ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೆದುಳಿನ ಜ್ವರಕ್ಕೆ ಲಸಿಕೆ ಅಭಿಯಾನ / Holy Redeemer English Medium School – Vaccination Campaign for Brain Fever

ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೆದುಳಿನ ಜ್ವರಕ್ಕೆ ಲಸಿಕೆ ಅಭಿಯಾನ

ಡಿಸೆಂಬರ್ 5 ರಂದು ಬೆಳ್ತಂಗಡಿಯ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬ್ರೈನ್ ಫೀವರ್ ಲಸಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ದೀಪ ಬೆಳಗಿಸುವ ಮೂಲಕ ಪ್ರಚಾರ ಆರಂಭಿಸಿದರು. ಬೆಳ್ತಂಗಡಿ ಆರೋಗ್ಯ ನಿರೀಕ್ಷಕ ಶ್ರೀ ಗಿರೀಶ್ ಅವರು ವಿದ್ಯಾರ್ಥಿಗಳಿಗೆ ಎನ್ಸೆಫಾಲಿಟಿಸ್ ವೈರಸ್ ಹರಡುವ ವಿಧಾನ, ಲಸಿಕೆ ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ವಂದನೀಯ ಕ್ಲಿಫರ್ಡ್ ಪಿಂಟೋ ಅಭಿಯಾನವು ಉತ್ತಮವಾಗಿ ನಡೆಯಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಮರಿಯಮ್ಮ, ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಶ್ರೀಮತಿ ಕಮಲಾ ಮತ್ತು ಶ್ರೀಮತಿ ಭೇಷ್ ಕುಮಾರಿ, ಸಮುದಾಯ ಆರೋಗ್ಯಾಧಿಕಾರಿ ಶ್ರೀ ಸತೀಶ್ ಮತ್ತು ನರ್ಸಿಂಗ್ ಅಧಿಕಾರಿ ಶ್ರೀಮತಿ ರತ್ನಾ ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಅನಿತಾ ಕಾರ್ಯಕ್ರಮ ನಿರೂಪಿಸಿದರು

Holy Redeemer English Medium School – Vaccination Campaign for Brain Fever

Vaccination campaign for Brain Fever was held on December 5th at Holy Redeemer English Medium School, Belthangady. The campaign began by lighting a lamp. Belthangady Health Inspector Mr. Girish gave a comprehensive information to the students about Encephalitis virus, its mode of transmission, vaccination and precautions. School Headmaster Rev Fr Clifford Pinto wished the campaign to go well. Belthangady Health Center Senior Health Assistant Mrs. Mariamma, Health Safety Officers Mrs. Kamala and Mrs. Bhesh Kumari, Community Health Officer Mr. Satish and Nursing Officer Mrs. Ratna were present and assisted in the program. Teacher Mrs. Anita compered the program

ನಮ್ಮ ರಾಷ್ಟ್ರದ ಪ್ರಜಾಸತ್ತೆಗೆ ಮೂಲಭೂತ ಅಡಿಪಾಯದ ಸಂವಿಧಾನವನ್ನು ರಚಿಸಿರುವ ಮಾಹಾ ಪುರಷ ಡಾ.ಅಂಬೇಡ್ಕರ್ – ತಹಶೀಲ್ದಾರ್ ಶರೀನ್‍ತಾಜ್

ಶ್ರೀನಿವಾಸಪುರ 1 : ನಮ್ಮ ರಾಷ್ಟ್ರದ ಪ್ರಜಾಸತ್ತೆಗೆ ಮೂಲಭೂತ ಅಡಿಪಾಯವಾಗಿರುವ ಭಾರತದ ಸೊಗಸಾದ ಸಂವಿಧಾನವನ್ನು ರಚಿಸಿರುವ ಮಾಹಾ ಪುರಷ ಎಂದು ತಹಶೀಲ್ದಾರ್ ಶರೀನ್‍ತಾಜ್ ಬಣ್ಣಿಸಿದರು.
ತಾಲೂಕು ಆಡಳಿತವತಿಯಿಂದ ಮಂಗಳವಾರ ನಡೆದ ಮಹಾಪರಿನಿರ್ವಾಣ ದಿನಾಚರಣೆಯ ಅಂಗವಾಗಿ ಪಟ್ಟಣದ ತಾಲೂಕು ಕಚೇರಿಯ ಮುಂಭಾಗದ ಆಂಬೇಡ್ಕರ್‍ರವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ನಮಗೆ ಸ್ವಾಭಿಮಾನದ ಸ್ವತಂತ್ರ ತಂದು ಕೊಟ್ಟಿರುವ ಡಾ. ಅಂಬೇಡ್ಕರ್ ಅವರಿಗೆ ಕೇವಲ ಪೂಜೆ ಸಲ್ಲಿಸಿದರೆ ಸಾಲದು. ನಾವು ಅವರ ತತ್ವಾದರ್ಶಗಳನ್ನು , ಸಿದ್ಧಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಇಂದು ಆಚರಿಸುತ್ತಿರುವ ಮಹಾಪರಿನಿರ್ವಾಣ ದಿನಾಚರಣೆ ಅಚರಣೆಗೆ ಅರ್ಥ ಬರುತ್ತದೆ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರರು ಅಸ್ಪøಶ್ಯರು ಮತ್ತು ಇತರ ಕೆಳ ಜಾತಿಗಳ ಸಮಾನತೆಗಾಗಿ ಹೋರಾಡಿ ಯಶಸ್ಸನ್ನು ಸಾಧಿಸಿದರು. ಅವರು ತಮ್ಮ ಸ್ವಾರ್ಥಕ್ಕಾಗಿ, ಸಾಮಾಜಿಕ ನ್ಯಾಯದ ತತ್ವ ನೀತಿಗಳಿಗೆ ಯಾವತ್ತೂ ತಿಲಾಂಜಲಿಯನ್ನೀಡಲಿಲ್ಲ. ಸಮಾಜಕ್ಕಾಗಿ, ದೇಶಕ್ಕಾಗಿ , ಬಡವರಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡ ಮಹಾಪುರುಷ ಎಂದು ಹೇಳಿದರು.
ಪುರಸಭೆ ಸದಸ್ಯ ಎನ್‍ಎನ್‍ಆರ್.ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಹಾಗು ದಲಿತ ಮುಖಂಡರು ಉಪಸ್ಥಿತರಿದ್ದರು.

