಕ್ಕಳಿಗೆ ನೀಡಿ ಆ ಕನ್ನಡ ಕವಿತೆಯನ್ನು ಆಫ್ರೀನ್ ತಾಜ್ ಹಾಗೂ ಉರ್ದು ಅನುವಾದ ಕವಿತೆಯನ್ನು ಸೈಯದ ಅಸ್ಫಿಯಾ ಅವರು ಓದುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಉರ್ದು ದಿಲ್ ಹೈ ಕನ್ನಡ ಧಡ್ಕನ್ ಹೈ. ಅಲ್-ಅಮೀನ್ ವಿದ್ಯಾಸಂಸ್ಥೆಗಳಲ್ಲಿ ಉರ್ದು ಕಲಿಯುತ್ತಿರುವ ಮುಸ್ಲಿಂ ಮಕ್ಕಳು ಕನ್ನಡದ ಕಾರ್ಯಕ್ರಮವನ್ನು ಇಷ್ಟು ಅಚ್ಚುಕಟ್ಟಾಗಿ ಮಾಡುತ್ತಿರುವುದನ್ನು ಕಂಡರೆ ನನಗೆ ನಿಜಕ್ಕೂ ಸಂತೋಷವಾಗುತ್ತಿದೆ. ಉರ್ದು ಭಾಷೆ ಪಾಕಿಸ್ತಾನ್, ಆಫ್ಗಾನಿಸ್ತಾನ್, ಅರಬ್ಬಿ ಕಂಟ್ರಿಗಳಲ್ಲಿ ಹುಟ್ಟಿದ್ದಲ್ಲ. ಅದು ನಮ್ಮ ಭಾಷೆ. ಈ ನೆಲದ ಭಾಷೆ. ಉರ್ದು ಭಾಷೆಯ ಹುಟ್ಟು ಭಾರತ. ಅದರಲ್ಲೂ ಉತ್ತರ ಭಾರತ. ಭಾರತದಲ್ಲಿ ಹುಟ್ಟಿ ಬೆಳೆದು ಜಗತ್ತಿನಾದ್ಯಂತ ತನ್ನ ಸೊಬಗನ್ನು ಪಸರಿಸಿರುವ ಭಾಷೆ. ಉರ್ದುವಿನ ಗಜಲ್ ಸಾಹಿತ್ಯ ಯಾರಿಗೆತಾನೇ ಇಷ್ಟವಾಗುವುದಿಲ್ಲ. ಉರ್ದು ಮತ್ತು ಕನ್ನಡ ಭಾಷೆಯನ್ನು ಒಟ್ಟೊಟ್ಟಿಗೆ ಕಲಿಯುತ್ತಿರುವ ಇಲ್ಲಿನ ಮಕ್ಕಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಯಲ್ಲಿ ಭಾಷಾಸಾಮರಸ್ಯವಿದೆ ಎನ್ನುವುದಕ್ಕೆ ಈ ಕನ್ನಡದ ಕಾರ್ಯಕ್ರಮವೇ ಸಾಕ್ಷಿ. ನಾನು ಕುರಾನ್, ಬೈಬಲ್ ಮತ್ತು ಭಗವದ್ಗೀತೆಯನ್ನು ಮೂರು ಮೂರು ಬಾರಿ ಓದಿದ್ದೇನೆ. ಅವುಗಳನ್ನು ಒಟ್ಟಿಗೆ ಒಂದೇ ಕಡೆ ಇಟ್ಟಿದ್ದೇನೆ ಎಂದು ಹೇಳಿದರು.
ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕಾ.ಹು.ಚಾನ್‍ಪಾಷ ಮಾತನಾಡಿ “ಮಕ್ಕಳಲ್ಲಿ ಶಾಲಾ ಕಲಿಕೆಯ ಜೊತೆಜೊತೆಗೆ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವುದು ಇಂದಿನ ಅಗತ್ಯತೆಯಾಗಿದೆ. ಮೊಬೈಲ್‍ನಲ್ಲಿ ಮುಳುಗಿರುವ ಮಕ್ಕಳನ್ನು ಸಾಹಿತ್ಯದ ಕಡೆಗೆ ತರುವ ನಿಟ್ಟಿನಲ್ಲಿ ಮಕ್ಕಳ ಪದ್ಯಗಳನ್ನು ಅವರ ಕೈಗಳಿಗೆ ಕೊಟ್ಟು ಓದಿಸುವ ಕಾರ್ಯಾಗಾರವಾಗಿ ಮಕ್ಕಳ ಸಾಹಿತ್ಯ ಪರಿಷತ್ತು ಕೆಲಸ ಮಾಡುತ್ತ ಬಂದಿದೆ. ಇಲ್ಲಿ ಉರ್ದು ಕಲಿಯುತ್ತಿರುವ ಮಕ್ಕಳಿಂದ ಕನ್ನಡ ಪದ್ಯಗಳನ್ನು ಓದಿಸುವ ಮೂಲಕ ಸಾಹಿತ್ಯದ ಕಡೆಗೆ ಹೊರಳಿಸುವ ಕಾರ್ಯಕ್ರಮವಾಗಿ ಮಕ್ಕಳ ಕಾವ್ಯ ಕಲರವವನ್ನು ಏರ್ಪಡಿಸಲಾಗಿದೆ ಎಂದರು.
ಕರ್ನಾಟಕ ಶಿಕ್ಷಕರ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಬಿ.ಶಿವಕುಮಾರ್ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿಗಳ ಎಂಟು ಭಾವಚಿತ್ರಗಳ ಪೋಟೊಗಳನ್ನು ಅಲ್-ಅಮೀನ್ ಅಂಜುಮನ್ ಪ್ರೌಢಶಾಲೆಗೆ ಕೊಟ್ಟು ಮಾತನಾಡಿ ಸಾಹಿತಿಗಳ ಭಾವಚಿತ್ರಗಳ ಪೋಟೊಗಳನ್ನು ಗಡಿನಾಡಿನ ಶಾಲೆಗಳಿಗೆ, ಅಲ್ಪಸಂಖ್ಯಾತ ಶಾಲೆಗಳಿಗೆ ಅಲ್ಲದೆ ಹಲವಾರು ಶಾಲೆಗಳಿಗೆ ಕೊಡುವುದರ ಮೂಲಕ ಮಕ್ಕಳಲ್ಲಿ ಕನ್ನಡ ಭಾಷೆ ಸಾಹಿತ್ಯದ ಒಲವನ್ನು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿಯನ್ನು ಬೆಳೆಸಲು ಮಕ್ಕಳ ಸಾಹಿತ್ಯ ಕಾರ್ಯಗಾರವನ್ನು ಸಹ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಲೇಖಕ ಪುರುಷೋತ್ತಮರಾವ್ ಮಾತನಾಡಿ ಇವತ್ತಿನ ಕಾರ್ಯಕ್ರಮದಲ್ಲಿ ಮಕ್ಕಳೇ ನಿರೂಪಣೆ, ಸ್ವಾಗತ, ಹಾಡುಗಾರಿಕೆ ಎಲ್ಲವೂ ಮಕ್ಕಳೇ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ. ಮಕ್ಕಳನ್ನು ಹೀಗೆ ತೊಡಗಿಸಿಕೊಳ್ಳುವುದರಿಂದ ಅವರಲ್ಲಿ ಭೌದ್ಧಿಕಶಕ್ತಿ ಬೆಳೆಯುತ್ತದೆ. ಮಕ್ಕಳಲ್ಲಿ ಕನ್ನಡ ಪ್ರೇಮ, ವಿಜ್ಞಾನ ಮತ್ತು ಪರಿಸರದ ಅರಿವು ಮೂಡಿಸುವುದರಿಂದ ಅವರಲ್ಲಿ ಕ್ರಿಯಾತ್ಮಕ ಶಕ್ತಿ ಬೆಳೆಯುತ್ತದೆ. ಮರ ಗಿಡಗಳನ್ನು ಬೆಳೆಸುವ ಆಸಕ್ತಿ ಮೂಡುತ್ತದೆ. ಪರಿಸರದೊಂದಿಗೆ ಭಾವನಾತ್ಮಕ ಸಂಬಂಧ ಏರ್ಪಡುತ್ತದೆ. ಇವತ್ತು ವಿಜ್ಞಾನ ಬೆಳೆಯುತ್ತಿದೆ ವೈಜ್ಞಾನಿಕ ಮನೋಭಾವ ಬೆಳೆಯುತ್ತಿಲ್ಲ. ಇದು ದೊಡ್ಡ ದುರಂತ ಎಂದು ಹೇಳಿದರು.
