

ಬೆಂಗಳೂರು, ಏ.30: ರಾಜ್ಯ ಸರ್ಕಾರವು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಧಿಕಾರಿಗಳ ವರ್ಗಾವಣೆ ಆದೇಶ ಹೊರಡಿಸಿದೆ. ಈ ಕುರಿತು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಸೂಚನೆ ಪ್ರಕಟಿಸಿದೆ.
ಅಧಿಸೂಚನೆಯ ಪ್ರಕಾರ, ಕಲಬುರಗಿ ಪೂರ್ವ ವಿಭಾಗದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಜಂಟಿ ಆಯುಕ್ತರು (ಜಾರಿದಳ) ಆಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ಯಾಸ್ಮಿನ್ ಬೇಗಂ ಜಿ ವಾಲಿಕಾರ್ ಅವರನ್ನು ಬೆಂಗಳೂರಿನ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಾಗಿ ವರ್ಗಾಯಿಸಿ ನೇಮಕ ಮಾಡಲಾಗಿದೆ. ಅವರು ಈ ಹುದ್ದೆಯಲ್ಲಿ ಜೀಲಾನಿ ಹೆಚ್ ಮೊಕಾಶಿ ಅವರ ಸ್ಥಾನವನ್ನು ಭರಿಸಲಿದ್ದಾರೆ.
ಸರ್ಕಾರದ ಆದೇಶದಂತೆ, ಈ ವರ್ಗಾವಣೆ ತಕ್ಷಣದಿಂದಲೇ ಜಾರಿಗೆ ಬರುವುದಾಗಿ ತಿಳಿಸಲಾಗಿದೆ. ಹೊಸ ಹುದ್ದೆಗೆ ಹಾಜರಾಗುವವರೆಗೆ ಸಂಬಂಧಿಸಿದ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಪೂರ್ಣಗೊಳಿಸಿ, ಮುಂದಿನ ನಿಯುಕ್ತಿಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವರದಿ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ.
ಈ ಆದೇಶವನ್ನು ರಾಜ್ಯಪಾಲರ ಆದೇಶಾನುಸಾರ ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವಪ್ರಸಾದ್ ಕೆ.ಹೆಚ್ ಅವರು ಹೊರಡಿಸಿದ್ದಾರೆ.
ಸರ್ಕಾರದ ಈ ಕ್ರಮವು ಆಡಳಿತದ ದಕ್ಷತೆಯನ್ನು ಹೆಚ್ಚಿಸಲು ಮತ್ತು ವಿವಿಧ ಇಲಾಖೆಗಳ ಕಾರ್ಯಕ್ಷಮತೆಯನ್ನು ಮತ್ತಷ್ಟು ಬಲಪಡಿಸಲು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