ತಾಲೂಕು ಆಡಳಿತವತಿಯಿಂದ ನಡೆದ ಮಹಾಪರಿನಿರ್ವಾಣ ದಿನಾಚರಣೆಯ ಅಂಗವಾಗಿ ಪಟ್ಟಣದ ತಾಲೂಕು ಕಚೇರಿಯ ಮುಂಭಾಗದ ಆಂಬೇಡ್ಕರ್‍ರವರ ಪುತ್ಥಳಿಗೆ ಪುಷ್ಪನಮನವನ್ನ ತಹಶೀಲ್ದಾರ್ ಶರೀನತಾಜ್, ಜಿ.ಪಂ. ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಸಲ್ಲಿಸಿದರು.

ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು:ಜಿಲ್ಲಾ ಲೋಕಾಯುಕ್ತ ಎಸ್ಸಿ ಬಿ.ಕೆ.ಉಮೇಶ್

ಶ್ರೀನಿವಾಸಪುರ: ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಲೋಕಾಯುಕ್ತ ಎಸ್ಸಿ ಬಿ.ಕೆ.ಉಮೇಶ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗದಲ್ಲಿ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳಿಂದ ಮಂಗಳವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಸಾರ್ವಜನಿಕ ಕುಂದು ಕೊರತೆ ವಿಚಾರಣಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಸರ್ಕಾರದ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಸಿಗುವಂತೆ ನೋಡಿಕೊಳ್ಳಬೇಕು. ಸೌಲಭ್ಯ ವಿತರಣೆಯಲ್ಲಿ ತಾರತಮ್ಯ ಮಾಡಬಾರದು ಎಂದು ಹೇಳಿದರು.
ಸಾರ್ವಜನಿಕರು ಭ್ರಷ್ಟ ಅಧಿಕಾರಿಗಳ ಭ್ರಷ್ಟಾಚಾರ ಬಯಲು ಮಾಡಬೇಕು. ಯಾವುದೇ ಆಧಿಕಾರಿ ಅಥವಾ ಸರ್ಕಾರಿ ಕಚೇರಿ ಸಿಬ್ಬಂದಿ ಲಂಚ ಕೇಳಿದರೆ, ಯಾವುದೇ ಹಿಂಜರಿಕೆ ಇಲ್ಲದೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಬೇಕುಎಂದು ಹೇಳಿದರು.
ಡಿ.17 ರಂದು ಕೋಲಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪ ಲೋಕಾಯುಕ್ತರ ಸಭೆ ಏರ್ಪಡಿಸಲಾಗಿದೆ. ಡಿ.18 ಮತ್ತು 19 ರಂದು ಅಧಿಕಾರಿಗಳ ಸಭೆ ಏರ್ಪಡಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಸಾರ್ವಜನಿಕರಿಂದ ಒಟ್ಟು 52 ದೂರುಗಳನ್ನು ಸ್ವೀಕರಿಸಲಾಯಿತು. ಆಪೈಕಿ 28 ದೂರುಗಳು ಕಂದಾಯ ಇಲಾಖೆಗೆ ಸಂಬಂಧಪಟ್ಟಿದ್ದರೆ, 28 ದೂರುಗಳು ಅರಣ್ಯ, ಪೊಲೀಸ್, ಭೂಮಾಪನ ಹಾಗೂ ಬಿಸಿಎಂ ಇಲಾಖೆಗೆ ಸಂಬಂದಿಸಿದ್ದವು.
ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಎಸ್.ಚೈತ್ರ, ತಹಶೀಲ್ದಾರ್ ಶರಿನ್ ತಾಜ್, ಶಿರಸ್ತೇದಾರ್ ಜೆ.ಎಂ.ಬಲರಾಮಚಂದ್ರೇಗೌಡ, ಭೂಮಾಪನ ಇಲಾಖೆ ಮೇಲ್ವಿಚಾರಕ ಮಂಜುನಾಥ್, ಲೋಕಾಯುಕ್ತ ಇನ್ಸ್‍ಪೆಕ್ಟರ್ ಎಂ.ಆರ್.ಯಶ್ವಂತ್ ಕುಮಾರ್, ಸಿಬ್ಬಂದಿ ರಾಜ್‍ಗೋಪಾಲ್, ರಾಮಚಂದ್ರ, ಶ್ರೀನಾಥ್, ಸುಬ್ರಮಣಿ ಇದ್ದರು.