ಜಾಬಿರ್ ಅಹಮ್ಮದ್ ಮಾತನಾಡಿ ಪ್ರತಿಯೊಬ್ಬ ಮಗುವಿನಲ್ಲೂ ಪ್ರತಿಭೆ ಇರುತ್ತದೆ. ಅವರನ್ನು ಗುರುತಿಸುವ ಕಾರ್ಯವಾಗಬೇಕಷ್ಟೆ. ಮಕ್ಕಳಲ್ಲಿ ಸಾಹಿತ್ಯದ ಒಲವನ್ನು ಮೂಡಿಸಿದರೆ ನಾಳೆ ಅವರು ಉತ್ತಮ ಪ್ರಜೆಗಳಾಗುತ್ತಾರೆ. ನಮ್ಮ ಶಾಲೆಯ ಕನ್ನಡ ಶಿಕ್ಷಕರು, ಕವಿಗಳೂ ಆಗಿರುವ ಕಾ.ಹು.ಚಾನ್‍ಪಾಷ ನಮ್ಮ ವಿದ್ಯಾ ಸಂಸ್ಥೆಗಳಲ್ಲಿ ಉರ್ದು ಓದುತ್ತಿರುವ ಮಕ್ಕಳಲ್ಲಿನ ಕನ್ನಡ ಆಸಕ್ತಿಯನ್ನು ಗುರುತಿಸಿ ಅವರಲ್ಲಿ ಕನ್ನಡ ಕವನಗಳನ್ನು ಓದಿಸುವ, ಕನ್ನಡ ಹಾಡುಗಳನ್ನು ಹಾಡಿಸುವ ಹಾಗೂ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಸನ್ಮಾನಿಸುವ ಮೂಲಕ ಇಡೀ ಕ್ಯಾಂಪಸನ್ನು ಕನ್ನಡಮಯವನ್ನಾಗಿಸಿದ್ದಾರೆ ಎಂದು ಹೇಳಿದರು.
ಪ್ರಾಂಶುಪಾಲರಾದ ಶಮೀಮ್ ಸಲ್ಮಾ, ಶಾಹೀನ್ ತಾಜ್ ಅವರು ಕಾರ್ಯಕ್ರಮದ ಕುರಿತು ಮಾತನಾಡಿದರು. ಮೊಹಸೀನ ಬೇಗಂ, ಮುಸ್ರತ್ ಕೌಸರ್, ಸೆಹರ್ ಅಂಜುಂ, ರಹಮತುನ್ನಿಸಾ, ರಫಿಯುಲ್ಲಾ ಖಾನ್, ಸೈಯದ್ ಜಾಕೀರ್ ಮೊದಲಾದವರು ಉಪಸ್ಥಿತಿಯಿದ್ದರು.
ಇದೇ ಸಂದರ್ಭದಲ್ಲಿ ಕನ್ನಡ ಭಾಷೆ, ಸಾಹಿತ್ಯದ ಬಗೆಗಿನ ಆಸಕ್ತಿ, ಕನ್ನಡ ಭಾವಗೀತೆ, ಜನಪದ ಗೀತೆಗಳ ಹಾಡುಗಾರಿಕೆ, ಕನ್ನಡದಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸುತ್ತಿರುವ ಪ್ರತಿಭಾವಂತ ಮಕ್ಕಳಾದ ಅಲ್-ಅಮೀನ್ ಉರ್ದು ಪ್ರೌಢಶಾಲೆಯ ಆಫ್ರೀನ್ ತಾಜ್, ಹಿರಿಯ ಪ್ರಾಥಮಿಕ ಶಾಲೆಯ ಆಮಿನಾ ಖಾನಂ, ಪಿ.ಯು. ಕಾಲೇಜಿನ ಅಲ್ಫಿಯಾ, ಪದವಿ ಕಾಲೇಜಿನ ಸಾಹೇಬ ಬೇಗಂ ಅವರನ್ನು ಸನ್ಮಾನಿಸಲಾಯಿತು.
