


ಶ್ರೀನಿವಾಸಪುರ, ಜೂ. 13: ಪಟ್ಟಣ ಅಭಿವೃದ್ಧಿ ಯೋಜನೆಯಡಿ ಸುಮಾರು ₹6 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರು ತಮ್ಮ ಮೇಲೆ ಇಟ್ಟಿರುವ ಪ್ರೀತಿ ಮತ್ತು ವಿಶ್ವಾಸದಿಂದ ತಮಗೆ ಮತ ನೀಡಿ ಗೆಲುವು ತಂದುಕೊಟ್ಟಿದ್ದಾರೆ. ಆ ವಿಶ್ವಾಸಕ್ಕೆ ಪ್ರತಿಯಾಗಿ ಕ್ಷೇತ್ರದಾದ್ಯಂತ ಜನರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ನಿರಂತರವಾಗಿ ಶ್ರಮಿಸುತ್ತಿರುವುದಾಗಿ ಹೇಳಿದರು.
ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಸಾರ್ವಜನಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.
ರಸ್ತೆ ಕಾಮಗಾರಿಗಳ ಗುತ್ತಿಗೆ ಪಡೆದ ಗುತ್ತಿಗೆದಾರರು ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಹಾಗೂ ದೀರ್ಘಕಾಲ ಬಾಳಿಕೆ ಬರುವ ರೀತಿಯಲ್ಲಿ ನಿರ್ವಹಿಸಬೇಕು ಎಂದು ಸೂಚಿಸಿದರು. ಸರ್ಕಾರದ ಅನುದಾನದಲ್ಲಿ ಕೈಗೊಳ್ಳುವ ಕಾಮಗಾರಿಗಳು ಜನರಿಗೆ ಪ್ರಯೋಜನವಾಗಬೇಕಾದರೆ ಸ್ಥಳೀಯ ನಿವಾಸಿಗಳು ಪಕ್ಷಾತೀತವಾಗಿ ಕಾಮಗಾರಿಗಳ ಮೇಲ್ವಿಚಾರಣೆ ಮಾಡಬೇಕು. ಸಾರ್ವಜನಿಕರ ಸಹಕಾರದಿಂದ ಮಾತ್ರ ಕಳಪೆ ಕಾಮಗಾರಿಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸರ್ಕಾರದ ಪ್ರತಿಯೊಂದು ಯೋಜನೆಯೂ ಸಮರ್ಪಕವಾಗಿ ಜನರಿಗೆ ತಲುಪುವಂತೆ ಎಲ್ಲರೂ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ
ಜಿಲ್ಲಾ ಮಾಜಿ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್, ಮುಖಂಡರಾದ ಬಿ.ವಿ. ರೆಡ್ಡಿ, ಹಳೆಪೇಟೆ ಮಂಜುನಾಥರೆಡ್ಡಿ, ಕಾರ್ ಶ್ರೀನಾಥ್ ಬಾಬು, ಪೂಲ್ ಶಿವಾರೆಡ್ಡಿ, ಥಿಯೇಟರ್ ಲಕ್ಷ್ಮಣರೆಡ್ಡಿ, ಬಿಂದು ಶ್ರೀನಿವಾಸರೆಡ್ಡಿ, ಅಂಬೇಡ್ಕರ್ ಪಾಳ್ಯದ ಸಿ. ರವಿ, ಶಬ್ಬೀರ್ ಖಾನ್, ಆಯೇಷಾ ನಯಾಜ್, ಅಥಾವುಲ್ಲಾ ಖಾನ್, ಅನ್ವರ್ ಇಸ್ಲಾಂ, ಎಸ್. ಮೌಲಾ, ಏಜಾಜ್ ಪಾಷಾ, ಶಂಕರರೆಡ್ಡಿ, ಅಪ್ಪೂರು ರಾಜು, ಮಂಜುನಾಥ್, ಆಟೋ ಜಗ್ಗು ಹಾಗೂ ಎಂಜಿನಿಯರ್ ಶ್ರೀನಿವಾಸ್ ಉಪಸ್ಥಿತರಿದ್ದರು.