ಮೂಡ್ಲಕಟ್ಟೆ ಎಂ ಐ ಟಿ, Honeywell: Center of Excellence ತರಬೇತಿ ಉದ್ಘಾಟನಾ ಕಾರ್ಯಕ್ರಮ

ಕುಂದಾಪುರ: ಕುಂದಾಪುರದ ಮೂಡ್ಲಕಟ್ಟೆ ತಾಂತ್ರಿಕ ಮಹಾ ವಿದ್ಯಾಲಯವು, ಸಾಫ್ಟ್ವೇರ್ ದಿಗ್ಗಜ Honeywell ನ, Center of Excellence ಕಾರ್ಯಕ್ರಮದ ಕೇಂದ್ರವಾಗಿ ಆಯ್ಕೆಯಾಗಿದ್ದು ಇದರ ಉದ್ಘಾಟನೆಯನ್ನು 06/12/22  ರಂದು ಐಸಿಟಿ ಅಕಾಡೆಮಿ ಕರ್ನಾಟಕ ರಾಜ್ಯ ಮುಖ್ಯಸ್ಥರಾದ  ಶ್ರೀ ವಿಷ್ಣು ಪ್ರಸಾದ್ ಡಿ ನೆರವೇರಿಸಿದರು. 

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ “ಶ್ರೀ ಅಜಿತ್ ಕುಮಾರ್, ಹಿರಿಯ ಶಾಖಾ ವ್ಯವಸ್ಥಾಪಕರು ಯೂನಿಯನ್‌ ಬ್ಯಾಂಕ್ ಆಫ್ ಇಂಡಿಯಾ” ವಿಧ್ಯಾರ್ಥಿಗಳು ವಿಧ್ಯೆಯ ಜೊತೆಗೆ ಇನ್ನಿತರ ಕೌಶಲ್ಯಗಳನ್ನು ಅಳವಡಿಸಿಕೊಂಡಲ್ಲಿ ಯಶಸ್ಸು ತಾನಾಗಿಯೇ ದೊರೆಯುತ್ತದೆ ಎಂದು ಕಿವಿಮಾತು ಹೇಳಿದರು, ಇದೇ ವೇಳೆ ಶ್ರೀ ವಿಷ್ಣು ಪ್ರಸಾದ್ ಡಿ” ಅವರು ಮಾತನಾಡಿ, ವಿಧ್ಯಾರ್ಥಿಗಳಿಗೆ ಈ ತರಬೇತಿ ಎಷ್ಟು ಮಹತ್ವವಾದುದು, ಅದರ ಪ್ರಯೋಜನಗಳೇನು ಹಾಗು ಇದರಿಂದ ಉದ್ಯೋಗಾವಕಾಶಗಳನ್ನು ಹೇಗೆ ಪಡೆಯಬಹುದು ಎಂದು ವಿವರಿಸಿ ಹೇಳಿದರು.

ಈ ಕಾರ್ಯಕ್ರಮದ ಪ್ರಥಮ ಹಂತವಾಗಿ 15 ದಿನದ ತರಬೇತಿ ಕಾರ್ಯಕ್ರಮವು ಆಧುನಿಕ ತಂತ್ರಜ್ಞಾನ ಯು ಐ ಪಾತ್ ಮೇಲೆ ನಡಿಯಲಿದೆ.

ಭಾರತದಲ್ಲಿ ಹನಿವೆಲ್ ಸೆಂಟರ್ ಆಫ್ ಎಕ್ಸೆಲೆನ್ಸ್ ಕೇಂದ್ರವಾಗಿ ಕೇವಲ 50 ಕಾಲೇಜುಗಳು ಮಾತ್ರ ಆಯ್ಕೆಯಾಗಿದ್ದು ಕರ್ನಾಟದಲ್ಲಿ ಕೇವಲ 9 ಕಾಲೇಜ್ ಗೆ ಮಾತ್ರ ಅವಕಾಶ ಸಿಕ್ಕಿರುತ್ತದೆ. ಈ 9 ಕಾಲೇಜ್ ಗಳಲ್ಲಿ ಎಂ ಐ ಟಿ ಕುಂದಾಪುರವು ಒಂದಾಗಿದ್ದು ಮತ್ತು ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯ ಏಕೈಕ ಕಾಲೇಜು ಎನ್ನುವುದು ಹೆಮ್ಮೆಯ ವಿಷಯವಾಗಿದೆ ಎಂದು ಕಾಲೇಜಿನ ಅಧ್ಯಕ್ಷರಾದ ಸಿದ್ದಾರ್ಥ ಜೆ ಶೆಟ್ಟಿ ಅವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

“IMJ ವಿದ್ಯಾಸಂಸ್ಥೆಗಳ ನಿರ್ದೇಶಕರಾದ ಶ್ರೀ. ದೋಮ ಚಂದ್ರಶೇಖರ, ಅವರು ಅಧ್ಯಕ್ಷತೆ ವಹಿಸಿದ್ದು,ಕಾರ್ಯಕ್ರಮದಲ್ಲಿ “ಎಂಐಟಿಕೆ ಪ್ರಾಂಶುಪಾಲರಾದ, ಡಾ. ಚಂದ್ರರಾವ್ ಮದಾನೆ”, “ಎಂಐಟಿಕೆ ಉಪ ಪ್ರಾಂಶುಪಾಲರಾದ, ಪ್ರೊ.ಮೆಲ್ವಿನ್ ಡಿಸೋಜಾ”, “ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ| ಪ್ರತಿಭಾ ಎಂ ಪಟೇಲ್”, “ಪ್ಲೇಸ್ಮೆಂಟ್ ಡೀನ್ ಪ್ರೊ.ಅಮೃತಮಾಲಾ”, ಎಲ್ಲಾ ಡೀನ್‌ಗಳು, ವಿಭಾಗ ಮುಖ್ಯಸ್ಥರು, ಸಿಬ್ಬಂದಿ ಮತ್ತು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬೈಂದೂರು ಹೋಲಿಕ್ರಾಸ್ ಇಗರ್ಜಿ : ಸಮುದಾಯ ದಿನಾಚರಣೆ

