

ಕೋಲಾರ : ಕರ್ನಾಟಕ ಫಿಟ್ನೆಸ್ ಫಸ್ಟ್ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್, ಕೋಲಾರ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಹಾಗೂ ಫಿಟ್ನೆಸ್ ಸ್ಪರ್ಧೆಯನ್ನು ಜೂನಿಯರ್ ಕಾಲೇಜು ಕಾಂಪೌಂಡ್ನಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.
ಸ್ಪರ್ಧೆಯಲ್ಲಿ ಬಾಡಿ ಬಿಲ್ಡಿಂಗ್, ಪುರುಷರ ಫಿಸಿಕ್, ಕ್ಲಾಸಿಕ್ ಫಿಸಿಕ್, ಮಾಸ್ಟರ್ಸ್ ಹಾಗೂ ಫಿಟ್ನೆಸ್ ವಿಭಾಗಗಳಲ್ಲಿ ಪೈಪೋಟಿ ನಡೆಯಿತು. ಸಣ್ಣ, ಮಧ್ಯಮ, ಎತ್ತರ ಹಾಗೂ ಸೂಪರ್ ಎತ್ತರ ವಿಭಾಗಗಳಾಗಿ ವಿಭಜಿಸಲಾದ ಈ ಚಾಂಪಿಯನ್ಶಿಪ್ನಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಅನೇಕ ಕ್ರೀಡಾಪಟುಗಳು ಭಾಗವಹಿಸಿ ತಮ್ಮ ದೈಹಿಕ ಸಾಮರ್ಥ್ಯ, ಶಿಸ್ತು ಹಾಗೂ ಫಿಟ್ನೆಸ್ ಕೌಶಲ್ಯವನ್ನು ಪ್ರದರ್ಶಿಸಿದರು.
ಜಿಲ್ಲಾ ಮಟ್ಟದ ಈ ಸ್ಪರ್ಧೆಯಲ್ಲಿ ಶ್ರೀನಿವಾಸಪುರ ಪಟ್ಟಣದ
52 ವರ್ಷಗಳು ಅಬ್ಬಾಸ್ ಬಾಬು ಅವರು ಅತ್ಯುತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ಗಮನ ಸೆಳೆದರು. ಬಾಡಿ ಬಿಲ್ಡಿಂಗ್, ಪುರುಷರ ಫಿಸಿಕ್, ಕ್ಲಾಸಿಕ್ ಫಿಸಿಕ್ ಹಾಗೂ ಮಾಸ್ಟರ್ಸ್ ವಿಭಾಗಗಳಲ್ಲಿ ಅವರ ಪ್ರದರ್ಶನ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಫಿಟ್ನೆಸ್ ಫಸ್ಟ್ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಅಧ್ಯಕ್ಷ ಅಕ್ಬರ್ ಪಾಷಾ, ಯುವಕರು ಆರೋಗ್ಯ ಹಾಗೂ ಫಿಟ್ನೆಸ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ಇಂತಹ ಸ್ಪರ್ಧೆಗಳು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಜೊತೆಗೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತವೆ ಎಂದರು. ಖಜಾಂಚಿ ಸಂತೋಷ್ ಕುಮಾರ್ ಸ್ಪರ್ಧೆಯ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸ್ಪರ್ಧೆಯ ಅಂತ್ಯದಲ್ಲಿ ವಿಜೇತರಿಗೆ ಪ್ರಮಾಣಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ಜಿಲ್ಲೆಯ ಫಿಟ್ನೆಸ್ ಕ್ಷೇತ್ರಕ್ಕೆ ಹೊಸ ಉತ್ಸಾಹ ತುಂಬಿದ ಈ ಕಾರ್ಯಕ್ರಮವನ್ನು ಕ್ರೀಡಾಭಿಮಾನಿಗಳು ಹರ್ಷದಿಂದ ಸ್ವಾಗತಿಸಿದರು. ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಇನ್ನಷ್ಟು ಸ್ಪರ್ಧೆಗಳನ್ನು ಆಯೋಜಿಸುವುದಾಗಿ ಸಂಘಟಕರು ತಿಳಿಸಿದ್ದಾರೆ.




