

ಶ್ರೀನಿವಾಸಪುರ: ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುವ ವೃತ್ತಿಪರರಾಗಬೇಕು. ಹುದ್ದೆ ಯಾವುದೇ ಮಾನದಂಡವಲ್ಲ; ಅದು ಒಂದು ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀನಿವಾಸಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಮಾತನಾಡಿದ ಅವರು, ಅವಿರೋಧವಾಗಿ ಆಯ್ಕೆಯಾದ ನೂತನ ಸಮಿತಿ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಎಲ್ಲರೂ ಒಗ್ಗಟ್ಟಿನಿಂದ ಸಂಘವನ್ನು ಮುನ್ನಡೆಸಬೇಕು ಎಂದು ಕರೆ ನೀಡಿದರು.
ಚುನಾವಣಾಧಿಕಾರಿ ಪಾ.ಶ್ರೀ ಅನಂತರಾಮ್ ಮಾತನಾಡಿ, ಈ ಬಾರಿ ಚುನಾವಣೆ ಹಬ್ಬದ ವಾತಾವರಣದಲ್ಲಿ ಸೌಹಾರ್ದತೆಯಿಂದ ನಡೆಯಿತು. ನಾವು ಎಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ನಡೆದುಕೊಳ್ಳಬೇಕು. ಈ ಬಾರಿ ಶ್ರೀನಿವಾಸಪುರ ತಾಲ್ಲೂಕು ಶಾಖೆಗೆ ಒಟ್ಟು 15 ಮಂದಿ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿದ್ದು, ಉಳಿದ ಸ್ಥಾನಗಳಿಗೆ ಅಗತ್ಯಕ್ಕೆ ತಕ್ಕಷ್ಟು ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ದೊಡ್ಡವರು–ಚಿಕ್ಕವರು ಎನ್ನುವ ಭೇದವಿಲ್ಲದೆ ಆಯ್ಕೆಯಾದ ಎಲ್ಲರೂ ಪ್ರೀತಿ–ವಿಶ್ವಾಸದಿಂದ ಸಂಘವನ್ನು ಗೌರವದಿಂದ ಮುನ್ನಡೆಸಬೇಕು ಎಂದು ತಿಳಿಸಿದರು.
ಜಿಲ್ಲಾ ಖಜಾಂಚಿ ರಾಜೇಂದ್ರ ಸಿಂಹ ಮಾತನಾಡಿ, ಎಲ್ಲರೂ ಸಹಕಾರದ ಮನೋಭಾವದಿಂದ ಸಂಘದ ಬೆಳವಣಿಗೆಗೆ ಕೈಜೋಡಿಸಬೇಕು. ಪತ್ರಕರ್ತರ ಸಂಘಕ್ಕೆ ಶಾಶ್ವತ ಭವನ ನಿರ್ಮಾಣಕ್ಕಾಗಿ ಅಗತ್ಯವಾದ ಜಾಗವನ್ನು ಪಡೆದು, ಮುಂದಿನ ಮೂರು ವರ್ಷಗಳೊಳಗೆ ನೂತನ ಭವನ ನಿರ್ಮಿಸಿಕೊಳ್ಳುವಂತೆ ಸಲಹೆ ನೀಡಿದರು.
ನೂತನ ಸಮಿತಿ ಆಯ್ಕೆ:
ವಾಸವಿ ಕಲ್ಯಾಣ ಮಂಟಪದಲ್ಲಿ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಸಿ.ಕೆ. ಲಕ್ಷ್ಮಣ್ ಮತ್ತು ಎನ್. ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಎಂ. ಲಕ್ಷ್ಮಣ್ ಆಯ್ಕೆಯಾದರು.
ಅವಿರೋಧ ಆಯ್ಕೆ:
ಅಧ್ಯಕ್ಷರಾಗಿ ಯಮ್ಮನೂರು ನಾಗರಾಜ್, ಕಾರ್ಯದರ್ಶಿಗಳಾಗಿ ನಾರಾಯಣಮೂರ್ತಿ ಹಾಗೂ ವಿ. ರಮೇಶ್ ಕುಮಾರ್, ಖಜಾಂಚಿಯಾಗಿ ಎಸ್. ಲಕ್ಷ್ಮಣ ಬಾಬು ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಎಂ.ವಿ. ಮುನಿವೆಂಟೇಗೌಡ, ಶಬ್ಬೀರ್ ಅಹ್ಮದ್, ಎಲ್. ಮುರಳಿಮೋಹನ್, ಜಿ.ಆರ್. ಶ್ರೀನಿವಾಸ್, ಸಿ.ಎಲ್. ಕಾವ್ಯಶ್ರೀ, ಎಸ್. ಕಿಶೋರ್ ಕುಮಾರ್, ಆರ್. ರವಿಕುಮಾರ್ ಮತ್ತು ಕೆ.ವಿ. ಸುರೇಶ್ ಅವಿರೋಧವಾಗಿ ಆಯ್ಕೆಯಾದರು.
ವಿವಿಧ ಹುದ್ದೆಗಳಿಗೆ ಅಗತ್ಯಕ್ಕನುಗುಣವಾಗಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರಿಂದ 12 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆರ್. ಬಾಬು ಮತ್ತು ಎಂ. ಲಕ್ಷ್ಮಣ್, ಉಪಾಧ್ಯಕ್ಷ ಸ್ಥಾನಕ್ಕೆ ಎನ್. ಕೃಷ್ಣಮೂರ್ತಿ, ಸಿ.ಕೆ. ಲಕ್ಷ್ಮಣ್ ಹಾಗೂ ಎಚ್. ರಮೇಶ್ ನಾಮಪತ್ರ ಸಲ್ಲಿಸಿದ್ದರಿಂದ ಈ ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು. ಫಲಿತಾಂಶವಾಗಿ ಎಂ. ಲಕ್ಷ್ಮಣ್ ಪ್ರಧಾನ ಕಾರ್ಯದರ್ಶಿಯಾಗಿ, ಎನ್. ಕೃಷ್ಣಮೂರ್ತಿ ಮತ್ತು ಸಿ.ಕೆ. ಲಕ್ಷ್ಮಣ್ ಉಪಾಧ್ಯಕ್ಷರಾಗಿ ಜಯಗಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಪಾ.ಶ್ರೀ ಅನಂತ್ ರಾಮ್ ಪ್ರಕಟಿಸಿದರು.
ಸಹಾಯಕ ಚುನಾವಣಾಧಿಕಾರಿಗಳಾಗಿ ಪ್ರಕಾಶ್ ಮತ್ತು ಗಂಗಾಧರ್ ಕಾರ್ಯನಿರ್ವಹಿಸಿದರು.