ಬೈಂದೂರು: ಸ್ಥಳೀಯ ನ ಹೋಲಿಕ್ರಾಸ್ ಇಗರ್ಜಿಯಲ್ಲಿ ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೊ ರವರ ಅಧ್ಯಕ್ಷತೆಯಲ್ಲಿ ಸಮುದಾಯದ ದಿವಸವನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಉಡುಪಿ ಧರ್ಮಪ್ರಾಂತ್ಯದ ಕಿರುಕ್ರಿಸ್ತ ಸಮುದಾಯ ಆಯೋಗದ ನಿರ್ದೇಶಕರಾದ ವಂದನೀಯ ಹೆರಾಲ್ಡ್ ಪೀರೆರಾರವರು “ಸಮುದಾಯಕೋಸ್ಕರ ನಾವುಗಳು, ನಮಗಾಗಿ ಸಮುದಾಯ ಎಂಬ ಚಿಂತನೆಯಲ್ಲಿ ಜೀವಿಸಿದರೆ ಸಮಾಜದಲ್ಲಿ ಏಕತೆ, ಒಗ್ಗಟ್ಟು ಬಲಿಷ್ಠವಾಗಿರುತ್ತದೆ” ಎಂದರು

ವೇದಿಕೆಯಲ್ಲಿ ಕುಂದಾಪುರ ವಲಯದ ಪ್ರಧಾನ ಧರ್ಮಗುರು ವಂದನೀಯ ಸ್ಟ್ಯಾನಿ ತಾವ್ರೋ, ಕೋಟ ಇಗರ್ಜಿಯ ಧರ್ಮಗುರು ವಂದನೀಯ ಎ. ಡಿಲೀಮಾ, ಸಿಸ್ಟರ್ ಆ್ಯನ್ಸಿ, ಉಪಾಧ್ಯಕ್ಷ ಸ್ಟ್ಯಾನಿ ಡಾಯಸ್ ಉಪಸ್ಥಿತರಿದ್ದರು.

ಕಾರ್ಯದರ್ಶಿ ಅನಿತಾ ನಜ್ರೆತ್ ಸ್ವಾಗತಿಸಿದರು, ಆಯೋಗಗಳ ಸಂಯೋಜಕಿ ಮೇಬಲ್ ನಜ್ರೆತ್ ವಂದಿಸಿದರು. ವೀಣಾ ಫೆರ್ನಾಂಡಿಸ್ ಮತ್ತು ರೋಶನ್ ರೋಡ್ರಿಗಸ್ ಕಾರ್ಯಕ್ರಮ ನಿರ್ವಹಿಸಿದರು

ರಾಮಭಂಟ ಹನುಮನ ದೇವಾಲಯಗಳ ತವರೂರು ಕೋಲಾರದಲ್ಲಿ ಹನುಮದ್ವ್ರತ
ಹನುಮಜಯಂತಿಯಾಗಿ ಆಚರಣೆ-ಎಲ್ಲೆಡೆಯೂ ವಿಶೇಷ ಪೂಜೆ, ಭಜನೆ-ಅನ್ನದಾನ

ಕೋಲಾರ ಹೊರವಲಯದ ಕೊಂಡರಾಜನಹಳ್ಳಿ ವರಪ್ರಸಾದ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮದ್ವ್ರತ ಅಂಗವಾಗಿ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿದ್ದು, ಸಹಸ್ರಾರು ಮಂದಿ ದರ್ಶನ ಪಡೆದರು.
ಕೋಲಾರದ ಕಾಳಮ್ಮ ಗುಡಿ ರಸ್ತೆಯಲ್ಲಿನ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮದ್ವ್ರತ ಹಾಗೂ ಹನುಮಜಯಂತಿ ಅಂಗವಾಗಿ ವಿಶೇಷ ಅಲಂಕಾರ,ಪೂಜೆ ನೇತೃತ್ವವನ್ನು ನಡೆಸಲಾಯಿತು.

