

ಗೋವ; ಬಾಲಿವುಡ್ನ ಹಿರಿಯ ನಟ ನಾನಾ ಪಾಟೇಕರ್ 75ನೇ ವಯಸ್ಸಿನಲ್ಲಿ ಗೋವಾದ ನಿವಾಸದಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದು, ಅವರ ನಿಧನಕ್ಕೆ ಚಿತ್ರರಂಗ ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಭಾರತೀಯ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ ಅವರ ಹಠಾತ್ ನಿಧನ, ಚಿತ್ರರಂಗಕ್ಕೆ ಆಘಾತ ಉಂಟುಮಾಡಿದೆ. 75 ವರ್ಷದ ನಾನಾ ಪಾಟೇಕರ್ ಗುರುವಾರ ಬೆಳಗ್ಗೆ ಗೋವಾದ ಡೋನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ತೀವ್ರ ಹೃದಯ ಸ್ತಂಭನಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದಾರೆ.
ಗೋವಾದ ಡೋನಾ ಪೌಲಾದಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಯ ವೈದ್ಯರು ಅವರನ್ನು ಉಳಿಸಲು ಸುಮಾರು 45 ನಿಮಿಷಗಳ ಕಾಲ ಸಿಪಿಆರ್ ನಡೆಸಿದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ. ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಬೆಳಗ್ಗೆ ಸುಮಾರು 5.20ಕ್ಕೆ ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಆಸ್ಪತ್ರೆಯ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ಶೇಖರ್ ಸಾಲ್ಕರ್ ಈ ಕುರಿತು ಮಾಹಿತಿ ನೀಡಿದ್ದಾರೆ.
ನಾನಾ ಪಾಟೇಕರ್ ಅವರನ್ನು ಗೋವಾದ ನಿವಾಸದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದ ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸಾವಿನ ನಿಖರ ಕಾರಣವನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ-ಕಾನೂನು ಪ್ರಕರಣ ದಾಖಲಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಾನಾ ಪಾಟೇಕರ್, ಗಂಭೀರ ಹಾಗೂ ತೀವ್ರ ಅಭಿನಯದ ಜೊತೆಗೆ ವಿಶಿಷ್ಟ ಸಂಭಾಷಣೆ ಶೈಲಿಗೂ ಹೆಸರುವಾಸಿಯಾಗಿದ್ದರು. ‘ಪರಿಂದಾ’, ‘ಕ್ರಾಂತಿವೀರ್’, ‘ಅಗ್ನಿಸಾಕ್ಷಿ’, ‘ತಿರಂಗಾ’, ‘ವೆಲ್ಕಮ್’ ಮತ್ತು ‘ನಟಸಾಮ್ರಾಟ್’ ಸೇರಿದಂತೆ ಹಲವು ಪ್ರಮುಖ ಸಿನಿಮಾಗಳಲ್ಲಿ ಅವರು ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದರು.
ಅಭಿನಯ ಕ್ಷೇತ್ರಕ್ಕೆ ಮಾತ್ರ ಸೀಮಿತರಾಗದೆ, ನಾನಾ ಪಾಟೇಕರ್ ಸಾಮಾಜಿಕ ಸೇವೆಯಲ್ಲೂ ಸಕ್ರಿಯರಾಗಿದ್ದರು. ನಟ ಮಕರಂದ್ ಅನಾಸ್ಪುರೆ ಅವರೊಂದಿಗೆ ‘ನಾಮ್ ಫೌಂಡೇಶನ್’ ಸ್ಥಾಪಿಸಿ ಮಹಾರಾಷ್ಟ್ರದ ಬರಪೀಡಿತ ರೈತರು ಹಾಗೂ ಅವರ ಕುಟುಂಬಗಳಿಗೆ ನೆರವಾಗುವ ಕೆಲಸ ಮಾಡಿದ್ದರು.
ಕನ್ನಡ ಚಿತ್ರರಂಗದೊಂದಿಗೂ ನಾನಾ ಪಾಟೇಕರ್ ಅವರಿಗೆ ನಂಟಿತ್ತು. 2010ರಲ್ಲಿ ಬಿಡುಗಡೆಯಾದ ‘ಯಕ್ಷ’ ಸಿನಿಮಾದಲ್ಲಿ ಅವರು ಯೋಗರಾಜ್ ಪುಲಕೇಶ್ ಎಂಬ ಪ್ರಾಮಾಣಿಕ ಹಾಗೂ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಅವರು ನಟಿಸಿದ ಪ್ರಮುಖ ಚಿತ್ರ ಇದಾಗಿದೆ.
ಅಂತಿಮ ಸಂಸ್ಕಾರ: ಮಹಾರಾಷ್ಟ್ರ ಸರ್ಕಾರವು ನಾನಾ ಪಾಟೇಕರ್ ಅವರಿಗೆ ಸರಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲು ನಿರ್ಧರಿಸಿದೆ. ಅವರ ಪುತ್ರ ಮಲ್ಹಾರ್ ಪಾಟೇಕರ್ ಅವರು ಪುಣೆಯಿಂದ ಗೋವಾಕ್ಕೆ ಧಾವಿಸುತ್ತಿದ್ದಾರೆ
ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಹೊರಬರುತ್ತಿದ್ದಂತೆ ಬಾಲಿವುಡ್, ಮರಾಠಿ ಚಿತ್ರರಂಗ ಸೇರಿದಂತೆ ದೇಶದಾದ್ಯಂತ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ತಮ್ಮ ವಿಭಿನ್ನ ಅಭಿನಯ, ಗಂಭೀರ ಧ್ವನಿ ಮತ್ತು ಮರೆಯಲಾಗದ ಪಾತ್ರಗಳ ಮೂಲಕ ಅವರು ಭಾರತೀಯ ಸಿನಿಮಾದಲ್ಲಿ ಶಾಶ್ವತ ಗುರುತು ಮೂಡಿಸಿದ್ದಾರೆ. ಇವರ ಅತ್ಯುತ್ತಮ ನಟನೆಗಾಗಿ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಹಾಗೂ 2013 ರಲ್ಲಿ ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಒಲಿದುಬಂದಿತ್ತು