ಅಲ್-ಅಮೀನ್ ವಿದ್ಯಾ ಸಂಸ್ಥೆಯ ಉರ್ದು ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಆಂಗ್ಲ ಪ್ರೌಢಶಾಲೆ, ಪಿಯು ಕಾಲೇಜು, ಪದವಿ ಕಾಲೇಜು, ಡಿ.ಎಡ್ ಕಾಲೇಜಿನ ಸುಮಾರು 30 ವಿದ್ಯಾರ್ಥಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡಿದರು. ವಿದ್ಯಾರ್ಥಿಗಳಾದ ಆಫ್ರೀನ್ ತಾಜ್ ನಿರೂಪಣೆ, ಶಾಫಿಯಾ ತಾಜ್ ಸ್ವಾಗತ, ಆಲಿಯಾ ಕೌಸರ್ ವಂದನಾರ್ಪಣೆ ಮಾಡಿದರು. ವಿದ್ಯಾರ್ಥಿಗಳಾದ ತಸ್ಮಿಯಾ, ಗೌಸಿಯಾ ಐಮನ್, ಮೆಹರ್, ಅಲ್ಪಿಯಾ ಮೊದಲಾದವರು ಕನ್ನಡ ಭಾವಗೀತೆ, ಜನಪದ ಗೀತೆಗಳ ಹಾಡಿದರು.

ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಮತ್ತು MCC ಬ್ಯಾಂಕ್ ಲಿಮಿಟೆಡ್ ಸಹಯೋಗದಿಂದ PLHIV ಯವರೊಂದಿಗೆ ಒಂದು ದಿನ ಸ್ನೇಹಮಿಲನ

ಮಂಗಳೂರು: ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ, ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಮತ್ತು MCC ಬ್ಯಾಂಕ್ ಲಿಮಿಟೆಡ್ ಸಹಯೋಗದಿಂದ ಡಿಸೆಂಬರ್ 4,2022 ರಂದು ದ.ಕ.ಜಿಲ್ಲಾ PLHIV ಯವರಿಗೆ ಸ್ನೇಹಮಿಲನ – 2022 ಎಂಬ ಒಂದು ದಿನದ ಕಾರ್ಯಕ್ರಮವನ್ನು ನಡೆಯಿತು.ಮಂಗಳೂರಿನ ಹಂಪನಕಟ್ಟೆಯ ಎಂಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 250 PLHIV ಯವರು ಭಾಗವಹಿಸಿದ್ದು ಸ್ನೇಹಮಿಲನ – 2022 ಅತ್ಯಂತ ಯಶಸ್ವಿಯಾಗಿ ನಡೆಯಿತು. ಜೋಸ್ಅಲ್ಲುಕಾಸ್ ಸಂಸ್ಥೆಯ ಶ್ರೀ ರಾಕೇಶ್ ರವರು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದರು.ವಿಶ್ವವು ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸುತ್ತದೆ. ಎಚ್‌ಐವಿ ಸೋಂಕಿತರನ್ನು ಬೆಂಬಲಿಸಲು ಮತ್ತು ಏಡ್ಸ್‌ನಿಂದ ಪ್ರಾಣ ಕಳೆದುಕೊಂಡವರನ್ನು ಸ್ಮರಿಸಲು ಪ್ರಪಂಚದಾದ್ಯಂತ ಜನರು ಒಟ್ಟಾಗಿ ಸೇರುತ್ತಾರೆ. ವಿಶ್ವ ಏಡ್ಸ್ ದಿನದ 2022 ರ ವಿಷಯದಂತೆ ಜನಸಾಮಾನ್ಯರೊಂದಿಗೆ ಸಮಗೊಳಿಸುವ ಕರೆಯಂತೆ ಉತ್ತಮ ಬದುಕಿನತ್ತ ಹೆಜ್ಜೆ ಹಾಕುವಂತೆ ಈ ಕಾರ್ಯಕ್ರಮ ವು ಸಂದೇಶ ನೀಡಿತು. Ms.