ವಿಶ್ವಪರಿಸರ ದಿನ 2026 ಘೋಷವಾಕ್ಯ “ಹವಾಮಾನ ಕ್ರಮ ಮತ್ತು ಹವಾಮಾನದೊಂದಿಗಿನ ನಮ್ಮ ಸಂಬಂಧವನ್ನು ದುರಸ್ತಿಗೊಳಿಸುವುದು”


ಮಂಗಳೂರು; ಜೂನ್ 5, ಸಂತ ರೀಟಾ ಆಂಗ್ಲ ಮಾಧ್ಯಮ ಶಾಲೆ ಕಾಸ್ಸಿಯಾ, ಜೆಪ್ಪು ಶಾಲೆಯಲ್ಲಿ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಬಳಿಕ 10ನೇ ತರಗತಿಯ ವಿದ್ಯಾರ್ಥಿಗಳು ಪರಿಸರ ಜಾಗೃತಿಯ ಕುರಿತು ಸುಶ್ರಾವ್ಯ ಗೀತೆಯನ್ನು ಪ್ರಸ್ತುತ ಪಡಿಸಿ ವಿಶ್ವಪರಿಸರ ದಿನಾಚರಣೆಯ ಸಂದೇಶವನ್ನು ಸಾರಿದರು.
ಹಂಶಿಕಾ 10ನೇ ತರಗತಿ ಇವರು ವಿಶ್ವಪರಿಸರ ದಿನದ ಮಹತ್ವವನ್ನು ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಔಷಧೀಯ ಸಸ್ಯಗಳ ಮಹತ್ವದ ಕುರಿತು ಮಾತನಾಡಿ ತುಳಸಿ, ಬೇವು, ಅಮೃತಬಳ್ಳಿ, ಪುದಿನ, ಅಲೋವೆರಾ, ಅರಶಿನ ಮುಂತಾದ ಗಿಡಗಳ ಉಪಯೋಗವನ್ನು ತಿಳಿಸಿಕೊಟ್ಟರು. ಪ್ರತಿಯೊಬ್ಬರೂ ಮನೆಯಂಗಳದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಬೇಕೆಂದು ಕರೆ ನೀಡಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೆಟಿಲ್ಡಾ ಡಿ ಕೋಸ್ತಾರವರು ಸಂದೇಶ ನೀಡಿ “ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಇಂದಿನ ಸಣ್ಣ ಹೆಜ್ಜೆ ನಾಳೆಯ ಉತ್ತಮ ಭವಿಷ್ಯಕ್ಕೆ ದಾರಿ” ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಗಿಡಮರಗಳನ್ನು ನೆಟ್ಟು ಪೋಷಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕೊನೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಜೊತೆಗೂಡಿ ಶಾಲಾ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಟ್ಟು ಅವುಗಳನ್ನು ಸಂರಕ್ಷಿಸುವ ಪ್ರತಿಜ್ಞೆ ಕೈಗೊಂಡರು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ ಹಾಗೂ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು 10ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಶ್ರೇಯಾ ಅವರು ನಿರೂಪಿಸಿದರು.
ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಕೊನೆಗೊಂಡಿತು.






