

ಶ್ರೀನಿವಾಸಪುರ : ತಾಲೂಕಿನ ಅನೇಕ ಗ್ರಾಮಗಳಲ್ಲಿ ಬಡಕುಟುಂಬಗಳ ಸಂಖ್ಯೆ ಹೆಚ್ಚಿರುವುದರಿಂದ, ಅವರ ಬದುಕಿಗೆ ಬಲವರ್ಧಕ ಯೋಜನೆಗಳನ್ನು ಜಾರಿಗೊಳಿಸುವುದೇ ತಮ್ಮ ಪ್ರಮುಖ ಧ್ಯೇಯವಾಗಿರುವುದಾಗಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಹೇಳಿದರು.
ತಾಲೂಕಿನ ರೋಣೂರು , ನಾರಮಾಕಪಳ್ಳಿ ಸಂಪರ್ಕ ರಸ್ತೆಯ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಒಆರ್ಎಫ್ ಯೋಜನೆಯಡಿ 3.40 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗೌನಿಪಳ್ಳಿ , ಬಿ.ಕೊತ್ತಕೋಟ ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ದ್ವಿಚಕ್ರವಾಹನ ಸವಾರರು, ಸರಕು ವಾಹನ ಚಾಲಕರು, ಬಸ್ ಚಾಲಕರು ತೀವ್ರ ತೊಂದರೆ ಅನುಭವಿಸುತ್ತಿರುವ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದ ಕಾರಣ ಈ ರಸ್ತೆ ಸುಧಾರಣೆ ಸಾಧ್ಯವಾಗಿದೆ ಎಂದರು. ಕಳಪೆ ಕಾಮಗಾರಿಗೆ ಅವಕಾಶವಿಲ್ಲದಂತೆ ಗುತ್ತಿಗೆದಾರರು ಗುಣಮಟ್ಟ ಕಾಪಾಡಲೇಬೇಕು ಎಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಗೌನಿಪಳ್ಳಿ ನಾಗಿರೆಡ್ಡಿಗಾರಿಪಳ್ಳಿ ಹಾಗೂ ಶೀಗಹಳ್ಳಿ ಸಮೀಪದ ರಸ್ತೆ ಕಾಮಗಾರಿಗಳಿಗೆ 3 ಕೋಟಿ ರೂ. ವೆಚ್ಚದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ತೂಪಲ್ಲಿ ಆರ್. ನಾರಾಯಣಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಶೇಖರ್, ಪಿಡಬ್ಲ್ಯುಡಿ ಎಇಇ ಮಂಜುನಾಥ್, ಕಿರಿಯ ಅಭಿಯಂತರ ಎನ್.ಎಂ. ನಾಗರಾಜ್, ಗುತ್ತಿಗೆದಾರ ಶಂಕರೇಗೌಡ ಹೂಸಮನಿ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.

