

ಬೆಂಗಳೂರು : ನಗರದಲ್ಲಿ ವೀಲಿಂಗ್ ಮಾಡಿ ರಸ್ತೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ವಾಹನ ಸವಾರರ ವಿರುದ್ಧ ದೂರು ದಾಖಲಿಸಿ, ಅವರ ಆರ್ಸಿ ಹಾಗೂ ಚಾಲನಾ ಪರವಾನಿಗೆಯನ್ನು ಶಾಶ್ವತವಾಗಿ ರದ್ದುಪಡಿಸಲು ಸಾರಿಗೆ ಇಲಾಖೆಗೆ ಸೂಚಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ತಿಳಿಸಿದರು.
ನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಗೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದಲ್ಲಿ ಮಕ್ಕಳು ರಸ್ತೆ ದಾಟುವಾಗ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಕಡ್ಡಾಯವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.
ಮಕ್ಕಳು ರಸ್ತೆ ದಾಟುವಾಗ ಶಾಲೆಯ ಆಯಾಗಳ ಜೊತೆ ದಾಟುವಂತೆ ನೋಡಿಕೊಳ್ಳಬೇಕು. ಶಾಲಾ ವಾಹನ ಚಾಲಕರನ್ನು ಕಡ್ಡಾಯ ತಪಾಸಣೆ ಮಾಡಬೇಕು. ಒಂದು ವಾಹನದಲ್ಲಿ ಸೀಮಿತ ಸಂಖ್ಯೆಗೆ ಮೀರಿದ ಮಕ್ಕಳನ್ನು ಕೊಂಡೊಯ್ಯಬಾರದು ಎಂದು ಶಾಲಾ ಆಡಳಿತ ಮಂಡಳಿಗಳಿಗೆ ಎಚ್ಚರಿಕೆ ನೀಡಿದರು.
ಅಪಘಾತಗಳನ್ನು ತಡೆಗಟ್ಟುವ ದೃಷ್ಟಿಯಿಂದ ಅಪಘಾತ ಸಂಭವಿಸುವ ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಿ, ಅಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕೆಂದು ಅವರು ತಿಳಿಸಿದರು. ವಾರಾಂತ್ಯಗಳಲ್ಲಿ ಹೆಬ್ಬಾಳ ಮೇಲ್ಸೇತುವೆ ಹಾಗೂ ಕುಣಿಗಲ್ ರಸ್ತೆಯಲ್ಲಿ ಯುವಕರು ಬೈಕ್ಗಳಲ್ಲಿ ವೀಲಿಂಗ್ ಮಾಡಿ ಸಾರ್ವಜನಿಕರಿಗೆ ತೊಂದರೆ ಸೃಷ್ಟಿಸುತ್ತಿದ್ದಾರೆ. ಇಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.
ಅಪಘಾತ ಸಂಭವಿಸುವ ಸ್ಥಳಗಳಲ್ಲಿ ತಕ್ಷಣ ಆಂಬುಲೆನ್ಸ್ ಸೇವೆ ಒದಗಿಸಲು ಜಿಪಿಎಸ್ ಮ್ಯಾಪಿಂಗ್ ಮೂಲಕ ಸ್ಥಳ ಗುರುತು ಮಾಡಲು ಜಿಲ್ಲಾ ಆರೋಗ್ಯ ಹಾಗೂ ಸಾರಿಗೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಮುಂದಿನ ಸಭೆಯಲ್ಲಿ ತಿಂಗಳಲ್ಲಿ ಸಂಭವಿಸಿರುವ ಒಟ್ಟು ಅಪಘಾತ, ಕೈಗೊಂಡ ಕ್ರಮಗಳು ಹಾಗೂ ಮುಂದಿನ ಕ್ರಿಯಾಯೋಜನೆಗಳ ಬಗ್ಗೆ ಪಿಪಿಟಿ ರೂಪದಲ್ಲಿ ವಿವರ ನೀಡಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ವ್ಯವಸ್ಥಾಪಕರಾದ ಶ್ರೀನಿವಾಸ್ ಗೌಡ, ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ. ಜಗದೀಶ ಕೆ. ನಾಯಕ್, ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಕಾಶ, ಬಿಎಂಟಿಸಿ ವಿಭಾಗೀಯ ಸಾರಿಗೆ ಅಧಿಕಾರಿ ಪ್ರತಿಮಾ, ಕೆಎಸ್ಆರ್ಟಿಸಿ ವಿಭಾಗೀಯ ಸಾರಿಗೆ ಅಧಿಕಾರಿ ಭಾಗ್ಯಲಕ್ಷ್ಮೀ ಎಂ, ಶಾಲಾ ಶಿಕ್ಷಣ ಇಲಾಖೆಯ ಉತ್ತರ ವಿಭಾಗದ ಉಪ ನಿರ್ದೇಶಕ ವಾಸು, ದಕ್ಷಿಣ ವಿಭಾಗದ ಉಪ ನಿರ್ದೇಶಕ ಸಮೀರ್ ಪಾಷಾ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ರಾಜು, ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದ ಅಭಿಯಂತರ ಶ್ರೀಕಾಂತ್, ಬ್ಲೂಮ್ಬರ್ಗ್ ಬಿಇಆರ್ಜಿ ಪ್ರತಿನಿಧಿ ಅಪರಾಜಿತ ರೈ ಸೇರಿದಂತೆ ಜಿಲ್ಲಾ ಮಟ್ಟದ ಹಲವು ಅಧಿಕಾರಿಗಳು ಹಾಜರಿದ್ದರು.

