

ಶ್ರೀನಿವಾಸಪುರ : ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸಲು ಅನುದಾನದ ಕೊರತೆ ಇಲ್ಲ. ತಕ್ಷಣ ಕ್ರಿಯಾಯೋಜನೆಗಳನ್ನು ಸಿದ್ಧಪಡಿಸಿ, ತಾಲ್ಲೂಕು ಪಂಚಾಯಿತಿ ಇಒರಿಂದ ಅನುಮೋದನೆ ಪಡೆದು ನೀರು ಸರಬರಾಜು ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಪ್ರವೀಣ್ ಪಿ. ಬಾಗೇವಾಡಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನ ಹೊಗಳಗೆರೆ ಸಸ್ಯ ಕ್ಷೇತ್ರ ಸಭಾಂಗಣದಲ್ಲಿ ಶುಕ್ರವಾರ ನಡೆದ ಶ್ರೀನಿವಾಸಪುರ ಹಾಗೂ ಮುಳಬಾಗಿಲು ತಾಲ್ಲೂಕಿನ ಗ್ರಾಮಪಂಚಾಯಿತಿ ಆಡಳಿತಾಧಿಕಾರಿಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈಗಾಗಲೇ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸುವ ವ್ಯವಸ್ಥೆಗಳನ್ನು ಸ್ಥಳೀಯ ಮಟ್ಟದಲ್ಲಿ ಕೈಗೊಳ್ಳಲಾಗಿದೆ. ಇನ್ನೂ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ತಕ್ಷಣ ಪಟ್ಟಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶ್ರೀನಿವಾಸಪುರ ತಾಲ್ಲೂಕಿನ 23 ಗ್ರಾಮಗಳು ಮತ್ತು ಮುಳಬಾಗಿಲು ತಾಲ್ಲೂಕಿನ 29 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 94 ಘಟಕಗಳು ಬಾಕಿ ಉಳಿದಿವೆ.
ಶ್ರೀನಿವಾಸಪುರ ತಾಲ್ಲೂಕಿನಲ್ಲಿ 24 ಘಟಕಗಳು ದುರಸ್ತಿ ಅಗತ್ಯವಿದ್ದು, ಮುಂದಿನ ವಾರದಲ್ಲಿ 14 ಘಟಕಗಳನ್ನು ದುರಸ್ತಿ ಮಾಡಲಾಗುವುದು. ಉಳಿದ ಘಟಕಗಳ ದುರಸ್ತಿ ಕಾರ್ಯವೂ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ, ಜಲ್ ಜೀವನ ಮಿಷನ್ (ಜೆ.ಜೆ.ಎಂ.) ಕಾಮಗಾರಿಗಳ ಪ್ರಗತಿ, ತೆರಿಗೆ ವಸೂಲಾತಿ, ಲೆಕ್ಕ ಪರಿಶೋಧನೆ, ಕೂಸಿನ ಮನೆಗಳ ನಿರ್ವಹಣೆ, ಬೀದಿ ನಾಯಿಗಳ ನಿಯಂತ್ರಣ, ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಕಾಮಗಾರಿಗಳು, ನರೇಗಾ ಯೋಜನೆಯಡಿ ಕಾಮಗಾರಿಗಳ ಪೂರ್ಣಗೊಳಿಸುವಿಕೆ, ಎಸ್ಕ್ಯೂಎಂ ಹಾಗೂ ಒಂಬಡ್ಸ್ಮನ್ ವಸೂಲಾತಿ, ಸಾಮಾಜಿಕ ಲೆಕ್ಕ ಪರಿಶೋಧನೆ, ಪಂಚತಂತ್ರ ದಾಖಲೀಕರಣ, ಸಿಬ್ಬಂದಿಗಳ ವೇತನ ಪಾವತಿ ಹಾಗೂ ಜನಗಣತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಮಗ್ರ ಪರಿಶೀಲನೆ ನಡೆಸಲಾಯಿತು.
ಸಭೆಯಲ್ಲಿ ಕಾರ್ಯನಿರ್ವಾಹಕ ಕೆ. ಸರ್ವೇಶ್, ಸಹಾಯಕ ನಿರ್ದೇಶಕ ರಾಮಪ್ಪ ಸೇರಿದಂತೆ ಶ್ರೀನಿವಾಸಪುರ ಮತ್ತು ಮುಳಬಾಗಿಲು ತಾಲ್ಲೂಕಿನ ಎಲ್ಲಾ ಗ್ರಾಮಪಂಚಾಯಿತಿ ಆಡಳಿತಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ನರೇಗಾ ಸಿಬ್ಬಂದಿ ಹಾಜರಿದ್ದರು.


