

ಬೆಂಗಳೂರು (ವರದಿ ಶಬ್ಬೀರ್ ಅಹ್ಮದ್) : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ನೌಕರರ ಮಾನವ ಸಂಪನ್ಮೂಲ ಸೇವೆಗಳನ್ನು ಮತ್ತಷ್ಟು ಸುಲಭ, ವೇಗ ಹಾಗೂ ಪಾರದರ್ಶಕವಾಗಿಸುವ ಉದ್ದೇಶದಿಂದ ‘ಸಾರಿಗೆ ಮಿತ್ರ’ HRMS ಮೊಬೈಲ್ ಆಪ್ನ ನವೀಕೃತ ಆವೃತ್ತಿ 2.0.0 ಅನ್ನು ಬಿಡುಗಡೆ ಮಾಡಲಾಗಿದೆ. ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಇಂದು ಈ ಆಪ್ಗೆ ಅಧಿಕೃತ ಚಾಲನೆ ನೀಡಿದರು.
ಡಿಜಿಟಲ್ ಪರಿವರ್ತನೆಗೆ ಒತ್ತು ನೀಡುವ ಜೊತೆಗೆ ನೌಕರರ ಕಲ್ಯಾಣ ಮತ್ತು ಆಡಳಿತಾತ್ಮಕ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಹೊಸ ವರ್ಷದ ಸಾರ್ಥಕ ಆರಂಭವಾಗಿ ಬಿಡುಗಡೆಯಾದ ‘ಸಾರಿಗೆ ಮಿತ್ರ’ HRMS ಮೊಬೈಲ್ ಆಪ್ ಮೂಲಕ ನೌಕರರಿಗೆ ಸ್ಮಾರ್ಟ್ಫೋನ್ನಲ್ಲೇ ಮಾನವ ಸಂಪನ್ಮೂಲ ಸಂಬಂಧಿತ ಎಲ್ಲ ಸೇವೆಗಳು ಲಭ್ಯವಾಗಲಿವೆ.
ಈ ಆಪ್ನಲ್ಲಿ ಜಿಯೋ ಫೆನ್ಸಿಂಗ್ ಆಧಾರಿತ ಹಾಜರಾತಿ ವ್ಯವಸ್ಥೆ, ಮಾಸಿಕ ಹಾಜರಾತಿ ವೀಕ್ಷಣೆ, ವೈಯಕ್ತಿಕ ಮಾಹಿತಿ ಹಾಗೂ ಸೇವಾ ದಾಖಲಾತಿ (ಸರ್ವಿಸ್ ರಿಜಿಸ್ಟರ್) ವಿವರಗಳ ಪರಿಶೀಲನೆ, ಕುಟುಂಬ ಸದಸ್ಯರ ಮಾಹಿತಿ ಮತ್ತು ನಾಮಿನಿ ವಿವರಗಳನ್ನು ವೀಕ್ಷಿಸುವ ಸೌಲಭ್ಯಗಳಿವೆ. ಜೊತೆಗೆ ಮಾಸಿಕ ವೇತನ ಪಟ್ಟಿ (ಪೇ ಸ್ಲಿಪ್)ಗಳನ್ನು ಒಂದೇ ಕ್ಲಿಕ್ಕಿನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ರಜೆ ನಿರ್ವಹಣಾ ವ್ಯವಸ್ಥೆ ಮೂಲಕ ಖಾತೆಯಲ್ಲಿರುವ ರಜೆಗಳ ವಿವರಗಳನ್ನು ತಿಳಿದುಕೊಳ್ಳಬಹುದಾಗಿದ್ದು, ನಿಗಮದ ವಿವಿಧ ವಿಭಾಗಗಳಿಂದ ಹೊರಡಿಸಲಾಗುವ ಸುತ್ತೋಲೆಗಳು ಮತ್ತು ಮಹತ್ವದ ಸೂಚನೆಗಳು ಆಪ್ ಮೂಲಕ ನೇರವಾಗಿ ನೌಕರರಿಗೆ ತಲುಪುವಂತೆ ಆಂತರಿಕ ಸಂವಹನ ವ್ಯವಸ್ಥೆಯನ್ನು ಬಲಪಡಿಸಲಾಗಿದೆ.
ಬೆರಳಂಚಿನಲ್ಲೇ ಸಮಗ್ರ ಮಾಹಿತಿ ಲಭ್ಯವಾಗುವ ಈ ವ್ಯವಸ್ಥೆಯಿಂದ ನೌಕರರ ದಿನನಿತ್ಯದ ಕೆಲಸಗಳು ಇನ್ನಷ್ಟು ಸುಗಮವಾಗಲಿವೆ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷ ಭಾಆಸೇ, ನಿರ್ದೇಶಕರು (ಸಿ & ಪಿ) ಡಾ. ನಂದಿನಿ ದೇವಿ ಭಾಆಸೇ ಸೇರಿದಂತೆ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

