

ಕೋಲಾರ, ಮೇ.೯: ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಬಲವೇ ಕಾರ್ಯಕರ್ತರು. ಗ್ರಾಮ ಮಟ್ಟದಲ್ಲಿ ಸಂಘಟನೆ ಗಟ್ಟಿಗೊಂಡರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಯಶಸ್ಸು ದೊರೆಯಲಿದೆ ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಹೇಳಿದರು.
ತಾಲೂಕಿನ ವೇಮಗಲ್ ಹೋಬಳಿಯ ಸೀತಿ ಹಾಗೂ ಅಮ್ಮನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಬೂತ್ ಮಟ್ಟದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್ಐಆರ್ ಜಾಗೃತಿ ಕಾರ್ಯಕ್ರಮ ಹಾಗೂ ಪಕ್ಷದ ವತಿಯಿಂದ ಬೂತ್ ಮಟ್ಟದ ಏಜೆಂಟ್ಗಳ ನೇಮಕಾತಿ ಕುರಿತು ನಡೆದ ಸಭೆಯಲ್ಲಿ ಕಾರ್ಯಕರ್ತರಿಗೆ ಹಲವು ಸೂಚನೆಗಳನ್ನು ನೀಡಿದರು.
ದೇಶದಲ್ಲಿ ಎನ್ಡಿಎ ಮೈತ್ರಿಯ ಭಾಗವಾಗಿ ಜೆಡಿಎಸ್ ಪಕ್ಷವು ಮಹತ್ವದ ಪಾತ್ರ ವಹಿಸುತ್ತಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ಗ್ರಾಮದಲ್ಲೂ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು. ಪ್ರತಿಯೊಂದು ಬೂತ್ ಮಟ್ಟದಲ್ಲಿಯೂ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡಿ, ಕಾರ್ಯಕರ್ತರು ಮನೆಮನೆಗೆ ತೆರಳಿ ಪಕ್ಷದ ಸಿದ್ಧಾಂತ ಹಾಗೂ ಜನಪರ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಕರೆ ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಳೆದ ಎರಡೂವರೆ ವರ್ಷಗಳಲ್ಲಿ ಆಡಳಿತ ವೈಖರಿಯನ್ನು ಜನರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಕ್ಷೇತ್ರದ ಜನರು ಇಟ್ಟಿದ್ದ ನಿರೀಕ್ಷೆಗಳು ಸಾಕಾರವಾಗಿಲ್ಲ ಎಂಬ ಅಭಿಪ್ರಾಯ ಜನಸಾಮಾನ್ಯರಲ್ಲಿ ವ್ಯಕ್ತವಾಗುತ್ತಿದೆ ಎಂದು ಟೀಕಿಸಿದರು.
ಅಧಿಕಾರ ಇಲ್ಲದ ಸಂದರ್ಭದಲ್ಲೂ ಜೆಡಿಎಸ್ ಕಾರ್ಯಕರ್ತರು ಪಕ್ಷದ ಪರವಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಹೋರಾಟದ ಹಾದಿಯಲ್ಲಿ ಕಾರ್ಯಕರ್ತರ ಜೊತೆ ಸದಾ ನಾನಿರುತ್ತೇನೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಜೆಡಿಎಸ್ ಹಿರಿಯ ಮುಖಂಡ ವಕ್ಕಲೇರಿ ರಾಮು, ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ತಾಪಂ ಮಾಜಿ ಸದಸ್ಯರಾದ ಚನ್ನಸಂದ್ರ ಲೋಕೇಶ್, ಚಂಜಿಮಲೆ ಬೈರಪ್ಪ, ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ಸದಸ್ಯರಾದ ಲೋಕೇಶ್ ಮರಿಯಪ್ಪ, ಕುರುಗಲ್ ರಮೇಶ್, ಜೆಸಿಬಿ ರವಿ, ಎಸ್ಟಿ ಘಟಕದ ತಾಲೂಕು ಅಧ್ಯಕ್ಷ ಕುರುಗಲ್ ಗಿರೀಶ್, ವೇಮಗಲ್ ಸೊಸೈಟಿ ಉಪಾಧ್ಯಕ್ಷ ಹೊಳೇರಹಳ್ಳಿ ಅಶೋಕ್, ಸೀತಿ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಅನಿತಾ ಶ್ರೀನಿವಾಸ್ ಸೇರಿದಂತೆ ಹಲವಾರು ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

