

ಕುಂದಾಪುರದ ಸಂತ ಮೇರಿ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 26.06.2023 ರಂದು ಕುಂದಾಪುರದ ಹೆಸರಾಂತ ವಕೀಲರಾದ ಶ್ರೀ ರಾಘವೇಂದ್ರ ಚರಣ ನಾವುಡ ರವರ ಘನ ಉಪಸ್ಥಿತಿಯಲ್ಲಿ “ನಶಾ ಮುಕ್ತ ಭಾರತ ಅಭಿಯಾನ” ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಪ್ರಖ್ಯಾತ ವಕೀಲರು, ರಾಷ್ಟ್ರ ಮಟ್ಟದಲ್ಲಿ ಹೆಸರಾದ ಉತ್ತಮ ವಾಗ್ಮಿ ಸಂಘಟನಾಕಾರರು, ಆದ ಗೌರವಾನ್ವಿತ ಶ್ರೀ ರಾಘವೇಂದ್ರ ಚರಣ ನಾವುಡ ರವರು ಮುಖ್ಯ ಅತಿಥಿಗಳಾಗಿ ದೀಪವನ್ನು ಬೆಳಗುವದರ ಮೂಲಕ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಹದಿ ಹರೆಯದ ವಯಸ್ಸು ತುಂಬಾ ಪ್ರಾಮುಖ್ಯವಾದುದು. ಮಾದಕ ವ್ಯಸನ ನಮ್ಮ ಜೀವನದಲ್ಲಿ ಹಲವಾರು ದುಶ್ಚಟಗಳಿಗೆ ದಾರಿ ಮಾಡಿ ಕೊಡುತ್ತದೆ. ಇಂದು ಮನುಷ್ಯ ತನ್ನ ಗುಣದಲ್ಲಿ ಮೃಗೀಯ ವರ್ತನೆ ತೋರಿಸುತ್ತಾನೆ ಅದಕ್ಕೆ ಕಾರಣ ಈ ಮಾದಕ ವ್ಯಸನ ಎನ್ನುತ್ತಾ, ಅನೇಕ ಉದಾಹರಣೆಗಳನ್ನು ನೀಡಿ ಪ್ರತಿ ಹೆಜ್ಜೆ ಇಡುವಾಗ ಯೋಚಿಸಿ. ಒಮ್ಮೆ ತಪ್ಪು ಹೆಜ್ಜೆ ಇಟ್ಟರೆ ಜೀವನವೇ ಹಾಳಾಗುತ್ತದೆ ಎಂದು ಹೇಳಿ ಮೊಬೈಲ್ ನ್ನು ಬಳಸಿ ಆದರೆ ಮೊಬೈಲ್ ನಿಮ್ಮನ್ನು ಬಳಸದೆ ಇರುವಂತೆ ಇರಿ ಎಂದು ವ್ಯಸನ ಹಾಗೂ ಸೈಬರ್ ಅಪರಾಧ ಇವೆರಡು ವಿಷಯದ ಕುರಿತು ಅನೇಕ ಎಚ್ಚರಿಕೆಯ ಮಾತುಗಳನಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರೇಷ್ಮಾ ಫೆರ್ನಾಂಡಿಸ್ ರವರು ಅಧ್ಯಕ್ಷ ಸ್ಥಾನ ವಹಿಸಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ಸ್ವೀಕಾರ ಹಾಗೂ ಅನೇಕ ಸಲಹೆ ಸೂಚನೆಗಳನ್ನು ನೀಡಿ, ಮಾದಕ ವ್ಯಸನದ ದುಷ್ಪರಿಣಾಮದ ಕುರಿತು ತಿಳಿಸಿದರು.ಸಭೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ನಾಯಕ ಶನಿತ್ ವಾಸ್ ಹಾಗೂ ಕಾರ್ಯದರ್ಶಿ ರೆಚೆಲ್ ಡಿಸೋಜ ಉಪಸ್ಥಿತರಿದ್ದರು.
ಪ್ರಾರ್ಥನೆಯಿಂದ ಪ್ರಾರಂಭವಾಗಿ, ಆಂಗ್ಲ ಉಪನ್ಯಾಸಕರು, ಕಾರ್ಯಕ್ರಮ ಸಂಯೋಜಕರು ಆದ ಶಿಲ್ಪಶ್ರೀ ಯವರು ಸ್ವಾಗತಿಸಿ ವಿದ್ಯಾರ್ಥಿಗಳಾದ ಅರ್ಚನಾ ಹಾಗೂ ತುಷಾರ್ ಕ್ರಮವಾಗಿ ನಿರೂಪಿಸಿ,ವಂದಿಸಿದರು.











