

ಶ್ರೀನಿವಾಸಪುರ: ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಹಾಗೂ ಆಂಗ್ಲ ಮಾಧ್ಯಮ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಹಾಜರಾತಿಗೆ ಸಂಬಂಧಿಸಿದಂತೆ ಗಂಭೀರ ಗೊಂದಲ ಬೆಳಕಿಗೆ ಬಂದಿದ್ದು, ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ವರ್ತನೆ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಅನುಮಾನಗಳು ವ್ಯಕ್ತವಾಗಿವೆ.
ಶಾಲೆಯ ಒಬ್ಬ ಶಿಕ್ಷಕಿ ಡಿಸೆಂಬರ್ 2ರಿಂದ 12ರವರೆಗೆ ನಿರಂತರವಾಗಿ ಗೈರು ಹಾಜರಾಗಿದ್ದರೂ, ಈ ಅವಧಿಯಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಡಿಸೆಂಬರ್ 10ರಂದು ಹಾಜರಾತಿ ಪುಸ್ತಕವನ್ನು ಪರಿಶೀಲಿಸಿರುವುದು ಮಾಹಿತಿ ಹಕ್ಕು ಕಾಯ್ದೆ–2005ರಡಿ ಸಲ್ಲಿಸಲಾದ ಅರ್ಜಿಯಿಂದ ಬಹಿರಂಗವಾಗಿದೆ. ಶಬ್ಬೀರ್ ಅಹ್ಮದ್ ಅವರು ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಗೆ ಲಭ್ಯವಾದ ದಾಖಲೆಗಳ ಪ್ರಕಾರ, ಪರಿಶೀಲನೆಯ ವೇಳೆ ಗೈರಾಗಿದ್ದ ಶಿಕ್ಷಕಿಯ ಹೆಸರಿನ ಎದುರು ಗೈರು ಗುರುತು ದಾಖಲಿಸದೇ, ಅದರ ಕೆಳಭಾಗದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಸಹಿ ಹಾಗೂ ದಿನಾಂಕವನ್ನು ನಮೂದಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಶಿಕ್ಷಣ ಇಲಾಖೆಯ ನಿಯಮಾವಳಿ ಪ್ರಕಾರ, ಶಾಲೆಗಳಿಗೆ ಭೇಟಿ ನೀಡುವ ಅಧಿಕಾರಿಗಳು ಹಾಜರಾತಿ ಪುಸ್ತಕವನ್ನು ಪರಿಶೀಲಿಸುವಾಗ ಆ ದಿನದ ವಾಸ್ತವ ಸ್ಥಿತಿಗತಿಯನ್ನು ಸ್ಪಷ್ಟವಾಗಿ ಶಾಲೆಯ ಭೇಟಿ ಪುಸ್ತಕದಲ್ಲಿ ದಾಖಲಿಸುವುದು ಕಡ್ಡಾಯ. ಜೊತೆಗೆ, ಗೈರು ಹಾಜರಾತಿಗೆ ಸಂಬಂಧಿಸಿದ ಕಾರಣಗಳು ಹಾಗೂ ಅಗತ್ಯ ಟಿಪ್ಪಣಿಗಳನ್ನು ನಮೂದಿಸಬೇಕಾಗಿದೆ. ಆದರೆ ಈ ಪ್ರಕರಣದಲ್ಲಿ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಲಾಗಿದೆಯೇ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಗಂಭೀರ ಅನುಮಾನಗಳು ಮೂಡಿವೆ.
ಈ ಘಟನೆಯಿಂದ ಶಾಲೆಯ ಆಡಳಿತ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆ ಉಂಟಾಗಿದ್ದು, ವಿದ್ಯಾರ್ಥಿನಿಯರ ಶೈಕ್ಷಣಿಕ ಹಿತಾಸಕ್ತಿಗೆ ಹಾನಿಯಾಗುವ ಭೀತಿ ಎದುರಾಗಿದೆ. ಇಂತಹ ಲೋಪಗಳು ಹಾಗೂ ಅಸಡ್ಡೆ ಮರುಕಳಿಸದಂತೆ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಸ್ವತಃ ಶಾಲೆಗೆ ಭೇಟಿ ನೀಡಿ ಹಾಜರಾತಿ ದಾಖಲೆಗಳು, ಸಂಬಂಧಿತ ಶಿಕ್ಷಕಿಯ ಗೈರು ಹಾಜರಾತಿ ವಿವರಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪರಿಶೀಲನಾ ವರದಿಯನ್ನು ಸಮಗ್ರವಾಗಿ ಪರಿಶೀಲಿಸಿ ನೈಜ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.