ಕೋಲಾರ:- ಹನುಮನ ದೇವಾಲಯಗಳ ತವರೂರು ಎಂದೇ ಖ್ಯಾತವಾಗಿರುವ ಕೋಲಾರ ಜಿಲ್ಲೆಯಲ್ಲಿ ಹನುಮದ್ವ್ರತವನ್ನು ಹನುಮಜಯಂತಿಯಾಗಿ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿದ್ದು, ಆಂಜನೇಯನ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ,ಭಜನೆ, ಅನ್ನದಾಸೋಹ ನಡೆದಿದ್ದು, ಭಕ್ತರ ಸಮೂಹವೇ ಹರಿದು ಬಂತು.
ಹನುಮಂತನಿಗೂ ಕೋಲಾರಕ್ಕೂ ಇರುವ ಸಂಬಂಧ ಆಶ್ಚರ್ಯ ತರಿಸುವಂತದ್ದು, ಏಕೆಂದರೆ ಜಿಲ್ಲೆಯಲ್ಲಿರುವ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಹನುಮಂತ ದೇವಾಲಯಗಳನ್ನು ಗಮನಿಸಿದರೆ ಇಂತದ್ದೊಂದು ಅನುಮಾನ ಕಾಡದಿರದು, ಹನುಮದ್ವ್ರತವಾದ ಇಂದು ಜಿಲ್ಲೆಯಲ್ಲಿ ಹನುಮ ಜಯಂತಿಯಾಗಿ ಆಚರಿಸುವುದು ವಾಡಿಕೆಯಾಗಿದೆ.
ಹನುಮಜಯಂತಿ ಅಂಗವಾಗಿ ಇಂದು ಎಲ್ಲಾ ಹನುಮ ದೇಗುಲಗಳಲ್ಲೂ ವಿಶೇಷ ಪೂಜೆ, ಹೂವಿನ ಅಲಂಕಾರ, ಪ್ರಸಾದ ವಿನಿಯೋಗ,ಭಜನೆ ಮುಂಜಾನೆಯಿಂದಲೇ ನಡೆಯುತ್ತಿದ್ದು, ಸಹಸ್ರಾರು ಮಂದಿ ದೇವಾಲಯಗಳಿಗೆ ತೆರಲಿ ಸ್ವಾಮಿಯ ದರ್ಶನ ಪಡೆದರು.
ಪೌರಾಣಿಕ, ಐತಿಹಾಸಿಕ ಹಿನ್ನೆಲೆಯ ಹತ್ತಾರು ಹನುಮಂತ ದೇವಾಲಯಗಳ ಜೊತೆಗೆ ಹೊಸ ಬಡಾವಣೆಗಳಲ್ಲಿಯೂ ನಿರ್ಮಿಸಲ್ಪಟ್ಟಿರುವ ಅನೇಕ ಹನುಮಂತ ದೇವಾಲಯಗಳು ಕೋಲಾರ ಜಿಲ್ಲೆಯಲ್ಲಿವೆ.
ಗಲ್ಲಿಗೊಂದು ರಸ್ತೆ ಬದಿಯ ಕನಿಷ್ಟ ಪ್ರತಿ 3 ಕಿ.ಮೀ.ಗೊಂದು ಹನುಮನ ದೇವಾಲಯವನ್ನು ಕಾಣಬಹುದಾಗಿದೆ. ನಗರದಲ್ಲಿಯಂತೂ ಹನುಮಾನ್ ಜಯಂತಿಯಂದು ಪ್ರತಿ ರಸ್ತೆಯಲ್ಲಿಯೂ ಪೂಜೆ, ಭಜನೆ, ರಥೋತ್ಸವ ನಡೆಯುತ್ತಿರುವುದು ವಿಶೇಷವೆನಿಸುತ್ತದೆ.


ಹನುಮನ ಪೂಜಿಸಿಯೇ ಕೋಲಾರಕ್ಕೆ ಪ್ರವೇಶ


ಕೋಲಾರ ನಗರವನ್ನು ಬೆಂಗಳೂರು ಕಡೆಯಿಂದ ಪ್ರವೇಶಿಸುವಾಗ ಎಪಿಎಂಸಿ ಮಾರುಕಟ್ಟೆ ಮುಂಭಾಗ ಮೊಟ್ಟ ಮೊದಲಿಗೆ ಸಿಗುವುದೇ ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ ದೇವಾಲಯ.
ಕೋಲಾರದಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸುವ ಭಕ್ತಾಧಿಗಳು ಕೊಂಡರಾಜನಹಳ್ಳಿ ಆಂಜನೇಯನಿಗೆ ಕೈಮುಗಿದು ಮುಂದೆ ಸಾಗಿದರೆ ಕೋಲಾರಕ್ಕೆ ಬರುವವರು ಕೊಂಡರಾಜನ ಹನುಮಂತನಿಗೆ ನಮಿಸಿಯೇ ಪ್ರವೇಶಿಸುವ ವಾಡಿಕೆ ಇದೆ.


ಹನುಮಜಯಂತಿ ಎಲ್ಲೆಡೆಯೂ ಪೂಜೆ


ಕೋಲಾರದ ಬಸ್ ನಿಲ್ದಾಣ ಪಕ್ಕದಲ್ಲಿಯೇ ಇರುವ ಕೀಲುಕೋಟೆ ಆಂಜನೇಯ ಸ್ವಾಮಿ ದೇವಾಲಯ, ಅಲ್ಲಿನ ನೂರು ಮೀಟರ್ ಅಂತರದಲ್ಲಿ ಶಾರದಾ ಚಿತ್ರಮಂದಿರ ರಸ್ತೆಯಲ್ಲಿರುವ ವಕ್ಕಲೇರಿ ಆಂಜನೇಯಸ್ವಾಮಿ ದೇವಾಲಯ, ಇದರ ಮಂದಿನ ರಸ್ತೆಯ ಬ್ರಾಹ್ಮಣರ ಬೀದಿಯಲ್ಲಿರುವ ದೊಡ್ಡಾಂಜನೇಯಸ್ವಾಮಿ ದೇವಾಲಯ, ಗಾಣಿಗರ ಬೀದಿಯ ಆಂಜನೇಯಸ್ವಾಮಿ ದೇವಾಲಯ, ಹಳೇ ಅಂಚೆ ಕಚೇರಿ ಸಮೀಪ ಇರುವ ಕೋಟೆ ಬಾಗಿಲು ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ, ನಚಿಕೇತ ನಿಲಯದ ಮುಂಭಾಗ ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಖೀಲೇ ಆಂಜನೇಯಸ್ವಾಮಿ ದೇವಾಲಯ, ಕುರುಬರ ಪೇಟೆ ಆಂಜನೇಯಸ್ವಾಮಿ ದೇವಾಲಯ, ಅಮ್ಮವಾರಿಪೇಟೆ ಆಂಜನೇಯಸ್ವಾಮಿ ದೇವಾಲಯ, ಯುವಜನ ಕೇಂದ್ರದ ಬಳಿ ಇರುವ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ,ಎಸ್ಪಿ ಕಚೇರಿ ಮುಂಭಾಗದ ದೇವಾಲಯ, ಪಶುಪಾಲನಾ ಇಲಾಖೆಯ ಆವರಣದಲ್ಲಿರುವ ಆಂಜನೇಯಸ್ವಾಮಿ ದೇವಾಲಯ, ಗಲ್‍ಪೇಟೆಯ ಉಪ್ಪರ ಬೀದಿಯಲ್ಲಿರುವ ಆಂಜನೇಯ ದೇವಾಲಯ, ಮುಂತಾದ ದೇಗುಲಗಳಲ್ಲಿ ಹನುಮಜಯಂತಿ ಅಂಗವಾಗಿ ವಿಶೇಷ ಪೂಜೆ ನಡೆಯಿತು.
ಎಲ್ಲಾ ಕಡೆಗಳಲ್ಲೂ ಸ್ವಾಮಿಯನ್ನು ವಿಶೇಷವಾಗಿ ಹೂಗಳಿಂದ ಅಲಂಕರಿಸಿದ್ದು, ಮುಂಜಾನೆಯಿಂದಲೇ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

