

ಶ್ರೀನಿವಾಸಪುರ : ಶ್ರೀನಿವಾಸಪುರ ವಲಯದ ಸರ್ಕಾರಿ ಉರ್ದು ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಹುದ್ದೆ ಖಾಲಿ ಇರುವ ಸಂದರ್ಭಗಳಲ್ಲಿ, ಉರ್ದು ಅರಿತಿರುವ ಶಿಕ್ಷಕರಿಗೇ ಮುಖ್ಯಶಿಕ್ಷಕರ ಚಾರ್ಜ್ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಆದೇಶ ಹೊರಡಿಸಲಾಗಿದೆ.
ಕೋಲಾರ ಉಪನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಮತ್ತು ಇಳುವರಿ ಇಲಾಖೆ, ಕೋಲಾರ ರವರ ಜ್ಞಾಪನದಂತೆ ಈ ಆದೇಶ ಹೊರಡಿಸಲಾಗಿದ್ದು, ಉರ್ದು ಶಾಲೆಗಳ ಶಿಕ್ಷಣ ಕಾರ್ಯದ ಗುಣಮಟ್ಟ ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ.
ಉರ್ದು ಶಾಲೆಗಳಲ್ಲಿ ಮುಖ್ಯಶಿಕ್ಷಕರಾಗಿ ಕೆಲಸ ಮಾಡುವವರಿಗೆ ಪಾಠಯೋಜನೆ, ವಾರ್ಷಿಕ ಪಾಠ ಹಂಚಿಕೆ, ಸೇತುಬಂಧ ಕಾರ್ಯಕ್ರಮದ ಪ್ರಶ್ನೆ ಪತ್ರಿಕೆ ಸಿದ್ಧತೆ, ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ತಯಾರಿ, LBA ಹಾಗೂ FLN ಸಂಬಂಧಿತ ವರದಿ ತಯಾರಿ ಮುಂತಾದ ಹಲವು ಜವಾಬ್ದಾರಿಗಳು ಇರುತ್ತವೆ. ಶಾಲಾ ದಾಖಲೆಗಳ ಶೇಕಡಾ 99 ರಷ್ಟು ಉರ್ದು ಭಾಷೆಯಲ್ಲಿ ಇರುವುದರಿಂದ, ಉರ್ದು ಅರಿಯದ ಶಿಕ್ಷಕರಿಗೆ ಚಾರ್ಜ್ ನೀಡಿದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಂದರೆ ಉಂಟಾಗುತ್ತದೆ ಎಂದು ವರದಿ ತಿಳಿಸಿದೆ.
ಅದಕ್ಕಾಗಿ, ಈ ವಲಯದ ಎಲ್ಲಾ ಸರ್ಕಾರಿ ಉರ್ದು ಶಾಲೆಗಳಲ್ಲಿ ಖಾಲಿ ಇರುವ ಮುಖ್ಯ ಶಿಕ್ಷಕರ ಹುದ್ದೆಗಳನ್ನು ಬಡ್ತಿ ಹಾಗೂ ವರ್ಗಾವಣೆಯ ಮೂಲಕ ಉರ್ದು ಶಿಕ್ಷಕರಿಂದಲೇ ಭರ್ತಿ ಮಾಡಲಾಗುವುದು. ಜೊತೆಗೆ, ಪ್ರಸ್ತುತ ಸೇವೆಯಲ್ಲಿರುವ ಉರ್ದು ಅರಿತ ಶಿಕ್ಷಕರಿಗೇ ಚಾರ್ಜ್ ನೀಡಲು ಸೂಚಿಸಲಾಗಿದೆ.
ಈ ಸಂಬಂಧ ಆದೇಶ ಪ್ರತಿಯನ್ನು ತಾಲ್ಲೂಕು ಉರ್ದು ಶಿಕ್ಷಣ ಸಂಯೋಜಕರಿಗೆ ಹಾಗೂ ಎಲ್ಲಾ ಉರ್ದು ಸಿಆರ್ಪಿಗಳಿಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗಿದೆ.

