

ಕೋಲಾರ ;ಜಿಲ್ಲಾ ತೋಟಗಾರಿಕೆ ನರ್ಸರಿಯಲ್ಲಿ ಹಮ್ಮಿಕೊಂಡಿದ್ದ ೨೦೨೬ರ ಫಲಪುಷ್ಪ ಪ್ರದರ್ಶನದಲ್ಲಿ ಟಮಕದ ತೋಟಗಾರಿಕಾ ಮಹಾವಿದ್ಯಾಲಯದ ಅಕಾಲಿಕ ಹಲಸಿನ ಹಣ್ಣುಗಳು ವೀಕ್ಷಕರ ಗಮನ ಸೆಳೆದವು. ಕೋಲಾರದ ವಿಧಾನಸಭಾ ಸದಸ್ಯರಾದ ಶ್ರೀ ಕೊತ್ತೂರು ಜಿ. ಮಂಜುನಾಥರವರು ಅಕಾಲಿಕ ಹಲಸಿನ ಗಾತ್ರವನ್ನು ನೋಡಿ ಬೆರಗಾಗಿ ಅಕಾಲಿಕ ಹಲಸಿನ ಕಸಿಗಿಡಗಳನ್ನು ರೈತರಿಗೆ ಒದಗಿಸಲು ವಿಜ್ಞಾನಿಗಳು ಶ್ರಮಿಸಿದರೆ ಇದರಿಂದ ರೈತರ ಆದಾಯ ಹೆಚ್ಚುವುದರ ಜೊತೆಗೆ ಅಕಾಲದಲ್ಲಿ ಹಣ್ಣನ್ನು ಸಾರ್ವಜನಿಕರು ಸವಿಯಬಹುದು ಎಂದರು.
ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಡಾ. ಎಮ್. ಆರ್. ರವಿಯವರು ಅಕಾಲಿಕ ಹಲಸಿನ ಹಣ್ಣುಗಳನ್ನು ವೀಕ್ಷಿಸಿ, ತೋಟಗಾರಿಕಾ ಮಹಾವಿದ್ಯಾಲಯ, ಟಮಕದಿಂದ ಹಲಸಿನ ಮೂರು ತಳಿಗಳು ಗುರುತಿಸಿರುವುದು ವಿಶೇಷವಾಗಿದ್ದು, ಇನ್ನೂ ಅಕಾಲಿಕ ಹಲಸಿನ ತಳಿಗಳ ಅಭಿವೃದ್ಧಿಯಲ್ಲಿ ವಿಜ್ಞಾನಿಗಳು ಗಮನ ಹರಿಸಬೇಕು ಎಂದರು. ರೈತರಿಗೆ ತಾಂತ್ರಿಕ ಮಾಹಿತಿಯ ಅರಿವು ಮೂಡಿಸುವುದು ಪ್ರಮುಖವಾಗಿದೆ ಎಂದರು.
ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ರಾಘವೇಂದ್ರ ಕೆ. ಮೇಸ್ತ ರವರು ಮಾತನಾಡಿ, ತೋಟಗಾರಿಕಾ ಮಹಾವಿದ್ಯಾಲಯ, ಟಮಕದ ಹಲಸಿನ ಕ್ಷೇತ್ರದಲ್ಲಿ ೧೬೦೦ ಹಲಸಿನ ಮರಗಳಿದ್ದು, ಅವುಗಳಲ್ಲಿ ತಾಜಾ ಸವಿಯುವ, ತರಕಾರಿ ವಿಧದ, ಅಂಟು ಕಡಿಮೆ ಇರುವ, ಅಕಾಲಿಕ ಇನ್ನಿತರ ಗುಣವಿರುವ ಹಲಸಿನ ಮರಗಳಿದ್ದು, ಮೂರು ಮುಖ್ಯ ವಿಧಗಳನ್ನು ಗುರುತಿಸಲಾಗಿದ್ದು ಅವುಗಳ ಕಸಿಗಿಡಗಳು ಮಹಾವಿದ್ಯಾಲಯದಲ್ಲಿ ಮಾರಾಟಕ್ಕಿವೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಶಿವಾನಂದ ಹೊಂಗಲ ರವರು ಟಮಕದ ಹಲಸಿನ ಕ್ಷೇತ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಮಾಹಿತಿಯನ್ನು ಸ್ಟಾಲ್ ಗೆ ಭೇಟಿ ನೀಡಿದ ಗಣ್ಯರಿಗೆ ಹಾಗೂ ವೀಕ್ಷಕರಿಗೆ ತಿಳಿಸಿದರು. ಹಣ್ಣು ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನಾಗರಾಜ ಕೆ. ಎಸ್. ರವರು ಹಲಸಿನ ತಳಿಗಳ ವಿವರಣೆ ನೀಡಿದರು. ಕ್ಷೇತ್ರ ಸಹಾಯಕರಾದ ನಾಗೇಶ್, ಈರಪ್ಪ ಹಾಗೂ ನವೀನ್ ರವರು ಹಾಜರಿದ್ದರು. ಉತ್ಕೃಷ್ಠ ತಳಿಗಳ ಹಣ್ಣು ಹಾಗೂ ತರಕಾರಿ ಬೆಳೆಗಳ ಗಿಡಗಳನ್ನು ಪ್ರದರ್ಶನದಲ್ಲಿ ಮಾರಾಟಕ್ಕೆ ಇಡಲಾಗಿತ್ತು.