ಶೈಕ್ಷಣಿಕ ಪ್ರವಾಸ ಹೊರಡ ಸರ್ಕಾರಿ ಶಾಲಾ ಮಕ್ಕಳಿಗೆ
ತಿಂಡಿ,ಹಣ್ಣು ಕೊಡುಗೆಯಾಗಿ ನೀಡಿ ಶುಭ ಹಾರೈಕೆ

ಕೋಲಾರ:- ತಮಿಳುನಾಡು ರಾಜ್ಯಕ್ಕೆ ಶೈಕ್ಷಣಿಕ ಪ್ರವಾಸ ಹೊರಟ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರು ಹಾಗೂ ಸಮಾಜ ಸೇವಕರಾದ ಧರ್ಮೇಶ್, ಇಸಿಒ ಬೈರೆಡ್ಡಿ ಮತ್ತಿತರರು ಶುಭ ಹಾರೈಸಿ ತಿಂಡಿ,ತಿನಿಸು,ಹಣ್ಣು ಕೊಡುಗೆಯಾಗಿ ನೀಡಿದರು.
ಭಾನುವಾರ ಮಧ್ಯರಾತ್ರಿ ಪ್ರವಾಸಕ್ಕೆ ತೆರಳಿದ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಇಸಿಒ ಬೈರೆಡ್ಡಿ, ಪ್ರವಾಸ ಮಕ್ಕಳ ಶೈಕ್ಷಣಿಕ ಕಲಿಕೆಗೆ ಪೂರಕವಾಗಿರಲಿ, ಪ್ರವಾದಲ್ಲಿ ಮಕ್ಕಳು ಎಚ್ಚರಿಕೆಯಿಂದಿರಿ, ಆರೋಗ್ಯ ರಕ್ಷಣೆಗೆ ಒತ್ತು ನೀಡಿ ಎಂದು ಕಿವಿಮಾತು ಹೇಳಿದರು.
ಶಿಕ್ಷಕ ಹಾಗೂ ಕೊಡುಗೈ ದಾನಿ ಸುಗಟೂರು ಧರ್ಮೇಶ್, ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತಷ್ಟು ದಾನಿಗಳ ನೆರವು ಹರಿದು ಬರಬೇಕಾಗಿದೆ, ನನ್ನ ವೇತನದ ಅರ್ಧವನ್ನು ಪ್ರತಿ ತಿಂಗಳು ಸರ್ಕಾರಿ ಶಾಲಾ ಬಡ ಮಕ್ಕಳಿಗೆ ಬಳಸುತ್ತಿರುವುದಾಗಿ ತಿಳಿಸಿದರು.
ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್‍ಕುಮಾರ್, ಶಾಲೆಯ ಮಕ್ಕಳು ಪ್ರವಾಸದಲ್ಲಿ ಸಂತಸದಿಂದ ಕಳೆಯಲು ಅಗತ್ಯ ತಿನಿಸು ಒದಗಿಸಿದ ಶಿಕ್ಷಕ ಧರ್ಮೇಶ್, ಬೈರೆಡ್ಡಿ, ಎಸ್‍ಡಿಎಂಸಿ ಸದಸ್ಯರಾದ ಮಂಜುನಾಥ್, ವೆಂಕಟಾಚಲಪತಿ, ರಾಮಚಂದ್ರ ಅವರಿಗೆ ಧನ್ಯವಾದ ತಿಳಿಸಿದರು.
ಎಸ್‍ಡಿಎಂಸಿ ಅಧ್ಯಕ್ಷ ಎ.ಮಹೇಂದ್ರ ಮಾತನಾಡಿ, ಉಳ್ಳವರೆಲ್ಲರಿಗೂ ದಾನ ನೀಡುವ ಗುಣ ಬಾರದು, ಶಿಕ್ಷಕರಾಗಿದ್ದು, ಸರ್ಕಾರಿ ಶಾಲೆಯ ಮಕ್ಕಳಿಗೆ ನೆರವಾಗುವ ಗುಣ ಮೆಚ್ಚುವಂತದ್ದು, ಈಗಾಗಲೇ ಶಾಲೆಗೆ ಧರ್ಮೇಶ್ ಧ್ವನಿವರ್ಧಕ ಕೊಡುಗೆಯಾಗಿ ನೀಡಿದ್ದಾರೆ, ಬೈರೆಡ್ಡಿ ನೋಟ್ ಪುಸ್ತಕ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಸ್‍ಡಿಎಂಸಿ ಉಪಾಧ್ಯಕ್ಷೆ ಲಕ್ಷ್ಮಿ, ಸದಸ್ಯರಾದ ರಾಮಚಂದ್ರಪ್ಪ, ರಾಘವೇಂದ್ರ, ನಾರಾಯಣಸ್ವಾಮಿ, ಮಂಜುನಾಥ್, ವೆಂಕಟಾಚಲಪತಿ, ಶಿಕ್ಷಕರಾದ ಗೋಪಾಲಕೃಷ್ಣ, ವೆಂಕಟರೆಡ್ಡಿ, ಸುಗುಣಾ, ಫರೀದಾ ಮತ್ತಿತರರಿದ್ದರು.

ಶ್ರೀನಿವಾಸಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ತಹಶೀಲ್ದಾರ್ ಶಿರಿನ್ ತಾಜ್ ಬಿಡುಗಡೆ

ಶ್ರೀನಿವಾಸಪುರ: ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಡಿ.9 ರಂದು ನಡೆಯಲಿರುವ 12ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ತಹಶೀಲ್ದಾರ್ ಶಿರಿನ್ ತಾಜ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಗಡಿ ಭಾಗದಲ್ಲಿ ನಡೆಯುವ ಸಾಹಿತ್ಯ ಸಮ್ಮೇಲನಕ್ಕೆ ತನ್ನದೇ ಆದ ಮಹತ್ವ ಇರುತ್ತದೆ. ಸಾಂಘಿಕ ಪ್ರಯತ್ನದ ಮೂಲಕ ಸಮ್ಮೇಳನ ಯಶಸ್ವಿಗೊಳಿಸಬೇಕು. ಯಶಸ್ಸಿನಲ್ಲಿ ಸ್ಥಳೀಯರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರ ಮುಖ್ಯವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಮಾತನಾಡಿ, ಸಮ್ಮೇಳನಾಧ್ಯಕ್ಷರ ಆಯ್ಕೆ ಸರ್ವಾನುಮತದಿಂದ ಕೂಡಿದ್ದು, ಎಲ್ಲ ಕಾರ್ಯಕ್ರಮಗಳನ್ನೂ ಪಾರದರ್ಶಕವಾಗಿ ಆಯ್ಕೆ ಮಾಡಲಾಗಿದೆ. ಕನ್ನಡ ಪರ ಸಂಘ ಸಂಸ್ಥೆಗಳು, ಶಿಕ್ಷಕ ಸಮುದಾಯ, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಸಾಹಿತ್ಯ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪಿ.ಎಸ್.ಮಂಜುಳ, ತಾಲ್ಲೂಕು ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಟಿ.ಎಸ್.ಮಾಯಾ ಬಾಲಚಂದ್ರ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಎಂ.ಬೈರೇಗೌಡ, ಶ್ರೀರಾಮೇಗೌಡ, ಜಿ.ವಿ.ಚಂದ್ರಪ್ಪ, ಮುನೇಗೌಡ, ರಮೇಶ್, ಮೋಹನ್ ಗುಪ್ತ, ಕಲಾ ಶಂಕರ್, ಆರ್.ರವಿಕುಮಾರ್, ನಟರಾಜ್, ಅನಿಲ್ ಕುಮಾರ್, ಸುಧಾಕರ್, ವೆಂಕಟರವಣ, ಸುಬ್ರಮಣಿ ಮತ್ತಿತರರು ಇದ್ದರು.

ಪ್ರತಿಯೊಬ್ಬ ಪ್ರಜೆ, ದೇಶದ ಆರ್ಥಿಕ, ಸಾಮಾಜಿಕ ವಿಚಾರದಲ್ಲಿ ಮಾಹಿತಿ ಹೊಂದಿರಬೇಕಾದುದು ಮುಖ್ಯ – ಕೆ. ಜಯಪ್ರಕಾಶ್ ಹೆಗ್ಡೆ