ಕ್ಯಾರಲ್ ಅವರ ನೇತೃತ್ವದಲ್ಲಿ ಸಂತ ಅಲೋಶಿಯಸ್ ವಿದ್ಯಾರ್ಥಿಗಳು ಮತ್ತು ಪ್ರಾಂಶುಪಾಲರಾದ ಶ್ರೀಮತಿ ರೆಹಾನಾ ಅವರ ನೇತೃತ್ವದಲ್ಲಿ HPR ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು PLHIV ಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮನೋರಂಜನಾ ಆಟಗಳನ್ನು ನಡೆಸಲಾಯಿತು. ಅಪರಾಹ್ನ ಭೋಜನದ ನಂತರ ಫಾ.ಪೌಲ್ ಸೆಬಾಸ್ಟಿಯನ್ ಡಿ ಸೋಜಾ ಅವರಿಂದ ಅದ್ಭುತ ಜಾದೂಪ್ರದರ್ಶನ ನಡೆಯಿತು. ಮಂಗಳೂರಿನ ಶ್ರೀ ಜಾಸ್ಲೋನ್ ರವರು ದೇಹಧಾರ್ಡ್ಯಾ ಪ್ರದರ್ಶನವನ್ನು ನೀಡಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿವಿಧ ಆಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಭಾಗವಹಿಸಿದ180 ಕುಟುಂಬಗಳಿಗೆ ದವಸಧಾನ್ಯಗಳನ್ನೊಳಗೊಂಡ ಆಹಾರದ ಕಿಟ್ ವಿತರಿಸಲಾಯಿತು. ಇಂತಹ ಸುಂದರ ಹಾಗೂ ಅಪರೂಪದ ಮತ್ತು ಮನಮುಟ್ಟುವಂತಹ ಕಾರ್ಯಕ್ರಮ ವನ್ನು ಆಯೋಜಿಸಿದ MCC ಬ್ಯಾಂಕ್ ಲಿಮಿಟೆಡ್ ಮತ್ತು ಸ್ನೇಹಾಲಯ ಚಾರಿಟೇಬಲ್ಟ್ರ ಟ್ರಸ್ಟಗೆ ಹೊಂಗಿರಣ ಸಂಘಟನೆಯು ಕೃತಜ್ಞತೆ ಸಲ್ಲಿಸಿತು. ಉಭಯ ಸಂಸ್ಥೆಗಳು ಹೊಂಗಿರಣದ ಯೋಜನಾ ಸಂಯೋಜಕರಾದ ಶ್ರೀಮತಿ ಸೀಮಾರವರನ್ನು ಸನ್ಮಾನಿಸಿತು.ಶ್ರೀಮತಿ ವಸಂತಿ ಮತ್ತು ಶ್ರೀಮತಿ ರೆನಿಟ್ಟಾರವರು ಇಂದಿನ ಈ ವಿಶೇಷ ಸಂತೋಷದಾಯಕ್ಕಾ ರ್ಯಕ್ರಮದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.

MCC ಬ್ಯಾಂಕ್ ಲಿಮಿಟೆಡ್ ನ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊರವರು, ಜನರಲ್ ಮ್ಯಾನೇಜರ್ ಆದ ಶ್ರೀ ಸುನಿಲ್ಮಿ ನೇಜಸ್,ನಿರ್ದೇಶಕರು,ಲಯನ್ಸ್ ನ ದ.ಕ.ಜಿಲ್ಲಾ MCC ಯಾದ ಶ್ರೀ ವಸಂತ್ ಶೆಟ್ಟಿ ,ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ, ಟ್ರಸ್ಟಿಗಳು ಹಾಗೂ ಸಿಬ್ಬಂದಿಗಳು ಈ ಕಾರ್ಯಕ್ರಮದ ಆಯೋಜನೆ ಹಾಗೂ ಯಶಸ್ಸಿಗೆಸಹಕರಿಸಿದರು.ಶ್ರೀ ರಫಿಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

“ಗರ್ತಿಕೆರೆ ರಾಘಣ್ಣ” ರಿಗೆ ಅಭಿನಂದನೆ – ಗೌರವ


ಕುಂದಾಪುರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಾನು ನೀಡಿದ್ದಲ್ಲದೇ, ನಾಟಕಗಳಲ್ಲೂ ಪಾತ್ರ ಮಾಡಿದ್ದೆ. ಎಚ್. ಎನ್. ನಕ್ಕತ್ತಾಯರ ನಾಟಕದಲ್ಲಿ ಪಾತ್ರ ಮಾಡಿದ್ದು ಸಂಗೀತ ನಿರ್ದೇಶನ ನೀಡಿದ್ದು ಸ್ಮರಣೆಯಲ್ಲಿದೆ. ಕುಂದಾಪುರಕ್ಕೆ ಬಂದಾಗ ವೈಕುಂಠ ಹೆಬ್ಬಾರರ ಆಶ್ರಯ ನನಗೆ ದೊರಕುತ್ತಿತ್ತು. ಅವರೊಬ್ಬ ಕಲಾ ಆರಾಧಕ ಮತ್ತು ಕಲಾ ಪೋಷಕ. ಅವರ ಸಂಸ್ಮರಣೆಯಲ್ಲಿ ನನಗೆ ಐರೋಡಿ ಕುಟುಂಬದ ಗೌರವ ದೊರಕುತ್ತಿರುವುದು ಸಂತೋಷವಾಗಿದೆ ಎಂದು ಹೆಸರಾಂತ ಗಾಯಕ ಗರ್ತಿಕೆರೆ ರಾಘಣ್ಣ ಎಂದೇ ಕರೆಯಲ್ಪಡುವ ಹೊ. ನಾ. ರಾಘವೇಂದ್ರ ರಾವ್ ಹೇಳಿದರು.
ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರ ಐರೋಡಿಯ ಸದಾನಂದ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. 87ರ ಹರೆಯದ ರಾಘಣ್ಣ ವೇದಿಕೆಯಲ್ಲಿ ಹಾಡಿ ಎಲ್ಲರನ್ನು ರಂಜಿಸಿದರು.
ರಂಗ ನಿರ್ದೇಶಕ, ಕುಂದಾಪುರ ಸಂಗೀತ ಭಾರತಿ ಟ್ರಸ್ಟ್‍ನ ನಿಕಟಪೂರ್ವ ಕಾರ್ಯಾಧ್ಯಕ್ಷ ದಿ. ಐರೋಡಿ ವೈಕುಂಠ ಹೆಬ್ಬಾರರ ಸಂಸ್ಮರಣೆ ಹಾಗೂ ಕಲಾ ಕೌಮುದಿ ಗರ್ತಿಕೆರೆ ರಾಘಣ್ಣನವರ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿ “ಕುಂದಪ್ರಭ” ಸಂಪಾದಕ ಯು. ಎಸ್. ಶೆಣೈ ವೈಕುಂಠ ಹೆಬ್ಬಾರ್ ಸಾಂಸ್ಕøತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಿಸಿದರು. ಗರ್ತಿಕೆರೆ ರಾಘಣ್ಣನವರ ಸಾಧನೆ ಕೊಂಡಾಡಿದರು.
ಡಾ. ಎ. ಆದರ್ಶ ಹೆಬ್ಬಾರ್ ಸ್ವಾಗತಿಸಿದರು. ಐರೋಡಿ ನರಸಿಂಹ ಹೆಬ್ಬಾರ್ ಅತಿಥಿಗಳನ್ನು ಗೌರವಿಸಿದರು. ಡಾ. ಅಖಿಲಾ ಹೆಬ್ಬಾರ್ ಅಭಿನಂದನಾ ಪತ್ರ ವಾಚಿಸಿದರು.
ಯಕ್ಷಗಾನ ಕಲಾ ಕೇಂದ್ರ ಹಂಗಾರಕಟ್ಟೆಯ ಸಂಚಾಲಕ ಐರೋಡಿ ರಾಜಶೇಖರ ಹೆಬ್ಬಾರ್ ವಂದಿಸಿದರು. ಈ ಹಿರಿಯ ಕಲಾವಿದರ ಭಾಗವಹಿಸುವಿಕೆಯಿಂದ ಯಕ್ಷಗಾನ ತಾಳ ಮದ್ದಳೆ ನಡೆಯಿತು.

