

ಮಾದಕ ವಸ್ತುಗಳ ಸೇವನೆ ಈಗ ವಿರಾಟ್ ರೂಪ ತಾಳಿ ವಿಶ್ವವ್ಯಾಪಿಯಾಗಿದೆ. ಬಹುತೇಕ ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆಯನ್ನು ತಮ್ಮ ದಿನ ನಿತ್ಯದ ಬದುಕಿನ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಿದ್ದು, ವಿದ್ಯಾರ್ಥಿ ಸಮುದಾಯದಲ್ಲಿ ಅಪಾಯಕರ ರೀತಿಯಲ್ಲಿ ಹೆಚ್ಚುತ್ತಿರುವ ಈ ಪ್ರಸಕ್ತ ಸಂದರ್ಭದಲ್ಲಿ ಈ ಅಮಲು ಪದಾರ್ಥಗಳ ಸೇವನೆಯು ಕೇವಲ ಸಾಮಾಜಿಕ ಮತ್ತು ಆರೋಗ್ಯದ ಸಮಸ್ಯೆ ಮಾತ್ರವಲ್ಲ ಒಂದು ದೇಶದ ಯುವ ಜನಾಂಗ ಎದುರಿಸುತ್ತಿರುವ ಅತ್ಯಂತ ಭೀಕರ ಸಮಸ್ಯೆಯಾಗಿದೆ ಎಂದು ರೋ ಪಿ. ರಾಘವೇಂದ್ರ ಭಟ್, ಅಧ್ಯಕ್ಷರು ರೋಟರಿ ಮಿಡ್ಟೌನ್ ಇವರು ಅಭಿಪ್ರಾಯ ಪಟ್ಟರು. ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ.) ಬಾಳ್ಕುದ್ರು ಹಂಗಾರಕಟ್ಟೆ ಗ್ರಾಮ ಪಂಚಾಯತ್ ಕುಕ್ಕೆಹಳ್ಳಿ ರೋಟರಿ ಉಡುಪಿ ಮಿಡ್ಟೌನ್ ಹಾಗೂ ಪಿ.ಎಂ.ಶ್ರೀ ಸ.ಹಿ.ಪ್ರಾ. ಶಾಲೆ ಕುಕ್ಕೆಹಳ್ಳಿ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ನಡೆದ ಮಾದಕ ವಸ್ತುಗಳ ದುಷ್ಪರಿಣಾಮಗಳು ಮಾಹಿತಿ ಶಿಬಿರ – ೨೦೨೬ ಉದ್ಘಾಟಿಸಿ ಮಾತಾಡಿದರು.
ಮುಖ್ಯ ಅತಿಥಿಯಾಗಿ ಪುರಂದರ ಕೋಟ್ಯಾನ್ ಅಧ್ಯಕ್ಷರು ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ಇವರು ಮಾತಾಡಿ ವ್ಯಕ್ತಿಗಳ ನಡುವಿನ ಮನಸ್ತಾಪಗಳು, ಹಲವು ಬಗೆಯ ನೋವು ನಿರಾಶೆಗಳು, ಹಣಕಾಸಿನ ಮುಗ್ಗಟ್ಟು ಉದ್ಯೋಗದಲ್ಲಿನ ಸಮಸ್ಯೆ, ಲೈಂಗಿಕ ಸಮಸ್ಯೆ ಮತ್ತು ಮಾನಸಿಕ ಒತ್ತಡದಿಂದ ವಿಮುಖರಾಗಲು, ಮಾದಕ ವಸ್ತುಗಳ ಸೇವನೆ ಮಾಡುತ್ತಾ ಅದನ್ನೇ ಚಟವಾಗಿ ಬೆಳೆಸಿಕೊಂಡು ಅದರ ದಾಸಾನು ದಾಸರಾಗುತ್ತಾರೆ. ಅದನ್ನು ತಡೆಗಟ್ಟಲು ಇಂತಹ ಮಾಹಿತಿ ವಿದ್ಯಾರ್ಥಿ ದೆಸೆಯಿಂದಲೇ ಎಚ್ಚರಿಸಿದಾಗ ಅವರು ಮುಂದೆ ದುಶ್ಚಟಕ್ಕೆ ಬಲಿಯಾಗದೇ ಉತ್ತಮ ನಾಗರಿಕರಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ಉಚ್ಚರಿಸಿದರು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಅನಿತಾ ನರೇಂದ್ರ ಕುಮಾರ್ ಜೇಸಿಐ ತರಬೇತಿದಾರರು ಹಾಗೂ ಉಪನ್ಯಾಸಕರು ಮಾದಕ ವಸ್ತುಗಳ ಬಗ್ಗೆ ಕಥೆಯ ಮೂಲಕ ದುಶ್ಚಟಕ್ಕೆ ಬಲಿಯಾದವರು ಸಾಮಾಜಿಕ ನೈತಿಕ ಹಾಗೂ ಧಾರ್ಮಿಕ ಮೌಲ್ಯಗಳನ್ನು ತಿರಸ್ಕರಿಸಿ ಸಮಾಜಕ್ಕೆ ಕಂಟಕಪ್ರಾಯರಾಗಿ ಬದುಕುತ್ತಾರೆ ಎಂದು ವಿವಿಧ ಚಟುವಟಿಕೆಯ ಮೂಲಕ ಮನವರಿಕೆ ಮಾಡಿಕೊಟ್ಟರು.
ಸಭಾಧ್ಯಕ್ಷತೆಯನ್ನು ರವೀಂದ್ರ ಉಪಾಧ್ಯಕ್ಷರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಇವರು ನಿರ್ವಹಿಸಿ ಟಿ.ವಿ. ಸರಣಿ, ಸಿನಿಮಾಗಳು ಡ್ರಗ್ಸ್ ಬಗ್ಗೆ ವೈಭೀಕರಿಸಿ ಇನ್ನಷ್ಟು ಗೊಂದಲ ಉಂಟು ಮಾಡುತ್ತಾರೆ. ಅಲ್ಲದೇ ಇದಕ್ಕೆಲ್ಲಾ ಮೂಲ ಕಾರಣ ಬಡತನ, ಅಜ್ಞಾನ, ಪೋಷಕರ ಬೇಜವಾಬ್ದಾರಿತನ ಕೂಡ ಆಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ದುರ್ಗಾಪ್ರಸಾದ್ ಕೆ. ಎಲ್. ಕಾರ್ಯದರ್ಶಿ ರೋಟರಿ ಉಡುಪಿ ಮಿಡ್ಟೌನ್, ವಿಶ್ವನಾಥ ಬೆಳಂಪಳ್ಳಿ ಸದಸ್ಯರು ಎಸ್.ಡಿ.ಎಂ.ಸಿ. ಹಾಗೂ ಗಣೇಶ್ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು. ಪಿ.ಎಂ.ಶ್ರೀ ಸ.ಹಿ.ಪ್ರಾ ಶಾಲೆ ಕುಕ್ಕೆಹಳ್ಳಿ ಮುಖ್ಯ ಶಿಕ್ಷಕಿ ಸ್ವಾಗತಿಸಿ, ಅಭಿವೃದ್ಧಿ ಸಂಸ್ಥೆ (ರಿ) ಬಾಳ್ಕುದ್ರು ಹಂಗಾರಕಟ್ಟೆ ಕಾರ್ಯದರ್ಶಿ ರಮೇಶ್ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತಾಡಿದರು. ದಿವ್ಯ ಉಡುಪಿ ನಿರೂಪಿಸಿ, ಸುಧಾ ಭಟ್ ಅಮಾಸೆಬೈಲು ವಂದಿಸಿದರು. ಸುಮಾರು 93 ವಿದ್ಯಾರ್ಥಿಗಳು ಈ ಶಿಬಿರದಿಂದ ಪ್ರಯೋಜನ ಪಡೆದರು.

