

ಶ್ರೀನಿವಾಸಪುರ, ಜುಲೈ 15: ಪಟ್ಟಣದ ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತ ಸೇವಾ ಸಹಕಾರ ಸಂಘದ ಕಚೇರಿಯಲ್ಲಿ ಮಂಗಳವಾರದಂದು ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭ, ಡಿಸಿ ಸಿ ಬ್ಯಾಂಕಿನ ನಿರ್ದೇಶಕಿಯಾಗಿ ಆಯ್ಕೆಯಾದ ನಾಗರತ್ನಮ್ಮ ಹಾಗೂ ಕೋಮುಲ್ ನಿರ್ದೇಶಕರಾಗಿ ಆಯ್ಕೆಯಾದ ಕೆ.ಕೆ. ಮಂಜುನಾಥ್ ರೆಡ್ಡಿ ಮತ್ತು ಎನ್. ಹನುಮೇಶ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬೈರಾರೆಡ್ಡಿ ವಹಿಸಿದ್ದರು. ಸಂಘದ ಕಾರ್ಯದರ್ಶಿ ಶಿವಾರೆಡ್ಡಿ, ನಿರ್ದೇಶಕರಾದ ಶಬ್ಬೀರ್ ಅಹ್ಮದ್, ದ್ವಾರಸಂದ್ರದ ಮುನಿವೆಂಕಟರೆಡ್ಡಿ, ವೆಂಕಟರೆಡ್ಡಿ, ರಾಮಚಂದ್ರ, ಮುನಿಯಪ್ಪ, ಗುರ್ರಪ್ಪ, ಮುನಿಸ್ವಾಮಿ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಅತಿಥಿಗಳು, “ಸಹಕಾರ ಕ್ಷೇತ್ರದಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸುವ ಮೂಲಕ ರೈತ ಸಮುದಾಯದ ಆರ್ಥಿಕ ಸ್ಥಿತಿಗತಿಗಳನ್ನು ಉತ್ತೇಜಿಸೋಣ” ಎಂದು ಭರವಸೆ ನೀಡಿದರು. ಅವರು ತಮ್ಮ ನೂತನ ಜವಾಬ್ದಾರಿಯನ್ನು ಗ್ರಾಮೀಣ ಅಭಿವೃದ್ಧಿಗೆ ಸಮರ್ಪಿಸಲು ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.