ವಿಶೇಷ ಚೇತನ ಮಕ್ಕಳು ಕೀಳರಿಮೆ ಬಿಟ್ಟು ಸಾಧನೆಯ ಹಾದಿಯಲ್ಲಿ ಸಾಗಬೇಕು : ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ

ಶ್ರೀನಿವಾಸಪುರ: ವಿಶೇಷ ಚೇತನ ಮಕ್ಕಳು ಕೀಳರಿಮೆ ಬಿಟ್ಟು ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ವಿಶ್ವ ವಿಶೇಷ ಚೇತನರ ದಿನಾಚರಣೆ ಅಂಗವಾಗಿ ಶನಿವಾರ ಏರ್ಪಡಿಸಿದ್ದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಕ್ರೀಡಾಪಟುಗಳಿಗೆ ಹೆಚ್ಚಿನ ಮಾನ್ಯತೆ ಇದೆ. ವಿಶೇಷ ಚೇತನರೂ ಸಹ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ಈಗ ವಿಶೇಷ ತರಬೇತಿ ಹಾಗೂ ವೈಜ್ಞಾನಿಕ ಉಪಕರಣಗಳ ಮೂಲಕ ದೈಹಿಕ ನ್ಯೂನ್ಯತೆ ಕಡಿಮೆ ಮಾಡುವ ಅವಕಾಶ ಇದೆ. ಅಂಥ ಮಕ್ಕಳಿಗೆ ಸರ್ಕಾರ ವಿಶೇಷ ನೆರವು ನೀಡುತ್ತಿದೆ. ಅದೆಲ್ಲವನ್ನೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಬಿಆರ್‍ಸಿ ವಸಂತ, ಬಿಆರ್‍ಪಿ ಚಂದ್ರಪ್ಪ, ಚೌಡರೆಡ್ಡಿ, ಡಾ. ಮಂಜುನಾಥ್, ಪದ್ಮ, ಮುಖ್ಯ ಶಿಕ್ಷಕಿ ವಿಜಯಕುಮಾರಿ, ಸಿಆರ್‍ಪಿ ರಾಧಾಕೃಷ್ಣ, ನಾರಾಯಣಸ್ವಾಮಿ ಇದ್ದರು.

ಕೋ. ಮ. ಕಾರಂತ ಪ್ರಶಸ್ತಿಗೆ ರವಿ ಬಸ್ರೂರು ಆಯ್ಕೆ


ಕರ್ನಾಟಕದ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ, ಚಿತ್ರ ನಿರ್ದೇಶಕ, ಚಿತ್ರ ನಿರ್ಮಾಪಕ ರವಿ ಬಸ್ರೂರು ಅವರನ್ನು “ಕುಂದಪ್ರಭ” ಸಂಸ್ಥೆಯ ಆಶ್ರಯದಲ್ಲಿ ಪ್ರದಾನ ಮಾಡುವ ಕೋ. ಮ. ಕಾರಂತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಖ್ಯಾತ ಪತ್ರಕರ್ತ, ಅಂಕಣಗಾರ, ಬ್ಯಾಂಕರ್ ಹಾಗೂ ತರಬೇತುದಾರ ಕೋಣಿ ಮಹಾಬಲೇಶ್ವರ ಕಾರಂತರ ಹೆಸರಲ್ಲಿ ಕಳೆದ 22 ವರ್ಷಗಳಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಂದಾಪುರ ಮೂಲದ ಸಾಧಕರಿಗೆ ಕೋ. ಮ. ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ವರ್ಷ ಸಂಗೀತ ಕ್ಷೇತ್ರದಲ್ಲಿ ಸಾಧನೆ ಹಾಗೂ ಕುಂದ ಕನ್ನಡ ಭಾಷಾ ಅಭಿವೃದ್ಧಿಗೆ ಕೊಡುಗೆ ನೀಡಿದ ರವಿ ಬಸ್ರೂರು ಅವರಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಯಿತು ಎಂದು ಸಾಹಿತಿ ಕೋ. ಶಿವಾನಂದ ಕಾರಂತ ತಿಳಿಸಿದ್ದಾರೆ.