ವಿ. ಮೋಹನ್ ರಾವ್ ಅವರ “ಟೆಸ್ಟಿಂಗ್ ಟೈಮ್ಸ್ ಫಾರ್ ಇಂಡಿಯನ್ ಇಕಾನಮಿ” ಪುಸ್ತಕ ಬಿಡುಗಡೆ


ಕುಂದಾಪುರ
: “ಪ್ರತಿಯೊಬ್ಬ ಪ್ರಜೆ, ದೇಶದ ಆರ್ಥಿಕ, ಸಾಮಾಜಿಕ , ರಾಜಕೀಯ ವಿಚಾರಗಳ ಬಗ್ಗೆ ಮಾಹಿತಿ ಹೊಂದಿ, ಜಾಗೃತನಾದಾಗ, ಪ್ರಶ್ನೆ ಮಾಡಲು ಕಲಿತಾಗ, ಸತ್ಯ ಹೇಳುವ ಧೈರ್ಯ ಮಾಡಿದಾಗ, ದೇಶ ಸ್ವಚ್ಛ ಭಾರತ, ಸ್ವಸ್ಥ ಭಾರತ ಆಗಲು ಸಾಧ್ಯ. ಪ್ರಜೆಗಳು ತಿಳಿಯುವ ಆಸಕ್ತಿ ತೋರದಿದ್ದಾಗ, ತಿಳಿದೂ ನಿರ್ಲಕ್ಷ ವಹಿಸಿದಾಗ ಸಮಸ್ಯೆ ಉಂಟಾಗುತ್ತದೆ. ಭ್ರಷ್ಟಾಚಾರ ನಡೆದಾಗ ಜನ ಪ್ರಶ್ನೆ ಮಾಡದಿದ್ದರೆ ನಷ್ಟ ಆಗುವುದು ಜನರಿಗೆ. ಹೆಚ್ಚಿನ ತೆರಿಗೆ ಜನರು ಕಟ್ಟುವ ಪರಿಸ್ಥಿತಿ ಬರುತ್ತದೆ” ಎಂದು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು. ಕುಂದಾಪುರ ಭಂಡಾರ್‍ಕಾರ್ಸ್ ಕಾಲೇಜಿನ ರಾಧಾಬಾಯಿ ರಮಣ ಪ್ರಭು ಸಭಾಂಗಣದಲ್ಲಿ ವಿ. ಮೋಹನ್ ರಾವ್ ಅವರ “ಟೆಸ್ಟಿಂಗ್ ಟೈಮ್ಸ್ ಫಾರ್ ಇಂಡಿಯನ್ ಇಕಾನಮಿ” ಎನ್ನು ಪುಸ್ತಕ ಬಿಡುಗಡೆ ಮಾಡುತ್ತಾ ಅವರು ಹೇಳಿದರು.
“ವಿ. ಮೋಹನ್ ರಾವ್ ಅವರ ಪುಸ್ತಕ ದೇಶದ ಆರ್ಥಿಕ ವಿಚಾರಗಳ ಕುರಿತು ಹಲವು ಉಪಯುಕ್ತ ಮಾಹಿತಿ ನೀಡುತ್ತಿದೆ. ಈ ಬಗ್ಗೆ ವಿಚಾರ ವಿನಿಮಯಗಳು ನಡೆಯಬೇಕು. ಶಾಸಕಾಂಗದಲ್ಲಿರುವವರ ಜನೋಪಯೋಗಿ ಚಿಂತನೆಗಳನ್ನು ಕಾರ್ಯಾಂಗದವರು ಕಾರ್ಯಗತಗೊಳಿಸುವ ವ್ಯವಸ್ಥೆಯಿಂದ ಮಾತ್ರ ಉತ್ತಮ ಕಾರ್ಯ ಆಗಲು ಸಾಧ್ಯ. ಸಂಬಂಧಪಟ್ಟವರು ಇಂತಹ ಉತ್ತಮ ಪುಸ್ತಕಗಳ ಅಧ್ಯಯನ ಮಾಡಬೇಕು” ಎಂದು ಕೆ. ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯ ಪಟ್ಟರು.

ಭಂಡಾರ್‍ಕಾರ್ಸ್ ಕಾಲೇಜಿನ ವಿಶ್ವಸ್ಥರಾದ ಕೆ. ಶಾಂತಾರಾಮ ಪ್ರಭು ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಲೆಕ್ಕ ಪರಿಶೋಧಕ ಟಿ. ಕೃಷ್ಣರಾಯ ಶ್ಯಾನುಭಾಗ ಕೃತಿಯ ಬಗ್ಗೆ ಮಾತನಾಡಿ “ವಿ. ಮೋಹನ್ ರಾವ್ ತಮ್ಮ ಕೃತಿಯಲ್ಲಿ ಭಾರತದ ಆರ್ಥಿಕ ವ್ಯವಸ್ಥೆಯ ಎಲ್ಲ ಮಜಲುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಅಧ್ಯಯನ ಮಾಡಿ ಬರೆದಿರುವುದು ತಿಳಿಯುತ್ತದೆ. ಇವರು ಅಭಿನಂದನೀಯರು ಇದು ಸಂಗ್ರಾಹಯೋಗ್ಯ ಪುಸ್ತಕ. ಕರೋನಾ ಸಮಸ್ಯೆ ನಡುವೆಯೂ ದೇಶಕ್ಕೆ ಆರ್ಥಿಕ ದೃಢತೆ ನೀಡುವಲ್ಲಿ ಸರಕಾರ ಬಹಳ ಶ್ರಮ ಪಟ್ಟಿದೆ ಎಂದರು.
ಮುಖ್ಯ ಅತಿಥಿ ಸಿಂಡಿಕೇಟ್ ಬ್ಯಾಂಕ್‍ನ ನಿವೃತ್ತ ಡೆಪ್ಯೂಟಿ ಜನರಲ್ ಮೆನೇಜರ್ ಸುಜೀಶ್ ಪ್ರಭಾಕರ್ ಶುಭ ಹಾರೈಸಿ ವಿ. ಮೋಹನ್ ರಾವ್ ಪ್ರಕಟಿಸಿದ ಎರಡೂ ಕೃತಿಗಳು ದೇಶದ ಅರ್ಥ ವ್ಯವಸ್ಥೆಯ ಕನ್ನಡಿಯಂತಿವೆ ಎಂದರು.
ಸದರ್ನ್ ಇಕಾನಾಮಿಸ್ಟ್ ಬೆಂಗಳೂರು ಹಾಗೂ “ಕುಂದಪ್ರಭ” ಆಶ್ರಯದಲ್ಲಿ ನಡೆದ ಈ ಸಮಾರಂಭದಲ್ಲಿ ಲೇಖಕ ವಿ. ಮೋಹನ್ ರಾವ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಯು. ಎಸ್. ಶೆಣೈ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಹ. ಸೋಮಶೇಖರ ಶೆಟ್ಟಿ ವಂದಿಸಿದರು.