

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಮಾಂಡ್ ಸೊಭಾಣ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಶಕ್ತಿನಗರದ ಕಲಾಂಗಣದಲ್ಲಿ 20.08.25 ರಂದು 34 ನೇ ಕೊಂಕಣಿ ಮಾನ್ಯತಾ ದಿನಾಚರಣೆಯ ಉದ್ಘಾಟನೆ ನೆರವೇರಿತು.
ಕೊಂಕಣಿ ಬಾವುಟದೊಂದಿಗೆ ಮೆರವಣಿಗೆ ನಡೆಯಿತು. ನಂತರ ಕೊಂಕಣಿ ಧ್ವಜರೋಹಣ ಮಾಡಿ ಮಾತನಾಡಿದ ಮುಖ್ಯ ಅತಿಥಿ ಮಾಜಿ ಮನಪಾ ಸದಸ್ಯ ರಂಗನಾಥ ಸಿ. ಕಿಣಿ ಇವರು “ಮಕ್ಕಳು ಯುವಕರು ಬಹು ಸಂಖ್ಯೆಯಲ್ಲಿ ಇಲ್ಲಿ ನೆರೆದಿದ್ದೀರಿ. ವಿವಿಧ ಪ್ರತಿಭೆಗಳ ಪ್ರದರ್ಶನ ನಡೆಯಲಿದೆ. ಕೊಂಕಣಿ ಭಾಷೆಯನ್ನು ಉಳಿಸಿ, ಬೆಳೆಸುವ ಕೆಲಸ ತಮ್ಮಿಂದ ಮುನ್ನಡೆಯಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಭಾರತದ ಮಾನ್ಯತೆ ಪಡೆದ ಅಧಿಕೃತ 22 ಭಾಷೆಗಳಲ್ಲಿ ಕೊಂಕಣಿಯೂ ಒಂದು. ನಮ್ಮ ಭಾಷೆಗೆ 1992 ಆಗಸ್ಟ್ 20 ರಂದು ದೊರೆತ ಮಾನ್ಯತೆಯನ್ನು ನಾವು ಕೊಂಕಣಿ ಮಾನ್ಯತಾ ದಿನಾಚರಣೆ ಹೆಸರಲ್ಲಿ ಸಂಭ್ರಮಿಸುತ್ತೇವೆ. ಯುವಜನರಿಗೆ ಇದೊಂದು ಸ್ಪೂರ್ತಿಯಾಗಲಿ’’ ಎಂದು ಕರೆ ಕೊಟ್ಟರು.
ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ, ಅಕಾಡೆಮಿ ಸದಸ್ಯರಾದ ನವೀನ್ ಲೋಬೊ, ರೊನಿ ಕ್ರಾಸ್ತಾ, ದಯಾನಂದ ಮಡ್ಕೇಕರ್, ಸಪ್ನಾ ಕ್ರಾಸ್ತಾ, ಅಕ್ಷತಾ ನಾಯಕ್ ಉಪಸ್ಥಿತರಿದ್ದರು.
ನಂತರ ವಿವಿಧ ವಿನೋದಾವಳಿ ಸ್ಪರ್ಧೆಗಳು ನಡೆದವು. ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗಗಳಲ್ಲಿ ಅವಿಭಜಿತ ಜಿಲ್ಲೆಯಿಂದ ಒಟ್ಟು19 ತಂಡಗಳು ಭಾಗವಹಿಸಿದ್ದವು. ಅಕಾಡೆಮಿ ಸದಸ್ಯ ಸಮರ್ಥ್ ಭಟ್ ಕಾರ್ಯಕ್ರಮ ನಿರೂಪಿಸಿದರು.











