

ಶ್ರೀನಿವಾಸಪುರ : ಪಟ್ಟಣದಲ್ಲಿ ರಸ್ತೆ ಬದಿ ವ್ಯಾಪಾರಿಗಳು ಆರ್ಥಿಕವಾಗಿ ಸಬಲರಾಗುವ ಉದ್ದೇಶದಿಂದ ಪುರಸಭೆಯ ವತಿಯಿಂದ ಸಿದ್ಧಪಡಿಸಿದ ಫುಡ್ ಕೋರ್ಟ್ ಅನ್ನು ಬುಧವಾರ ಪುರಸಭೆ ಅಧ್ಯಕ್ಷ ಬಿ.ಆರ್. ಭಾಸ್ಕರ್ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಪಟ್ಟಣದ ಸರ್ಕಾರಿ ಬಾಲಕೀಯರ ಪದವಿಪೂರ್ವ ಕಾಲೇಜು ಮುಂಭಾಗದಲ್ಲಿರುವ ಈ ಫುಡ್ ಕೋರ್ಟ್ ವ್ಯಾಪಾರಿಗಳಿಗೆ ಹೊಸ ಅವಕಾಶ ಒದಗಿಸಲಿದೆ ಎಂದರು.
ಪುರಸಭೆ ಅಧಿಕಾರಿಗಳ ಮೂಲಕ ಪಟ್ಟಣದಲ್ಲಿನ ಬೀದಿ ಬದಿ ವ್ಯಾಪಾರಿಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಅಂಗಡಿಗಳ ಹಂಚಿಕೆ ಲಾಟರಿ ವಿಧಾನದಲ್ಲಿ ನಡೆಸಲಾಗುವುದಾಗಿ ಭಾಸ್ಕರ್ ತಿಳಿಸಿದರು. ಅಂಗಡಿ ಪಡೆದವರು ಸ್ವತಃ ಅದನ್ನು ನಡೆಸಬೇಕು. ಯಾವುದೇ ಕಾರಣಕ್ಕೂ ಅಂಗಡಿಗಳನ್ನು ಬಾಡಿಗೆಗೆ ನೀಡುವುದನ್ನು ತಡೆಯಲಾಗುವುದು. ವ್ಯಾಪಾರ ಅಭಿವೃದ್ಧಿ ಪಡಿಸಿಕೊಳ್ಳಲು ನಿಮಗೆ ಈ ಸ್ಥಳ ನೀಡಲಾಗಿದೆ, ಆದರೆ ಇದು ನಿಮ್ಮ ಸ್ವಂತ ಜಾಗವಲ್ಲ ಎಂಬುದನ್ನು ನೆನಪಿಡಿ ಎಂದು ಅವರು ಎಚ್ಚರಿಸಿದರು.
ನೆರೆಯ ಚಿಂತಾಮಣಿ ಆಜಾದ್ ಚೌಕ್ ಹಾಗೂ ಕೋಲಾರ ನಗರದಲ್ಲಿ ಫುಡ್ ಕೋರ್ಟ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ, ಶ್ರೀನಿವಾಸಪುರದಲ್ಲಿಯೂ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಪಟ್ಟಣದ ಅಭಿವೃದ್ಧಿ ಕುರಿತು ಮಾತನಾಡಿದ ಭಾಸ್ಕರ್, ಪಟ್ಟಣದಲ್ಲಿ ಸುಮಾರು ೭ ಸಾವಿರ ಮನೆಗಳಿದ್ದು, ನನ್ನ ಅವಧಿಯಲ್ಲಿ ಈಗಾಗಲೇ ೨೬೦೦ ಕ್ಕೂ ಹೆಚ್ಚು ನೂತನ ಖಾತೆಗಳು ತೆರೆಯಲ್ಪಟ್ಟಿವೆ. ೨೦೧೮ರಲ್ಲಿ ಸರ್ಕಾರದಿಂದ ಬಿಡುಗಡೆಯಾದ ೧೫ ಕೋಟಿ ರೂ. ವಿಶೇಷ ಅನುದಾನವನ್ನು ಟೆಂಡರ್ ಮೂಲಕ ರಸ್ತೆ, ಕೊಳವೆಬಾವಿ, ಕುಡಿಯುವ ನೀರು, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಬಳಕೆ ಮಾಡಲಾಗಿದ್ದು, ಸದಸ್ಯರ ಸಹಕಾರದೊಂದಿಗೆ ಪಟ್ಟಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ವಿ. ನಾಗರಾಜ್, ಉಪಾಧ್ಯಕ್ಷೆ ಸುನಿತಾ, ಮಾಜಿ ಉಪಾಧ್ಯಕ್ಷೆ ಆಯೀಶಾ ನಯಾಜ್, ಸದಸ್ಯರಾದ ಆನಂದ್ ಬಾಬು, ಎನ್ಎನ್ಆರ್. ನಾಗರಾಜ್, ನಾಮನಿರ್ದೇಶಿತ ಸದಸ್ಯರಾದ ನರಸಿಂಹಮೂರ್ತಿ, ಹೇಮಂತ್, ಕಂದಾಯ ನಿರೀಕ್ಷಕ ಎನ್. ಶಂಕರ್, ಆರೋಗ್ಯ ನಿರೀಕ್ಷಕ ಸುರೇಶ್, ಸಿಬ್ಬಂದಿಗಳಾದ ಸಂತೋಷ್, ನಾಗೇಶ್, ಶ್ರೀನಾಥ್ ಉಪಸ್ಥಿತರಿದ್ದರು.