ಬಸ್ರೂರು ಗ್ರಾಮೀಣ ಪ್ರದೇಶದಲ್ಲಿ 2012ರಲ್ಲಿ “ಪಣ್ಕ ಮಕ್ಳ” ಎಂಬ ಕುಂದ ಕನ್ನಡ ಆಲ್ಬಂ ಬಿಡುಗಡೆ ಮೂಲಕ ಖ್ಯಾತರಾದ ರವಿ ಬಸ್ರೂರು ಕನ್ನಡ ಚಿತ್ರರಂಗದಲ್ಲಿ “ಉಗ್ರಂ” ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡುವ ಮೂಲಕ ರಾಜ್ಯ ಮಟ್ಟದಲ್ಲಿ ಖ್ಯಾತರಾದರು. ಹಲವಾರು ಚಲನ ಚಿತ್ರಗಳಿಗೆ ಸಂಗೀತ ನೀಡಿದ್ದರೂ ಕೆ.ಜಿ.ಎಫ್. ಇವರಿಗೆ ಹೆಚ್ಚಿನ ಖ್ಯಾತಿ ತಂದು ಕೊಟ್ಟಿತು. ಹಿಂದಿ, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ರವಿ ಬಸ್ರೂರು ತಮ್ಮ ಛಾಪು ಮೂಡಿಸಿದ್ದಾರೆ. ಕುಂದಾಪ್ರ ಕನ್ನಡಕ್ಕೆ ರವಿ ಬಸ್ರೂರು ಕೊಡುಗೆ ಅಪಾರ. ಗರ ಗರ ಮಂಡಲ, ಬಿಲಿಂಡರ್ ಮೂಲಕ ಕುಂದಾಪ್ರ ಕನ್ನಡ ಚಿತ್ರ ನಿರ್ಮಾಣ ನಿರ್ದೇಶನವನ್ನು ಮಾಡಿ ಸಂಚಲನ ಉಂಟು ಮಾಡಿದ್ದರು. ಆಮೇಲೆ ಕಟಕ, ಗಿರ್ಮಿಟ್ ಚಿತ್ರಗಳು ಬಂದವು. ಅಪ್ಪಯ್ಯ ಕಾಣಿ, “ಎಂತಾ ಚಂದ ನಮ್ಮ ಭಾಷಿ” ಸರಣಿ ಹಾಡುಗಳು ದೇಶ ವಿದೇಶದಲ್ಲಿದ್ದ ಕುಂದ ಕನ್ನಡದವರಿಗೆ ರೋಮಾಂಚನ ಉಂಟು ಮಾಡಿತ್ತು.
ಈಗ ಹುಟ್ಟೂರು ಬಸ್ರೂರಿನಲ್ಲಿ ಅತ್ಯಾಧುನಿಕ ಸ್ಟುಡಿಯೋ ನಿಮಾಣ ಮಾಡುತ್ತಿರುವ ಕನ್ನಡ ಚಿತ್ರರಂಗದ ಬಹಳ ಬೇಡಿಕೆಯ ಪ್ರತಿಭಾವಂತ ರವಿ ಬಸ್ರೂರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವ ಸಮಾರಂಭ ಜನವರಿಯಲ್ಲಿ ನಡೆಯಲಿದೆ ಎಂದು “ಕುಂದಪ್ರಭ” ಸಂಸ್ಥೆಯ ಅಧ್ಯಕ್ಷ ಯು. ಎಸ್. ಶೆಣೈ ತಿಳಿಸಿದ್ದಾರೆ.

ಆರ್.ಎನ್.ಶೆಟ್ಟಿ ಪ. ಪೂರ್ವ ಕಾಲೇಜ್:ವಿದ್ಯಾರ್ಥಿನಿ ಪೂರ್ವಿಕಾ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪೂರ್ವಿಕಾ ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭರತನಾಟ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಭರತನಾಟ್ಯ ಕಲಾವಿದೆ ಪೂರ್ವಿಕಾಳ ಈ ಸಾಧನೆಯನ್ನು ಮೆಚ್ಚಿ ಕಾಲೇಜಿನ ಸಂಚಾಲಕರಾದ ಶ್ರೀ ಬಿ. ಎಮ್. ಸುಕುಮಾರ್ ಶೆಟ್ಟಿಯವರು, ಆಡಳಿತ ಮಂಡಳಿ, ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಹಾಗೂ ಬೋಧಕ- ಬೋಧಕೇತರ ಸಿಬ್ಬಂಧಿಯವರು ಅಭಿನಂದನೆ ಸಲ್ಲಿಸಿರುತ್ತಾರೆ.