
ಶ್ರೀನಿವಾಸಪುರ ತಾಲ್ಲೂಕಿನ ದೊಡಮಲದೊಡ್ಡಿ ಗ್ರಾಮದ ಸಮೀಪ ಬುಧವಾರ ಸಂಜೆ ಸುರಿದ ಮಳೆ ಹಾಗೂ ಬಲವಾಗಿ ಬೀಸಿದ ಬಿರುಗಾಳಿಗೆ ನೆಲಕಚ್ಚಿರುವ ಮಾವಿನ ಕಾಯಿ.
ತೋಟದಲ್ಲಿ ಉದುರಿಬಿದ್ದಿರುವ ಮಾವಿನ ಕಾಯಿಯನ್ನು ನೋಡುತ್ತಿರುವ ಬೆಳೆಗಾರ.

ಮಾವಿಗೆ ಮುಳುವಾದ ಮೊದಲ ಮಳೆ
ಶ್ರೀನಿವಾಸಪುರ: ತಾಲ್ಲೂಕಿನ ಆರಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡಮಲದೊಡ್ಡಿ ಗ್ರಾಮದ ಸಮೀಪ ಬುಧವಾರ ಸಂಜೆ ಸುರಿದ ಮೊದಲ ಮಳೆ ಹಾಗೂ ಬಿರುಸಾದ ಬಿರುಗಾಳಿ ಹೊಡೆತಕ್ಕೆ ಮಾವಿನ ಕಾಯಿ ಉದುರಿ ನೆಲಕಚ್ಚಿದೆ.
ಈ ಬಾರಿ ವಾತಾವರಣ ವೈಪರೀತ್ಯದ ಪರಿಣಾಮವಾಗಿ ಮಾವಿನ ಫಸಲಿನ ಪ್ರಮಾಣ ತೀರ ಉಳಿದುಕೊಂಡಿತ್ತು. ಈ ಹುಣ್ಣಿನ ಮೇಲೆ ಬರೆ ಎಳೆದಂತೆ ಕೆಲವು ಗ್ರಾಮಗಳ ಸಮೀಪ ಮಳೆಯೊಂದಿಗೆ ಬೀಸಿದ ಬಿರುಗಾಳಿ ಮಾವನ್ನು ಬಲಿಪಡೆದಿದೆ.
ಗ್ರಾಮದ ಮಾವು ಬೆಳೆಗಾರ ಡಿಎಸ್ಆರ್ ಶ್ರೀನಾಥರೆಡ್ಡಿ ಈ ಸಂದರ್ಭದಲ್ಲಿ ಮಾತನಾಡಿ, ರೈತರ ಬದುಕಿಗೆ ಮೂಲಾಧಾರವಾದ ಮಾವು ಮೊದಲ ಮಳೆಗೆ ನೆಲಕಚ್ಚಿರುವುದು ರೈತರ ಚಿಂತೆಗೆ ಕಾರಣವಾಗಿದೆ. ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಷ್ಟ ಉಂಟಾಗಿರುವ ಮಾವಿನ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಸರ್ಕಾರದಿಂದ ನಷ್ಟಪರಿಹಾರ ಕೊಡಿಸಬೇಕು ಎಂದು ಮನವಿ ಮಾಡಿದರು.


