

ತಲ್ಲೂರು ಸಂತ ಫ್ರಾನ್ಸಿಸ್ ದೇವಾಲಯದಲ್ಲಿ ದಿನಾಂಕ 13/7/2025 ರಂದು “ದಂಪತಿಗಳ ದಿನಾಚರಣೆ ” ಯನ್ನು ಕುಟುಂಬ ಆಯೋಗದ ನೇತೃತ್ವದಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಯಿತು.
ಅಂದು ಬೆಳಿಗ್ಗೆ ದಂಪತಿಗಳಿಗಾಗಿ ದಿವ್ಯ ಬಲಿಪೂಜೆಯನ್ನು ,ಉಡುಪಿ ಡಯಾಸಿಸಿನ ಜುಡಿಷಿಯಲ್ ವಿಕಾರ್ ಹಾಗೂ ಪ್ಯಾರಿಷ್ ಆಡಳಿತಾಧಿಕಾರಿ (ಪಾಂಬೂರ್) ಅತೀ ವಂದನೀಯ ಫಾ.ಡಾI ರೋಶನ್ ಡಿಸೋಜ ನೆರವೇರಿಸಿ,ದಂಪತಿಗಳಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು ಹಾಗೂ ಅವರಿಗಾಗಿ ಹೊಸದಾಗಿ ಪ್ರತಿಜ್ಞಾ ವಿಧಿಯನ್ನು ನೆರವೇರಿಸಿದರು.
ತದನಂತರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಂಪನ್ಮೂಲ ವ್ಯಕ್ತಿಗಳಾಗಿ, ಉಡುಪಿ ಡಯಾಸಿಸ್ ನ ಕುಟುಂಬ ಆಯೋಗದ ಸಂಚಾಲಕರಾದ ಶ್ರೀ ಲೆಸ್ಲಿ ಆರೋಜ ಉಪಸ್ಥಿತರಿದ್ದು, ಹಾಜರಾದ ಎಲ್ಲಾ ದಂಪತಿಗಳಿಗೆ ಶುಭ ಹಾರೈಸಿ, ದಂಪತಿಗಳು ಪರಸ್ಪರ ಪ್ರೀತಿ, ವಿಶ್ವಾಸದಿಂದ ಇರಬೇಕು.ದೇಹಕ್ಕೆ ವಯಸ್ಸಾದರೂ, ಪ್ರೀತಿ ಪ್ರೇಮಕ್ಕೆ ವಯಸ್ಸಾಗದು. ಆದ್ದರಿಂದ ದಂಪತಿಗಳು ಯಾವಾಗಲೂ ಮನೆಯಲ್ಲಿ ಇರುವಾಗ ಜೊತೆಯಾಗಿ ಉಂಡು ಮಲಗುವುದು, ಪರಸ್ಪರ ಸುಖ ದುಃಖ ಹಂಚಿಕೊಂಡು ,ಕಷ್ಟ ಸುಖದಲ್ಲಿ ಭಾಗಿಯಾಗಿ ಸಂತೋಷದಿಂದ ಬಾಳಿ ಇಂದಿನ ಯುವ ಜನತೆಗೆ ಮಾದರಿಯಾಗಬೇಕು . ವೈವಾಹಿಕ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ದಂಪತಿಗಳು ಕೂತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು.ಮದುವೆ ಬೇಡ ಎಂದು ವಿವಾಹವಾಗದೆ, ಜೊತೆಯಲ್ಲಿ ಬಾಳುವ ಯುವಕ ಯುವತಿಯರ ಸಂಖ್ಯೆ ಹೆಚ್ಚಾಗಿ ದೊಡ್ದ ದೊಡ್ಡ ನಗರಗಳಲ್ಲಿ ಕಾಣಸಿಗುತ್ತದೆ. ಕೈಯಲ್ಲಿ ಹಣವಿದ್ದು ಕೆಟ್ಟದಾರಿ ಹಿಡಿಯುವ ಯುವ ಮಕ್ಕಳ ಬಗ್ಗೆ ಹೆತ್ತವರು ಜಾಗೃತೆ ವಹಿಸಬೇಕು ಎಂದು ಎಚ್ಚರಿಸಿದರು.
ಚರ್ಚಿನ ಧರ್ಮ ಗುರುಗಳಾದ ವಂದನೀಯ ಫಾ. ಎಡ್ವಿನ್ ಡಿಸೋಜರವರು ಮಾತನಾಡಿ, ತಂದೆ ತಾಯಿ,ಯುವಜನರ ಹಾಗೂ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು , ಮಕ್ಕಳು ಹದಿಹರೆಯಕ್ಕೆ ಬರುವಾಗ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ವೈವಾಹಿಕ ಜೀವನದ ಹೆಚ್ಚು ಸಂವತ್ಸರಗಳನ್ನು ಪೂರೈಸಿದ ಹಾಗೂ ಈ ವರ್ಷದಲ್ಲಿ ವೈವಾಹಿಕ ಜೀವನದ ೩೫ ವರ್ಷ ಪೂರೈಸಿದ ದಂಪತಿಗಳನ್ನು ಚರ್ಚಿನ ಧರ್ಮಗುರುಗಳು ಸನ್ಮಾನಿಸಿ ಗೌರವಿಸಿದರು.
ಇಡೀ ಕಾರ್ಯಕ್ರಮದ ಮುತುವರ್ಜಿಯನ್ನು,ಕುಟುಂಬ ಆಯೋಗದ ಸದಸ್ಯರು ಹಾಗೂ ಧರ್ಮ ಗುರುಗಳು ವಹಿಸಿದ್ದರು. ಒಟ್ಟು ೮೦ ದಂಪತಿಗಳು ಹಾಜರಿದ್ದು,ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.























